More

    ಹಾವೇರಿಯಲ್ಲಿ ವೈರಾಣು ರೋಗಕ್ಕೆ ಜನ ಹೈರಾಣ

    ಕೇಶವಮೂರ್ತಿ ವಿ.ಬಿ. ಹಾವೇರಿ

    ದಿಢೀರನೆ ಬದಲಾಗುವ ವಾತಾವರಣ, ಏಕಾಏಕಿ ಮಳೆ, ಬಿಸಿಲು, ತಂಪು ಹವಾ, ಮೋಡ ಕವಿದ ವಾತಾವರಣ… ಹೀಗೆ ಹವಾಮಾನ ಬದಲಾವಣೆ ಹಿನ್ನೆಲೆಯಲ್ಲಿ ವೈರಾಣು ಜ್ವರ(ವೈರಲ್ ಫೀವರ್)ದ ಹಾವಳಿಗೆ ಜನರು ಹೈರಾಣಾಗುತ್ತಿದ್ದಾರೆ.

    ಮಳೆಗಾಲದ ಸಂದರ್ಭದಲ್ಲಿ ಸಾಮಾನ್ಯವಾಗಿರುವ ಈ ವೈರಾಣು ಜ್ವರ ಪ್ರಸಕ್ತ ವರ್ಷ ತುಸು ಹೆಚ್ಚೇ ಕಾಡುತ್ತಿದೆ. ಅದರಲ್ಲೂ ಮಕ್ಕಳು, ಹಸುಳೆಗಳ ಮೇಲೂ ವಕ್ರದೃಷ್ಟಿ ಬೀರುತ್ತಿದೆ. ಒಬ್ಬರಿಗೆ ಶುರುವಾಗುವ ಜ್ವರ ಮನೆ ಮಂದಿಗೆಲ್ಲ ವ್ಯಾಪಿಸುತ್ತಿದೆ. ಜ್ವರ, ಸುಸ್ತು, ಮೈಕೈ ನೋವು, ನೆಗಡಿ, ಕೆಮ್ಮು, ಕಫ ಮತ್ತಿತರ ಲಕ್ಷಣಗಳು ಹೆಚ್ಚಾಗಿ ಕಂಡು ಬರುತ್ತಿವೆ.

    ವೈರಾಣು ಜ್ವರದ ಹಾವಳಿಯಿಂದಾಗಿ ಸರ್ಕಾರಿ, ಖಾಸಗಿ ಆಸ್ಪತ್ರೆಗಳಲ್ಲಿ ನೂಕು ನುಗ್ಗಲು ಉಂಟಾಗುತ್ತಿದೆ. ದಿನದಿಂದ ದಿನಕ್ಕೆ ರೋಗಿಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. ಹಾವೇರಿಯ ಜಿಲ್ಲಾಸ್ಪತ್ರೆಯಲ್ಲಿ ಈ ಮೊದಲು ನಿತ್ಯ ಸುಮಾರು 600ರಿಂದ 700 ಹೊರ ರೋಗಿಗಳ ದಾಖಲಾತಿ ಆಗುತ್ತಿತ್ತು. ಇದೀಗ ದಿನಕ್ಕೆ ಸಾವಿರ ಗಡಿ ದಾಟುತ್ತಿದೆ. ಆಸ್ಪತ್ರೆಗಳಲ್ಲಿ ಕಾಲು ಇಡಲೂ ಜಾಗ ಇಲ್ಲದಂತಾಗಿದೆ.

    ವೈರಲ್ ಫೀವರ್​ಗೆ ಯಾವ ವೈರಸ್ ಕಾರಣ ಎಂದು ಖಚಿತವಾಗಿ ಹೇಳಲಾಗದು. ವೈರಸ್​ನಲ್ಲಿ ತುಂಬ ವಿಧಗಳಿವೆ. ಅಡಿನೋ ವೈರಸ್ ಇರಬಹುದು ಅಥವಾ ರೆಸ್ಪಿರೇಟರಿ ಸಿನ್ಸಿಟಿಯಲ್ ವೈರಸ್ (ಆರ್​ಎಸ್​ವಿ) ಕೂಡ ಇರಬಹುದು ಎಂದು ವೈದ್ಯರು ಹೇಳುತ್ತಾರೆ.

    ಶಿಶು, ಮಕ್ಕಳ ಮೇಲಿರಲಿ ನಿಗಾ

    ವೈರಲ್ ಫೀವರ್ ಮಕ್ಕಳ ಮೇಲೆ ಹೆಚ್ಚಾಗಿ ದಾಳಿ ಮಾಡುತ್ತಿದೆ. ಅದರಲ್ಲೂ 3 ತಿಂಗಳ ಒಳಗಿನ ನವಜಾತ ಶಿಶುಗಳು, ಜನಿಸಿದ ಕೂಡಲೇ ಐಸಿಯು ಅಡ್ಮಿಟ್ ಆಗಿದ್ದ ಶಿಶುಗಳು, ಕಡಿಮೆ ತೂಕ ಇರುವ, ಹೃದಯ ಸಮಸ್ಯೆ ಇರುವ ಮಕ್ಕಳು ಹೆಚ್ಚು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. 3 ತಿಂಗಳ ಒಳಗಿನ ಕೂಸುಗಳನ್ನು ಮುನ್ನೆಚ್ಚರಿಕೆಯಿಂದ ನೋಡಿಕೊಳ್ಳಬೇಕು. ಏಕೆಂದರೆ ಅವರ ಚೆಸ್ಟ್ ವ್ಯಾಲ್ಯೂ ಕಡಿಮೆಯಾಗಿರುತ್ತದೆ. ಕೆಮ್ಮಿ ಉಗುಳಲು ಆಗುವುದಿಲ್ಲ. ಇಂತಹ ಎರಡು ಶಿಶುಗಳನ್ನು ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸ್​ಗೆ ರವಾನಿಸಲಾಗಿದೆ ಎನ್ನುತ್ತಾರೆ ಹಿರಿಯ ಮಕ್ಕಳ ತಜ್ಞ ಡಾ.ಅಂಜನಕುಮಾರ ಟಿ.ಕೆ.

    ಇರಲಿ ಮುನ್ನೆಚ್ಚರಿಕೆ

    ಜ್ವರ, ಕೆಮ್ಮು, ಸುಸ್ತು, ಮೈಕೈನೋವು, ನೆಗಡಿ, ಕಫ ಮತ್ತಿತರ ಸಮಸ್ಯೆಗಳು ವೈರಲ್ ಫೀವರ್ ಲಕ್ಷಣಗಳು. ಇವು ಹೆಚ್ಚಾಗಿ ಮಕ್ಕಳು ಹಾಗೂ ವೃದ್ಧರಲ್ಲಿ ಕಂಡುಬರುತ್ತಿವೆ. ಇಂತಹ ಲಕ್ಷಣ ಕಂಡು ಬಂದಲ್ಲಿ ಕೂಡಲೇ ವೈದ್ಯರ ಬಳಿ ತಪಾಸಣೆ ಮಾಡಿಸಿಕೊಳ್ಳಬೇಕು. ಜ್ವರ ಬಂದವರು ಶಿಶುಗಳನ್ನು ಮುಟ್ಟಬಾರದು. ಜನನಿಬಿಡ ಪ್ರದೇಶಗಳಿಗೆ ಹೋಗುವಾಗ ಮಾಸ್ಕ್ ಧರಿಸಬೇಕು. ಚಳಿಯಿಂದ ರಕ್ಷಿಸಿಕೊಳ್ಳಬೇಕು. ದೇಹ, ಬಾಯಿ, ಕೈ ಸ್ವಚ್ಛತೆ ಬಗ್ಗೆ ಗಮನ ಹರಿಸಬೇಕು ಎಂಬುದು ‘ವಿಜಯವಾಣಿ’ ಕಳಕಳಿ.

    ಮೊದಲು ದೊಡ್ಡ ಮೊಮ್ಮಗಳಿಗೆ ಜ್ವರ ಕಾಣಿಸಿಕೊಂಡಿತ್ತು. ಆಕೆಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಆಕೆಯ ತಂಗಿ ಮೂರು ವರ್ಷದ ಹುಡುಗಿಗೂ ಜ್ವರ, ಕಫ ಕಾಯಿಲೆ ಉಂಟಾಗಿದೆ. ಒಬ್ಬರ ನಂತರ ಮತ್ತೊಬ್ಬರಿಗೆ ಜ್ವರ ಕಾಡುತ್ತಿದೆ.

    | ಪ್ರೇಮವ್ವ ಗಾಣಗೇರ, ಹಾವೇರಿ ನಿವಾಸಿ

    ಜಿಲ್ಲಾ ಮಕ್ಕಳ ಸರ್ಕಾರಿ ಆಸ್ಪತ್ರೆಯ ಹೊರ ರೋಗಿಗಳ ವಿಭಾಗದಲ್ಲಿ ಪ್ರತಿನಿತ್ಯ 100 ಮಕ್ಕಳ ಹೆಸರು ನೋಂದಣಿ ಆಗುತ್ತಿತ್ತು. ಇದೀಗ 150ಕ್ಕಿಂತ ಹೆಚ್ಚಾಗಿದೆ. ನಿತ್ಯವೂ 15ಕ್ಕಿಂತ ಹೆಚ್ಚು ಮಕ್ಕಳು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ.

    | ಡಾ.ಅಂಜನಕುಮಾರ ಟಿ.ಕೆ., ಹಿರಿಯ ಮಕ್ಕಳ ತಜ್ಞ, ಸರ್ಕಾರ ಮಕ್ಕಳ ಆಸ್ಪತ್ರೆ, ಹಾವೇರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts