More

    ಸರ್ಕಾರಿ ಉದ್ಯೋಗವಂಚಿತನಾಗುವ ಭೀತಿಯಲ್ಲಿದ್ದವಗೆ ಹೈಕೋರ್ಟ್ ಅಭಯ; ಎರಡೂ ಕಡೆ ತಪ್ಪಾಗಿದ್ದರೂ ಅವಕಾಶ ಸಿಕ್ತು

    ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ನೇಮಕಾತಿ ಪ್ರಕ್ರಿಯೆಯಲ್ಲಿ ಆನ್‌ಲೈನ್ ಅರ್ಜಿ ಭರ್ತಿ ಮಾಡುವಾಗ ಆಗಿದ್ದ ಲೋಪದ ಕಾರಣದಿಂದ ಸರ್ಕಾರಿ ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿದ್ದ ಅಭ್ಯರ್ಥಿಯೊಬ್ಬರ ನೆರವಿಗೆ ಧಾವಿಸಿರುವ ಹೈಕೋರ್ಟ್, ಅಭ್ಯರ್ಥಿಯು ಅರ್ಜಿಯಲ್ಲಿ ಪರಿಶಿಷ್ಟ ಜಾತಿಯ ಬದಲಿಗೆ ಪರಿಶಿಷ್ಟ ಪಂಗಡವೆಂದು ಉಲ್ಲೇಖಿಸಿದ್ದನ್ನು ತಿದ್ದುಪಡಿ ಮಾಡಿ ಆಯ್ಕೆಗೆ ಪರಿಗಣಿಸುವಂತೆ ಕೆಪಿಎಸ್‌ಸಿಗೆ ನಿರ್ದೇಶಿಸಿದೆ.

    ಎನ್. ಹೇಮಂತ್ ಕುಮಾರ್ ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿರುವ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಪೀಠ ಈ ಆದೇಶ ಮಾಡಿದ್ದು, ಪರೀಕ್ಷೆಯಲ್ಲಿ ಅತಿ ಹೆಚ್ಚಿನ ಅಂಕ ಗಳಿಸಿರುವ ಪರಿಶಿಷ್ಟ ಜಾತಿಯ ಅಭ್ಯರ್ಥಿಯ ಅಹವಾಲು ಆಲಿಸದೆ ಕೋರ್ಟ್ ಕಿವುಡನಂತಿರಲು ಸಾಧ್ಯವಿಲ್ಲ. ಇದರಿಂದ, ಆತ ನೇಮಕದ ಅವಕಾಶ ಕಳೆದುಕೊಳ್ಳುತ್ತಾನೆ. ಮನುಷ್ಯ ತಪ್ಪು ಮಾಡುವುದು ಸಹಜ. ಅದೇ ರೀತಿ ಅರ್ಜಿದಾರರೂ ಪ್ರಮಾದವೆಸಗಿದ್ದಾರೆ. ಅದನ್ನೇ ಮುಂದಿಟ್ಟುಕೊಂಡು ಅವರನ್ನು ಅವಕಾಶವಂಚಿತರನ್ನಾಗಿ ಮಾಡಲಾಗದು ಎಂದು ನ್ಯಾಯಾಲಯ ಹೇಳಿದೆ.

    ಕೆಪಿಎಸ್‌ಸಿ ವಾದ ಒಪ್ಪದ ಕೋರ್ಟ್: ಒಬ್ಬ ಅಭ್ಯರ್ಥಿಗೆ ಈ ರೀತಿ ಲೋಪ ಸರಿಪಡಿಸಲು ಅವಕಾಶ ನೀಡಿದರೆ ಅದು ದಿಡ್ಡಿ ಬಾಗಿಲು ತೆರೆದಂತಾಗುತ್ತದೆ. ಅದನ್ನೇ ದೃಷ್ಟಾಂತವಾಗಿಟ್ಟುಕೊಂಡು ಎಲ್ಲರೂ ಅಂತಹ ಅವಕಾಶವನ್ನು ಕೋರಲು ಮುಂದೆ ಬರುತ್ತಾರೆ ಎಂಬ ಕೆಪಿಎಸ್‌ಸಿ ವಾದ ತಳ್ಳಿಹಾಕಿರುವ ನ್ಯಾಯಪೀಠ, ಅರ್ಜಿದಾರರು ಪರಿಶಿಷ್ಟ ಜಾತಿಗೆ ಸೇರಿದವರು ಎಂಬುದರಲ್ಲಿ ಯಾವುದೇ ವಿವಾದವಿಲ್ಲ. ಆದರೆ, ಆನ್‌ಲೈನ್‌ನಲ್ಲಿ ಅರ್ಜಿ ತುಂಬುವಾಗ ಲೋಪವಾಗಿದೆ. ಆನಂತರ ಆತ ಸಲ್ಲಿಸಿದ ಮನವಿಯನ್ನು ಪರಿಗಣಿಸಿ ಆಯೋಗ ಜಾತಿ ತಿದ್ದುಪಡಿ ಮಾಡಬಹುದಿತ್ತು. ಆದರೆ, ಹಾಗೆ ಮಾಡದಿರುವುದೇ ಈ ವ್ಯಾಜ್ಯಕ್ಕೆ ಕಾರಣವಾಗಿದೆ ಎಂದು ಹೈಕೋರ್ಟ್ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ.

    ಪ್ರಕರಣವೇನು?: ಕಿರಿಯ ಸಹಾಯಕ/ದ್ವೀತಿಯ ದರ್ಜೆ ಸಹಾಯಕ ಹುದ್ದಗೆ ಕೆಪಿಎಸ್‌ಸಿ 2020ರ ಫೆ.29ರಂದು ಅರ್ಜಿ ಆಹ್ವಾನಿಸಿತ್ತು. ಅರ್ಜಿದಾರರು ಸೈಬರ್ ಕೇಂದ್ರದಲ್ಲಿ ಆನ್‌ಲೈನ್ ಮೂಲಕ ಅರ್ಜಿ ಭರ್ತಿ ಮಾಡುವಾಗ ಜಾತಿ ನಮೂನೆಯಲ್ಲಿ ಪರಿಶಿಷ್ಟ ಜಾತಿಯ ಬದಲು ತಪ್ಪಾಗಿ ಪರಿಶಿಷ್ಟ ಪಂಗಡ ಎಂದು ಭರ್ತಿ ಮಾಡಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯಲ್ಲಿ ಅವರು ಪರಿಶಿಷ್ಟ ಪಂಗಡಕ್ಕೆ ಸೇರಿದವರು ಎಂದು ತೋರಿಸುತ್ತಿತ್ತು. ಜಾತಿ ನಮೂದು ಮಾಡುವಲ್ಲಿ ಆಗಿರುವ ದೋಷವನ್ನು ಸರಿಪಡಿಸಲು ಆನ್‌ಲೈನ್‌ನಲ್ಲಿ ಪ್ರಯತ್ನಿಸಿದಾಗ, ವೆಬ್‌ಸೈಟ್‌ನಲ್ಲಿ ಬದಲಾವಣೆ ಅನುಮೋದಿಸಲಾಗಿದೆ ಎಂದು ತೋರಿಸಿತ್ತು.

    ಪರಿಶಿಷ್ಟ ಜಾತಿ ಕೆಟಗರಿಯಲ್ಲೇ ಪರೀಕ್ಷೆ ಬರೆಯುತ್ತಿರುವುದಾಗಿ ಭಾವಿಸಿದ್ದ ಅವರು ಲಿಖಿತ ಪರೀಕ್ಷೆಗೆ ಹಾಜರಾಗಿದ್ದರು. ಜ್ಯೇಷ್ಠತಾಪಟ್ಟಿ ಪ್ರಕಟವಾಗಿ 2022ರ ಸೆ.23ರಂದು ದಾಖಲಾತಿ ಪರಿಶೀಲನೆಗೂ ತೆರಳಿದ್ದರು. ಆಗ ಅವರಿಗೆ ಪರಿಶಿಷ್ಟ ಪಂಗಡದ ಅಭ್ಯರ್ಥಿಯಾಗಿಯೇ ಪರೀಕ್ಷೆ ಬರೆದಿರುವುದು ತಿಳಿದುಬಂದಿತ್ತು. ಇದರಿಂದ, ಆಯೋಗದ ಆಯುಕ್ತರ ಮುಂದೆ ಪ್ರಮಾಣಪತ್ರ ಸಲ್ಲಿಸಿ, ಅರ್ಜಿ ಭರ್ತಿ ಮಾಡುವಾಗ ಆಗಿದ್ದ ತಪ್ಪು ಸರಿಪಡಿಸಲು ಕೋರಿದ್ದರು. ಆದರೆ, ಆಯೋಗ ಅವರ ಮನವಿ ತಿರಸ್ಕರಿಸಿತ್ತು.

    ಆ ಬಳಿಕ ಹೇಮಂತ್ ಕುಮಾರ್, ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಆಯೋಗದ ಮೊರೆ ಹೋಗಿದ್ದರು. ಅವರ ಮನವಿ ಪರಿಗಣಿಸಲು ಆಯೋಗ ಕೆಪಿಎಸ್‌ಸಿಗೆ ಸೂಚಿಸಿತ್ತು. ಈ ಮಧ್ಯೆ 2022ರ ನ.25ರಂದು ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಲಾಗಿತ್ತು. ಆಗಲೂ ಅಭ್ಯರ್ಥಿಯನ್ನು ಎಸ್‌ಸಿ ಬದಲಿಗೆ ಎಸ್‌ಟಿ ಎಂದೇ ಪರಿಗಣಿಸಲಾಗಿತ್ತು. ಇದರಿಂದ, ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.

    ಸ್ವಾಮೀಜಿಗೆ ಪಿಎಫ್​​ಐನಿಂದ ಜೀವ ಬೆದರಿಕೆ; ಕೇಂದ್ರ ಸರ್ಕಾರದಿಂದ ವೈ ಕೆಟಗರಿ ಭದ್ರತೆ

    ಪ್ರೇಮಿಗಳ ದಿನದಂದು ‘ಅಪ್ಪಿಕೋ ದನ’; ಫೆ. 14 ‘ಕೌ ಹಗ್ ಡೇ’ ಎಂದು ಆಚರಿಸಲು ಸರ್ಕಾರದ ಮನವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts