More

    ರಾಜಸ್ಥಾನ ರಾಜಕೀಯ ನಾಟಕದಲ್ಲಿ ದಿಢೀರ್​ ತಿರುವು; ಉಳಿಯುತ್ತಾ ಕಾಂಗ್ರೆಸ್​ ಸರ್ಕಾರ?

    ಜೈಪುರ: ರಾಜಸ್ಥಾನ ರಾಜಕೀಯ ನಾಟಕ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಸೋಮವಾರ ಲಭಿಸಿರುವ ಹೊಸ ತಿರುವಿನಲ್ಲಿ ಅಶೋಕ್​ ಗೆಹ್ಲೋಟ್​ ನೇತೃತ್ವದ ಸರ್ಕಾರದ ವಿರುದ್ಧ ಬಂಡಾಯ ಎದ್ದಿರುವ ಸಚಿನ್​ ಪೈಲಟ್​ ಅವರು ಕಾಂಗ್ರೆಸ್​ ಮುಖಂಡರಾದ ರಾಹುಲ್​ ಗಾಂಧಿ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ದೆಹಲಿಯಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದರು.

    ರಾಹುಲ್​ ಮತ್ತು ಪ್ರಿಯಾಂಕಾ ಅವರೊಂದಿಗಿನ ಸಚಿನ್​ ಪೈಲಟ್​ ಅವರ ಈ ಭೇಟಿ ಸಕಾರಾತ್ಮಕವಾಗಿತ್ತು. ಹಾಗಾಗಿ ರಾಜಸ್ಥಾನದಲ್ಲಿ ಉಂಟಾಗಿರುವ ರಾಜಕೀಯ ಅಸ್ಥಿರತೆ ಆ.14ಕ್ಕೆ ನಿಗದಿಯಾಗಿರುವ ರಾಜಸ್ಥಾನ ವಿಧಾನಸಭಾ ಅಧಿವೇಶನ ಆರಂಭವಾಗುವಷ್ಟರಲ್ಲೇ ಕೊನೆಗೊಳ್ಳುವ ಲಕ್ಷಣಗಳು ಕಾಣಿಸುತ್ತಿವೆ ಎಂದು ಹೇಳಲಾಗುತ್ತಿದೆ.
    ರಾತ್ರಿ ವೇಳೆಗೆ ಸ್ಪಷ್ಟ ಚಿತ್ರಣ: ರಾಹುಲ್​ ಮತ್ತು ಪ್ರಿಯಾಂಕಾ ಅವರ ಒತ್ತಾಯದ ಮೇರೆಗೆ ಸಚಿನ್​ ಪೈಲಟ್​ ಅವರು ಗಾಂಧಿ ಕುಟುಂಬದವರ ಮನೆಗೆ ತೆರಳಿ ಮಾತುಕತೆ ನಡೆಸಿದರು. ಈ ವಿದ್ಯಮಾನದ ಹಿನ್ನೆಲೆಯಲ್ಲಿ ರಾಜಸ್ಥಾನದ ರಾಜಕೀಯ ಅಸ್ಥಿರತೆ ಕೊನೆಗೊಳ್ಳುವ ಕುರಿತು ತಡರಾತ್ರಿಯೊಳಗೆ ಸ್ಪಷ್ಟ ಚಿತ್ರಣ ದೊರೆಯಲಿದೆ ಎಂದು ಹೇಳಲಾಗುತ್ತಿದೆ.

    ತಮ್ಮನ್ನು ಸಿಎಂ ಆಗಿ ಘೋಷಿಸುವ ಬಗ್ಗೆ ನಿಖರವಾದ ಮಾಹಿತಿ ದೊರೆಯದ ಹೊರತು ಬಂಡಾಯ ಶಮನವಾಗಲ್ಲ, ತಾವು ಪ್ರಸ್ತಾಪಿಸಿರುವ 3 ಸಾವಿರ ಕೋಟಿ ರೂ.ಗೂ ಹೆಚ್ಚಿನ ಮೊತ್ತದ ಯೋಜನೆಗಳಿಗೆ ಅನುಮೋದನೆ ದೊರೆಯಲೇ ಬೇಕು ಎಂಬುದು ಸೇರಿ ನಾನಾ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಸಚಿನ್​ ಪೈಲಟ್​ ಹೇಳುತ್ತಿದ್ದರು. ಬಿಜೆಪಿಯೊಂದಿಗೆ ಕೈಜೋಡಿಸಿ ಕಾಂಗ್ರೆಸ್​ ಸರ್ಕಾರವನ್ನು ಕೆಡವುವ ಹುನ್ನಾರ ನಡೆಸಿದ್ದಾರೆ ಎಂಬ ಆರೋಪ ಹೊತ್ತಿರುವ ಅವರು ತಮ್ಮ ನಿಲುವನ್ನು ಹಠಾತ್ತನೆ ಬದಲಿಸಿಕೊಳ್ಳಲು ಕಾರಣಗಳೇನು?

    ಬಂಡಾಯಗಾರ ಸಚಿನ್​ ಪಾಳೆಯದಲ್ಲಿ ಕೇವಲ 19 ಕಾಂಗ್ರೆಸ್​ ಮತ್ತು ಮೂವರು ಪಕ್ಷೇತರ ಶಾಸಕರು ಇದ್ದರು. ಅವರ ಆಪ್ತರು ಕೂಡ ಕೊನೇ ಕ್ಷಣದಲ್ಲಿ ಕೈಕೊಟ್ಟಿದ್ದರಿಂದ, ಹೆಚ್ಚಿನ ಶಾಸಕರ ಬೆಂಬಲ ಪಡೆದುಕೊಳ್ಳಲು ಅವರಿಗೆ ಸಾಧ್ಯವಾಗಲಿಲ್ಲ.

    ಇದನ್ನೂ ಓದಿ: ಹಿಂದೆಂದೂ ಕಾಣಿಸಿಕೊಳ್ಳದ ಪಾತ್ರದಲ್ಲಿ ಶುಭಾ ಪೂಂಜ … ಯಾವ ಪಾತ್ರ ಅದು?

    ಕಾಂಗ್ರೆಸ್​ನಲ್ಲಿ ವಿಲೀನಗೊಂಡ ಬಿಎಸ್​ಪಿಯ 6 ಶಾಸಕರ ಕ್ರಮವನ್ನು ಪ್ರಶ್ನಿಸಿ ರಾಜಸ್ಥಾನ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್​​ಗೆ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆ ಕುರಿತು ಆ.17ರೊಳಗೆ ಏನಾದರೂ ಒಂದು ತೀರ್ಪು ಬರಬಹುದು ಎಂಬ ಬಗ್ಗೆ ಸ್ಪಷ್ಟತೆ ಇಲ್ಲದೇ ಹೋಗಿದ್ದು ಮತ್ತೊಂದು ಕಾರಣವಾಗಿದೆ.
    ಬಿಜೆಪಿಗೆ ಸೇರ್ಪಡೆಗೊಂಡರೆ ಮಾಜಿ ಸಿಎಂ ವಸುಂಧರಾ ರಾಜೇ ಬಂಡಾಯ ಏಳುವ ಸಾಧ್ಯತೆ ಇತ್ತು. ವಿಶ್ವಾಸಮತಯಾಚನೆ ಸಂದರ್ಭದಲ್ಲಿ ರಾಜೇ ಅವರ ಬೆಂಬಲಿಗೆ ಶಾಸಕರು ಅಡ್ಡಮತದಾನ ಮಾಡುವ ಅಪಾಯವಿತ್ತು ಎನ್ನಲಾಗಿದೆ.

    ಸಚಿನ್​ ಪೈಲಟ್​ ಅವರು ಕಾಂಗ್ರೆಸ್​ ಸರ್ಕಾರದ ವಿರುದ್ಧ ಬಂಡಾಯ ಎದ್ದಿದ್ದರೂ ಬಿಜೆಪಿಗೆ ಸೇರಿಕೊಳ್ಳುವ ಬಗ್ಗೆಯಾಗಲಿ ಅಥವಾ ಸ್ವಂತ ಪಕ್ಷ ಸ್ಥಾಪಿಸುವ ಬಗ್ಗೆಯಾಗಲಿ ಸ್ಪಷ್ಟತೆ ಹೊಂದಿರಲಿಲ್ಲ. ಪೈಲಟ್​ ಬಂಡಾಯ ಎದ್ದಿದ್ದರೂ ಗಾಂಧಿ ಕುಟುಂಬದವರು ಪೈಲಟ್​ ವಿರುದ್ಧ ಒಂದೇ ಒಂದು ಮಾತು ಆಡದೇ ಹೋಗಿದ್ದು ಕೂಡ ಪೈಲಟ್​ ಅವರ ಮನಸ್ಸು ಬದಲಾಗಲು ಕಾರಣ ಎನ್ನಲಾಗಿದೆ.

    ಬಾಲ್ಯದಿಂದಲೂ ಸಚಿನ್​ ಪೈಲಟ್​ ಅವರು ಗಾಂಧಿ ಕುಟುಂಬದವರ ಜತೆ ಒಳ್ಳೆಯ ಬಾಂಧವ್ಯ ಹೊಂದಿದ್ದಾರೆ. ಹಾಗಾಗಿ ರಾಹುಲ್​ ಮತ್ತು ಪ್ರಿಯಾಂಕಾ ಅವರೊಂಗಿನ ಸಚಿನ್​ ಭೇಟಿ ತುಂಬಾ ಭಾವನಾತ್ಮಕವಾಗಿತ್ತು ಎಂದು ಹೇಳಲಾಗುತ್ತಿದೆ.

    ಕೋಚಿಂಗ್​ ಕ್ಲಾಸ್​ಗೆ ಹೋಗಿಲ್ಲ, ನಿದ್ರೆಗೆಟ್ಟು ಓದಿಲ್ಲ… ಇದು ಎಸ್ಸೆಸ್ಸೆಲ್ಸಿ ಟಾಪರ್​ ಅನುಷ್​ರ ಯಶಸ್ಸಿನ ಗುಟ್ಟು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts