ಸಂತೃಪ್ತಿಯ ಮೂಲ ಪರೋಪಕಾರ; ಹೆಗ್ಗಡೆಯವರಿಂದ ಧರ್ಮದರ್ಶನ

ಸಂತೃಪ್ತಿಯ ಮೂಲ ಪರೋಪಕಾರ; ಹೆಗ್ಗಡೆಯವರಿಂದ ಧರ್ಮದರ್ಶನಪರೋಪಕಾರ ಮಾಡದಿರುವ ಮನುಷ್ಯನಿಗಿಂತ ಪಶುಗಳೇ ಶ್ರೇಷ್ಠ. ಯಾಕೆಂದರೆ ಆ ಪಶುಗಳು ಇರುವಾಗಲೂ, ಸತ್ತ ನಂತರವೂ ಮನುಷ್ಯನಿಗೆ ಉಪಕಾರಕಗಳಾಗಿರುತ್ತವೆ. ಆದ್ದರಿಂದ ದುರ್ಲಭವಾದ ಮಾನವಜನ್ಮ ಪಡೆದ ನಾವು ಅದನ್ನು ಚೆನ್ನಾಗಿ ಬಳಸಿಕೊಂಡು, ಯಥಾಶಕ್ತಿ ಪರೋಪಕಾರಿಗಳಾಗಬೇಕು. ಜ್ಞಾನವನ್ನು ಯೋಗ್ಯರಿಗೆ ಹಂಚಿ ಮಾರ್ಗದರ್ಶನ ನೀಡಬೇಕು.

ಜನಸೇವೆಯೇ ಜನಾರ್ದನ ಸೇವೆ. ಮನುಷ್ಯಜನ್ಮ ದುರ್ಲಭವಾದದ್ದು ಎಂದು ಹೇಳುತ್ತಾರೆ. ಇಂತಹ ದುರ್ಲಭವಾದ ಮಾನವ ಶರೀರವನ್ನು ಧರಿಸಿದಾಗ, ನಾವು ಮಾಡಬೇಕಾದ ಕಾರ್ಯಗಳೇನು? ಮತ್ತು ಎಂತಹ ಕಾರ್ಯವನ್ನು ಮಾಡಿದರೆ ನಮಗೆ ತೃಪ್ತಿ ಮತ್ತು ಸಮಾಜಕ್ಕೂ ಹಿತ ಎಂಬ ಬಗ್ಗೆ ಆಲೋಚಿಸಿ ಕರ್ತವ್ಯವನ್ನು ನಿಭಾಯಿಸಬೇಕು. ‘ಆತ್ಮನೋ ಮೋಕ್ಷಾಯ ಜಗದ್ಧಿತಾಯಚ’ ಎಂಬ ಮಾತಿದೆ. ನಮ್ಮ ವೈಯಕ್ತಿಕವಾದ ಆನಂದದ ಜೊತೆಗೆ ಲೋಕಕ್ಕೆ ಹಿತವಾಗುವ ಕೆಲಸವನ್ನು ಈ ಮಾನವ ಶರೀರ ಇರುವಾಗ ಮಾಡಬೇಕೆಂದು ಇದರ ಅರ್ಥ.

ಇವೆರಡನ್ನೂ ಸಾಧಿಸುವ ಒಂದುಕಾರ್ಯ ಸಮಾಜಸೇವೆ. ಯಾರು ಸಮಾಜಸೇವೆಯಲ್ಲಿ ತೊಡಗಿರುತ್ತಾರೆ ಅಂತಹವರನ್ನು ಗುರುತಿಸಿ ಗೌರವಿಸುವುದು ಒಳಿತು. ಅವರು ಮುತ್ತುರತ್ನಗಳಿದ್ದಂತೆ. ಯಾಕೆಂದರೆ ಗುರುತಿಸುವಿಕೆಯಿಂದ ಅವರಲ್ಲಿಯೂ ಸಮಾಜಸೇವೆಯನ್ನು ಇನ್ನಷ್ಟು ಶ್ರದ್ಧೆಯಿಂದ ಮಾಡಬೇಕೆಂಬ ಉತ್ಸಾಹ ವೃದ್ಧಿಯಾಗುತ್ತದೆ ಮತ್ತು ಯಾರು ಈ ಗೌರವಕಾರ್ಯವನ್ನು ನೋಡುತ್ತಾರೋ, ಕೇಳುತ್ತಾರೋ ಅವರಲ್ಲಿಯೂ ಸಮಾಜದ ಹಿತಕ್ಕಾಗಿ ದುಡಿಯಬೇಕೆಂಬ ವಿವೇಕ ಉದಯವಾಗುತ್ತದೆ. ನಾವೆಲ್ಲರೂ ನಮ್ಮ ನಮ್ಮ ಶಕ್ತಿ, ಸಾಮರ್ಥ್ಯಕ್ಕೆ ಅನುಗುಣವಾಗಿ ಸಮಾಜದ ಸರ್ವರ ಏಳಿಗೆಗಾಗಿ ದುಡಿಯುತ್ತಿರುವವರೇ. ಆದ್ದರಿಂದ ಧಾರ್ವಿುಕ ಮತ್ತು ಸಮಾಜಸೇವೆಯಲ್ಲಿ ತೊಡಗಿರುವವರಲ್ಲಿ ಅನೇಕರು ಮುತ್ತುರತ್ನಗಳೇ. ಆದರೆ ಆ ಮುತ್ತುರತ್ನಗಳ ರಾಶಿಯಿಂದ ಕೆಲವನ್ನು ಹೆಕ್ಕಿ ತೆಗೆದಂತೆ, ಒಳ್ಳೆಯ ಸಮಾಜಸೇವಾ ಸಂಸ್ಥೆಗಳನ್ನು/ವ್ಯಕ್ತಿಗಳನ್ನು ಆಯ್ಕೆ ಮಾಡಿ ಗೌರವಿಸುವುದು ಹಾಗೂ ಗುರುತಿಸುವುದು ಏಳಿಗೆ ಹೊಂದುತ್ತಿರುವ ಕ್ರಿಯಾಶೀಲ ಸಮಾಜದ ಲಕ್ಷಣ.

ಸಂತೋಷಂ ಜನಯೇತ್ ಪ್ರಾಜ್ಞಃತದೇವೇಶ್ವರ ಪೂಜನಮ್ |

ಸಂತುಷ್ಟನು, ಕರ್ಮಅತೀತನು, ಸ್ವಾತ್ಮಾನಂದಮಗ್ನನೂ ಆದವನಿಗೆ ದೊರಕುವ ಸುಖವು, ಕಾಮ ಲೋಭದಿಂದ ಹಾಗೂ ಧನದ ಆಸೆಯಿಂದ ಲೌಕಿಕದಲ್ಲಿ ಸುತ್ತುತ್ತಿರುವ ಚಂಚಲವಾದ ಮನಸ್ಸಿನಿಂದ ಕೂಡಿರುವ ಮನುಷ್ಯನಿಗೆ ಹೇಗೆ ತಾನೆ ಸಿಕ್ಕೀತು? ಎಂದು ಒಂದು ಸುಭಾಷಿತ ಹೇಳುತ್ತದೆ. ಸಂತೋಷ ಎಂದರೆ ತಾನೇನು ಪಡೆದಿದ್ದೇನೋ ಅದರಲ್ಲಿ ತೃಪ್ತಿ ಪಡುವ ಸ್ವಭಾವ. ‘ಮನಸಿ ಚ ಪರಿತುಷ್ಟೆ ಕೋರ್ಥವಾನ್ ಕೋ ದರಿದ್ರಃ’ ಎಂದು ಹೇಳಿದ್ದಾರೆ. ನಮ್ಮಲ್ಲಿ ಆಸೆಯೆಂಬ ಜ್ವಾಲೆ ಕೆನ್ನಾಲಗೆಯಾಗಿ ಪುಟಿಯುತ್ತಿದ್ದರೆ ಅದಕ್ಕೆ ಎಷ್ಟು ಕೊಟ್ಟರೂ ತೃಪ್ತಿಯಾಗದು. ಮತ್ತಷ್ಟು ಬೇಕೆಂದು ಬಯಸುತ್ತದೆ. ಇಂತಹ ಬೇಕು-ಬೇಕುಗಳ ಮಧ್ಯೆ ಸಂತೃಪ್ತಿ ಇರಲು ಸಾಧ್ಯವೇ ಇಲ್ಲ. ಅದರಲ್ಲೂ ವಿಶೇಷವಾಗಿ ಮನುಷ್ಯನನ್ನು ಹಣದಿಂದ ತೃಪ್ತಿ ಪಡಿಸಲು ಸಾಧ್ಯವಿಲ್ಲ ಎನ್ನುತ್ತಾರೆ. ಆದ್ದರಿಂದ ಆತ್ಮನಿಯಂತ್ರಣ ಹಾಕಿಕೊಳ್ಳದಿದ್ದರೆ ಸಂತೃಪ್ತಿ ಗಗನಕುಸುಮವೇ ಸರಿ.

ಸುಭಾಷಿತಕಾರ ಹೇಳಿದ ಎರಡನೆಯ ಲಕ್ಷಣವೇ ಕರ್ವತೀತ ಎಂದು. ಕರ್ವತೀತ ಎಂದರೆ ಮಾಡಬೇಕಾದ ಕೆಲಸವನ್ನು ಕರ್ತವ್ಯಬುದ್ಧಿಯಿಂದ ಮಾಡುವುದು ಮತ್ತು ‘ನಾನು ಮಾಡಿದ್ದೇನೆ’ ಎಂಬ ಅಹಮಿಕೆಯನ್ನು ಇಟ್ಟುಕೊಳ್ಳದಿರುವುದೇ ಆಗಿದೆ. ಸ್ವಾತ್ಮಾನಂದ ಎಂದರೆ ತನ್ನೊಳಗೆ ತಾನೇ ಸದಾಆನಂದದಲ್ಲಿರುವ ಸ್ವಭಾವ. ಇನ್ನೊಬ್ಬರ ಸ್ಥಿತಿಯನ್ನು ನೋಡಿ, ತಾನು ಅವರಿಗಿಂತ ಶ್ರೇಷ್ಠ ಅಥವಾ ಕನಿಷ್ಠ ಎಂದು ಹಿಗ್ಗುವುದು ಅಥವಾ ಕುಗ್ಗುವುದು ಮಾಡದೆ, ತನ್ನಲ್ಲಿಯೇ ತಾನು ಹೊಂದಿರುವ ಸಂತೃಪ್ತಿ. ಕರ್ವತೀತತೆ ಮತ್ತು ಸ್ವಾತ್ಮಾರಾಮವು ಸ್ಥಿರವಾದ ಮನಸ್ಸಿನಲ್ಲಿ ಉಂಟಾಗುವ ಭಾವ. ಒಂದೊಮ್ಮೆ ಮನಸ್ಸು ಚಂಚಲವಾಗಿ ಅತ್ತಿತ್ತ ಹರಿದಾಡುತ್ತಿದ್ದರೆ ಅಂತಹ ಚಂಚಲ ಮನಸ್ಸಿನಲ್ಲಿ ಈ ಭಾವ ಮೂಡುವುದಿಲ್ಲ. ಲೌಕಿಕ ವ್ಯವಹಾರದಲ್ಲಿ ಸುತ್ತುತ್ತಿರುವ, ಚಂಚಲವಾದ ಮನಸ್ಸಿನಿಂದ ಎಂತಹ ಸುಖವನ್ನು ನಿರೀಕ್ಷಿಸಲು ಸಾಧ್ಯ? ಆದ್ದರಿಂದಲೇ ಋಷಿಮುನಿಗಳು ಮನಸ್ಸನ್ನು ನಿಯಂತ್ರಿಸುವುದಕ್ಕಾಗಿ ಯೋಗಮಾರ್ಗವನ್ನು ಹುಡುಕಿದರು.

ಮನುಷ್ಯನಿಗೆ ಸುಖ ಬೇಕೆಂಬುದು ದಿಟ. ಜೀವನದಲ್ಲಿ ಸುಖ ಪಡೆಯುವುದಕ್ಕೆ ಮನುಷ್ಯನು ಅಹೋರಾತ್ರಿ ದುಡಿಯುತ್ತಾನೆ. ಆದರೆ ಈಗಿನ ಪ್ರಶ್ನೆಯೇನೆಂದರೆ ‘ಮನುಷ್ಯನಿಗೆ ನಿಜವಾಗಿಯೂ ಸುಖ ಸಿಕ್ಕಿದೆಯೇ?’ ಆಯುಷ್ಯಪೂರ್ತಿ ಹಣ ಬೇಕು, ಇನ್ನಷ್ಟು ಸುಖ ಬೇಕು, ಇನ್ನೂ ಒಳ್ಳೆಯ ಸ್ಥಾನಮಾನ ಬೇಕೆಂದು ಪ್ರಯತ್ನಶೀಲನಾಗಿಯೇ ಇರುತ್ತಾನೆ. ಆದರೆ ಸುಖ ಸಿಕ್ಕಿದೆಯೇ? ಎಂದರೆ ‘ಸಿಕ್ಕೀತು’ ಎನ್ನುತ್ತಾರೆ. ಈವರೆಗೆ ಸಿಕ್ಕಿಲ್ಲ. ಇನ್ನು ಮುಂದಾದರೂ ಸಿಕ್ಕೀತೇ? ಎಂದರೆ ಭರವಸೆಯಿಲ್ಲ. ಕಾಮಲೋಭ, ಹಣಲೋಭದಿಂದ ಮನುಷ್ಯ ಮಾಡುತ್ತಿರುವ ಕೆಲಸಗಳು ವರ್ಣನಾತೀತ. ಹಣದ ಆಸೆಗಾಗಿ ಭೂಮಿ, ಆಕಾಶಗಳನ್ನು ಒಂದು ಮಾಡುವಂತೆ ತೋರಿಸಿಕೊಳ್ಳುತ್ತಾನೆ. ಆದರೆ ಏನು ಪ್ರಯೋಜನ ಹೇಳಿ! ಜೀವಮಾನವಿಡೀ ಕಷ್ಟಪಟ್ಟರೂ ಸ್ಥಿರವಾದ ಸುಖ ಸಿಗಲಿಲ್ಲ. ಹಾಗಾದರೆ ಸುಖ ಸಿಗಲು ಏನು ಮಾಡಬೇಕು? ‘ಯಲ್ಲಭಸೇ ನಿಜ ಕಮೋಪಾತ್ತಂ ವಿತ್ತಂತೇನ ವಿನೋದಯಚಿತ್ತಮ್ ‘ನಿನ್ನ ಕೆಲಸದಿಂದ ನೀನೆಷ್ಟು ಸಂಪಾದಿಸುತ್ತೀಯೋ ಅದರಲ್ಲೇ ತೃಪ್ತಿ ಪಡು. ಸುಖ ನಿನ್ನದಾಗುತ್ತದೆ’ ಎಂದು ಮೋಹಮುದ್ಗರ ತಿಳಿಸುತ್ತದೆ.

ಸುಖೀ ವ್ಯಕ್ತಿಗಳು ಯಾರ್ಯಾರು? ಅವರೇನು ಮಾಡಿದರು? ಎಂಬುದನ್ನು ಅವಲೋಕಿಸಬೇಕು. ಸಂತುಷ್ಟನಿಗೆ ಸುಖವಿದೆ. ಸಂತೋಷ ಎಂದರೆ ‘ಸಾಕು’ ಎಂಬ ಭಾವ. ತನಗೆ ಇಷ್ಟೇ ಸಾಕು ಎಂದು ಮನಸ್ಸಿನಲ್ಲಿ ತೃಪ್ತಿ ಹೊಂದಿರುವವನೇ ಸಂತುಷ್ಟ. ಇದು ನಿತ್ಯಸುಖ. ಇನ್ನಷ್ಟು ಬೇಕು, ಮತ್ತಷ್ಟು ಬೇಕು ಎಂದರೆ ಸಾಧಿಸಬೇಕೆಂಬ ಛಲ ಬೇಕು. ಸಾಧನೆಗೆ ಮಾರ್ಗವಿದೆ. ಆದರೆ ಸಿಕ್ಕಿದ್ದರಲ್ಲಿ ತೃಪ್ತಿಪಡುವ ಮನಸ್ಸಿರಬೇಕು. ಅದೇ ಸಂತೃಪ್ತಿ. ಕರ್ವತೀತನಿಗೆ ಸುಖವಿದೆ. ಫಲಪ್ರಾಪ್ತಿಗಾಗಿ ಯಾವುದೇ ಕಾಮ್ಯಕರ್ಮಗಳನ್ನು ಮಾಡದೆ ಆತ್ಮತತ್ತ್ವಚಿಂತನೆಯಲ್ಲಿ ಮುಳುಗಿ ಇರುವವನಿಗೆ ನಿತ್ಯ ಮತ್ತು ಪರಮಸುಖ ಪ್ರಾಪ್ತವಾಗುತ್ತದೆ. ಹಾಗೆಯೇ ಸ್ವಾತ್ಮಾರಾಮನಿಗೆ ಸುಖ. ಅಂದರೆ ತನ್ನೊಳಗೆ ಸುಖವಿದೆ, ತಾನೇ ಸುಖದ ನಿಧಿ ಎಂದರಿತವನು ಇನ್ನೊಬ್ಬರನ್ನು ನೋಡಿ, ತನ್ನನ್ನು ತುಲನೆ ಮಾಡಿಕೊಳ್ಳುವುದಿಲ್ಲ. ಇಂತಹವರಿಗೆ ನಿತ್ಯ ಸುಖವಿರುತ್ತದೆ.

ಯಾರು ತಮ್ಮ ಜೀವನವನ್ನು ಹೀಗೆ ಒಳ್ಳೆಯ ಮಾರ್ಗದಲ್ಲಿ ತೊಡಗಿಸಿಕೊಳ್ಳುವುದಿಲ್ಲವೋ ಅವರ ಜೀವನ ವ್ಯರ್ಥ. ಪರೋಪಕಾರ ಮಾಡದಿರುವ ಜೀವನಕ್ಕೆ ತಿರಸ್ಕಾರವೇ ಮದ್ದು. ಇಂದು ಅನೇಕ ಯುವಕರು ಸಮಾಜಸೇವೆ, ಪರೋಪಕಾರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡವರಾಗಿದ್ದಾರೆ. ಸಾಂಪ್ರಾದಾಯಿಕವಾದ ಸಮಾಜಸೇವೆಯಲ್ಲದೆ ಆಧುನಿಕ ಸಮಾಜದಲ್ಲಿ ಅವಶ್ಯಕತೆಯಿರುವ ಸೇವೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಎಷ್ಟು ತಿಳಿಹೇಳಿದರೂ ಶ್ರೀಕ್ಷೇತ್ರಕ್ಕೆ ಬಂದ ಭಕ್ತರು ಅರ್ಥೈಸಿಕೊಳ್ಳದೆ ನೇತ್ರಾವತಿ ಸ್ನಾನಘಟ್ಟದಲ್ಲಿ ಮಲಿನತೆಯನ್ನು ಮಾಡುತ್ತಾರೆ. ಉಜಿರೆ-ಬೆಳ್ತಂಗಡಿ ಯುವಕರ ‘ಬದುಕು ಕಟ್ಟೋಣ’ ತಂಡ ಸೇವಾರೂಪವಾಗಿ ಈ ಸ್ಥಳವನ್ನು ಸ್ವಚ್ಛಗೊಳಿಸುತ್ತಿದೆ. ಇಂತಹ ಸಮೂಹ ಎಲ್ಲ ಊರುಗಳಲ್ಲೂ ಇರಬಹುದು. ಅಂತಹವರನ್ನು ನಾವು ಪ್ರೋತ್ಸಾಹಿಸಬೇಕು. ಬಡವರ ಕಣ್ಣೀರು ಒರೆಸುವ, ದುಃಖದಲ್ಲಿ ಇರುವವರಿಗೆ ಸಹಾಯಹಸ್ತ ಚಾಚುವ, ಆಪತ್ಕಾಲದಲ್ಲಿ ಆಪದ್ಬಾಂಧವರಾಗಿ ಬರುವವರನ್ನು ಗುರುತಿಸಿ ಗೌರವಿಸಬೇಕು. ಇದು ನಮಗೂ ನಮ್ಮ ಸಮಾಜಕ್ಕೂ ಒಳ್ಳೆಯದು.

ನನ್ನ ಧರ್ಮಪತ್ನಿ ಹೇಮಾವತಿ ಹೆಗ್ಗಡೆಯವರು ಈ ವರ್ಷ ‘ವಾತ್ಸಲ್ಯ’ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಅನಾಥರಾಗಿ ಇರುವವರ ಮನೆಯನ್ನು ಗುರುತಿಸಿ ಅವರಿಗೆ ಬೇಕಾದಂತಹ ಜೀವನಾವಶ್ಯಕ ವಸ್ತುಗಳನ್ನು ತಲುಪಿಸುವುದು, ದಿನಬಳಕೆಗೆ ಬೇಕಾದ ಪಾತ್ರೆ, ಹಾಸಿಗೆ, ವಸ್ತ್ರ ಇತ್ಯಾದಿಗಳನ್ನು ನೀಡುವ ಕಾರ್ಯಕ್ರಮವಿದು. ಆರಂಭದಲ್ಲಿ ಕೂಲಂಕಷವಾಗಿ ಸಮೀಕ್ಷೆ ಮಾಡಿಸಿದರು. ಊರಲ್ಲಿ ಅನೇಕರು ಅನಾಥರು, ಅಂಗವಿಕಲರಿದ್ದರು. ಅವರನ್ನು ಗುರುತಿಸಿ, ಕುಂದುಕೊರತೆಗಳನ್ನು ಪಟ್ಟಿಮಾಡಿ, ಅವರ ಅವಶ್ಯಕತೆಗಳಿಗೆ ಅನುಗುಣವಾಗಿ ವಸ್ತುಗಳನ್ನು ಜೋಡಿಸಿ ಅವರ ಮನೆಗೆ ಕೊಂಡೊಯ್ದು ಕೊಡುವ ಕಾರ್ಯಕ್ರಮವಿದು. ‘ವಾತ್ಸಲ್ಯ’ದ ವಸ್ತುಗಳನ್ನು ತಲುಪಿಸಿದಾಗ ನಮಗೂ ಆನಂದ. ಅದನ್ನು ಪಡೆದ ಅವರಿಗೆ ಆದ ಸಂತೋಷವನ್ನು ವರ್ಣಿಸಲು ಸಾಧ್ಯವಿಲ್ಲದ್ದು.

ಅಭಿವೃದ್ಧಿಯ ಕಾಲಘಟ್ಟದಲ್ಲಿ ನಾವಿರುವಾಗ ಈ ಕಲಿಗಾಲ ಕೆಟ್ಟದ್ದು ಎಂಬುವವರ ಮಾತನ್ನು ನಾನು ಪುರಸ್ಕರಿಸಲಾರೆ. ಮಾನಸಿಕ ಬಡತನ ಕಡಿಮೆಯಾಗಿದೆ. ಏಕೆಂದರೆ ನಾವು ಜಾತ್ಯತೀತ ಸಮಾಜವನ್ನು ಕಟ್ಟುತ್ತಿದ್ದೇವೆ. ಜಾತಿಗಿಂತ ವೃತ್ತಿ ಮುಖ್ಯ. ಯಾವ ಜಾತಿಯವರೂ ಯಾವ ವೃತ್ತಿಯನ್ನು ಬೇಕಾದರೂ ಮಾಡಬಹುದು. ಸಮಾಜವ್ಯವಸ್ಥೆಯಲ್ಲಿ ಬದಲಾವಣೆಗಳು ಬಂದಿವೆ. ಅವಕಾಶಗಳು ನಿರ್ವಣವಾಗಿವೆ.

ನಾವು ಕೂಡ ಶ್ರೀಕ್ಷೇತ್ರದ ಮೂಲಕ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಮಾಜದೊಂದಿಗೆ ಸ್ಪಂದಿಸುತ್ತಿದ್ದೇವೆ. ಗ್ರಾಮೀಣಾಭಿವೃದ್ಧಿ ಯೋಜನೆ ಬಂದ ನಂತರ ಜಾತಿ, ಮತ ಪಂಥಗಳ ಸಂಕುಚಿತ ಚೌಕಟ್ಟನ್ನು ಮೀರಿ ಎಲ್ಲರೂ ಒಟ್ಟು ಸೇರಿ ಮಾನವ ಸಮುದಾಯದ ಏಳಿಗೆಗಾಗಿ ಪ್ರಯತ್ನಿಸುವ ವಾತಾವರಣ ನಿರ್ವಣವಾಗಿದೆ. ಆದ್ದರಿಂದ ಕಲಿಯುಗ ಕೆಟ್ಟದ್ದಲ್ಲ. ಇದು ಒಳ್ಳೆಯದೇ.

ಮನುಷ್ಯ ಬುದ್ಧಿಜೀವಿ. ಸರ್ವ ಸಾಮರ್ಥ್ಯ, ಸರ್ವ ಸಂಪತ್ತಿನಿಂದ ಕೂಡಿರುವ, ಪ್ರಕೃತಿಯಲ್ಲಿರುವ ಎಲ್ಲ ಪ್ರಾಣಿಗಳಿಂದಲೂ ಪ್ರಯೋಜನವನ್ನು ಪಡೆದುಕೊಳ್ಳುತ್ತಿರುವ ಜೀವಿ. ಇಂತಹವರು ಸಮಾಜಕ್ಕೂ ಪ್ರಕೃತಿಗೂ ಸಾಕಷ್ಟು ಸಹಾಯ ಮಾಡುವ ಅವಕಾಶ ಪಡೆದಿದ್ದಾರೆ. ಮಾನವನು ತನ್ನ ಸಂಪತ್ತನ್ನು ಬಡವರಿಗೆ ದಾನ ಮಾಡಬೇಕು. ಅಶಕ್ತರಿಗೆ, ವೃದ್ಧರಿಗೆ ಯಥಾಶಕ್ತಿ ಸಹಾಯ ಮಾಡಬೇಕು. ಕೊಡಲು ಏನೂ ಇಲ್ಲದಿದ್ದರೂ ಕನಿಷ್ಠ ಸ್ನೇಹಪೂರ್ಣವಾದ ನಗುವಿನಿಂದಲೇ ಇನ್ನೊಬ್ಬನಿಗೆ ಆನಂದವನ್ನುಂಟು ಮಾಡಬಹುದು. ಈ ಮನುಷ್ಯಜನ್ಮವು ಭಗವಂತ ಕೊಟ್ಟ ವರ ಎಂದು ತಿಳಿದು ಇದನ್ನು ಪರೋಪಕಾರಕ್ಕಾಗಿ ಬಳಸಬೇಕು. ವೇದವ್ಯಾಸರು ಮಹಾಭಾರತದಲ್ಲಿ ಹೇಳಿದ್ದು ಇದನ್ನೇ- ‘ನಾನು ಎರಡು ಕೈಗಳನ್ನು ಮೇಲಕ್ಕೆ ಎತ್ತಿ ಕೂಗಿ ಹೇಳುತ್ತಿದ್ದೇನೆ. ಪರೋಪಕಾರಃ ಪುಣ್ಯಾಯ ಪಾಪಾಯ ಪರಪೀಡನಮ್ ಎಂದು. ಆದರೆ ನನ್ನ ಮಾತನ್ನು ಯಾರೂ ಗ್ರಹಿಸುತ್ತಿಲ್ಲ’ ಎಂದು.

ಒಂದೂರಲ್ಲಿ ಒಬ್ಬ ದೈವಭಕ್ತನಿದ್ದ. ಆತ ಬಹಳಷ್ಟು ಹಣವನ್ನು ವ್ಯಯ ಮಾಡಿ, ಕಷ್ಟಪಟ್ಟು ದೂರದ ಪ್ರಸಿದ್ಧ ದೇವಮಂದಿರಕ್ಕೆ ಹೋದಾಗ ಅಲ್ಲಿ ಒಂದು ಅಶರೀರವಾಣಿಯಾಯಿತು- ‘ಇಲ್ಲಿ ಬಂದ ನೀವ್ಯಾರೂ ನನ್ನ ನಿಜವಾದ ಭಕ್ತರಲ್ಲ. ನನ್ನ ನಿಜವಾದ ಭಕ್ತ ಅಲ್ಲಿದ್ದಾನೆ’ ಎಂದು ಒಂದು ಊರಿನ ಹೆಸರನ್ನು ಹೇಳಿತು. ಇದನ್ನು ಕೇಳಿ, ದೇವಮಂದಿರಕ್ಕೆ ಬಂದ ಭಕ್ತನಿಗೆ ಆಶ್ಚರ್ಯವಾಗಿ, ಹಿಂತಿರುಗಿ ಅವನನ್ನು ಹುಡುಕಿ, ಅವನಲ್ಲಿ, ‘ನೀನು ದೊಡ್ಡದೇವ ಭಕ್ತನಂತೆ. ಹೌದೇ?’ ಎಂದು ಕೇಳಿದ. ಅದಕ್ಕೆ ಆತ ಉತ್ತರಿಸಿದ- ‘ನಾನೇನು ಅಂತಹ ಪುಣ್ಯ ಪಡೆದ ಭಕ್ತನಲ್ಲ. ಆದರೆ ಪುಣ್ಯಕ್ಷೇತ್ರಕ್ಕೆ ಯಾತ್ರೆ ಮಾಡಬೇಕೆಂಬ ಆಸೆ ಇತ್ತು. ಅದಕ್ಕಾಗಿ ಪ್ರತಿದಿನ ದುಡಿದು ಸ್ವಲ್ಪ ಹಣವನ್ನು ಸಂಗ್ರಹಿಸುತ್ತಿದ್ದೆ. ಆದರೆ ಯಾತ್ರೆಯ ಯೋಗ ನನಗೆ ಬರಲಿಲ್ಲ. ನಾನೊಬ್ಬ ಪಾಪಿ’.

‘ಯಾಕೆ ಹೀಗೆ ಹೇಳುತ್ತಿದ್ದಿ’ ಎಂದು ಕೇಳಿದಾಗ ಆತ ಹೇಳುತ್ತಾನೆ- ‘ಯಾತ್ರೆಯನ್ನು ಮಾಡಿ ದೈವಾನುಗ್ರಹ ಪಡೆಯುವ ಆಸೆ ಇತ್ತು. ಆದರೆ, ನನ್ನ ಪಕ್ಕದ ಮನೆಯ ಮಗು ಒಂದು ದಿನ ಅಳುತ್ತಿತ್ತು. ಆಕೆಯ ತಾಯಿ ಅಳುತ್ತಿರುವ ಮಗುವಿಗೆ ಮತ್ತೆ ಮತ್ತೆ ಹೊಡೆಯುತ್ತಿದ್ದಳು. ನಾನು ಹೋಗಿ ‘ಯಾಕೆ ಆ ಮಗುವಿಗೆ ಹೊಡೆಯುತ್ತಿ?’ ಎಂದು ಪ್ರಶ್ನಿಸಿದಾಗ ಆಕೆ, ‘ಈ ಮಗುವಿನ ಹೊಟ್ಟೆಹೊರೆಯುವ ಸಾಮರ್ಥ್ಯ ನನಗಿಲ್ಲ. ನಾನೆಷ್ಟು ದುಡಿದರೂ ಜೀವನಕ್ಕೆ ಅದು ಸಾಕಾಗುವುದಿಲ್ಲ. ಈ ಮಗು ಹಸಿವೆಯಾಗಿದೆ, ತನಗೆ ತಿನ್ನಲು ಬೇಕು ಎಂದು ಅಳುತ್ತಿರುತ್ತದೆ. ಅದರ ಬಾಯಿ ಮುಚ್ಚಿಸಲು ಪ್ರಯತ್ನಿಸುತ್ತಿದ್ದೇನೆ’ ಎಂದಳಂತೆ. ಈ ಮಾತಿನಿಂದ ಕನಿಕರಗೊಂಡ ಆತ ಯಾತ್ರೆಗೆಂದು ತೆಗೆದಿಟ್ಟ ಹಣವನ್ನು ಆಕೆಗೇ ಕೊಟ್ಟುಬಿಟ್ಟ. ಹೀಗೆ ಅವನಿಗೆ ಯಾತ್ರೆ ಮಾಡಲಾಗದಿದ್ದರೂ ಇತರ ಮಾನವರಿಗಾಗಿ ಮರುಗಿ ಕೊಟ್ಟ ಸಹಾಯ ತೀರ್ಥಯಾತ್ರೆ ಮಾಡಿದ್ದಕ್ಕಿಂತಲೂ ಶ್ರೇಷ್ಠವೆನಿಸಿತ್ತು. ಯಾತ್ರೆ ಮಾಡಿ ದೇವರದರ್ಶನ ಮಾಡಿದವರಿಗಿಂತ ಪರರಕಣ್ಣೀರನ್ನು ಒರೆಸಿದವರೇ ಭಗವಂತನಿಗೆ ಹತ್ತಿರವಾದವರು. ಆದ್ದರಿಂದ ನಾವೆಲ್ಲರೂ ಸಂತೃಪ್ತಿಯಿಂದ, ಕರ್ವತೀತ ಭಾವದಿಂದ ಪರೋಪಕಾರ ಮಾಡೋಣ. ಆಗ ಸುಖ-ನೆಮ್ಮದಿ ನಮ್ಮನ್ನು ಅರಸಿಕೊಂಡು ಬರುತ್ತದೆ.

(ಲೇಖಕರು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು)

Share This Article

ಒಂದು ಬಾರಿ ಇದನ್ನು ಕುಡಿದರೆ ಸಾಕು ನಿಮ್ಮ ಹೊಟ್ಟೆ ಫುಲ್​ ಕ್ಲೀನ್ ಆಗಿಬಿಡುತ್ತೆ! Stomach problems

ತಿಂದ ಆಹಾರ ಸರಿಯಾಗಿ ಜೀರ್ಣವಾಗದಿದ್ದರೆ ಆ ನೋವು ( Stomach problems ) ಅಥವಾ ಕಿರಿಕಿರಿ…

Health Tips : ಸಕ್ಕರೆ ಕಾಯಿಲೆಯಿಂದ ಬಳಲುತ್ತೀದ್ದೀರಾ? ಬೆಳ್ಳಂಬೆಳಗ್ಗೆ ಕರಿಬೇವಿನ ಎಲೆಯ ನೀರನ್ನು ಕುಡಿಯಿರಿ ಸಾಕು

ಬೆಂಗಳೂರು: ಕರಿಬೇವು ಕೇವಲ ಬೆಳಗಿನ ತಿಂಡಿಗೆ ರುಚಿ ಕೊಡಲು ಒಗ್ಗರಣೆಗೆ ಮಾತ್ರ ಮೀಸಲಾಗಿಲ್ಲ. ಕರಿಬೇವಿನ ಎಲೆಗಳು…

ಮನೆಯಲ್ಲೇ ತಯಾರಿಸಿಕೊಳ್ಳಿ ಕೂದಲು ಸಂರಕ್ಷಣೆಯ ಶುದ್ಧ ತೈಲ

ಸದೃಢವಾದ, ಹೊಳೆಯುವ, ನೀಳ ಕೂದಲು ಬೇಕೆಂಬ ಆಸೆ ತುಂಬಾ ಜನರಿಗೆ ಇದ್ದೇ ಇರುತ್ತದೆ. ಜೊತೆಗೆ ಕೂದಲು…