More

    ಹೆಚ್ಚುತ್ತಿರುವ ಹೃದಯಾಘಾತಕ್ಕೆ ಕೋವಿಡ್ ಒಂದೇ ಕಾರಣವಲ್ಲ : ಡಾ. ಸಿ.ಎನ್. ಮಂಜುನಾಥ್

    ಬೆಂಗಳೂರು: ಕಳೆದ ಹತ್ತು ವರ್ಷಗಳಲ್ಲಿ ರಾಜ್ಯದಲ್ಲಿ ಹೃದಯಾಘಾತದ ಪ್ರಮಾಣ ಶೇ. 20 ಹೆಚ್ಚಳವಾಗಿದೆ. ಹಾಗಾಗಿ ಯಾವುದೇ ವೈಜ್ಞಾನಿಕ ಆಧಾರವಿಲ್ಲದೆ ಹೃದಯಾಘಾತಕ್ಕೆ ಕರೊನಾ ವೈರಾಣು ಹಾಗೂ ಕೋವಿಡ್ ಲಸಿಕೆ ಕಾರಣ ಎಂದು ಹೇಳಲು ಸಾಧ್ಯವಿಲ್ಲ ಎಂದು ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ. ಸಿ.ಎನ್. ಮಂಜುನಾಥ್ ತಿಳಿಸಿದ್ದಾರೆ.

    ಕೋವಿಡ್ ಸೋಂಕಿನಿಂದ ಬಳಲಿದ್ದವರು ಹೆಚ್ಚು ಕೆಲಸ ಮಾಡಬಾರದು ಎಂಬ ಕೇಂದ್ರ ಆರೋಗ್ಯ ಸಚಿವರ ಹೇಳಿಕೆ ಹಿನ್ನೆಲೆಯಲ್ಲಿ ಮಂಗಳವಾರ ಜಯದೇವ ಆಸ್ಪತ್ರೆಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಕೋವಿಡ್ ಲಸಿಕೆ ಪಡೆದು ಎರಡು ವರ್ಷಗಳಾಗಿವೆ. ದೇಶದಲ್ಲಿ ಶೇ. 90 ಜನರಿಗೆ ಕೋವಿಡ್ ಸೋಂಕು ಬಂದು ಹೋಗಿದೆ. ಈಗ ಸೋಂಕಿತರು ಕಠಿಣ ಕೆಲಸ ಮಾಡಬಾರದು ಎನ್ನುವುದಕ್ಕೆ ವೈಜ್ಞಾನಿಕ ಆಧಾರಗಳಿಲ್ಲ ಎಂದರು.

    ನಾವು ಎಷ್ಟು ಗಂಟೆಗಳ ಕಾಲ ಕೆಲಸ ಮಾಡುತ್ತೇವೆ ಎನ್ನುವುದಕ್ಕಿಂತ ಎಷ್ಟು ಒತ್ತಡದಲ್ಲಿ ಕೆಲಸ ಮಾಡುತ್ತೇವೆ ಎನ್ನುವುದು ಮುಖ್ಯವಾಗುತ್ತದೆ. ಒತ್ತಡದಲ್ಲಿ ಕೆಲಸ ಮಾಡುವವರಿಗೆ ಹೃದಯಾಘಾತ ಸೇರಿ ವಿವಿಧ ಅಪಾಯ ಇರುತ್ತದೆ. ಕೋವಿಡ್‌ನಿಂದ ಚೇತರಿಸಿಕೊಂಡವರು ಕಠಿಣ ಕೆಲಸ ಮಾಡಬಾರದೆಂದು ಕೇಂದ್ರ ಸರ್ಕಾರ ಯಾವ ಅರ್ಥದಲ್ಲಿ ಹೇಳಿದೆ ಎನ್ನುವುದು ತಿಳಿದಿಲ್ಲ ಎಂದು ಹೇಳಿದರು.

    ವಾಯುಮಾಲಿನ್ಯ ಕಾರಣ: ಇತ್ತೀಚಿನ ವರ್ಷಗಳಲ್ಲಿ ಹೃದಯಾಘಾತಕ್ಕೆ ವಾಯುಮಾಲಿನ್ಯವೂ ಹೊಸ ಕಾರಣವಾಗಿ ಹೊರಹೊಮ್ಮುತ್ತಿದೆ. ಹಿಂದೆಲ್ಲಾ ವಾಯುಮಾಲಿನ್ಯದಿಂದ ಶ್ವಾಸಕೋಶಕ್ಕೆ ಹಾನಿ ಎಂದು ತಿಳಿದಿದ್ದೇವು. ಆದರೆ ಈಗ ಅದು ಹೃದಯದ ಕಾಯಿಲೆಗೂ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಕಳೆದ ಒಂದು ವರ್ಷದಲ್ಲಿ ದೇಶದಲ್ಲಿ ವಾಯುಮಾಲಿನ್ಯದಿಂದ 22 ಲಕ್ಷ ಮಂದಿ ಮೃತಪಟ್ಟಿದ್ದಾರೆ. 2.5 ಮೈಕ್ರಾನ್ ಗಿಂತ ಚಿಕ್ಕದಾದ ಧೂಳಿನ ಕಣಗಳು ಉಸಿರಾಟದ ಮೂಲಕ ಹೃದಯ ರಕ್ತನಾಳ ಸೇರಿ ರಕ್ತ ಹೆಪ್ಪುಗಟ್ಟವ ಸಾಧ್ಯತೆ ಹೆಚ್ಚಿದೆ ಎಂದು ವಿವರಿಸಿದರು.

    ಕೋವಿಡ್ ಪೂರ್ವದಲ್ಲೇ ಹೆಚ್ಚಳ: ಕೋವಿಡ್ ಪೂರ್ವದಲ್ಲಿಯೇ ಯುವಕರು ಹಾಗೂ ಮಧ್ಯ ವಯಸ್ಕರಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚಾಗಿದ್ದವು. ಒತ್ತಡ ಕೂಡ ಇತ್ತೀಚಿನ ದಿನಗಳಲ್ಲಿ ಹೃದಯಾಘಾತಕ್ಕೆ ಕಾರಣವಾಗುತ್ತಿದೆ. ವೈದ್ಯರ ಮೇಲೆ ಒತ್ತಡ ಹೆಚ್ಚಾಗುತ್ತಿರುವುದರಿಂದ ವೈದ್ಯರ ಆಯಸ್ಸು 10 ವರ್ಷ ಕಡಿಮೆ ಆಗುತ್ತಿದೆ. ಕೇರಳದಲ್ಲಿ ಈ ಬಗ್ಗೆ ಅಧ್ಯಯನ ಮಾಡಲಾಗಿದೆ. ಮಧುಮೇಹದ ಆರಂಭಿಕ ಹಂತದಲ್ಲಿ ಇರುವವರಿಗೂ ಹೃದಯಾಘಾತ ಆಗುತ್ತಿದೆ. ಧೂಮಪಾನ, ಅತಿಯಾದ ಮದ್ಯಪಾನ, ಡ್ರಗ್ಸ್ ಸೇವನೆ, ಸ್ಥೂಲಕಾಯ, ಆನುವಂಶಿಕ ಸಮಸ್ಯೆ ಸೇರಿ ವಿವಿಧ ಕಾರಣಗಳಿಂದ ಹೃದಯಾಘಾತ ಪ್ರಕರಣಗಳು ಹೆಚ್ಚಳವಾಗುತ್ತಿವೆ ಎಂದರು.

    ಬಿಎಂಟಿಸಿ ಸಿಬ್ಬಂದಿಯಲ್ಲಿ ಹೃದಯ ಸಮಸ್ಯೆ:ಬಿಎಂಟಿಸಿ ಜತೆಗಿನ ಒಪ್ಪಂದಂತೆ 13 ತಿಂಗಳಲ್ಲಿ 8.5 ಸಾವಿರ ಸಿಬ್ಬಂದಿಗೆ ಸಂಸ್ಥೆಯಲ್ಲಿ ವಿವಿಧ ಪರೀಕ್ಷೆ ನಡೆಸಲಾಗಿದ್ದು, ಶೇ. 5 ಸಿಬ್ಬಂದಿಯಲ್ಲಿ ಹೃದಯ ಸಂಬಂಧಿ ಸಮಸ್ಯೆ ಪತ್ತೆಯಾದರೆ, ತಲಾ ಶೇ. 40 ಸಿಬ್ಬಂದಿಗೆ ಅಧಿಕ ರಕ್ತದೊತ್ತಡ ಹಾಗೂ ಸಕ್ಕರೆ ಕಾಯಿಲೆ ಇರುವುದು ದೃಢಪಟ್ಟಿದೆ. ಶೇ. 62 ಮಂದಿ ಸ್ಥೂಲಕಾಯ ಸಮಸ್ಯೆ ಎದುರಿಸುತ್ತಿದ್ದಾರೆ. ಪರೀಕ್ಷೆಗೆ ಒಳಪಟ್ಟವರಲ್ಲಿ 25 ಮಂದಿ ಧೂಮಪಾನಿಗಳಾಗಿದ್ದರು. ವಿವಿಧ ಸಮಸ್ಯೆಗಳು ಇರುವುದರಿಂದ ಇವರನ್ನು ಅಪಾಯದ ವರ್ಗದಲ್ಲಿ ಗುರುತಿಸಲಾಗುತ್ತಿದೆ. ಸಮಯಕ್ಕೆ ಸರಿಯಾಗಿ ಊಟನಿದ್ದೆ ಹಾಗೂ ವ್ಯಾಯಾಮ ಮಾಡದಿರುವುದು ಸಹ ಸಮಸ್ಯೆ ಕಾಣಿಸಿಕೊಳ್ಳಲು ಕಾರಣವಾಗಿದೆ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts