More

    ವರಾಹ ಹಾವಳಿಗೆ ಬೇಸತ್ತ ಜನತೆ

    ಹಿರೇಕೆರೂರ: ಪಟ್ಟಣದಲ್ಲಿ ಹಂದಿಗಳ ಹಾವಳಿ ಹೆಚ್ಚಾಗಿದ್ದು, ಸಾಂಕ್ರಾಮಿಕ ರೋಗ ಹರಡುವ ಜತೆಗೆ ಬೆಳೆ ನಾಶಪಡಿಸುತ್ತಿವೆ. ಕೂಡಲೆ ಪಟ್ಟಣ ಪಂಚಾಯಿತಿ ಹಂದಿಗಳನ್ನು ನಿಯಂತ್ರಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

    ಪಟ್ಟಣದಲ್ಲಿ ಹಂದಿಗಳ ಹಿಂಡು ಎಲ್ಲೆಂದರಲ್ಲಿ ಓಡಾಡುತ್ತಿವೆ. ರೈತರ ಜಮೀನುಗಳಿಗೆ ನುಗ್ಗಿ ಬೆಳೆ ನಾಶಪಡಿಸುತ್ತಿದ್ದು, ಬೈಕ್​ಗಳಿಗೆ ಅಡ್ಡ ಬಂದು ಅನೇಕ ಸವಾರರು ಬಿದ್ದು ಗಾಯಗೊಳ್ಳುತ್ತಿರುವ ಪ್ರಕರಣ ನಿತ್ಯ ನಡೆಯುತ್ತಿವೆ. ಚಿಕ್ಕಮಕ್ಕಳ ಮೇಲೆ ಎರಗಿ ಗಾಯಗೊಳಿಸಿವೆ. ಚರಂಡಿ, ಖಾಲಿ ನಿವೇಶನಗಳು ಹಂದಿಗಳ ತಾಣವಾಗಿದ್ದು, ಗಲೀಜು ವಾತಾವರಣ ಸೃಷ್ಟಿಸುತ್ತಿರುವುದರಿಂದ ಸಾಂಕ್ರಾಮಿಕ ರೋಗ ಹಬ್ಬುವ ಭೀತಿ ಎದುರಾಗಿದೆ.

    ಕಳೆದ ವರ್ಷ ಬಾಲಕನ ಮೇಲೆ ದಾಳಿ ಮಾಡಿ ಗಾಯಗೊಳಿಸಿದ್ದವು. ಆಗ ಸಾರ್ವಜನಿಕರು ಹಂದಿಗಳ ಹಾವಳಿ ತಪ್ಪಿಸುವಂತೆ ಪಟ್ಟಣ ಪಂಚಾಯಿತಿಗೆ ಮನವಿ ಸಲ್ಲಿಸಿದ್ದರು. ನಂತರ ಹಂದಿಗಳ ಮಾಲೀಕರಿಗೆ ಸೂಚಿಸಿದ್ದರಿಂದ ಅವುಗಳನ್ನು ಬೇರೆಡೆ ಸ್ಥಳಾಂತರಿಸಿದ್ದರು. ಈಗ ಮತ್ತೆ ಪಟ್ಟಣದಲ್ಲಿ ತಂದು ಬಿಟ್ಟಿದ್ದಾರೆ. ಈ ಬಗ್ಗೆ ಪಪಂ ಹಂದಿಗಳ ಮಾಲೀಕರಿಗೆ ಕೂಡಲೆ ಕಟ್ಟುನಿಟ್ಟಾಗಿ ಸೂಚಿಸಿ ಸ್ಥಳಾಂತರಿಸಬೇಕು ಇಲ್ಲವೆ ಅವುಗಳನ್ನು ಸಾಕಲು ಸ್ಥಳ ನಿಗದಿಪಡಿಸಬೇಕು. ಸಾರ್ವಜನಿಕರು ದೂರು ನೀಡಿದಾಗ ಮಾತ್ರ ಹಿಡಿದು ಮತ್ತೆ ಅವುಗಳನ್ನು ಪಟ್ಟಣದಲ್ಲಿ ಬಿಡುವ ಚಾಳಿ ಬಿಡಬೇಕು. ಶಾಶ್ವತವಾಗಿ ಪಟ್ಟಣದಲ್ಲಿ ಹಂದಿಗಳ ಹಾವಳಿ ತಪ್ಪಿಸಲು ಪಪಂ ಮುಂದಾಗಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

    ಪಟ್ಟಣದಲ್ಲಿ ಹಂದಿಗಳ ಹಾವಳಿ ಹೆಚ್ಚಾಗಿದ್ದು, ಅವುಗಳನ್ನು ಓಡಿಸಲು ಹೋದರೆ ಮೈಮೇಲೆ ಎರಗುತ್ತಿವೆ. ಕೆಲವು ವೇಳೆ ಮನೆಯ ಒಳಗೆ ಬರುತ್ತಿವೆ. ಹಂದಿಗಳ ಹಿಂಡು ರೈತರ ಬೆಳೆಗಳನ್ನು ನಾಶಪಡಿಸುತ್ತಿವೆ. ಈ ಬಗ್ಗೆ ವಾರ್ಡ್ ಸದಸ್ಯ ರಮೇಶ ಕೋಡಿಹಳ್ಳಿ ಜತೆ ಸೇರಿ ಪಪಂಗೆ ಮೌಖಿಕವಾಗಿ ದೂರು ನೀಡಿದ್ದೇವೆ. ಆದರೆ, ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ.

    | ರಾಘವೇಂದ್ರ ಕರಡಿ ಚೌಡೇಶ್ವರಿ ನಗರ ನಿವಾಸಿ

    ಹಂದಿಗಳ ಸ್ಥಳಾಂತರಕ್ಕೆ ಈಗಾಗಲೇ ಮಾಲೀಕರಿಗೆ ಕಟ್ಟುನಿಟ್ಟಾಗಿ ತಿಳಿಸಲಾಗಿದೆ. ಒಂದು ವಾರದೊಳಗಾಗಿ ಅವುಗಳನ್ನು ಹಿಡಿದು ಸ್ಥಳಾಂತರಿಸದಿದ್ದರೆ, ಹಂದಿ ಹಿಡಿಯುವವರನ್ನು ಕರೆಸಿ ಹಿಡಿಸಲಾಗುವುದು.

    | ಸಂತೋಷಕುಮಾರ ಚಂದ್ರಿಕೇರ ಪಪಂ ಮುಖ್ಯಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts