More

    ಪ್ಯಾಸೆಂಜರ್ ರೈಲು ಆರಂಭಕ್ಕೆ ಮೀನಮೇಷ

    ಮಂಗಳೂರು: ಅನ್‌ಲಾಕ್ ಆರಂಭ ಬಳಿಕ ಸಾರ್ವಜನಿಕರ ಜನಜೀವನ ಹಂತಹಂತವಾಗಿ ಸಹಜ ಸ್ಥಿತಿಗೆ ಮರಳುತ್ತಿದೆ. ಎಲ್ಲರೂ ಅವರವರ ಎಚ್ಚರಿಕೆಯಲ್ಲಿ ಓಡಾಡುತ್ತಿದ್ದಾರೆ. ಆದರೆ ಪ್ಯಾಸೆಂಜರ್ ರೈಲುಗಳನ್ನು ಆರಂಭಿಸಲು ಮಾತ್ರ ಇನ್ನೂ ಕಾಲ ಕೂಡಿಬಂದಿಲ್ಲ! ಪ್ಯಾಸೆಂಜರ್ ರೈಲುಗಳಿಲ್ಲದೆ, ಇದನ್ನೇ ನಂಬಿದ ಜನರ ವೇತನದ ಬಹುಪಾಲು ಪ್ರಯಾಣ ವೆಚ್ಚಕ್ಕೆ ಹೋಗುತ್ತಿದೆ. ಎಕ್ಸ್‌ಪ್ರೆಸ್ ರೈಲುಗಳಲ್ಲೂ ಸಾಮಾನ್ಯ ಬೋಗಿಗಳಿಲ್ಲ.

    ಮಂಜೇಶ್ವರ ನಿವಾಸಿ ಸತೀಶ ಮಂಗಳೂರಿನ ಬಟ್ಟೆ ಮಳಿಗೆಯೊಂದರಲ್ಲಿ ಮಾಸಿಕ 8,300 ರೂ. ವೇತನಕ್ಕೆ ದುಡಿಯುತ್ತಾರೆ. ಅವರು ದಿನಂಪ್ರತಿ ಬಸ್ಸಿನಲ್ಲಿ ಮಂಜೇಶ್ವರ ಮತ್ತು ಮಂಗಳೂರು ನಡುವೆ ಓಡಾಡಲು ಎರಡು ಪ್ರಯಾಣಕ್ಕೆ 76 ರೂ.(ಏಕಮುಖ ಪ್ರಯಾಣಕ್ಕೆ 38 ರೂ.) ವ್ಯಯಿಸುತ್ತಾರೆ.

    ಅಂದರೆ ತಿಂಗಳಿಗೆ ನಾಲ್ಕು ವಾರದ ರಜೆ ಕಳೆದು 26 ದಿನಗಳಿಗೆ ಅವರು 1,976 ರೂ. ಪ್ರಯಾಣಕ್ಕೆ ತೆಗೆದಿಡಬೇಕು. ಸತೀಶ ಅವರಂತಹ ಸೀಮಿತ ವೇತನ ಹೊಂದಿದವರಿಗೆ ಈ ಪ್ರಯಾಣ ವೆಚ್ಚ ದುಬಾರಿ. ಲಾಕ್‌ಡೌನ್ ಆರಂಭ ಮೊದಲು 100 ರೂ. ಪಾಸ್‌ನಲ್ಲಿ ಸತೀಶ ತಿಂಗಳು ಪೂರ್ತಿ ಮಂಜೇಶ್ವರ – ಮಂಗಳೂರು ನಡುವೆ ರೈಲಿನಲ್ಲಿ ಓಡಾಡುತ್ತಿದ್ದರು. ರಜಾದಿನಗಳಲ್ಲೂ ಖರೀದಿಗೆ ಮಂಗಳೂರಿಗೆ ಬಂದು ಹೋಗುತ್ತಿದ್ದರು.

    ಇದು ಒಂದು ಉದಾಹರಣೆ ಮಾತ್ರ. ಕಾಸರಗೋಡು ಜಿಲ್ಲೆಯ ವಿವಿಧೆಡೆಗಳಿಂದ ಸಾವಿರಾರು ಜನರು ಪ್ಯಾಸೆಂಜರ್ ರೈಲುಗಳನ್ನು ನಂಬಿ ಮಂಗಳೂರು ನಗರದಲ್ಲಿ ಸಣ್ಣ ವೇತನಕ್ಕೆ ದುಡಿದು ಬದುಕು ಕಟ್ಟಿಕೊಂಡಿದ್ದಾರೆ. ಪುತ್ತೂರು ಕಡೆಯ ನೂರಾರು ಜನ ಕಬಕ ಪುತ್ತೂರು ಪ್ಯಾಸೆಂಜರ್‌ನಲ್ಲಿ ದಿನವೂ ಓಡಾಡುತ್ತಿದ್ದರು. ಗೋವಾದಿಂದ ಬರುತ್ತಿದ್ದ ರೈಲು ಅರ್ಧ ತುಂಬುತ್ತಿದ್ದುದೇ ಕಾರವಾರ ಕಡೆಯಿಂದ ವೈದ್ಯಕೀಯ ಚಿಕಿತ್ಸೆಗಾಗಿ ಬರುವ ಜನರಿಂದ. ರಾಜ್ಯದಲ್ಲಿ ಶಾಲಾ -ಕಾಲೇಜುಗಳು ಆರಂಭವಾಗಿದ್ದು, ಸಾಮಾನ್ಯ ರೈಲುಗಳಲ್ಲಿ ಮಾಸಿಕ ಪಾಸ್‌ಗಳಲ್ಲಿ ಸಂಚರಿಸುತ್ತಿದ್ದ ವಿದ್ಯಾರ್ಥಿ ಸಮುದಾಯಕ್ಕೂ ನಷ್ಟವಾಗಿದೆ.

    ಕ್ರಮ ಕೈಗೊಳ್ಳದ ವಲಯಗಳು: ರೈಲ್ವೆ ಸೇವೆಗಳು ಒಂದೊಂದಾಗಿ ಸಾರ್ವಜನಿಕರ ಅಗತ್ಯಗಳಿಗೆ ಲಭ್ಯವಾಗುತ್ತಿವೆ. ಪ್ಯಾಸೆಂಜರ್ ರೈಲು ಸೇವೆಗಳನ್ನು ಕೂಡ ಶೀಘ್ರ ನಿರೀಕ್ಷಿಸಬಹುದು ಎನ್ನುತ್ತಾರೆ ರೈಲ್ವೆ ಪಾಲಕ್ಕಾಡ್ ವಿಭಾಗದ ಸಾರ್ವಜನಿಕ ಸಂಪರ್ಕ ಅಧಿಕಾರಿ ಗೋಪಿನಾಥನ್. ರೈಲ್ವೆ ಮಂಡಳಿಯು ಹೊಸ ರೈಲು ಸೇವೆ ಆರಂಭಿಸುವ ಬಗ್ಗೆ ತೀರ್ಮಾನ ತೆಗೆದುಕೊಳ್ಳುವ ಅವಕಾಶಗಳನ್ನು ವಲಯಗಳಿಗೆ ನೀಡಿದ್ದರೂ ಈ ಅವಕಾಶವನ್ನು ಕರ್ನಾಟಕ ಕರಾವಳಿಯ ಜನರಿಗೆ ಒದಗಿಸಲು ಯಾವುದೇ ವಲಯ ಮುಂದಾಗಿಲ್ಲ.

    ಬೆಂಗಳೂರು ನಗರದಿಂದ ಸಮೀಪದ ದೊಡ್ಡಬಳ್ಳಾಪುರ, ಬಾಣಸವಾಡಿ ಮುಂತಾದ ಉಪನಗರಗಳಿಗೆ ಸಾಕಷ್ಟು ಡೆಮು ರೈಲುಗಳು ಆರಂಭವಾಗಿವೆ. ಇದರಿಂದ ನಗರ ಕೇಂದ್ರೀಕರಿಸಿ ದುಡಿಯುವ ವರ್ಗದ ಜನರಿಗೆ ಉಪಕಾರವಾಗಿದೆ. ಕರಾವಳಿ ಭಾಗದ ಮುಖ್ಯವಾಗಿ ದುಡಿಯುವ ಬಡ ಮತ್ತು ಮಧ್ಯಮ ವರ್ಗದ ಕುಟುಂಬಕ್ಕೆ ಪ್ಯಾಸೆಂಜರ್ ರೈಲುಗಳು ಆವಶ್ಯಕ.
    ಗೌತಮ್ ಶೆಟ್ಟಿ, ರೈಲ್ವೆ ಹೋರಾಟಗಾರ, ಕುಂದಾಪುರ

    ಕಬಕ ಪುತ್ತೂರು ಪ್ಯಾಸೆಂಜರ್ ರೈಲಿನಲ್ಲಿ ದಿನಂಪ್ರತಿ ಸಂಚರಿಸುತ್ತಿದ್ದ ಹೆಚ್ಚಿನವರು ದುಬಾರಿ ಬೆಲೆ ತೆತ್ತು ಬಸ್‌ಗಳಲ್ಲಿ ಸಂಚರಿಸುತ್ತಿದ್ದಾರೆ. ಕೆಲವರು ದಿನಂಪ್ರತಿ ಮಂಗಳೂರಿಗೆ ಬಂದುಹೋಗುವುದನ್ನೇ ಬಿಟ್ಟಿದ್ದಾರೆ. ರೈಲುಗಳು ಸಾಮಾನ್ಯ ಪ್ರಯಾಣ ದರದಲ್ಲಿ ಸಾರ್ವಜನಿಕರಿಗೆ ಶೀಘ್ರ ಲಭ್ಯವಾಗಬೇಕು.
    ಜಿ.ಕೆ.ಭಟ್, ರೈಲ್ವೆ ಹೋರಾಟಗಾರರು, ಮಂಗಳೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts