More

    ಚರಂಡಿ ದುರ್ವಾಸನೆಯಿಂದ ಜನ ಹೈರಾಣ

    ಹೊರ್ತಿ: ಸಮೀಪದ ಇಂಚಗೇರಿ ಗ್ರಾಮದಲ್ಲಿ ಚರಂಡಿಗಳನ್ನು ಸಕಾಲದಲ್ಲಿ ಸ್ವಚ್ಛಗೊಳಿಸದೇ ಇರುವುದರಿಂದ ದುರ್ವಾಸನೆ ಬೀರುತ್ತಿದ್ದು, ಕೂಡಲೇ ಸ್ವಚ್ಛಗೊಳಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

    ಸ್ವಚ್ಛತೆ ಸಿಬ್ಬಂದಿ ನಿಯಮಿತವಾಗಿ ಬಂದು ಚರಂಡಿಗಳನ್ನು ಸ್ವಚ್ಛಗೊಳಿಸುವುದಿಲ್ಲ. ಇದರಿಂದ ಎಲ್ಲೆಂದರಲ್ಲಿ ಚರಂಡಿಗಳು ಬ್ಲಾಕ್ ಆಗಿ ನೀರು ನಿಂತು ಗಬ್ಬು ವಾಸನೆ ಹರಡುತ್ತಿದೆ. ಇದರಿಂದ ಸುತ್ತಲಿನ ನಿವಾಸಿಗಳು ಮೂಗು ಮುಚ್ಚಿಕೊಂಡು ತಿರುಗಾಡುವಂತಾಗಿದೆ. ಒಂದರಿಂದ ಮೂರನೇ ವಾರ್ಡ್‌ನಲ್ಲಂತೂ ಎಲ್ಲೆಂದರಲ್ಲಿ ಚರಂಡಿಗಳು ತುಂಬಿಕೊಂಡು ಗ್ರಾಮಸ್ಥರಿಗೆ ತೊಂದರೆಯಾಗಿದೆ. ಒಂದನೇ ವಾರ್ಡ್‌ನಲ್ಲಿ ಅಂಗನವಾಡಿ ಕೇಂದ್ರವಿದ್ದು, 40ಮಕ್ಕಳು ಇಲ್ಲಿ ಕಲಿಯುತ್ತಿದ್ದಾರೆ. ಪಕ್ಕದಲ್ಲೇ ಚರಂಡಿ ತುಂಬಿದ್ದರಿಂದ ದುರ್ವಾಸನೆ ನಡುವೆಯೇ ಮಕ್ಕಳು ಕಲಿಯುವಂತಾಗಿದೆ. ಸುತ್ತಲಿನ ನಿವಾಸಿಗಳು ಚರಂಡಿಯಲ್ಲಿ ಕಸ ಚೆಲ್ಲುವುದರಿಂದ ತುಂಬಿ ನಿಂತು ಮಕ್ಕಳಿಗೆ ತೊಂದರೆಯಾಗುತ್ತಿದೆ. ಈ ಕುರಿತು ಗ್ರಾಪಂನವರಿಗೆ ಅನೇಕ ಬಾರಿ ತಿಳಿಸಿದರೂ ಸ್ವಚ್ಛಗೊಳಿಸುತ್ತೇವೆ ಎಂಬ ಆಶ್ವಾಸನೆ ನೀಡುತ್ತಾರೆ. ಆದರೆ ಅದು ಕಾರ್ಯರೂಪಕ್ಕೆ ಬರುತ್ತಿಲ್ಲ ಎಂಬುದು ಗ್ರಾಮಸ್ಥರ ಆರೋಪವಾಗಿದೆ.

    ಚರಂಡಿ ಮೇಲೆ ಕಾಂಕ್ರಿಟ್ ಹಾಕಿದ್ದರೆ ಈ ಸಮಸ್ಯೆ ಬರುತ್ತಿರಲಿಲ್ಲ. ಗ್ರಾಪಂನವರು ಕೂಡಲೇ ನಿಯಮಿತವಾಗಿ ಸ್ವಚ್ಛತೆ ಕೈಗೊಳ್ಳಬೇಕು. ಸೊಳ್ಳೆಗಳು ಹೆಚ್ಚಾಗಿ ರೋಗ ಬರುವ ಮುನ್ನವೇ ಕ್ರಮ ಕೈಗೊಳ್ಳದಿದ್ದರೆ ಗ್ರಾಪಂ ಮುಂದೆ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಮಹಾದೇವ ಬನ್ನಿ, ಅಶೋಕ ಕುಲಕರ್ಣಿ, ಆನಂದ ವಾಲಿ, ಅನಿಲ ಕುಲಕರ್ಣಿ ಮತ್ತಿತರರು ಎಚ್ಚರಿಸಿದ್ದಾರೆ.

    ಇಂಚಗೇರಿ ಗ್ರಾಮದ ಚರಂಡಿ ಅವ್ಯವಸ್ಥೆ ನನ್ನ ಗಮನಕ್ಕೆ ಬಂದಿಲ್ಲ. ತಾಲೂಕಿನ ಯಾವುದೇ ಗ್ರಾಮಗಳಿಂದ ದೂರು ಕೇಳಿ ಬಂದರೂ ಸಂಬಂಧಿಸಿದ ಪಿಡಿಒಗಳಿಗೆ ಹೇಳಿ ಕೂಡಲೇ ಬಗೆಹರಿಸಲಾಗುತ್ತಿದೆ. ಇಂಚಗೇರಿ ಪಿಡಿಒ ಜತೆ ಮಾತನಾಡಿ ಸ್ವಚ್ಛತೆಗೆ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗುವುದು. ಸಂಜೀವ ಖಡೇಕರ, ತಾಪಂ ಇಒ ಚಡಚಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts