More

    ಕಿತ್ತೂರು ಕರ್ನಾಟಕ ಅಭಿವೃದ್ಧಿಗೆ ಮಂಡಳಿ: ಬಡ ರೈತ ಮಹಿಳೆಯರಿಗೆ ಮಾಸಿಕ 1 ಸಾವಿರ ರೂ.: ಸಿಎಂ ಘೋಷಣೆ

    ಹಾವೇರಿ: ಕಿತ್ತೂರು ಕರ್ನಾಟಕ ಭಾಗದ ಸಮಗ್ರ ಅಭಿವೃದ್ಧಿಗಾಗಿ ಉತ್ತರ ಕರ್ನಾಟಕ ಅಭಿವೃದ್ಧಿ ಮಂಡಳಿ ಸ್ಥಾಪಿಸಲಾಗುವುದು. ಈ ಭಾಗದ ಮೆಗಾ ಯೋಜನೆಗಳನ್ನು ಈ ಮಂಡಳಿ ಮೂಲಕವೇ ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ. ಬಡ ರೈತ ಮಹಿಳೆಯರಿಗೆ ಪ್ರತಿ ತಿಂಗಳು ಒಂದು ಸಾವಿರ ರೂ. ನೀಡುವ ಯೋಜನೆ ಜಾರಿಗೆ ತರಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೊಷಿಸಿದರು. ನಗರದ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದಿಂದ ಶುಕ್ರವಾರ ಆಯೋಜಿಸಿದ್ದ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳ ಜಿಲ್ಲಾ ಮಟ್ಟದ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

    ಸರ್ಕಾರ ಶ್ರೀಮಂತವಾಗುವ ಬದಲು ಜನ ಶ್ರೀಮಂತರಾದರೆ ಒಳ್ಳೆಯ ಆಡಳಿತ ನೀಡಲು ಸಾಧ್ಯವಾಗುತ್ತದೆ. ಜನರ ಭವಿಷ್ಯದ ಭಾಗ್ಯದ ಬಾಗಿಲು ತೆರೆಯಬೇಕು ಎಂಬುದು ನಮ್ಮ ಆಶಯ ಎಂದರು. ಈ ಬಾರಿ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಬೀಜಕ್ಕೆ ರೈತರಿಗೆ 10 ಸಾವಿರ ರೂ. ನೆರವು ನೀಡುವ ಯೋಜನೆಯನ್ನು ಜಾರಿಗೆ ತರಲಾಗಿದೆ. ರಾಜ್ಯದ 67 ಲಕ್ಷ ರೈತರಿಗೆ ಈ ಲಾಭ ದೊರಕಿಸಿ ಕೊಡಲಾಗುವುದು. ರೈತರಿಗೆ ಮೊದಲ ಬಾರಿಗೆ ಜೀವವಿಮೆ ಜಾರಿಗೆ ತರಲಾಗಿದೆ. 180 ಕೋಟಿ ಇನ್ಶೂರೆನ್ಸ್ ರೈತರ ಪರವಾಗಿ ಸರ್ಕಾರವೇ ತುಂಬಲಿದೆ. ರೈತ ಮರಣ ಹೊಂದಿದರೆ 2 ಲಕ್ಷ ರೂ. ಪರಿಹಾರ ದೊರೆಯಲಿದೆ ಎಂದರು.

    ಹಾವಿನ ಹುತ್ತಕ್ಕೂ ಕೈಹಾಕುವೆ: ಪರಿಶಿಷ್ಟ ಜಾತಿ ಹಾಗೂ ವರ್ಗದ ಶೇ.7 ಮೀಸಲಾತಿ ಹೆಚ್ಚಳ ಪ್ರಕ್ರಿಯೆ ಜೇನುಗೂಡಿಗೆ ಕೈಹಾಕಿದಂತೆ ಎಂದು ಹಲವರು ಎಚ್ಚರಿಸಿದರೂ ನಾನು ಹಿಂಜರಿಯಲಿಲ್ಲ. ತಳ ಸಮುದಾಯಕ್ಕೆ ನ್ಯಾಯ ಕೊಡಿಸಬೇಕೆಂಬ ಕಾರಣಕ್ಕೆ ಜೇನುಗೂಡು ಮಾತ್ರವಲ್ಲ, ಹಾವಿನ ಹುತ್ತಕ್ಕೆ ಬೇಕಾದರೂ ಕೈ ಹಾಕಲು ಸಿದ್ಧ ಎಂದು ಸಿಎಂ ಬೊಮ್ಮಾಯಿ ಭಾವುಕರಾದರು.

    ದಾವಣಗೆರೆಯಲ್ಲಿ ಹಕ್ಕುಪತ್ರ ವಿತರಣೆ: ಲಂಬಾಣಿ ತಾಂಡಾ, ಹಟ್ಟಿ, ಗೊಲ್ಲರ ಹಟ್ಟಿ, ಕುರುಬರ ಹಟ್ಟಿ, ಹಾಡಿಗಳಲ್ಲಿ ವಾಸವಿರುವ ಜನರಿಗೆ ಹಕ್ಕುಪತ್ರ ನೀಡುವ ದಿಟ್ಟ ನಿಲುವು ಹೊಂದಿದ್ದು, ಯಾದಗಿರಿಯಲ್ಲಿ 50 ಸಾವಿರ ಫಲಾನುಭವಗಳಿಗೆ ಹಕ್ಕುಪತ್ರ ನೀಡಲಾಗಿದೆ. ಮುಂದಿನವಾರ ರಾಜ್ಯದ 12 ಜಿಲ್ಲೆಯ 50 ಸಾವಿರ ಲಂಬಾಣಿಗರಿಗೆ ಹಕ್ಕುಪತ್ರ ನೀಡುವ ಕಾರ್ಯಕ್ರಮವನ್ನು ದಾವಣಗೆರೆಯಲ್ಲಿ ಹಮ್ಮಿಕೊಂಡಿದ್ದೇವೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.

    ಮಾನದಂಡ ಅನುಸರಿಸಿ ಟಿಕೆಟ್

    ಹುಬ್ಬಳ್ಳಿ: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಎಲ್ಲ ಹಾಲಿ ಶಾಸಕರಿಗೆ ಟಿಕೆಟ್ ಸಿಗಲಿಕ್ಕಿಲ್ಲ. ಹಿಂದಿನ ಚುನಾವಣೆಯಲ್ಲೂ ಇದೇ ರೀತಿ ನಡೆದಿದೆ. ಕ್ಷೇತ್ರ ಸಮೀಕ್ಷೆ, ಎದುರಾಳಿ ಅಭ್ಯರ್ಥಿ, ವಯಸ್ಸು, ಇತ್ಯಾದಿ ಮಾನದಂಡಗಳನ್ನು ಅನುಸರಿಸಿ ಟಿಕೆಟ್ ನೀಡಲಾಗುತ್ತದೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಹೇಳಿದರು.

    24ಕ್ಕೆ ರಾಜ್ಯಕ್ಕೆ ಅಮಿತ್ ಷಾ?

    ಚಿತ್ರದುರ್ಗ: ಕೇಂದ್ರ ಗೃಹ ಸಚಿವ ಅಮಿತ್ ಷಾ ಚಿತ್ರದುರ್ಗ ಜಿಲ್ಲೆಯಲ್ಲಿ ಆಯೋಜಿಸುವ ಸರ್ಕಾರಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಮಾ.17 ಅಥವಾ 19 ರಂದು ಪ್ರಧಾನಿ ನೇತೃತ್ವದಲ್ಲೇ ದುರ್ಗದಲ್ಲಿ ಪಕ್ಷದ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಲಾಗುತ್ತಿದ್ದರೂ ಇದನ್ನು ಬಿಜೆಪಿಯ ಪ್ರಮುಖ ಪದಾಧಿಕಾರಿಯೊಬ್ಬರು ತಳ್ಳಿಹಾಕಿದ್ದಾರೆ. ಪ್ರಧಾನಿ ಬದಲು ಅಮಿತ್​ಷಾ ನೇತೃತ್ವದಲ್ಲಿ ಮಾ.24 ರಂದು ಚಿತ್ರದುರ್ಗದ ಹಿರಿಯೂರು ಅಥವಾ ತುಮಕೂರಿನ ಶಿರಾದಲ್ಲಿ ಸಮಾವೇಶ ಆಯೋಜಿಸಲು ರಾಜ್ಯ ಸರ್ಕಾರ ಸರ್ಕಾರ ಚಿಂತನೆ ನಡೆಸಿದೆ. ಅಲ್ಲಿ 14-16 ಜಿಲ್ಲೆಗಳ ಸಾವಿರಾರು ಫಲಾನುಭ ವಿಗಳಿಗೆ ಹಕ್ಕು ಪತ್ರ ವಿತರಿಸಲು ಚಿಂತನೆಯಿದ್ದು, ಇದಕ್ಕಾಗಿ ಚಿತ್ರದುರ್ಗ ಜಿಲ್ಲಾಡಳಿತದ ಅಭಿಪ್ರಾಯವನ್ನು ಪಡೆದಿದೆ.

    ಇದನ್ನೂ ಓದಿ: ವಯಾಗ್ರ ತೆಗೆದುಕೊಂಡ ಆತ ಅವಳ ಮಾತು ಕೇಳದೆ ಕೊನೆಗೆ ಸಾವಿಗೀಡಾದ!

    ಟಿಕೆಟ್​ಗಾಗಿ ಒತ್ತಡ ತಂತ್ರ

    ಬೆಂಗಳೂರು: ಡಬಲ್ ಇಂಜಿನ್ ಸರ್ಕಾರದ ಬಲ, ಅಬ್ಬರದ ಪ್ರಚಾರಕ್ಕೆ ಸಿಗುತ್ತಿರುವ ಜನಸ್ಪಂದನೆಗೆ ಆಡಳಿತ ಬಿಜೆಪಿ ಬೀಗುತ್ತಿದ್ದರೂ, ಆಂತರಿಕವಾಗಿ ಅಸಮಾಧಾನದ ಬೇಗುದಿಗೆ ಸಿಲುಕಿದೆ. ಸ್ವಕ್ಷೇತ್ರದಲ್ಲಿ ಮತ್ತೆ ಕೆಲವು ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವ ಸಾಮರ್ಥ್ಯವುಳ್ಳ ಪ್ರಭಾವಿಗಳ ಒತ್ತಡ ತಂತ್ರವು ಪಕ್ಷದ ರಾಜ್ಯ ನಾಯಕರ ಚಿಂತೆ ಹೆಚ್ಚಿಸಿದೆ. ಅಧಿಕಾರಾವಧಿಯಲ್ಲಿ ಕಡೆಗಣನೆ, ತಾತ್ಸಾರಕ್ಕೆ ‘ತಕ್ಕಶಾಸ್ತಿ’ ಮಾಡಲೆಂದು ಚುನಾವಣಾ ಹೊಸ್ತಿಲಲ್ಲಿ ಇರುವ ದಿನಗಳನ್ನು ಅಸಮಾಧಾನಿತರು ಬಳಸಿಕೊಳ್ಳುತ್ತಿದ್ದಾರೆ. ವಿಜಯಸಂಕಲ್ಪ ರಥಯಾತ್ರೆಗಳಲ್ಲಿ ಪಕ್ಷದ ರಾಷ್ಟ್ರೀಯ ನಾಯಕರು ಭಾಗವಹಿಸಿದ್ದರೂ ದೂರ ಅಂತರ ಕಾಯ್ದುಕೊಂಡು ತಮ್ಮ ಪ್ರಾಮುಖ್ಯತೆ ಬಿಂಬಿಸಲು ಪ್ರಯತ್ನಿಸುತ್ತಿದ್ದಾರೆ. ಇಷ್ಟು ಸಾಲದೆಂಬಂತೆ ಪ್ರಭಾವಳಿಯಿರುವ ಜಿಲ್ಲೆ, ಕ್ಷೇತ್ರಗಳಲ್ಲಿ ಬೆಂಬಲಿಗರು ಹಾಗೂ ಅಭಿಮಾನಿಗಳ ಸಭೆಗೆ ಸೂಚನೆ ಕೊಟ್ಟು, ತಮ್ಮ ಶಕ್ತಿಪ್ರದರ್ಶನಕ್ಕೆ ಮುಂದಾಗಿದ್ದಾರೆ. ಅಲ್ಲದೆ, ಪಕ್ಷದಿಂದ ಹೊರಗಿಟ್ಟವರು, ಬೇರೆ ಕಡೆಯಿಂದ ಬರುವವರನ್ನು ವಿರೋಧಿಸುವ ಪಡೆಯಿಂದ ರಾಜ್ಯ ನಾಯಕರು ಸಂದಿಗ್ಧಕ್ಕೆ ಸಿಲುಕಿದ್ದಾರೆ ಎಂದು ಹೇಳಲಾಗುತ್ತಿದೆ.

    ಇದನ್ನೂ ಓದಿ: ಎಚ್​3ಎನ್​2 ವೈರಸ್​ಗೆ ದೇಶದಲ್ಲಿ ಮತ್ತೊಂದು ಬಲಿ!; ಆತಂಕ ಹೆಚ್ಚಿಸುತ್ತಿರುವ ಸೋಂಕು

    ಕಾರ್ಯತಂತ್ರ: ಕೆಲವು ಜಿಲ್ಲೆಗಳಲ್ಲಿ ಕೇಂದ್ರ, ರಾಜ್ಯ ನಾಯಕರ ಸಮಕ್ಷಮ ಅತೃಪ್ತ ಮುಖಂಡರ ಬೆಂಬಲಿಗರು ವಾಗ್ವಾದಕ್ಕೆ ಇಳಿದು, ಮುಜುಗರ ತರುತ್ತಿರುವ ಪ್ರಸಂಗಗಳು ನಡೆದಿವೆ. ಅಸಮಾಧಾನ, ತಗಾದೆ ತೆಗೆದವರ ಕಾರ್ಯತಂತ್ರ ನಿರೀಕ್ಷಿತ ಫಲಿತಾಂಶ ನೀಡಲಾರಂಭಿಸಿದ್ದು, ಸ್ವತಃ ಸಿಎಂ ಬಸವರಾಜ ಬೊಮ್ಮಾಯಿ, ಸಚಿವರು ಕರೆದು ಮಾತುಕತೆಗೆ ಇಳಿದಿದ್ದಾರೆ. ವೈಯಕ್ತಿಕ ಅಪೇಕ್ಷೆಗಿಂತ ತಮ್ಮನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ, ಮಾನ್ಯತೆಯಲ್ಲೂ ತಾರತಮ್ಯ ಮಾಡಲಾಗುತ್ತಿದೆ ಎಂಬ ಸಂಕಟವನ್ನು ಅಸಮಾಧಾನಿತರು ಹೊರ ಹಾಕಿದ್ದಾರೆ.

    ಸಾಮರ್ಥ್ಯ ಪರೀಕ್ಷೆ: ಚುನಾವಣೆ ಹೊಸ್ತಿಲಲ್ಲಿ ತಲೆ ಎತ್ತಿರುವ ಭುಗಿಲೆದ್ದ ಅಸಮಾಧಾನವು ದೆಹಲಿ ನಾಯಕರ ಶಕ್ತಿ, ಸಾಮರ್ಥ್ಯವನ್ನು ಪರೀಕ್ಷೆಗೊಡ್ಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಮೊದಲ ಹಂತದಲ್ಲಿ ರಾಜ್ಯ ನಾಯಕರ ಮುಖೇನ ಸರಿಪಡಿಸುವ ಪ್ರಯತ್ನಕ್ಕೆ ಕೈಹಾಕಿದ್ದಾರೆ. ನಂತರದಲ್ಲಿ ವಿಧಾನಸಭೆ ಕ್ಷೇತ್ರಾವಾರು ಮುಖಾಮುಖಿ ಚರ್ಚೆಗೆ ಚಾಲನೆ ನೀಡಲಿದ್ದು, ಬಗೆಹರಿಯದಿದ್ದರೆ ದೆಹಲಿ ನಾಯಕರು ಮಧ್ಯೆ ಪ್ರವೇಶಿಸಲಿದ್ದಾರೆ ಎಂದು ಮೂಲಗಳು ಹೇಳಿವೆ.

    ಶಾಸಕ ಮಹೇಶ ಕುಮಟಳ್ಳಿಗೆ ಅಥಣಿ ಕ್ಷೇತ್ರದಿಂದ ಟಿಕೆಟ್ ನೀಡದಿದ್ದರೆ ಗೋಕಾಕ್​ನಿಂದ ನಾನೂ ನಿಲ್ಲುವುದಿಲ್ಲ. ಬೆಳಗಾವಿಯಲ್ಲಿ 13 ಸ್ಥಾನಗಳಲ್ಲಿ ಬಿಜೆಪಿ ಗೆದ್ದಿದ್ದು ಈ ಬಾರಿ ಇನ್ನೂ ಎರಡು ಸ್ಥಾನ ಹೆಚ್ಚಿಗೆ ಗೆಲ್ಲಿಸುವ ಪ್ರಯತ್ನ ಮಾಡುವೆ.

    | ರಮೇಶ ಜಾರಕಿಹೊಳಿ ಶಾಸಕ

    ಕೆಸಿಎನ್ ಮನವೊಲಿಸಿದ ಷಾ: ಮಂಡ್ಯ ಜಿಲ್ಲೆಯ ಏಕೈಕ ಶಾಸಕ, ಸಚಿವ ಡಾ.ಕೆ.ಸಿ.ನಾರಾಯಣಗೌಡ ಕಾಂಗ್ರೆಸ್​ನತ್ತ ಚಿತ್ತ ನೆಟ್ಟಿದ್ದಾರೆ ಎಂಬ ಮಾಹಿತಿ ರವಾನೆಯಾದ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ, ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮನವೊಲಿಕೆ ಅಖಾಡಕ್ಕೆ ಇಳಿದಿದ್ದಾರೆ. ನಾರಾಯಣಗೌಡರನ್ನು ಮೊಬೈಲ್​ನಲ್ಲಿ ಸಂರ್ಪಸಿ ಪಕ್ಷ ಬಿಟ್ಟು ಹೋಗಲು ಯೋಚಿಸಿದ್ದೇಕೆ? ಎಂದು ತಿಳಿದುಕೊಂಡು, ರಾಜಕೀಯ ಭವಿಷ್ಯ ಹಾಗೂ ಘನತೆ-ಗೌರವದ ದೃಷ್ಟಿಯಿಂದ ಅಂತಹ ಯೋಚನೆಯಿಂದ ಹೊರಬರಲು ಸಲಹೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts