More

    ಪರ್ಸೀನ್ ಬೋಟ್ ಮೀನುಗಾರಿಕೆ ಸ್ಥಗಿತದಿಂದ ಐದು ಸಾವಿರ ಕುಟುಂಬಗಳು ಅತಂತ್ರ: ಸಂಘದ ಸಭೆಯಲ್ಲಿ ಅಳಲು

    ಉಡುಪಿ: ನಾಲ್ಕು ವರ್ಷಗಳಿಂದ ಮಲ್ಪೆ ಬಂದರಿನ 140 ಪರ್ಸೀನ್ ಬೋಟ್‌ಗಳಿಗೆ ಮೀನುಗಾರಿಕೆ ಇಲ್ಲವಾಗಿದ್ದು, 5000ಕ್ಕೂ ಅಧಿಕ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ ಎಂದು ಮೀನುಗಾರರು ಅಳಲು ತೋಡಿಕೊಂಡಿದ್ದಾರೆ.
    ಉಡುಪಿಯಲ್ಲಿ ಶನಿವಾರ ಪರ್ಸೀನ್ ಮೀನುಗಾರರ ಸಂಘದ ಸಭೆ ನಡೆಯಿತು. ಇತರ ಜಿಲ್ಲೆಗಳಿಗೆ, ಪಕ್ಕದ ಕೇರಳ, ಗೋವಾ, ಮಹಾರಾಷ್ಟ್ರಕ್ಕಿಲ್ಲದ ಲೈಟ್ ಫಿಶಿಂಗ್ ಕಾನೂನು ಮಲ್ಪೆ ಬಂದರಿಗೆ ಮಾತ್ರ ಅನ್ವಯವಾಗುತ್ತಿದೆ. ಜನಪ್ರತಿನಿಧಿಗಳು, ಅಧಿಕಾರಿಗಳು, ಸಂಘದ ಮುಖಂಡರು ಬಂಡವಾಳಶಾಹಿಗಳ ಪರವಿದ್ದಾರೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ನವೀನ್ ಕೋಟ್ಯಾನ್ ಆಕ್ರೋಶ ವ್ಯಕ್ತಪಡಿಸಿದರು.

    140 ಬೋಟ್‌ಗಳಲ್ಲಿ ಶೇ.10 ಬೋಟ್‌ಗಳಷ್ಟೇ ಮೀನುಗಾರಿಕೆ ಮಾಡುತ್ತಿವೆ. ಸಾಲ ಮಾಡಿ ಕಟ್ಟಿರುವ ಬೋಟ್ ಪ್ರಯೋಜನವಿಲ್ಲವಾಗಿದೆ. ಪಕ್ಕದ ಮಂಗಳೂರಿನಲ್ಲಿ ಮೀನುಗಾರಿಕೆ ನಡೆಯುತ್ತಿದೆ. ಕಾರವಾರ, ಗೋವಾದಲ್ಲೂ ಪರ್ಸೀನ್ ಮೀನುಗಾರಿಕೆಗೆ ಅವಕಾಶವಿದೆ. ಆದರೆ ಸರ್ವಋತು ಮೀನುಗಾರಿಕಾ ಬಂದರು ಮಲ್ಪೆಯಲ್ಲಿ ಕಾನೂನು ಹೇಳಿ ನಮಗೆ ಅಡ್ಡಿ ಪಡಿಸಲಾಗುತ್ತಿದೆ. ರಾಜಕೀಯ ಇಚ್ಛಾಶಕ್ತಿ ಕೊರತೆ, ಸಂಘಟನೆಯ ದಬ್ಬಾಳಿಕೆಯಿಂದ ನಾವು ಅನ್ಯಾಯಕ್ಕೆ ಒಳಗಾಗುತ್ತಿದ್ದೇವೆ. ಬೋಟ್ ಒಂದೇ ಕಡೆ ಲಂಗರು ಹಾಕಿರುವುದರಿಂದ ಬಲೆ, ಬೋಟ್‌ನ ಇತರೆ ಸೊತ್ತುಗಳು ಸುಟ್ಟು ಹೋಗುತ್ತಿವೆ ಎಂದು ಹೇಳಿದರು.

    ಸಂಘದ ಅಧ್ಯಕ್ಷ ನಾಗರಾಜ್ ಸುವರ್ಣ, ಉಪಾಧ್ಯಕ್ಷ ಮಧುಕರ ಸುವರ್ಣ, ಕಾರ್ಯದರ್ಶಿ ಸಂತೋಷ್ ಸಾಲ್ಯಾನ್, ಜತೆ ಕಾರ್ಯದರ್ಶಿ ಜಯಶೀಲ ಅಮೀನ್, ಗೌರವಾಧ್ಯಕ್ಷ ಯಶೋಧರ ಅಮೀನ್, ಗೌರವ ಸಲಹೆಗಾರ ಗುರುದಾಸ್ ಬಂಗೇರ ಮತ್ತಿತರರಿದ್ದರು.

    ಲೈಟ್ ಫಿಶಿಂಗ್‌ಗೆ ಅವಕಾಶ ಕೊಡಿ: ಬಂಡವಾಳ ಶಾಹಿಗಳಿಗೆ ಬೋಟ್ ಪರವಾನಗಿ ಕೊಟ್ಟು ಬೇಕಾಬಿಟ್ಟಿ ಅವಕಾಶ ಕೊಡುತ್ತಾರೆ. ಡೀಸೆಲ್ ಬೆಲೆ ದಿನೆದಿನೇ ದುಬಾರಿಯಾಗುತ್ತಿರುವ ಪರಿಣಾಮ ಮೀನುಗಾರಿಕೆ ಕಷ್ಟವಾಗುತ್ತಿದೆ. ಬಲೆ ಸಹಿತ ಮೀನುಗಾರಿಕಾ ಪೂರಕ ವಸ್ತುಗಳ ಬೆಲೆ ಗಗನಕ್ಕೇರಿದೆ ಎಂದು ಪರ್ಸೀನ್ ಮೀನುಗಾರರು ಸಾಂಪ್ರದಾಯಿಕ ಮೀನುಗಾರಿಕೆ ಮಾಡುತ್ತಿದ್ದು, ಮೀನುಗಾರಿಕೆಗೆ ಯಾವುದೇ ಹಿನ್ನ್ನಡೆಯಾಗದಂತೆ ನೋಡಿಕೊಂಡಿದ್ದಾರೆ. ಪರ್ಸೀನ್ ಮೀನುಗಾರರು ಕೋಟ್ಯಂತರ ರೂ. ಹೂಡಿಕೆ ಮಾಡಿರುವುದರಿಂದ ಡಿಸೆಂಬರ್‌ನಿಂದ ಮೇ ಅಂತ್ಯದವರೆಗೆ ಲೈಟ್ ಫಿಶಿಂಗ್‌ಗೆ ಅವಕಾಶ ಕೊಡಬೇಕೆಂದು ಸಂಘದ ಉಪಾಧ್ಯಕ್ಷ ಚಂದ್ರ ಸಾಲ್ಯಾನ್ ಸರ್ಕಾರವನ್ನು ಆಗ್ರಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts