More

    ತುಂಡಾಗಿದ್ದ ಕೈ ಯಶಸ್ವಿಯಾಗಿ ಮರುಜೋಡಣೆ

    ಬೆಳಗಾವಿ: ಸಾಧ್ಯವೇ ಇಲ್ಲದಂತಹ ಅನೇಕ ಶಸಚಿಕಿತ್ಸೆಯನ್ನು ಅಚ್ಚರಿ ಪಡುವ ರೀತಿಯಲ್ಲಿ ವೈದ್ಯಕೀಯ ಲೋಕ ಇದೀಗ ಸಾಧಿಸುತ್ತಿದೆ. ಅಂತಹ ಅಚ್ಚರಿ ಪಡುವ ಶಸಚಿಕಿತ್ಸೆಯನ್ನು ಬೆಳಗಾವಿಯ ವಿಜಯಾ ಆರ್ಥೋ ಆ್ಯಂಡ್ ಟ್ರಾಮಾ ಸೆಂಟರ್ (ವಿಒಟಿಸಿ), ಸಂಪೂರ್ಣವಾಗಿ ತುಂಡಾಗಿದ್ದ ಕೈಯನ್ನು ಯಶಸ್ವಿಯಾಗಿ ಮರುಜೋಡಣೆ ಮಾಡುವ ಮೂಲಕ ಸಾಧನೆ ಮಾಡಿದೆ.

    ವಿಒಟಿಸಿ ಹಾಸ್ಪಿಟಲ್ ತಜ್ಞ ವೈದ್ಯರ ತಂಡವು 5 ವರ್ಷದ ಬಾಲಕಿಯೋರ್ವಳ ತುಂಡಾಗಿದ್ದ ಬಲಗೈಯನ್ನು ಶಸಚಿಕಿತ್ಸೆ ಮೂಲಕ ಯಶಸ್ವಿಯಾಗಿ ಮರುಜೋಡಿಸಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆಸ್ಪತ್ರೆಯ ಸಂಸ್ಥಾಪಕ ಡಾ.ರವಿ ಪಾಟೀಲ ತಿಳಿಸಿದ್ದಾರೆ.

    ಅಪಘಾತದಲ್ಲಿ ತುಂಡಾಗಿದ್ದ ಕೈ: 2019 ಜೂನ್ 12ರಂದು ಆಫಿಯಾ ಶೇಖ್ ಎಂಬ ಬಾಲಕಿ ತನ್ನ ಪಾಲಕರ ಜೊತೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಕಿಟಕಿಯಿಂದ ಮಳೆ ನೀರು ಹಿಡಿಯಲು ತನ್ನ ಬಲಗೈ ಹೊರಚಾಚಿದ್ದಳು. ಈವೇಳೆ ಎದುರಗಡೆಯಿಂದ ಬರುತ್ತಿದ್ದ ವಾಹನಕ್ಕೆ ಆಕೆಯ ಕೈ ಬಡಿದು ತುಂಡಾಗಿ ಬಿದ್ದಿತ್ತು. ತಕ್ಷಣವೇ ಬಾಲಕಿಯನ್ನು (ಒಂದು ಗಂಟೆಯ ಅವಧಿಯೊಳಗೆ) ತುಂಡಾಗಿದ್ದ ಕೈನೊಂದಿಗೆ ವಿಒಟಿಸಿ ಆಸ್ಪತ್ರೆಯ ತುರ್ತು ನಿಘಾ ಘಟಕಕ್ಕೆ ದಾಖಲು ಮಾಡಲಾಗಿತ್ತು.

    10 ಗಂಟೆಗಳ ಕಾಲ ಶಸಚಿಕಿತ್ಸೆ: ಆಸ್ಪತ್ರೆಯ ಪ್ಲಾಸ್ಟಿಕ್ ಸರ್ಜನ್ ಡಾ.ವಿಠ್ಠಲ ಮಾಲಮಂಡೆ, ಡಾ.ಕೌಸ್ತುಭ ದೇಸಾಯಿ, ಡಾ.ಅರವಿಂದ ಹಂಪಣ್ಣವರ, ಡಾ.ಶ್ರೀಧರ ಕಟವಟೆ, ಡಾ.ರವಿ ಪಾಟೀಲ ನೇತೃತ್ವದ ವೈದ್ಯರ ತಂಡವು ಸತತ 10 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ಮೂಲಕ ತುಂಡಾದ ಕೈಯನ್ನು ಬಾಲಕಿಗೆ ಮರು ಜೋಡಣೆ ಮಾಡುವಲ್ಲಿ ಯಶಸ್ವಿಯಾಗಿದೆ. ಒಂದು ವಾರದ ಬಳಿಕ ಆಕೆಯನ್ನು ಡಿಶ್ಚಾರ್ಜ್ ಮಾಡಲಾಗಿತ್ತು. ಬಳಿಕ ಬಾಲಕಿಯನ್ನು ನಿರಂತರ ತಪಾಸಣೆ ಮಾಡುತ್ತಿದ್ದೆವು. ಇದೀಗ 1 ವರ್ಷ 8 ತಿಂಗಳ ಬಳಿಕ ಆಕೆ ಮರುಜೋಡಣೆಗೊಂಡ ಕೈಯಿಂದಲೇ ಎಲ್ಲ ಕೆಲಸಗಳನ್ನೂ ಮಾಡುತ್ತಿದ್ದು, ತೋಳು-ಬೆರಳುಗಳ ಚಲನವಲನವೂ ಸಹಜವಾಗಿದೆ. ಆಕೆಗೆ ಸದ್ಯ ಯಾವುದೇ ರೀತಿಯ ಸಮಸ್ಯೆ ಉಂಟಾಗಿಲ್ಲ ಎಂದು ಡಾ. ರವಿ ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ಪ್ಲಾಸ್ಟಿಕ್ ಸರ್ಜನ್ ಡಾ.ವಿಠ್ಠಲ ಮಾಲಮಂಡೆ, ಡಾ.ಅರವಿಂದ ಹಂಪಣ್ಣವರ, ವಕೀಲ ಬಸವರಾಜ ರೊಟ್ಟಿ ಇತರರು ಇದ್ದರು.

    ಮೂರು ತಾಸಿನೊಳಗೆ ಬಂದರೆ ಸೂಕ್ತ ಚಿಕಿತ್ಸೆ

    ಜಮೀನುಗಳಲ್ಲಿ ಬೆಳೆಗಳ ಒಕ್ಕಣೆ ಮಾಡುತ್ತಿರುವಾಗ, ಯಂತ್ರಗಳ ಮೂಲಕ ಕೆಲಸ ಮಾಡುವಾಗ ಹಾಗೂ ಅಪಘಾತಗಳಲ್ಲಿ ಕೈ-ಕಾಲುಗಳು ತುಂಡಾಗಬಹುದು. ಘಟನೆ ನಡೆದ 3 ತಾಸಿನೊಳಗೆ ತುಂಡಾದ ಅಂಗಾಗಳೊಂದಿಗೆ ನಮ್ಮ ಆಸ್ಪತ್ರೆಗೆ ಬಂದರೆ ಮರು ಜೋಡಣೆ ಮಾಡುತ್ತೇವೆ. ತುಂಡಾದ ಅಂಗಾಗಳನ್ನು ನೀರಿನಲ್ಲಿ ಹಾಕಬಾರದು. ಅದನ್ನು ಐಸ್‌ನಲ್ಲಿ ಇಟ್ಟು ಸಂರಕ್ಷಣೆ ಮಾಡಿ ತೆಗೆದುಕೊಂಡು ಬರಬೇಕು. ಅಂಗಾಂಗಳ ಮರುಜೋಡಣೆ ಮಾಡುವ ಸೌಕರ್ಯ ಹಾಗೂ ಅತ್ಯಾಧುನಿಕ ಶಸ್ತ್ರಚಿಕಿತ್ಸಾ ಘಟಕ ಸೌಲಭ್ಯ ವಿಜಯಾ ಆರ್ಥೋ ಆ್ಯಂಡ್ ಟ್ರಾಮಾ ಸೆಂಟರ್‌ನಲ್ಲಿ ಇದೆ. ಸಾರ್ವಜನಿಕರು ಸದುಪಯೋಗ ಮಾಡಿಕೊಳ್ಳಬೇಕು ಎಂದು ಡಾ. ರವಿ ಪಾಟೀಲ ವಿನಂತಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts