More

    ಸಂಪೂರ್ಣವಾಗಿ ಮಂಡಿನೋವು ಶಮನ ಸಾಧ್ಯವೇ?

    ಇಂದ್ರಿಯಗಳಲ್ಲಿ ಕಣ್ಣು ಶ್ರೇಷ್ಠ ಎನ್ನುವಂತೆಯೇ ಸಂಧಿಗಳಲ್ಲಿ ಮೊಣಕಾಲು ಅಥವಾ ಮಂಡಿ ಶ್ರೇಷ್ಠ ಎನ್ನಬಹುದು. ಏಕೆಂದರೆ ಮಂಡಿನೋವು ಒಂದಿದ್ದರೆ ಸಣ್ಣಪುಟ್ಟ ಕೆಲಸಗಳೂ ದೊಡ್ಡ ಹೊರೆಯಾಗಿಬಿಡುತ್ತವೆ. ಏಕೆಂದರೆ ನಮ್ಮ ಇಡೀ ದೇಹವನ್ನು ಹೊತ್ತುಕೊಳ್ಳುವುದು ಮಂಡಿಯೇ. ಮಂಡಿನೋವಿಗೆ ಹಲವಾರು ರೀತಿಯ ಸಮಸ್ಯೆಗಳು ಕಾರಣವಾಗುತ್ತವೆ. ಮೂಳೆ ಸವಕಳಿ ಅಥವಾ ಒಸ್ಟಿಯೋ ಆರ್ಥರೈಟಿಸ್​ನಿಂದಾಗಿ ಆಗುವ ಮಂಡಿನೋವಿನ ಕಾರಣಗಳು ಮತ್ತು ಪರಿಹಾರಗಳ ಬಗ್ಗೆ ತಿಳಿದುಕೊಳ್ಳೋಣ.

    ಸಂಪೂರ್ಣವಾಗಿ ಮಂಡಿನೋವು ಶಮನ ಸಾಧ್ಯವೇ?ಸಾಮಾನ್ಯವಾಗಿ ಮಂಡಿನೋವಿಗೆ ಮೂಳೆ ಸವಕಳಿ ಕಾರಣವಾಗಿರುತ್ತದೆ. ಮಂಡಿನೋವು ಹೆಚ್ಚಾಗಿ ಮಧ್ಯವಯಸ್ಸು ಅಥವಾ ಇಳಿವಯಸ್ಸಿನಲ್ಲಿ ಕಾಡುತ್ತದೆ. ಇತ್ತೀಚೆಗೆ ಮೂವತ್ತರ ಒಳಗೂ ಈ ಸಮಸ್ಯೆ ಕಾಡುತ್ತಿದೆ. ಇದಕ್ಕೆ ಬಹುತೇಕ ಮುಖ್ಯ ಕಾರಣ ನಮ್ಮ ಜೀವನಶೈಲಿ. ಪೌಷ್ಟಿಕವಲ್ಲದ ಜಂಕ್​ಫುಡ್​ಗಳ ಸೇವನೆ, ವ್ಯಾಯಾಮರಹಿತ ಜೀವನಶೈಲಿ ಇವೆಲ್ಲ ಬೇಗನೆ ಮಂಡಿ ಸವಕಳಿ ಉಂಟಾಗಲು ಕಾರಣವಾಗುತ್ತವೆ. ಪುರುಷರಿಗಿಂತ ಮಹಿಳೆಯರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ. ವಿಶೇಷವಾಗಿ ಮುಟ್ಟು ನಿಲ್ಲುವ ಸಮಯ ಹತ್ತಿರ ಬರುತ್ತಿದ್ದಂತೆ ಅಥವಾ ಮುಟ್ಟು ನಿಂತ ನಂತರ ಹಾಮೋನ್ ವ್ಯತ್ಯಾಸದಿಂದಾಗಿ ಈ ತೊಂದರೆ ಕಾಡುವುದು ಸಾಮಾನ್ಯ.

    ಅತಿತೂಕವು ಮಂಡಿ ಸವಕಳಿಯ ಮುಖ್ಯ ಕಾರಣಗಳಲ್ಲೊಂದು. ನಿಂತಿರುವಷ್ಟು ಸಮಯವೂ ಇಡೀ ದೇಹದ ಭಾರವನ್ನು ಮಂಡಿಗಳೇ ಹೊರಬೇಕಾದ ಕಾರಣ ಅವು ಬೇಗ ಸವೆಯುತ್ತವೆ. ಹಾಗಾಗಿ ತೂಕ ಹೆಚ್ಚಾಗದಂತೆ ನೋಡಿಕೊಳ್ಳುವುದು ಅಥವಾ ಹೆಚ್ಚಾದ ತೂಕವನ್ನು ಕಡಿಮೆ ಮಾಡಿಕೊಳ್ಳುವುದು ಮಂಡಿಗಳ ಆರೋಗ್ಯಕ್ಕೆ ಒಳ್ಳೆಯದು. ವಿವಿಧ ಕಾರಣಗಳಿಂದ ಮೊಣಕಾಲಿಗೆ ಪೆಟ್ಟು ಬೀಳುವುದರಿಂದಲೂ ಸವಕಳಿಯಾಗುತ್ತದೆ. ಅತಿಯಾಗಿ ಮೆಟ್ಟಿಲುಗಳನ್ನು ಹತ್ತಿ ಇಳಿದು ಮಾಡುವವರಿಗೆ, ಆಟಗಾರರಿಗೆ, ಮಂಡಿಗಳಿಗೆ ಒತ್ತಡ ಬೀಳುವಂತಹ ಕೆಲಸಗಳನ್ನು ಮಾಡುವವರಿಗೆ ಅಥವಾ ಅಪಘಾತಗಳಲ್ಲಿ ಮಂಡಿಗೆ ಪೆಟ್ಟು ಬಿದ್ದವರಿಗೆ ಮೊಣಕಾಲು ಸವೆಯುವ ಸಾಧ್ಯತೆ ಹೆಚ್ಚಿರುತ್ತದೆ. ಕೆಲವೊಮ್ಮೆ ಆನುವಂಶೀಯವಾಗಿಯೂ ಈ ಸಮಸ್ಯೆ ಬರುತ್ತದೆ. ಸಮಸ್ಯೆ ಪ್ರಾರಂಭವಾಗುವ ಮೊದಲೇ ಕೆಲವು ಕ್ರಮಗಳನ್ನು ವಹಿಸಿದರೆ ಇದನ್ನು ತಡೆಯಬಹುದು; ಬೇಗ ಗುಣಪಡಿಸಿಕೊಳ್ಳಬಹುದು.

    ಮೊದಲನೆಯದಾಗಿ ನಮ್ಮ ಆಹಾರದಲ್ಲಿ ಸಂಧಿಗಳ ಆರೋಗ್ಯವನ್ನು ಕಾಪಾಡುವ ಪೌಷ್ಟಿಕಾಂಶಗಳು ಇರುವಂತೆ ನೋಡಿಕೊಳ್ಳಬೇಕು. ಆಹಾರದಲ್ಲಿ ವಿಶೇಷವಾಗಿ ಒಳ್ಳೆಯ ಕೊಬ್ಬು ಅಂದರೆ ಮನೆಯಲ್ಲೇ ತಯಾರಿಸಿದ ತುಪ್ಪ, ಗಾಣದಲ್ಲಿ ತೆಗೆದ ಕೊಬ್ಬರಿ ಎಣ್ಣೆ, ಶೇಂಗಾ ಎಣ್ಣೆ, ಎಳ್ಳೆಣ್ಣೆಯಂಥವುಗಳನ್ನು ಹೆಚ್ಚಾಗಿ ಬಳಸಬೇಕು. ಕ್ಯಾಲ್ಸಿಯಂ ಹೆಚ್ಚಿರುವ ಹಾಲು, ಎಳ್ಳು, ಹಸಿರು ಸೊಪ್ಪು, ತರಕಾರಿಗಳು, ನಟ್ಸ್, ಕೊಬ್ಬರಿಯನ್ನು ನಿತ್ಯ ಬಳಸಬೇಕು. ಮಂಡಿನೋವು ಬರದಂತೆ ತಡೆಯಲು ಮತ್ತು ಇರುವ ನೋವು ಹೆಚ್ಚಾಗದಂತೆ ನೋಡಿಕೊಳ್ಳಲು ನಿತ್ಯ ಎಣ್ಣೆಯ ಮಸಾಜ್ ಮಾಡಲೇಬೇಕು. ಶುದ್ಧ ಎಣ್ಣೆಯಿಂದ ಮಸಾಜ್ ಮಾಡಿಕೊಂಡು ಶಾಖ ತೆಗೆದುಕೊಳ್ಳಬೇಕು. ಶಾಖಕ್ಕೆ ಬಿಸಿನೀರು ಸುರಿಯುವುದು, ಬಿಸಿನೀರಿನ ಪಟ್ಟಿ ಇಡುವುದು, ಉಪ್ಪಿನ ಶಾಖ – ಹೀಗೆ ಯಾವುದಾದರೂ ವಿಧಾನವನ್ನು ಬಳಸಬಹುದು.

    ಪ್ರಾರಂಭಿಕ ಹಂತದ ಮಂಡಿನೋವಿಗೆ ಅದಕ್ಕೆಂದೇ ಇರುವ ಕೆಲವು ವ್ಯಾಯಾಮಗಳನ್ನು ಮಾಡುವುದು ತುಂಬ ಸಹಕಾರಿ. ಮಂಡಿಯ ಸವಕಳಿ ಜಾಸ್ತಿಯಾದ ನಂತರ ವಾಕಿಂಗ್ ಮಾಡುವುದು ಅಥವಾ ವೈದ್ಯರ ಸಲಹೆ ಇಲ್ಲದೆ ವ್ಯಾಯಾಮ ಮಾಡುವುದರಿಂದ ಸಮಸ್ಯೆ ಇನ್ನೂ ಉಲ್ಬಣಿಸುತ್ತದೆ. ದಿನಕ್ಕೆ ಕನಿಷ್ಠ ಅರ್ಧ ಗಂಟೆ ಸಂಧಿಮುದ್ರೆ ಅಭ್ಯಾಸ ಮಾಡುವುದರಿಂದ ಅನುಕೂಲವಾಗುವುದನ್ನು ಹಲವು ರೋಗಿಗಳಲ್ಲಿ ಕಾಣಬಹುದು. ಬಲಗೈಯ ಹೆಬ್ಬೆರಳು ಹಾಗೂ ಉಂಗುರ ಬೆರಳುಗಳ ತುದಿಗಳು ಮತ್ತು ಎಡಗೈಯಲ್ಲಿ ಹೆಬ್ಬೆರಳು ಮತ್ತು ತೋರುಬೆರಳುಗಳ ತುದಿಗಳನ್ನು ತಾಕಿಸಿ ಉಳಿದ ಬೆರಳುಗಳನ್ನು ನೇರವಾಗಿಟ್ಟುಕೊಂಡಾಗ ಅದು ಸಂಧಿಮುದ್ರೆಯಾಗುತ್ತದೆ. ಈ ರೀತಿ ಕನಿಷ್ಠ 15 ನಿಮಿಷ ಇಟ್ಟುಕೊಂಡು ಮತ್ತೆ 15 ನಿಮಿಷ ವಿರುದ್ಧವಾಗಿ ಅಂದರೆ ಎಡಗೈಯಲ್ಲಿ ಹೇಳಿದಂತೆ ಬಲಗೈಯಲ್ಲಿ ಮತ್ತು ಬಲಗೈಲಿ ಹೇಳಿದಂತೆ ಎಡಗೈಲಿ ಮುದ್ರೆ ಮಾಡಬೇಕು.

    ಲಕ್ಕಿಸೊಪ್ಪನ್ನು ಉಗಿಯಲ್ಲಿ ಬೇಯಿಸಿ ಪೇಸ್ಟ್ ಮಾಡಿ ಬಿಸಿ ಮಾಡಿ ಮಸಾಜ್ ಮಾಡಿದ ಮಂಡಿಗೆ ಹಚ್ಚುವುದರಿಂದ ಮೊಣಕಾಲಿನ ಶಕ್ತಿ ಹೆಚ್ಚುತ್ತದೆ. ನೋವು ಹೆಚ್ಚಿದ್ದಾಗ ಎಣ್ಣೆ ಹಚ್ಚಿದ ನಂತರ ಎಕ್ಕದ ಎಲೆಯನ್ನು ಬಿಸಿ ಮಾಡಿ ಅದನ್ನು ಮಂಡಿಯ ಮೇಲೆ ಇಟ್ಟು ಶಾಖ ಕೊಡುವುದರಿಂದ ನೋವು ಬೇಗ ಕಡಿಮೆಯಾಗುತ್ತದೆ. ಆದರೂ ಒಂದು ಹಂತ ದಾಟಿದ ನಂತರ ಮನೆಮದ್ದುಗಳು, ವ್ಯಾಯಾಮಗಳಿಂದ ಮಂಡಿನೋವು ಕಡಿಮೆಯಾಗಲು ಸಾಧ್ಯವಿಲ್ಲ. ಜಾನುಬಸ್ತಿ, ಪ್ರಕೃತಿ ಚಿಕಿತ್ಸೆ, ಫಿಸಿಯೋಥೆರಪಿ, ಪಂಚಕರ್ಮ ಚಿಕಿತ್ಸೆಗಳನ್ನು ಪಡೆದುಕೊಳ್ಳಬೇಕಾಗುತ್ತದೆ. ಹೀಗೆ ಮಂಡಿನೋವಿಗೆ ನೋವಿನ ಮಾತ್ರೆಗಳ ಮೂಲಕ ನೋವನ್ನು ತಾತ್ಕಾಲಿಕ ಶಮನ ಮಾಡಿಕೊಳ್ಳದೆ ಆಹಾರ, ವ್ಯಾಯಾಮ, ಚಿಕಿತ್ಸೆಗಳ ಮೂಲಕ ಶಾಶ್ವತವಾದ ಪರಿಹಾರವನ್ನು ಕಂಡುಕೊಳ್ಳಬೇಕು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts