More

    ಪವಾಡ ಪುರುಷ ಬಯಲು ಬಸವೇಶ್ವರ

    ಚನ್ನರಾಯಪಟ್ಟಣ: ಜಾನುವಾರುಗಳಿಗೆ ರೋಗ ಕಾಣಿಸಿಕೊಂಡಾಗ ಬಂಡೆ ಮೇಲಿನ ಬಸವೇಶ್ವರ ಸ್ವಾಮಿಗೆ ಹರಕೆ ಕಟ್ಟಿಕೊಂಡರೆ ಗುಣಮುಖವಾಗುತ್ತದೆ ಎಂಬ ನಂಬಿಕೆ ಇಲ್ಲಿನ ಜನರದ್ದು.

    ಪಟ್ಟಣದ ವಾಯುವ್ಯ ಭಾಗದಲ್ಲಿರುವ ಬಯಲು ಬಸವೇಶ್ವರ ದೇವಸ್ಥಾನ ಜಾನುವಾರುಗಳ ಪಾಲಿಗೆ ಜೀವ ಸಂಜೀವಿನಿ. ಬಯಲಲ್ಲಿ ಬಂಡೆ ಮೇಲೆ ಬಸವೇಶ್ವರ ಸ್ವಾಮಿ ಉದ್ಭವಿಸಿದ ಹಿನ್ನೆಲೆಯಲ್ಲಿ ಬಯಲಲ್ಲೇ ಸ್ವಾಮಿಯನ್ನು ಪ್ರತಿಷ್ಠಾಪಿಸಿ ದೇವಸ್ಥಾನ ನಿರ್ಮಾಣ ಮಾಡಲಾಯಿತು. ಹಾಗಾಗಿ ಈ ಸ್ಥಳವನ್ನು ಬಯಲು ಬಸವೇಶ್ವರ ಎಂದೇ ಕರೆಯಲ್ಪಡುತ್ತದೆ.

    ಬಸವೇಶ್ವರ ಸ್ವಾಮಿ ಕೆತ್ತಿದ ಮೂರ್ತಿಯಲ್ಲ. ಬದಲಾಗಿ ಬಂಡೆಯ ಮೇಲೆ ಮೂಡಿರುವ ಮೂರ್ತಿ. ತಾಲೂಕಿನಲ್ಲಿ ಕೃಷಿ ಪ್ರಧಾನವಾಗಿದ್ದು, ಕೃಷಿಕರೇ ಹೆಚ್ಚಾಗಿ ವಾಸವಿದ್ದಾರೆ. ರೈತರ ಪಾಲಿನ ಕಾಮಧೇನು ಜಾನುವಾರು. ಹಾಗಾಗಿ ಜಾನುವಾರುಗಳಿಗೆ ಅಪಾಯವಾಗದಿರಲಿ ಎಂದು ಸ್ವಾಮಿಯಲ್ಲಿ ಪ್ರಾರ್ಥಿಸಿ ಪ್ರತಿವರ್ಷ ಗಿಣ್ಣು ನೀಡಿ ಸ್ವಾಮಿಗೆ ಸೇವೆ ಸಲ್ಲಿಸುವ ವಾಡಿಕೆ ಇಲ್ಲಿದೆ. ಇನ್ನು ಜಾನುವಾರುಗಳಲ್ಲಿ ರೋಗ ಕಂಡು ಬಂದಾಗ ಹರಕೆ ಕಟ್ಟಿಕೊಂಡರೆ ರೋಗ ವಾಸಿಯಾಗುತ್ತದೆ ಎಂಬ ನಂಬಿಕೆ ಇಲ್ಲಿನ ಜನರದ್ದು. ರೋಗವಾಸಿಯಾದ ಬಳಿಕ ಗಂಟೆ ನೀಡುವುದು ಪ್ರತೀತಿ. ಇಲ್ಲಿನ ಬಸವಣ್ಣನ ಮಹಾತ್ಮೆಯಿಂದ ಜಾನುವಾರುಗಳು ಗುಣಮುಖವಾಗುವ ನಂಬಿಕೆ ಭಕ್ತರಲ್ಲಿ ಮನೆ ಮಾಡಿದೆ.

    ಚೋಳರ ಆಳ್ವಿಕೆಯಲ್ಲಿ ನಿರ್ಮಾಣ: ಚೋಳರ ವಾಸ್ತುಶಿಲ್ಪವನ್ನು ತಿಳಿಸುವ ದೇವಾಲಯ ಇದಾಗಿದೆ. ಈ ದೇವಾಲಯವನ್ನು 12ನೇ ಶತಮಾನದಲ್ಲಿ ಚೋಳರ ಆಳ್ವಿಕೆಯಲ್ಲಿ ಕಟ್ಟಲಾಗಿತ್ತು ಎಂಬುದು ಇತಿಹಾಸದಿಂದ ತಿಳಿದು ಬಂದಿದೆ. 1693ನೇ ಖರನಾಮ ಸಂವತ್ಸರದ ಕಾರ್ತಿಕ ಶುದ್ಧ ಮಾಸದಲ್ಲಿ ರಾಜಪ್ಪ ಶೆಟ್ಟರ ನೇತೃತ್ವದಲ್ಲಿ ಮರು ಪ್ರತಿಷ್ಠಾಪನೆ ಮಾಡಲಾಯಿತು ಎಂಬುದು ದೇವಸ್ಥಾನದಲ್ಲಿನ ಶಾಸನ ತಿಳಿಸುತ್ತದೆ. ಶಾಸನದಲ್ಲಿ ದೇವಸ್ಥಾನವನ್ನು ಪಂಗಳ ನಾಡು ಎಂದೂ ಕರೆಯಲಾಗಿದೆ.

    ಈ ದೇವಸ್ಥಾನವನ್ನು ದೊಡ್ಡನಂದಿಯ ದೇವಸ್ಥಾನ ಎಂದೂ ಕರೆಯಲ್ಪಡುತ್ತದೆ. ಚನ್ನರಾಯಪಟ್ಟಣದ ಮೂಲ ಹೆಸರು ಕೊಳತ್ತೂರು/ಅಮೃತಪುರ. ಕೊಳತ್ತೂರು ಎಂಬ ಗ್ರಾಮ ಕಾಲಕ್ರಮೇಣ ಚೆನ್ನಿಗರಾಯನ ಆಳ್ವಿಕೆಗೆ ಬಂದ ಕಾರಣ ಚನ್ನರಾಯಪಟ್ಟಣ ಎಂದು ಹೆಸರು ಬಂದಿತು. ಈ ದೇವಾಲಯದೊಂದಿಗೆ ಚಂದ್ರಮೌಳೇಶ್ವರ, ಗದ್ದೆರಾಮೇಶ್ವರ, ಮೈಲಾರ ಲಿಂಗೇಶ್ವರ ಸ್ವಾಮಿ ದೇವಸ್ಥಾನವನ್ನು ಒಂದೇ ದಿನದಲ್ಲಿ ಕಟ್ಟಲಾಯಿತು ಎಂಬುದು ಇತಿಹಾಸದಿಂದ ತಿಳಿಯುತ್ತದೆ. ಇದಕ್ಕೆ ಸಂಬಂಧಪಟ್ಟ ಮಾಹಿತಿ ಪುರಾತತ್ವ ಇಲಾಖೆಯಲ್ಲಿ ಲಭ್ಯವಿದೆ.

    400 ವರ್ಷಗಳ ಇತಿಹಾಸವಿರುವ ಈ ದೇವಸ್ಥಾನವನ್ನು (ಕಾನಕಾನನಹಳ್ಳಿ) ಪ್ರಸಕ್ತ ಕನಕಪುರದಿಂದ ಚನ್ನರಾಯಪಟ್ಟಣದವರಗೆ ಆಳ್ವಿಕೆ ಮಾಡುತ್ತಿದ್ದ ದೊಡ್ಡಯ್ಯನ ಮಗ ಬಸವಯ್ಯ ಎಂಬ ಪಾಳೆಗಾರ ಈ ಪ್ರಾಂತ್ಯದ ರಕ್ಷಣೆಗಾಗಿ ನಿರ್ಮಿಸಿದ್ದು, 25 ವರ್ಷದ ಹಿಂದಿನವರೆಗೂ ಈ ಪ್ರದೇಶದಲ್ಲಿ ಕೋಟೆ ಕಾಣುತ್ತಿತ್ತು ಎನ್ನಲಾಗಿದೆ. ಕಾಲಕ್ರಮೇಣ ಕಣ್ಮರೆಯಾಗಿದೆ. ದೇವಾಲಯದ ಪ್ರವೇಶ ದ್ವಾರದಲ್ಲಿ ಪೌಳಿ ನಿರ್ಮಿಸಿ ಪೌಳಿಯ ಮೇಲ್ಭಾಗದಲ್ಲಿ ಬಸವಣ್ಣನನ್ನು ಸುಣ್ಣದ ಗಾರೆಯಿಂದ ಪ್ರತಿಷ್ಠಾಪಿಸಲಾಗಿದೆ. ದೇವಾಲಯದೊಳಗೆ ಪ್ರವೇಶ ಮಾಡಿದಾಗ ಬಸವನ ಮಂಟಪ ಕಾಣಸಿಗುತ್ತದೆ.

    ವಿಜೃಂಭಣೆಯ ರಥೋತ್ಸವ: ಪ್ರತಿ ಸೋಮವಾರ, ಶ್ರಾವಣ ಹಾಗೂ ಕಾರ್ತಿಕ ಮಾಸದಲ್ಲಿ ಇಲ್ಲಿ ವಿಶೇಷ ಪೂಜೆ ನೆರವೇರಿಸಲಾಗುತ್ತದೆ. ವೈಶಾಖ ಮಾಸದ ಬಸವ ಜಯಂತಿ ದಿನದಂದು ವಿಜೃಂಭಣೆಯಿಂದ ರಥೋತ್ಸವ ನೆರವೇರಲಿದೆ. ಶಿವರಾತ್ರಿ ದಿನದಂದು ರಾತ್ರಿಪೂರ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಬಯಲು ಬಸವೇಶ್ವರ ದೇವಾಲಯದಲ್ಲಿ ಪ್ರಾಂಗಣ, ಗರ್ಭಗುಡಿ, ಮುಖಮಂಟಪ, ಜಪತಪ ಮಾಡಲು ಸಂಧ್ಯಾ ಮಂಟಪ, ನವರಂಗ ಆಲಯವಿದ್ದು, ದೇವಾಲಯವನ್ನು ಬಸವಣ್ಣ, ಶಿವ ಎಂದೂ ಕರೆಯಲ್ಪಡುತ್ತದೆ. ಈ ದೇವಾಲಯವನ್ನು ಚನ್ನರಾಯಪಟ್ಟಣದ ಪಾಳೆಗಾರ ದೊಡ್ಡಯ್ಯನ ಪುತ್ರ ಕುಮಾರ ಬಸವಯ್ಯ ನಿರ್ಮಿಸಿದ್ದು ಎಂಬುದು ಇತಿಹಾಸದಿಂದ ತಿಳಿದಿದೆ.

    ಬಸವಣ್ಣ ಕಟ್ಟೆಯಲ್ಲಿ ದೊರೆತ ಈಶ್ವರಲಿಂಗ: ಸ್ವಾಮಿಯ ಬಲಭಾಗದಲ್ಲಿ ಪುರಾತನ ಕಾಲದ ಬಸವಣ್ಣ ಕಟ್ಟೆಯಲ್ಲಿ ದೊರೆತ ಈಶ್ವರಲಿಂಗ ಹಾಗೂ ಬಸವನನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ಹಲವಾರು ವರ್ಷಗಳಿಂದ ನೊಣವಿನಕೆರೆಯ ಶ್ರೀ ಸೋಮೇಕಟ್ಟೆ ಕಾಡಸಿದ್ದೇಶ್ವರ ಮಠದ ಡಾ.ಕರಿಬಸವ ದೇಶಿಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ ಹಾಗೂ ಕಿರಿಯ ಶ್ರೀಗಳಾದ ಶ್ರೀ ಅಭಿನವ ಕಾಡು ಸಿದ್ದೇಶ್ವರ ಸ್ವಾಮೀಜಿ ದೇವಾಲಯದ ಉಸ್ತುವಾರಿ ಹೊತ್ತಿದ್ದಾರೆ. ಬಸವ ಜಯಂತಿ ಹಾಗೂ ನವರಾತ್ರಿ ಕಾರ್ಯಕ್ರಮ ಇಲ್ಲಿ ವಿಜೃಂಭಣೆಯಿಂದ ನಡೆಯುತ್ತದೆ. ಪೂರ್ವಿಕರು ಹೇಳುವಂತೆ ಪ್ರತಿ ಅಮಾವಾಸ್ಯೆ ಮಧ್ಯರಾತ್ರಿಯಲ್ಲಿ ಘಂಟನಾದ ಕೇಳಿಸುತ್ತದೆ. ಈಗಲೂ ಹಳೇ ಕಾಲದ ಸರ್ಪ ಇಲ್ಲಿದ್ದು, ಹಲವರ ಕಣ್ಣಿಗೆ ಕಂಡಿದ್ದುಂಟು. ಗುಳ್ಳಳ್ಳಿ ಗ್ರಾಮದ ಶಿವಯೋಗಿಗಳೂ ಇಲ್ಲೇ ಐಕ್ಯವಾಗಿದ್ದಾರೆ.

    ತಲುಪುವ ಮಾರ್ಗ: ಹಾಸನ ಜಿಲ್ಲಾ ಕೇಂದ್ರದಿಂದ 38 ಕಿ.ಮೀ., ರಾಜಧಾನಿಯಿಂದ 146 ಕಿ.ಮೀ., ತಿಪಟೂರಿನಿಂದ 50 ಕಿ.ಮೀ., ಮೈಸೂರಿನಿಂದ 87 ಕಿ.ಮೀ.ದೂರದಲ್ಲಿ ಈ ದೇವಸ್ಥಾನವಿದೆ. ಚನ್ನರಾಯಪಟ್ಟಣದ ಹಳೇ ಬಸ್ ನಿಲ್ದಾಣದಲ್ಲಿ ಇಳಿದರೆ ಭುವನೇಶ್ವರಿ ಮಾರ್ಕೆಟ್ ಮೂಲಕ ಗಾಯತ್ರಿ ಟಾಕೀಸ್ ರಸ್ತೆಯಲ್ಲಿ ಸಾಗಿದರೆ ದೇವಸ್ಥಾನ ಸಿಗಲಿದೆ.

    ವೈಶಾಖ ಮಾಸದ ಬಸವ ಜಯಂತಿ ದಿನದಂದು ಪಂಚಾಮೃತ ಅಭಿಷೇಕ, ರುದ್ರಾಭಿಷೇಕ ನೆರವೇರಿಸಿದ ಬಳಿಕ ವೀರಗಾಸೆ ಹಾಗೂ ಕಲಾತಂಡಗಳೊಂದಿಗೆ ಸ್ವಾಮಿಯನ್ನು ಮೆರವಣಿಗೆ ಮಾಡಲಾಗುವುದು. ತದನಂತರ ಭಕ್ತರಿಗೆ ತೀರ್ಥ ಪ್ರಸಾದ, ಅನ್ನದಾನ ಮಾಡಲಾಗುವುದು. ವಿಶೇಷವಾಗಿ ನವರಾತ್ರಿಯಲ್ಲಿ ದೇವಿಯನ್ನು ಪಟ್ಟಕ್ಕೆ ಕೂರಿಸಿ 9 ದಿನ ದೇವಿ ಪಾರಾಯಣ ಮಾಡಲಾಗುತ್ತದೆ ದಶಮಿಯಂದು ಸುಮಂಗಲಿಯರಿಗೆ ಬಾಗಿನ ನೀಡಿ ಅರಳೆಪೇಟೆಯಲ್ಲಿ ಸದ್ಭಕ್ತರ ಸಮ್ಮುಖದಲ್ಲಿ ಬನ್ನಿ ಕಡೆದು ಬನ್ನಿ ನೀಡಲಾಗುವುದು.
    ಎಸ್.ಪಿ.ದೇವಾನಂದ್ ಪ್ರಧಾನ ಅರ್ಚಕ, ಬಯಲು ಬಸವೇಶ್ವರ ದೇವಸ್ಥಾನ

    ಜಾನುವಾರುಗಳಿಗೆ ರೋಗ ಕಂಡು ಬಂದಾಗ ಬಸವೇಶ್ವರ ಸ್ವಾಮಿಯಲ್ಲಿ ಹರಕೆ ಕಟ್ಟಿಕೊಂಡರೆ ಶೀಘ್ರ ಗುಣಮುಖವಾಗುತ್ತದೆ. ಇದು ನಿಜವೂ ಹೌದು. ಅಚ್ಚರಿಯಾದರೂ ಇದನ್ನು ಎಲ್ಲರೂ ನಂಬಲೇ ಬೇಕು.
    ಕಾಳೇಗೌಡ ಒಳಿತು ಕಂಡವರು, ಜೋಗಿಪುರ

    ನಮ್ಮ ಪೂರ್ವಿಕರು ಹೇಳುವಂತೆ ದೇವಸ್ಥಾನದಲ್ಲಿ ಮಧ್ಯರಾತ್ರಿಯಲ್ಲಿ ಘಂಟನಾದವಾಗುತ್ತಿತ್ತು. ದೈವಿಕ ಸರ್ಪ ಬಸವಣ್ಣನ ಮೂರ್ತಿ ಮೇಲೆ ಮಲಗಿರುತ್ತಿತ್ತು. ಇದು ಸತ್ಯ.
    ದಿನೇಶ್ ಮುದ್ದೇನಹಳ್ಳಿ ನಿವಾಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts