More

    30ಕ್ಕೆ ಜನ ದನಿ ಸಮಾವೇಶ

    ಚಿಕ್ಕಮಗಳೂರು: ಜಿಲ್ಲೆಯಲ್ಲಿನ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಜನಪ್ರತಿನಿಧಿಗಳ ಮುಂದೆ ಹಕ್ಕೊತ್ತಾಯ ಮಾಡಲು ಜು.30ರಂದು ಬಾಳೆಹೊನ್ನೂರಿನಲ್ಲಿ ಜನ ದನಿ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಎದ್ದೇಳು ಕರ್ನಾಟಕ ಸಮಿತಿ ಜಿಲ್ಲಾ ಪ್ರಧಾನ ಸಂಚಾಲಕ ಕೆ.ಎಲ್.ಅಶೋಕ್ ತಿಳಿಸಿದರು.

    ಸರ್ಕಾರದ ಹಂತದಲ್ಲಿ ಬಗೆಹರಿಸಬಹುದಾದ ಸಮಸ್ಯೆಗಳು, ಇರುವ ಕಾನೂನು ತೊಡಕುಗಳ ಬಗ್ಗೆ ಸ್ಪಷ್ಟನೆ ನೀಡಲು ಹಾಗೂ ಅಧಿವೇಶನದಲ್ಲಿ ಪ್ರಸ್ತಾಪ ಮಾಡಿ ಚರ್ಚಿಸಿ ಅವುಗಳಿಗೆ ಪರಿಹಾರ ದೊರಕಿಸಿಕೊಡಲು ಜನಪ್ರತಿನಿಧಿಗಳಿಂದ ಮಾತ್ರ ಸಾಧ್ಯ. ಈ ಬಗ್ಗೆ ಜಿಲ್ಲೆಯ ಶಾಸಕರ ಮುಂದೆ ಸಮಸ್ಯೆಗಳನ್ನು ಗಮನಕ್ಕೆ ತರಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
    ಬಾಳೆಹೊನ್ನೂರಿನ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಬೆಳಗ್ಗೆ 11.30ಕ್ಕೆ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಶಾಸಕರಾದ ಎಚ್.ಡಿ.ತಮ್ಮಯ್ಯ, ನಯನಾ ಮೋಟಮ್ಮ, ಟಿ.ಡಿ.ರಾಜೇಗೌಡ, ಆನಂದ್, ಶ್ರೀನಿವಾಸ್ ಭಾಗವಹಿಸುವರು. ಜಿಲ್ಲೆಯ ಮಲೆನಾಡು ಭಾಗದಲ್ಲಿ ದಶಕಗಳಿಂದ ವಸತಿ, ನಿವೇಶನ ರಹಿತರ ಸಮಸ್ಯೆ, ಹಕ್ಕುಪತ್ರ, ಕಸ್ತೂರಿ ರಂಗನ್ ವರದಿ, ಹುಲಿ ಯೋಜನೆ, ಅರಣ್ಯ ಜಾಗದ ಸಮಸ್ಯೆ ಸೇರಿ ಅನೇಕ ತೊಡಕುಗಳಿವೆ. ಅವುಗಳ ಪರಿಹಾರಕ್ಕೆ ಕ್ರಮ ವಹಿಸಲು ಒತ್ತಾಯಿಸಿ ಈ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
    ಜನಪ್ರತಿನಿಧಿಗಳು ಕೊಟ್ಟ ಭರವಸೆಗಳನ್ನು ಈಡೇರಿಸಲು ಬದ್ಧರಾಗಿರಬೇಕು. ಕಸ್ತೂರಿ ರಂಗನ್ ವರದಿ ಹಾಗೂ ಸರ್ಕಾರಿ ಒತ್ತುವರಿ ಜಾಗ ಗುತ್ತಿಗೆಗೆ ವಿರೋಧವಿದೆ. ಇದನ್ನು ಮರು ಪರಿಶೀಲಿಸಬೇಕು. ಬಡವರು, ಭೂ ರಹಿತರಿಗೆ ಆದ್ಯತೆ ನೀಡಬೇಕು ಎಂದು ಸಮಾವೇಶದಲ್ಲಿ ಒತ್ತಾಯಿಸಲಾಗುವುದು ಎಂದು ತಿಳಿಸಿದರು.
    ಜಿಲ್ಲಾ ಸಂಚಾಲಕ ಗೌಸ್ ಮೊಹಿಯುದ್ದೀನ್ ಮಾತನಾಡಿ, ಜಿಲ್ಲೆಯಲ್ಲಿ ಸಾಕಷ್ಟು ಮಂದಿ ನಿವೇಶ, ವಸತಿರಹಿತರಿದ್ದಾರೆ. ಅವರಿಗೆ ಇದುವರೆಗೂ ನಿವೇಶನ, ವಸತಿ ಕಲ್ಪಿಸಲು ಸಾಧ್ಯವಾಗಿಲ್ಲ. ಜನವಿರೋಧಿ ನೀತಿಗಳಿಂದ ಅರಣ್ಯ ಜಾಗದಲ್ಲಿ ವಾಸವಿದ್ದ ಜನರನ್ನು ಒಕ್ಕಲೆಬ್ಬಿಸುವ ಕೆಲಸವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
    ಸರ್ಕಾರಿ ಜಾಗ ಒತ್ತುವರಿಯನ್ನು ತೆರವುಗೊಳಿಸಲು ಹಿಂದೆ ಬಿಜೆಪಿ ಸರ್ಕಾರ ಗುತ್ತಿಗೆ ನೀಡುವ ಕಾಯ್ದೆ ರೂಪಿಸಿದೆ. ಜಿಲ್ಲೆಯಲ್ಲಿ ವಸತಿ, ನಿವೇಶನ, ಭೂರಹಿತರು ಸಾವಿರಾರು ಮಂದಿ ಇದ್ದು ಸರ್ಕಾರ ಅವರಿಗೆ ಮೊದಲ ಆದ್ಯತೆ ನೀಡಬೇಕು. ಶಾಸಕರು ಈ ಬಗ್ಗೆ ಸಮಾವೇಶದಲ್ಲಿ ಸ್ಪಷ್ಟನೆ ನೀಡಬೇಕು ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಯೂಸುಫ್ ಹಾಜಿ, ಗೋಪಾಲಗೌಡ, ಟಿ.ಎಲ್.ಗಣೇಶ್, ಹಾದಿಹಳ್ಳಿ ಪುಟ್ಟಸ್ವಾಮಿ, ವೆಂಕಟೇಶ್, ಹಸನಬ್ಬ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts