More

    ಎಐಎಡಿಎಂಕೆ ಅಣಿಯಲು ಬಿಜೆಪಿಯಿಂದ ‘ವೇಲುಮಣಿ’ ಅಸ್ತ್ರ?

    ಚೆನ್ನೈ: ಎನ್​ಡಿಎ ಮೈತ್ರಿಕೋಟದಿಂದ ಹೊರಗೋಗಿರುವ ಆಲ್​ ಇಂಡಿಯಾ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ(ಎಐಎಡಿಎಂಕೆ)ನ್ನು ಛಿದ್ರಗೊಳಿಸಲು ಬಿಜೆಪಿ ಯತ್ನಿಸುತ್ತಿದೆ ಎಂಬ ಚರ್ಚೆ ತಮಿಳುನಾಡಿನಾಡು ರಾಜಕೀಯ ಕ್ಷೇತ್ರದಲ್ಲಿ ಜೋರಾಗಿದೆ. ಎಐಎಡಿಎಂಕೆಯ ಹಿರಿಯ ಮುಖಂಡ ಎಸ್.ಪಿ.ವೇಲಮಣಿ ಅವರನ್ನು ಬಿಜೆಪಿಗೆ ಸೆಳೆದು ಮಾಜಿ ಮುಖ್ಯಮಂತ್ರಿ ಪಳನಿಸ್ವಾಮಿಯನ್ನು ಹಣಿಯಲು ಕೇಂದ್ರ ನಾಯಕತ್ವ ರೂಪುರೇಷೆ ಸಿದ್ಧಪಡಿಸಿದೆ ಎಂದು ವಿಶ್ವಾಸನೀಯ ಮೂಲಗಳು ತಿಳಿಸಿವೆ. ಇದು ಸಾಮಾಜಿಕ ಜಾಲತಾಣಗಳಲ್ಲಿಯೂ ಚರ್ಚೆಗೆ ಗ್ರಾಸ ಒದಗಿಸಿದೆ.

    ಬೆಜೆಪಿಯಿಂದ ಎಐಡಿಎಂಕೆ ಹೊರಬಂದ ಬಳಿಕ ಪಕ್ಷದ ನಾಯಕ ಪಳನಿಸ್ವಾಮಿ ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈರನ್ನು ಗುರಿಯಾಗಿಸಿ ಟೀಕೆಗಳ ಸುರಿಮಳೆಗರೆಯುತ್ತಿದ್ದರು. ಮತ್ತೆ ಬಿಜೆಪಿ ಜತೆ ಕೈಜೋಡಿಸುವ ಪ್ರಶ್ನೆಯೇ ಇಲ್ಲವೆಂದು ಕಡ್ಡಿ ಮುರಿದಂತೆ ಸ್ಪಷ್ಟಪಡಿಸಿದ್ದರು. ಈ ಬೆಳವಣಿಗೆಗಳನ್ನು ಗಮಭೀರವಾಗಿ ಪರಿಗಣಿಸಿದ ಬಿಜೆಪಿ ರಾಷ್ಟ್ರನಾಯಕರು ಎಐಎಡಿಎಂಕೆ ವಿರುದ್ಧ ಮಾತನಾಡದಂತೆ ರಾಜ್ಯ ನಾಯಕರಿಗೆ ಸೂಚಿಸಿದ್ದಷ್ಟೇ ಅಲ್ಲದೆ, ಹೊಸ ವ್ಯೂಹರಚಿಸಿದೆ ಎನ್ನಲಾಗುತ್ತಿದೆ.

    ಎಐಎಡಿಎಂಕೆ ಹಿರಿಯ ನಾಯಕರಲ್ಲಿ ವೇಲುಮಣಿ ಪ್ರಮುಖ ಪಾತ್ರವಹಿಸುತ್ತಿದ್ದಾರೆ. ಅವರ ವಿರುದ್ಧ ವಿವಿಧ ನ್ಯಾಯಾಲಯ, ತನಿಖಾ ಸಂಸ್ಥೆಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ. ಇದನ್ನೇ ಮುಂದಿಟ್ಟು ವೇಲುಮಣಿಯನ್ನು ಎಐಎಡಿಎಂಕೆ ಇಬ್ಬಾಗಿಸಲು ತಂತ್ರ ರೂಪಿಸಲಾಗಿದೆ. ‘ವೇಲುಮಣಿ ಮತ್ತೊಬ್ಬ ಏಕನಾಥ ಶಿಂಧೆ(ಮಹಾರಾಷ್ಟ್ರ ಮುಖ್ಯಮಂತ್ರಿ), ಪಳನಿಸ್ವಾಮಿಗೆ ವೇಲುಮಣಿ ಗತಿಕಾಣಿಸುತ್ತಾರೆ’ ಎಂಬ ಟ್ಯಾಗ್​ಲೈನ್​ಗಳೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್​ಗಳನ್ನು ಹಾಕಲಾಗುತ್ತಿದ್ದು, ಇವು ವೈರಲ್​ ಆಗುತ್ತಿದೆ.

    ಇನ್ನು ಎಐಎಡಿಎಂಕೆಯಲ್ಲಿ ಈ ಬೆಳವಣಿಗೆಗಳು ಚರ್ಚೆಗೆ ಎಡೆಮಾಡಿಕೊಟ್ಟಿದ್ದು, ‘ತಾನು ಪಕ್ಷಕ್ಕೆ ನಿಷ್ಟನಾಗಿದ್ದು, ಈ ಹಿಂದೆ ಸಂಘಟನೆಗಾಗಿ ಮಾಡಿದ್ದ ಸೈಕಲ್​ ಯಾತ್ರೆಯ ಫೋಟೋವನ್ನು ವೇಲುಮಣಿ ಟ್ಯಾಗ್​ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ಪ್ರಚಾರಕ್ಕೆ ಫುಲ್​ಸ್ಟಾಪ್ ಹಾಕುವ ಯತ್ನ ಮಾಡಿದ್ದಾರೆ. ಇದರ ನಡುವೆ ಎಐಎಡಿಎಂಕೆಯ ಮತ್ತೊಬ್ಬ ಹಿರಿಯ ನಾಯಕ ಮಾಜಿ ಸಚಿವ ಕುರುಪ್ಪಣ್ಣನ್ ಹೇಳಿಕೆ ನೀಡಿ, ಎಐಎಡಿಎಂಕೆ-ಬಿಜೆಪಿ ಮೈತ್ರಿ ಕೂಟದ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಅಣ್ಣಾಮಲೈ ಅವರನ್ನು ಘೋಷಿಸಲು ಬಿಜೆಪಿ ಒತ್ತಡ ತಂದಿದ್ದೇ ತಮ್ಮ ಪಕ್ಷ ಕೂಟದಿಂದ ಹೊರಬರಲು ಪ್ರಮುಖ ಕಾರಣ ಎಂದಿದ್ದಾರೆ. ತಮಿಳುನಾಡಿನಲ್ಲಿ ಬಿಜೆಪಿ ಬಲ ಏನೆಂಬುದನ್ನು ಲೋಕಸಭಾ ಚುನಾವಣೆಯಲ್ಲಿ ತೋರಿಸುತ್ತೇವೆ ಎಂದು ಮತ್ತೊಬ್ಬ ಹಿರಿಯ ನಾಯಕ ಕೆ.ಪಿ.ಮುನಿಸ್ವಾಮಿ ಹೇಳಿರುವುದು ಎರಡೂ ಪಕ್ಷಗಳ ನಡುವೆ ಅಂತರ ಹೆಚ್ಚಾಗುತ್ತಿರುವುದನ್ನು ಗಮನಿಸಬಹುದಾಗಿದೆ.

    ಅಮಿತ್​ ಷಾ ಭೇಟಿ: ಎಐಎಡಿಎಂಕೆ ನಾಯಕರು ಬಿಜೆಪಿ ಮೇಲೆ ಟೀಕಾಸ್ತ್ರ ಬಳಸುತ್ತಿರುವುದರ ಬೆನ್ನಲ್ಲೇ ಭಾನುವಾರ ದೆಹಲಿಯಲ್ಲಿ ಬಿಜೆಪಿ ಚಾಣಾಕ್ಷ ಅಮಿತ್​ ಷಾರನ್ನು ಭೇಟಿಯಾಗಲು ಅಣ್ಣಾಮಲೈ ತೆರಳಿದ್ದಾರೆ. ಪಳನಿಸ್ವಾಮಿ, ಪಿಎಂಕೆ, ಟಿಎಂಸಿ, ಡಿಎಂಡಿಕೆ ಪಕ್ಷಗಳನ್ನು ಎಐಎಡಿಎಂಕೆ ಜತೆ ಮೈತ್ರಿಗೆ ಮುಂದಾಗಿದ್ದು, ಬಿಜೆಪಿ ಏಕಾಂಗಿ ಹೋರಾಟ ನಡೆಸಲು ಯೋಜನೆ ರೂಪಿಸುವ ಸಾಧ್ಯತೆ ಇದೆ. ಡಿಎಂಕೆ ಜತೆ ಅಸಮಾಧಾನ ಹೊಂದಿರುವ ಕೆಲವು ಸಣ್ಣ ಪಕ್ಷಗಳನ್ನು ಪಳನಿಸ್ವಾಮಿ ಎಐಎಡಿಎಂಕೆ ಮೈತ್ರಿಕೂಟಕ್ಕೆ ಸೆಳೆಯುವ ಯತ್ನದಲ್ಲಿದ್ದಾರೆ ಎನ್ನಲಾಗುತ್ತಿದೆ.

    ಮಾಜಿ ಸಿಎಂ ಎಚ್​ಡಿಕೆ ಅಧಿಕಾರವಿಲ್ಲದ ಅತೃಪ್ತ ಆತ್ಮ: ದಿನೇಶ್​ ಗುಂಡೂರಾವ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts