More

    ಪಾಶ್ಚಾತ್ಯ ಅನುಕರಣೆಯಿಂದ ಆಯಸ್ಸು ಕಡಿತ : ಎಸ್ ವ್ಯಾಸ ಯೋಗ ವಿವಿ 23ನೇ ಇಂಕೋಫೆರಾ ಸಮ್ಮೇಳನ

    ಆನೇಕಲ್: ಪಾಶ್ಚಾತ್ಯ ಸಂಸ್ಕೃತಿ ಅನುಕರಣೆಗೆ ಮಾರುಹೋಗಿ ನಾವೇ ನಮ್ಮ ಆಯಸ್ಸನ್ನು ಕಡಿಮೆ ಮಾಡಿಕೊಳ್ಳುತ್ತಿರುವುದು ದುರಂತ ಎಂದು ಕೇಂದ್ರ ಆಯುಷ್ ಮತ್ತು ರಕ್ಷಣಾ ರಾಜ್ಯಮಂತ್ರಿ ಶ್ರೀಪಾದ ಯೆಸ್ಸೋ ನಾಯಕ್ ಆತಂಕ ವ್ಯಕ್ತಪಡಿಸಿದರು.

    ಜಿಗಣಿ ಸಮೀಪದ ಎಸ್ ವ್ಯಾಸ ಯೋಗ ವಿವಿಯ 23ನೇ ಇಂಕೋಫೆರಾ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

    ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಶಾಂತಿ, ತಾಳ್ಮೆ, ನೆಮ್ಮದಿ ಮುಖ್ಯ. ಜಲಮಾಲಿನ್ಯ, ವಾಯು ಮಾಲಿನ್ಯದಿಂದಾಗಿ ಹಲವು ಕಾಯಿಲೆಗಳಿಗೆ ದಾರಿ ಮಾಡಿಕೊಟ್ಟಂತಾಗಿದೆ ಎಂದ ಅವರು, ಯುವಜನತೆ ಜಡತ್ವ ತೊರೆದು ದೈಹಿಕ ಶ್ರಮಕ್ಕೆ ಮುಂದಾಗಬೇಕಿದೆ ಎಂದು ಸಲಹೆ ನೀಡಿದರು.

    ಕೆಲಸದ ಒತ್ತಡ, ಒಂದೇ ಕಡೆ ಕುಳಿತು ಕೆಲಸ ಮಾಡುವ ಅನಿವಾರ್ಯತೆಯಿಂದ ಕಾಯಿಲೆಗಳಿಗೆ ಆಸ್ಪದ ನೀಡುವಂತಾಗಿದೆ. ಜೀವನದಲ್ಲಿ ಹೊಸತನ ರೂಢಿಸಿಕೊಳ್ಳಬೇಕು. ಕ್ರೀಡೆಗಳ ಕಡೆಗೆ ಒಲವು ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

    ಪ್ರಧಾನಿ ಮೋದಿ ಅವರು ಆಯುಷ್ಮಾನ್ ಭಾರತ ಪ್ರಾರಂಭಿಸಿ ಅರೋಗ್ಯವಂತ ಭಾರತದ ಕನಸು ಕಂಡಿದ್ದಾರೆ. ಎಲ್ಲರೂ ದೃಢ ಮನಸ್ಸಿನಿಂದ ಸಂಕಲ್ಪ ಮಾಡಬೇಕು. ಇಂಟಿಗ್ರೇಟೆಡ್ ಮೆಡಿಸಿನ್ ಮೂಲಕ ಅಲೋಪಥಿ ಜತೆಗೆ ಆಯುರ್ವೇದ ಸೇರಿ ದೇಶೀಯ ಆರೋಗ್ಯ ಪದ್ಧತಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

    ಆದಿಚುಂಚನಗಿರಿಯ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ಸನಾತನ ಧರ್ಮ ಪಾಲನೆ ಮೂಲಕ ವಿಶ್ವಕ್ಕೆ ಯೋಗದ ಕೊಡುಗೆ ನೀಡಿರುವುದು ಮನುಕುಲದ ಉದ್ಧಾರಕ್ಕಾಗಿ ಎಂಬುದನ್ನು ಕಡೆಗಣಿಸಬಾರದು ಎಂದರು. ನಯಾಪೈಸೆ ಖರ್ಚಿಲ್ಲದ ಯೋಗಾಚರಣೆಯನ್ನು ವಿಶ್ವಮಟ್ಟಕ್ಕೆ ಪರಿಚಯಿಸಿದ ಖ್ಯಾತಿ ಪ್ರಧಾನ ಮೋದಿ ಅವರಿಗೆ ಸಲ್ಲುತ್ತದೆ ಎಂದರು.

    ಕಂದಾಯ ಮತ್ತು ನಗರಾಭಿವೃದ್ಧಿ ಸಚಿವ ಆರ್. ಅಶೋಕ್ ಮಾತನಾಡಿ, ಕಾಯಿಲೆ ಬಂದ ಬಳಿಕ ಚಿಕಿತ್ಸೆ ಬಗ್ಗೆ ಚಿಂತಿಸುವ ಬದಲು ಕಾಯಿಲೆ ಬರದಂತೆ ತಡೆಯುವುದು ಬುದ್ಧಿವಂತರ ಲಕ್ಷಣ ಎಂದರು.

    ಶಾಸಕ ಎಂ.ಕೃಷ್ಣಪ್ಪ ಮಾತನಾಡಿ, ನಗರ ಪ್ರದೇಶಗಳಲ್ಲಿ ಪಾರ್ಕ್ ಮತ್ತು ದೈಹಿಕ ಕಸರತ್ತುಗಳಿಗೆ ನೂರಾರು ಕಡೆ ವ್ಯವಸ್ಥೆ ಇದೆ. ತಾಲೂಕು ಕೇಂದ್ರಗಳಲ್ಲಿ ಗ್ರಾಮೀಣರಿಗಾಗಿ ಸರ್ಕಾರಿ ಭೂಮಿ ಗುರುತಿಸಿಕೊಡಬೇಕಾಗಿದೆ ಎಂದು ಇಂಗಿತ ವ್ಯಕ್ತಪಡಿಸಿದರು.

    ಆಯುಷ್ ಮಂತ್ರಾಲಯದ ಜಂಟಿ ಕಾರ್ಯದರ್ಶಿ ಪಿ.ಎನ್.ರಣಜಿತ್‌ಕುಮಾರ್, ವ್ಯಾಸದ ಎಚ್.ಆರ್.ನಾಗೇಂದ್ರ, ಜೈಪುರ ಫುಟ್ ಸಂಸ್ಥೆಯ ಪ್ರೇಮ ಭಂಡಾರಿ, ಐಇಎಂಎಲ್ ಅಧ್ಯಕ್ಷ ರಾಕೇಶ್‌ಕುಮಾರ್, ಲಡಾಕ್‌ನ ಅಂತಾರಾಷ್ಟ್ರೀಯ ಮಹಾಬೋಧಿ ಧ್ಯಾನ ಮಂದಿರದ ಅಧ್ಯಕ್ಷ ಭಿಕ್ಕು ಸಂಗಸೇನಾ, ಜರ್ಮನಿಯ ಡಾ. ಕ್ರಿಸ್ಟೋಫ್ ಗಾರ್ನರ್, ವ್ಯಾಸ್ ರಿಜಿಸ್ಟ್ರಾರ್ ಶ್ರೀನಿಧಿ ಪಾರ್ಥಸಾರಥಿ, ಉಪಾಧ್ಯಕ್ಷ ಡಾ. ಬಿ.ಆರ್. ರಾಮಕೃಷ್ಣ, ಸಂಸ್ಥೆ ಸಂಸ್ಥಾಪಕರಾದ ನಾಗೇಂದ್ರ, ನಾಗರತ್ನ ಮತ್ತಿತರರು ಇದ್ದರು.

    ಸಿದ್ದು ಮಾತಲ್ಲಿ ಹುರುಳಿಲ್ಲ: ಸಿದ್ದರಾಮಯ್ಯನವರ ಟೀಕೆಯಲ್ಲಿ ಯಾವುದೇ ಹುರುಳಿಲ್ಲ. ಈ ಹಿಂದೆ ನೆರೆ ಬಂದಾಗ ಮನಮೋಹನ್‌ಸಿಂಗ್ ಸರ್ಕಾರ ನೀಡಿದ್ದ ಪರಿಹಾರ ಏನೆಂದು ಜಗತ್ತಿಗೇ ಗೊತ್ತಿದೆ. ಅವರು ನೀಡಿರುವ ಹಣಕ್ಕಿಂತ ದುಪ್ಪಟ್ಟು ಹಣವನ್ನು ಈಗಿನ ಬಿಜೆಪಿ ಸರ್ಕಾರ ರಾಜ್ಯಕ್ಕೆ ನೀಡಿದೆ ಎಂದು ಸಚಿವ ಆರ್.ಅಶೋಕ್ ತಿರುಗೇಟು ನೀಡಿದ್ದಾರೆ. 5 ವರ್ಷದಲ್ಲಿ ಕೇಂದ್ರ ಸರ್ಕಾರ ಎಲ್ಲ ಇಲಾಖೆಗೂ ಹೆಚ್ಚಿನ ಹಣ ಬಿಡುಗಡೆ ಮಾಡಿದೆ. ಮೋದಿ ಸರ್ಕಾರ ರಾಜ್ಯಕ್ಕೆ ನ್ಯಾಯ ನೀಡಿದ್ದು, ನೆರೆ ಪರಿಹಾರದಲ್ಲೂ ನ್ಯಾಯ ಸಿಗುತ್ತದೆ ಎಂದರು.
    ಎಂಡಿಆರ್‌ಎ್ ಪ್ರಕಾರ ರಾಜ್ಯಕ್ಕೆ ಬರಬೇಕಿರುವ ಹಣ 3000 ಕೋಟಿ ರೂ. ಮಾತ್ರ. ನಿಯಮಾನುಸಾರ ಹಣ ಬಿಡುಗಡೆಯಾಗುತ್ತದೆ. ಆದರೆ ಮುಖ್ಯಮಂತ್ರಿಗಳು ಹೆಚ್ಚು ಅನುದಾನ ಕೇಳಿರುವುದರಿಂದ ಈ ಬಗ್ಗೆ ಪ್ರಧಾನಿಗಳು ಯೋಚನೆ ಮಾಡಿ ಹೇಳುವುದಾಗಿ ತಿಳಿಸಿದ್ದಾರೆ. ಕಾಂಗ್ರೆಸ್ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದೆ. ಮನಮೋಹನ್‌ಸಿಂಗ್ ಸರ್ಕಾರ 10 ವರ್ಷದಲ್ಲಿ ನೀಡಿರುವ ಹಣಕ್ಕೂ 6 ವರ್ಷಗಳಲ್ಲಿ ಬಿಜೆಪಿ ಸರ್ಕಾರ ನೀಡಿರುವ ಹಣಕ್ಕೂ ತಾಳೆ ಹಾಕಲಿ. ನಮ್ಮದು ಲೋಪವಿದ್ದರೆ ಒಪ್ಪಿಕೊಳ್ಳುತ್ತೇವೆ. ಸಿದ್ದರಾಮಯ್ಯ ಅವರು ಸುಳ್ಳು ಹೇಳುವುದನ್ನು ಬಿಡಬೇಕು ಎಂದು ಟೀಕಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts