More

    ಪಿಡಿಒ, ತಲಾಠಿ ಮೇಲೆ ಮಾರಣಾಂತಿಕ ಹಲ್ಲೆ

    ಬೆಳಗಾವಿ: ಗಂಟಲು ದ್ರವ ಮಾದರಿ ಪರೀಕ್ಷೆ ಮಾಡಿಸಿಕೊಳ್ಳಿ ಎಂದಿದ್ದಕ್ಕೆ ಪಿಡಿಒ ಹಾಗೂ ಗ್ರಾಮ ಲೆಕ್ಕಾಧಿಕಾರಿ ಮೇಲೆ ಬೆಳಗಾವಿ ತಾಲೂಕಿನ ಮರಣಹೋಳ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಕ್ವಾರಂಟೈನ್‌ನಲ್ಲಿದ್ದವರು ಹಾಗೂ ಸ್ಥಳೀಯರು ಸೇರಿ ಶುಕ್ರವಾರ ಮಾರಣಾಂತಿಕ ಹಲ್ಲೆ ನಡೆಸಿರುವ ಕುರಿತು ಕಾಕತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

    ಹೊಸ ವಂಟಮೂರಿ ಗ್ರಾಪಂ ಪಿಡಿಒ ಪ್ರಶಾಂತ ಮುನವಳ್ಳಿ, ಗ್ರಾಮ ಲೆಕ್ಕಾಧಿಕಾರಿ ಪ್ರಶಾಂತ ನೇಸರಗಿ ಹಲ್ಲೆಗೆ ಒಳಗಾದವರು. ಗ್ರಾಪಂ ವ್ಯಾಪ್ತಿಯ ಮರಣಹೋಳ ಗ್ರಾಮಕ್ಕೆ ಮೇ 15, 16ರಂದು ಮುಂಬೈನಿಂದ ಬಂದಿದ್ದ 24ಕ್ಕೂ ಅಧಿಕ ಜನರನ್ನು ಸ್ಥಳೀಯ ಸರ್ಕಾರಿ ಶಾಲೆಯಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಅದರಲ್ಲಿ 10 ಜನರಿಗೆ ಸೋಂಕು ಪತ್ತೆಯಾಗಿದ್ದರಿಂದ ಸೋಂಕಿತರೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದ 22 ಜನರನ್ನು ಅಧಿಕಾರಿಗಳು ಕ್ವಾರಂಟೈನ್ ಮಾಡಿದ್ದರು. ಕ್ವಾರಂಟೈನ್‌ನಲ್ಲಿದ್ದ 24 ಜನರ ಗಂಟಲು ದ್ರವ ಪರೀಕ್ಷೆ ಮಾಡಿಸಲು ಪಿಡಿಒ, ಗ್ರಾಮ ಲೆಕ್ಕಾಧಿಕಾರಿ, ವೈದ್ಯಕೀಯ ಸಿಬ್ಬಂದಿ ಆಗಮಿಸಿದ್ದ ವೇಳೆ ಕ್ವಾರಂಟೈನಿಗಳು ಆಕ್ಷೇಪಿಸಿದ್ದರು.

    ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಒತ್ತಾಯಿಸಿದಾಗ ಕ್ವಾರಂಟೈನ್‌ನಲ್ಲಿದ್ದವರು ಅಧಿಕಾರಿಗಳು ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಬಟ್ಟೆ ಹರಿದು, ವೈದ್ಯಕೀಯ ಸಿಬ್ಬಂದಿ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.

    ಅಧಿಕಾರಿಗಳ ಬೇಸರ: ವಾರದಿಂದ ಕ್ವಾರಂಟೈನಲ್ಲಿದ್ದವರು ಮತ್ತು ಸ್ಥಳೀಯ ರಾಜಕೀಯ ಮುಖಂಡರು ಪಿಡಿಒ, ಗ್ರಾಮ ಲೆಕ್ಕಾಧಿಕಾರಿಗಳಿಗೆ ಕಿರುಕುಳ ನೀಡುತ್ತಿದ್ದರು. ಶುಕ್ರವಾರ ಪರೀಕ್ಷೆಗೆ ಹೋದಾಗ ಎಲ್ಲರೂ ಸೇರಿ ಹಲ್ಲೆ ನಡೆಸಿದ್ದಾರೆ ಎಂದು ಹಲ್ಲೆಗೆ ಒಳಗಾದ ಅಧಿಕಾರಿಗಳು ದೂರಿನಲ್ಲಿ ಉಲ್ಲೇಖಿಸಿದ್ದಾರೆ ಎಂದು ಕಾಕತಿ ಠಾಣೆ ಪೊಲೀಸರು ತಿಳಿಸಿದ್ದಾರೆ.

    ಪಿಡಿಒ, ಗ್ರಾಮ ಲೆಕ್ಕಾಧಿಕಾರಿ, ಇನ್ನಿತರ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದವರನ್ನು ಬಂಧಿಸಿ ಕ್ರಮ ಜರುಗಿಸುವಂತೆ ಸೂಚಿಸಲಾಗಿದೆ. ಇಂತಹ ಘಟನೆಗಳು ಜಿಲ್ಲೆಯಲ್ಲಿ ಮರುಕಳಿಸದಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.
    | ಡಾ.ಎಸ್.ಬಿ.ಬೊಮ್ಮನಹಳ್ಳಿ ಜಿಲ್ಲಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts