More

    ನಿಸ್ವಾರ್ಥ ಸೇವಾ ಮನೋಭಾವನೆಯಿಂದ ನೆಮ್ಮದಿ ಕಾಣಲು ಸಾಧ್ಯ; ಸಾಧ್ವಿ ಡಾ. ದೇವಪ್ರಿಯಾಜಿ

    ರಾಣೆಬೆನ್ನೂರ: ನಿಸ್ವಾರ್ಥ ಸೇವಾ ಮನೋಭಾವನೆ ಎಲ್ಲಿ ಇರುತ್ತದೆಯೋ ಅಲ್ಲಿ ನೆಮ್ಮದಿ ಕಾಣಲು ಸಾಧ್ಯ. ಆದ್ದರಿಂದ ಪ್ರತಿಯೊಬ್ಬರೂ ನಿಸ್ವಾರ್ಥ ಸೇವಾ ಮನೋಭಾವನೆಯಿಂದ ಸೇವೆ ಸಲ್ಲಿಸಬೇಕು. ಅಂದಾಗ ಮಾತ್ರ ಸಮಾಜದಲ್ಲಿ ಆದರ್ಶ ವ್ಯಕ್ತಿಯಾಗಿ ಬೆಳೆಯಲು ಸಾಧ್ಯ ಎಂದು ಪತಂಜಲಿ ಯೋಗ ಪೀಠದ ಮುಖ್ಯ ಕೇಂದ್ರೀಯ ಪ್ರಭಾರಿ ಸಾಧ್ವಿ ಡಾ. ದೇವಪ್ರಿಯಾಜಿ ಹೇಳಿದರು.
    ನಗರದ ಸಿದ್ಧೇಶ್ವರ ಸಭಾಭವನದಲ್ಲಿ ಹರಿದ್ವಾರದ ಪತಂಜಲಿ ಯೋಗ ಪೀಠದ ವತಿಯಿಂದ ಭಾನುವಾರ ಏರ್ಪಡಿಸಿದ್ದ ಪತಂಜಲಿ ಮಹಿಳಾ ಸಮ್ಮೇಳನದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
    ಒಳ್ಳೆಯ ಮನೋಭಾವನೆ ಹೊಂದಿ ನಾವು ಅಂದುಕೊಂಡದ್ದನ್ನು ಸಾಧಿಸುವುದು ಒಂದು ಯೋಗವಾಗಿದೆ. ಪ್ರತಿ ಮಹಿಳೆಯರು ತಮ್ಮ ಜೀವನದ ಶೈಲಿಯನ್ನು ಬದಲಿಸಿಕೊಂಡು ಮುನ್ನಡೆದಾಗ ಅವರುಗಳ ಜೀವನದಲ್ಲಿ ಸಹಜ ಯೋಗ ಕಾಣಬಹುದು. ನಮ್ಮ ಜೀವನದ ಶೈಲಿಯನ್ನು ನಾವು ಬದಲಾವಣೆ ಮಾಡಿಕೊಂಡಾಗ ಮಾತ್ರ ನಮ್ಮಲ್ಲಿ ಅಡಗಿರುವ ಸೂಕ್ಷ್ಮ ಯೋಗ ತಿಳಿಯಲು ಸಾಧ್ಯವಾಗುತ್ತದೆ ಎಂದರು.
    ಬ್ರಹ್ಮಾಂಡದಲ್ಲಿ ಎಷ್ಟು ಜೀವಶಕ್ತಿಗಳಿವೆ ನಮಗೆ ಗೊತ್ತಿಲ್ಲ. ಆದರೆ, ನಮ್ಮ ದೇಹದಲ್ಲಿ ಎಷ್ಟು ಶಕ್ತಿಗಳಿವೆ ಎಂಬುದನ್ನು ಯೋಗದಿಂದ ತಿಳಿಯಬಹುದು. ನಮ್ಮ ಸೂಕ್ಷ್ಮ ಶರೀರದ ಬಗ್ಗೆ ನಾವು ಅರಿತುಕೊಂಡು ನಮ್ಮ ಆಚಾರ-ವಿಚಾರ, ಚಿಂತನೆಗಳನ್ನು ಗುಣಾತ್ಮಕದ ಕಡೆಗೆ ಬದಲಾವಣೆ ಮಾಡಿಕೊಳ್ಳಬೇಕು. ಎಲ್ಲರಿಗೂ ಒಳ್ಳೆಯದನ್ನು ಬಯಸಬೇಕು. ಪ್ರತಿಯೊಂದು ಜೀವಿಯೂ ಆರೋಗ್ಯ ಐಶ್ವರ್ಯದಿಂದ ಚನ್ನಾಗಿರಬೇಕು ಎಂಬ ಪರಿಕಲ್ಪನೆಯಿಂದ ಬದುಕುಬೇಕು. ಅಂದಾಗ ಎಲ್ಲರ ಜೀವನವೂ ಆನಂದಮಯವಾಗಿರಲು ಸಾಧ್ಯ ಎಂದರು.
    ಪತಂಜಲಿ ಯೋಗ ಪೀಠದ ರಾಜ್ಯ ಪ್ರಭಾರಿ ಯೋಗ ಗುರು ಭವರಲಾಲ್ ಆರ್ಯ ಮಾತನಾಡಿ, ನಮ್ಮ ಕೈಗಳ ಶಕ್ತಿಯನ್ನು ನಾವು ಅರಿಯಬೇಕು. ಧಾನ ಧರ್ಮಗಳಂತಹ ಪುಣ್ಯದ ಕೆಲಸ ಮಾಡಬೇಕು. ಕೈಗಳ ಶಕ್ತಿಯ ಜತೆಗೆ ನಮ್ಮ ಭಾವದ ಶಕ್ತಿ ಬಹು ಮುಖ್ಯವಾದದ್ದು, ಒಳ್ಳೆಯ ಭಾವನೆಯಿಂದ ಸೇವೆ ಮಾಡಬೇಕು. ಭಾವವಿಲ್ಲದ ಪೂಜೆ ಪುನಸ್ಕಾರ, ಕೆಲಸ ಕಾರ್ಯಗಳನ್ನು ಮಾಡಿದರೆ ಪ್ರಯೋಜನವಿಲ್ಲ. ಕಸ ಗೂಡಿಸುವುದರಿಂದ ಹಿಡಿದು ನಾವು ಮಾಡುವ ಪ್ರತಿ ಕಾರ್ಯಗಳಲ್ಲೂ ಉತ್ತಮ ಭಾವ ಹೊಂದಬೇಕು ಎಂದರು.
    ಕಾರ್ಯಕ್ರಮಕ್ಕೂ ಮುನ್ನ ಬಾಬಾ ರಾಮದೇವ ಗುರೂಜಿ ವಿಡಿಯೋ ಕಾನ್ಫರೆನ್ಸ್ ಮೂಲಕ ಕಾರ್ಯಕ್ರಮಕ್ಕೆ ಶುಭ ಕೋರಿದರು. ಪ್ರಮುಖರಾದ ವಜ್ರೇಶ್ವರಿ ಲದ್ವಾ, ಜ್ಯೋತಿ ಜಂಬಗಿ, ಕಿರಣಜಿ., ಸಂಜಯಜಿ., ಅಂಜನಾ, ಶೋಭಾ, ಗೌರಮ್ಮ, ಅಂಜಲಿ, ಹೇಮಾವತಿ ಪೂರ್ಣಿಮಾ, ಸೀಮಾಜಿ, ಆರತಿ, ಸುಜಾತಾ, ಸುಮಲತಾ, ಅರುಣಕುಮಾರ, ಕೃಷ್ಣವೇಣಿ ಹಾಗೂ ಹುಬ್ಬಳ್ಳಿ, ಧಾರವಾಡ, ದಾವಣಗೆರೆ, ಶಿವಮೊಗ್ಗ, ಹಾವೇರಿ, ಗದಗ ಸೇರಿ ವಿವಿಧ ಜಿಲ್ಲೆಗಳಿಂದ ಮಹಿಳಾ ಪತಂಜಲಿ ಪದಾಧಿಕಾರಿಗಳು ಹಾಗೂ ಸದಸ್ಯರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts