More

    ಬೇಗ ಫಸಲು ಬರುವ ಬೆಳೆ ಹಾಕಿ

    ಶಿವಮೊಗ್ಗ: ಅವೈಜ್ಞಾನಿಕ ಕೃಷಿ ಪದ್ಧತಿಯಿಂದ ಹೊರಬಂದು ರೈತರು ಬೇಗ ಫಸಲು ಬರುವ ಬೆಳೆ ಬೆಳೆಯಬೇಕು. ಜತೆಗೆ ನೀರಿನ ಸಂರಕ್ಷಣೆಗೆ ಒತ್ತು ನೀಡಬೇಕಿದೆ ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಅಧ್ಯಕ್ಷ ಎಚ್.ಆರ್.ಬಸವರಾಜಪ್ಪ ಸಲಹೆ ನೀಡಿದರು.

    ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ನವಕರ್ನಾಟಕ ನಿರ್ಮಾಣ ವೇದಿಕೆ ಹಾಗೂ ಜಿಲ್ಲಾ ಒಕ್ಕಲಿಗರ ಒಕ್ಕೂಟ ಆಶ್ರಯದಲ್ಲಿ ಕೊಳವೆ ಬಾವಿಗೆ ಜಲ ಮರುಪೂರಣ ಮತ್ತು ಅಂತರ್ಜಲ ಪುನಶ್ಚೇತನ ಕಾರ್ಯಾಗಾರ ಹಾಗೂ ಪ್ರಾತ್ಯಕ್ಷಿಕೆ ಉದ್ಘಾಟಿಸಿ ಮಾತನಾಡಿದ ಅವರು, ರೈತರು ಇನ್ನೂ ಹಳೇ ವಿಧಾನದ ವ್ಯವಸಾಯ ಪದ್ಧತಿ ಅನುಸರಿಸುತ್ತಿದ್ದಾರೆ. ಅದನ್ನು ಬಿಟ್ಟು ಹೊಸ ಹೊಸ ವಿಧಾನಗಳನ್ನು ಕೃಷಿಯಲ್ಲಿ ಅಳವಡಿಸಿಕೊಳ್ಳಬೇಕಿದೆ ಎಂದು ಸಲಹೆ ನೀಡಿದರು.
    ರಾಜ್ಯದಲ್ಲಿ ಬರಗಾಲ ತಾಂಡವವಾಡುತ್ತಿದೆ. ಹನಿ ನೀರಿಗೂ ತಾತ್ವರವಾಗಿದೆ. ಇಂತಹ ಸಂದಿಗ್ಧತೆಯಲ್ಲಿ ರೈತ ನೀರಿಗೆ ಅನೇಕ ವಿಧಿ ವಿಧಾನಗಳನ್ನು ಅನುಸರಿಸುತ್ತ ಬಂದಿದ್ದಾನೆ. ಜಲಾಶಯಗಳು ಬರಿದಾಗಿವೆ. ಅಂತರ್ಜಲ ಮಟ್ಟ ಕುಸಿದಿದ್ದು ಕಾಲುವೆಯಲ್ಲಿ ನೀರು ಹರಿಯುತ್ತಿಲ್ಲ. ಸಾವಿರ ಅಡಿ ಆಳಕ್ಕೆ ಹೋದರೂ ಬೋರ್‌ವೆಲ್‌ಗಳಲ್ಲಿ ನೀರು ಸಿಗುತ್ತಿಲ್ಲ. ನೀರಿನ ಕೊರತೆ ನಿವಾರಣೆಗೆ ಜಲಮರುಪೂರಣವೇ ಪರಿಹಾರ ಎಂದರು.
    ಮಳೆ ಅಭಾವದಿಂದ ರೈತ ನಷ್ಟಕ್ಕೆ ಸಿಲುಕಿದ್ದಾನೆ. ಇನ್ಮುಂದೆ ನೀರಿಗೋಸ್ಕರ ಯುದ್ಧ ನಡೆಯುವ ಕಾಲ ಬರಬಹುದು. ನಾವು ಅಂತರ್ಜಲಕ್ಕೆ ಬಂಡವಾಳ ಹೂಡುತ್ತಿದ್ದೇವೆ. ಆದರೆ ಅದು ವಿಫಲವಾದಾಗ ಏನು ಮಾಡಬೇಕೆಂಬ ಅರಿವು ನಮಗಿಲ್ಲ. ಹಾಗಾಗಿ ಜಲ ಮರುಪೂರಣ ಕಾರ್ಯಾಗಾರದ ಮಾಹಿತಿ ಪಡೆದುಕೊಳ್ಳಬೇಕು ಎಂದು ಹೇಳಿದರು.
    ರೈತ ಮುಖಂಡ ಕೆ.ಟಿ.ಗಂಗಾಧರ್ ಮಾತನಾಡಿ, 10 ಕೆಜಿ ಅಡಕೆ ಬೆಲೆಯಲ್ಲೇ ಬೋರ್‌ವೆಲ್ ರೀಚಾರ್ಜ್ ಅನ್ನು ವೈಜ್ಞಾನಿಕ ರೀತಿಯಲ್ಲಿ ಮಾಡಬಹುದು. ಒಂದು ಬೋರ್‌ವೆಲ್ ವಿಫಲವಾದರೆ ಇನ್ನೊಂದಕ್ಕೆ ಕೈ ಹಾಕುತ್ತೇವೆ. ಯಾವ ಬೆಳೆಗೆ ಎಷ್ಟು ನೀರು ಎಂಬ ಅರಿವಿಲ್ಲ. ನೀರನ್ನು ಜೋಪಾನ ಮಾಡಿ ಬಳಸಿದರೆ ನೀರು ನಮ್ಮನ್ನು ಕಾಪಾಡುತ್ತದೆ ಎಂದರು.
    ಅಂತರ್ಜಲ ತಜ್ಞ, ಜಿಯೋ ರೈನ್ ವಾಟರ್ ಸಂಸ್ಥೆ ಮುಖ್ಯಸ್ಥ ಎನ್.ಜೆ.ದೇವರಾಜ್ ರೆಡ್ಡಿ ಅವರು ನೀರಿನ ಸಂರಕ್ಷಣೆ, ಜಲ ಮರುಪೂರಣ, ಬೋರ್‌ವೆಲ್ ರೀಚಾರ್ಜ್‌ಗಳ ಬಗ್ಗೆ ರೈತರಿಗೆ ಮಾಹಿತಿ ನೀಡಿದರು. ಇದೇ ವೇಳೆ ಅವರಿಗೆ ಆಧುನಿಕ ಭಗೀರಥ ಬಿರುದು ನೀಡಿ ಸನ್ಮಾನಿಸಲಾಯಿತು.
    ನವ ಕರ್ನಾಟಕ ನಿರ್ಮಾಣ ವೇದಿಕೆ ಅಧ್ಯಕ್ಷ ಗೋ. ರಮೇಶ್ ಗೌಡ, ಜಿಲ್ಲಾ ಒಕ್ಕಲಿಗರ ಒಕ್ಕೂಟದ ಗೌರವಾಧ್ಯಕ್ಷೆ ಡಾ. ಶಾಂತಾ ಸುರೇಂದ್ರ, ಪ್ರಮುಖರಾದ ದಿನೇಶ್, ರಾಜಶೇಖರ್, ಗೀತಾ ಸತೀಶ್, ವಿಜಯಕುಮಾರ್, ಸಂತೋಷ್, ಧನಲಕ್ಷ್ಮೀ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts