More

    ಪಾಲಕರು ಮಕ್ಕಳಿಗೋಸ್ಕರ ಸಮಯ ಮೀಸಲಿಡಿ : ಡಾ. ಗುರುರಾಜ್ ಕರ್ಜಗಿ

    ಪಾಲಕರು ತಮ್ಮ ಮಕ್ಕಳ ಉತ್ತಮ ಭವಿಷ್ಯಕೋಸ್ಕರ ದುಡಿಯುತ್ತಾರೆ. ಆದರೆ, ಕೇವಲ ದುಡಿಮೆಯೊಂದೇ ಜೀವನವಲ್ಲ, ಮಕ್ಕಳಿಗೊ ೀಸ್ಕರ ಒಂದಷ್ಟು ಸಮಯವನ್ನು ಮೀಸಲಿಡಬೇಕು ಎಂದು ಶೈಕ್ಷಣಿಕ ಸಲಹೆಗಾರ ಡಾ. ಗುರುರಾಜ್ ಕರ್ಜಗಿ ಸಲಹೆ ನೀಡಿದರು.

    ಮೈಸೂರಿನ ನೈಪುಣ್ಯ ಸ್ಕೂಲ್ ಆಫ್ ಎಕ್ಸಲೆನ್ಸ್ ದಟ್ಟಗಳ್ಳಿಯ ಕನಕದಾಸನಗರದ ಮಾಂಗಲ್ಯ ಸಂಗಮ ಸಭಾಂಗಣದಲ್ಲಿ ಗುರುವಾರ ‘ಶಿಕ್ಷಣದಲ್ಲಿ ಪಾಲಕರ ಪಾತ್ರ’ ವಿಷಯದ ಕುರಿತು ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೇವಲ ದುಡಿಮೆಯ ಕಡೆಗೆ ಮಾತ್ರ ಗಮನ ಹರಿಸಿ ಮಕ್ಕಳ ಕಡೆಗೆ ಗಮನ ಹರಿಸದೆ ಇದ್ದರೆ ಮಕ್ಕಳನ್ನು ಉತ್ತಮವಾಗಿ ಬೆಳೆಸಲು ಸಾಧ್ಯವಿಲ್ಲ. ಮಕ್ಕಳು ಶಾಲೆಯಲ್ಲಿ ಕಳೆಯುವ ಸಮಯಕ್ಕಿಂತ ಹೆಚ್ಚಿನ ಸಮಯವನ್ನು ಮನೆಯಲ್ಲಿ ಕಳೆಯುತ್ತಾರೆ. ಹಾಗಾಗಿ ಪಾಲಕರ ಮಾರ್ಗದರ್ಶನ ಅತ್ಯಂತ ಅಗತ್ಯ. ಶಾಲೆಗೆ ಮಕ್ಕಳನ್ನು ಸೇರಿಸಿದ ಮಾತ್ರಕ್ಕೆ ತಮ್ಮ ಕರ್ತವ್ಯ ಮುಗಿಯಿತು ಎಂದು ಭಾವಿಸುವುದು ತಪ್ಪು ಎಂದರು.

    ಮಕ್ಕಳ ಮೇಲೆ ನಿಯಂತ್ರಣ ಮಾಡಬೇಡಿ

    ಮಕ್ಕಳಿಗೋಸ್ಕರ ಪಾಲಕರು ಒಂದಷ್ಟು ಸಮಯ ಮೀಸಲಿಡಬೇಕು ಎಂಬುದೇನೋ ನಿಜ. ಆದರೆ, ಮಕ್ಕಳಿಗೆ ಸಮಯ ಕೊಡಲು ಹೋಗಿ ಎಲ್ಲ ವಿಚಾರಗಳಲ್ಲೂ ಪಾಲಕರೇ ತೀರ್ಮಾನ ಕೈಗೊಳ್ಳುವುದು ಹಾಗೂ ಅವರನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಸರಿಯಲ್ಲ. ಮಕ್ಕಳಿಗೂ ಚಿಂತನೆ ಮಾಡಲು ಅವಕಾಶ ನೀಡಬೇಕು. ಇಲ್ಲವಾದಲ್ಲಿ ಅವರು ಮತ್ತೊಬ್ಬರ ಮೇಲೆ ಅವಲಂಬಿತರಾಗುತ್ತಾರೆ. ಈ ರೀತಿ ಬೆಳೆಯುವ ಮಕ್ಕಳು ಮುಂದೆ ದೊಡ್ಡವರಾದ ನಂತರ ಸ್ವಂತ ತೀರ್ಮಾನ ಕೈಗೊಳ್ಳುವ ಶಕ್ತಿಯನ್ನೇ ಕಳೆದುಕೊಳ್ಳುತ್ತಾರೆ. ಹಾಗಾಗಿ ಪಾಲಕರು ಈ ಬಗ್ಗೆ ಎಚ್ಚರ ವಹಿಸಬೇಕು ಎಂದು ಹೇಳಿದರು.

    ಇದೀಗ ಸಾಕಷ್ಟು ಪಾಲಕರು ಮಕ್ಕಳನ್ನು ತುಂಬಾ ಕಾಳಜಿ ಇಟ್ಟು ಬೆಳೆಸುತ್ತಾರೆ. ಮಕ್ಕಳ ಮೇಲೆ ನಿಮಗೆ ಕಾಳಜಿ ಇರಲಿ. ಆದರೆ, ಅತಿಯಾದ ಕಾಳಜಿ ಇರಬಾರದು. ಕೆಲವು ಪಾಲಕರು 6 ವರ್ಷದ ಮಗುವಿಗೆ ತಾವೇ ಸಾಕ್ಸ್, ಶೂ ಹಾಕಿಕೊಡುವುದನ್ನು ನೋಡಿದ್ದೇನೆ. ಮಕ್ಕಳು ತೊಂದರೆ ಅನುಭವಿಸಬಾರದು ಎಂದು ಮಕ್ಕಳ ಹೋಂ ವರ್ಕ್ ಅನ್ನು ಪಾಲಕರೇ ಮಾಡುತ್ತಾರೆ. ಈ ರೀತಿಯ ಅತಿಯಾದ ಕಾಳಜಿ ಮಗುವಿನ ಮೇಲೆ ಪರಿಣಾಮ ಬೀರುತ್ತದೆ. ಎಲ್ಲ ಕೆಲಸವನ್ನು ಪಾಲಕರೇ ಮಾಡಿದರೆ ಮಕ್ಕಳು ಏನನ್ನೂ ಕಲಿಯುವುದಿಲ್ಲ ಎಂಬ ಎಚ್ಚರಿಕೆ ಪಾಲಕರಿಗೆ ಇರಬೇಕು ಎಂದರು.

    ಮಕ್ಕಳ ಮೇಲೆ ನಿಮ್ಮ ಆಸಕ್ತಿ ಹೇರಬೇಡಿ

    ಕೆಲವು ಪಾಲಕರು ತಾವು ಸಾಧಿಸಲು ಸಾಧ್ಯವಾಗದೆ ಇರುವುದನ್ನು ತಮ್ಮ ಮಕ್ಕಳ ಮೂಲಕ ಸಾಧಿಸುವ ಪ್ರಯತ್ನ ಮಾಡುತ್ತಾರೆ. ತಮ್ಮ ಆಸಕ್ತಿಯ ವಿಷಯವನ್ನು ಮಕ್ಕಳ ಮೇಲೆ ಹೇರುವುದು ಸರಿಯಲ್ಲ, ಅವರಿಗೆ ಅವರದ್ದೇ ಆದ ಆಸಕ್ತಿಗಳು ಇರುತ್ತವೆ. ಹಾಗಾಗಿ ಮಕ್ಕಳ ಆಸಕ್ತಿಗಳು ಏನು ಎಂಬುದನ್ನು ಗುರುತಿಸಿ ಅವರಿಗೆ ಶಿಕ್ಷಣ ಕೊಡಿಸಬೇಕು ಎಂದು ಸಲಹೆ ನೀಡಿದರು.

    ಕಾರ್ಯಕ್ರಮದಲ್ಲಿ ವಿದ್ಯಾಸಂಸ್ಥೆಯ ಸಂಸ್ಥಾಪಕ ಕೌಟಿಲ್ಯ ರಘು, ಸಹ ಸಂಸ್ಥಾಪಕ ಕೌಟಿಲ್ಯ, ಸ್ಕೂಲ್ ಫೆಸಿಲೇಟರ್ ಚೇತನಾ, ಉಪ ಪ್ರಾಂಶುಪಾಲರಾದ ಶೋಭಿತಾ ಆರಾಧ್ಯ, ಶಿಕ್ಷಣ ಸಂಯೋಜಕಿ ಶಾಲಿನಿ, ಬೆಂಗಳೂರಿನ ಖಾಸಗಿ ಶಾಲೆಯ ಪ್ರಾಂಶುಪಾಲರಾದ ಸವಿತಾ ಹಾಗೂ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts