More

    ಮೋದಿ ಮುಖ ನೋಡಿದೊಡನೆ ಭಯ ಹೋಯ್ತು…

    ಬೆಂಗಳೂರು: ಆರಂಭದಲ್ಲಿ ನನಗೆ ತುಂಭಾ ಭಯ ಆಗಿತ್ತು. ಆದರೆ, ಮೋದಿ ಅವರ ಮುಖ ನೋಡಿದ ಮೇಲೆ ಭಯ ಮಾಯವಾಯಿತು. ನಂತರ ಸರಳವಾಗಿ ಮಾತನಾಡಲು ಆರಂಭಿಸಿದೆ. ಟಿ.ವಿ.ಯಲ್ಲಿ ಪ್ರಧಾನಿ ಅವರನ್ನು ನೋಡಿದ್ದ ನನಗೆ ಅವರೊಂದಿಗೆ ಮಾತನಾಡಲು ಅವಕಾಶ ಸಿಕ್ಕದ್ದು ನನ್ನ ಪುಣ್ಯ….

    ಪ್ರಧಾನಿ ಮೋದಿ ಅವರ ಪರೀಕ್ಷಾ ಪೇ ಚರ್ಚೆಯಲ್ಲಿ ರಾಜ್ಯವನ್ನು ಪ್ರತಿನಿಧಿಸಿದ್ದ ಚಿತ್ರದುರ್ಗದ ಆದರ್ಶ ವಿಶ್ವವಿದ್ಯಾಲಯದ 9ನೇ ತರಗತಿ ವಿದ್ಯಾರ್ಥಿನಿ ಎಲ್.ಅಲೀಶಾ ವಿಜಯವಾಣಿ ಜತೆ ತಮ್ಮ ಅನುಭವವನ್ನು ಹಂಚಿಕೊಂಡರು.

    ನನಗೆ ಮೋದಿ ಅವರಿಗೆ ಪ್ರಶ್ನೆ ಕೇಳುವ ಅವಕಾಶ ಸಿಕ್ಕಿರಲಿಲ್ಲ. ಆದರೆ, ಆನಂತರ ವಿವೇಕಾನಂದ, ಸರ್ದಾರ್ ವಲ್ಲಭಾಯಿ ಪಟೇಲ್ ಇವರ ಜೀವನ ಸಾಧನೆಯ ಕುರಿತು ವಿಶ್ಲೇಷಣೆ ಮಾಡುವ ಅವಕಾಶ ಸಿಕ್ಕಿತ್ತು. ಪ್ರಧಾನ ಮಂತ್ರಿ ಅವರು ನನ್ನ ಬಳಿ ಬಂದಾಗ ನನಗೆ ಭಯವಾಯಿತು. ನಡುಕ ಆರಂಭವಾಯಿತು. ಆದರೆ, ಅವರ ಮುಖ ನೋಡಿದ ತಕ್ಷಣ ಎಲ್ಲವೂ ಮಾಯವಾಯಿತು. ಸಿಕ್ಕ ಅವಕಾಶವೇ ನನ್ನ ಭಾಗ್ಯವೆಂದು ತಿಳಿದು ಅವರಿಗೆ ಸರ್ದಾರ್ ಅವರ ಜೀವನ ಶೈಲಿ ಮತ್ತು ರಾಷ್ಟ್ರಕ್ಕೆ ನೀಡಿದ ಕೊಡುಗೆಯನ್ನು ತಿಳಿಸಿದೆ. ಎಲ್ಲವನ್ನೂ ಶಾಂತ ಚಿತ್ತವಾಗಿ ಆಲಿಸಿದ ಅವರು ನನಗೆ ಹಸ್ತಲಾಘವ ನೀಡಿ ಬೆಸ್ಟ್ ಆಫ್ ಲಕ್ ಹೇಳಿದರು. ನಾನು ಮಧ್ಯಮ ವರ್ಗದ ಕುಟುಂಬದಿಂದ ಬಂದವಳು. ನನ್ನ ತಂದೆ ಸಣ್ಣದೊಂದು ವ್ಯಾಪಾರ ಮಾಡುತ್ತಾರೆ. ನನ್ನ ಅಮ್ಮ ಗೃಹಿಣಿ. ನಾನೇ ಹಿರಿ ಮಗಳು. ಇಬ್ಬರು ತಂಗಿಯರಿದ್ದಾರೆ. ಆದರ್ಶ ವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದೇನೆ. ನಾನು ಪರೀಕ್ಷಾ ಪೇ ಚರ್ಚೆಯಲ್ಲಿ ಭಾಗವಹಿಸಲು ಪ್ರಬಂಧ ಬರೆದಿದ್ದೆ. ಆ ಪ್ರಬಂಧವನ್ನು ನಮ್ಮ ಶಿಕ್ಷಕರು ಆನ್​ಲೈನ್ ಮೂಲಕ ಕಳುಹಿಸಿದ್ದರು. ಅನಂತರ ಆಯ್ಕೆಯಾಗಿದ್ದರಿಂದ ದೆಹಲಿಗೆ ಬಂದೆ. ಆದರೆ, ನನಗೆ ಮೋದಿ ಅವರೊಂದಿಗೆ ಮಾತನಾಡುವ ಅವಕಾಶ ಸಿಗುತ್ತದೆ ಎಂದು ಭಾವಿಸಿರಲಿಲ್ಲ. ಸಿಕ್ಕಿದ್ದು, ಅತೀವ ಸಂತಸ ತಂದಿದೆ ಎಂದರು.

    ನಿರ್ಧಾರ ಮಾಡಿಲ್ಲ: ಮುಂದೆ ಪಿಯುನಲ್ಲಿ ವಿಜ್ಞಾನ ವಿಷಯ ತೆಗೆದುಕೊಂಡು ವ್ಯಾಸಂಗ ಮಾಡಲು ಬಯಸಿದ್ದೇನೆ. ಆನಂತರ ನನಗೆ ಏರೋನಾಟಿಕ್ಸ್ ಕ್ಷೇತ್ರ ಹಾಗೂ ಜೈವಿಕ ವಿಜ್ಞಾನದಲ್ಲಿ ಏನಾದರೂ ವ್ಯಾಸಂಗ ಮಾಡಬೇಕೆಂದುಕೊಂಡಿದ್ದೇನೆ. ಆದರೆ, ನಿಖರವಾಗಿ ಇನ್ನೂ ಏನೂ ಆಲೋಚನೆ ಮಾಡಿಲ್ಲ ಎಂದು ಅಲೀಶಾ ಹೇಳಿಕೊಂಡಿದ್ದಾರೆ.

    ರಾಜ್ಯದಿಂದ 42 ವಿದ್ಯಾರ್ಥಿಗಳು

    ದೇಶದ ವಿವಿಧೆಡೆಗಳಿಂದ 9 ರಿಂದ 12 ನೇ ತರಗತಿಯ ಅಂದಾಜು 2 ಸಾವಿರ ವಿದ್ಯಾರ್ಥಿಗಳು, ಪಾಲಕರು ಮತ್ತು ಶಿಕ್ಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ರಾಜ್ಯದಿಂದ 42 ವಿದ್ಯಾರ್ಥಿಗಳು ಆಯ್ಕೆಯಾಗಿದ್ದರು. ಇವರೊಂದಿಗೆ 11 ಬೆಂಗಾವಲು ಶಿಕ್ಷಕರು ಮತ್ತು ಇತರೆ 10 ಶಿಕ್ಷಕರಿಗೆ ಭಾಗವಹಿಸಲು ಅವಕಾಶ ನೀಡಿದ್ದರು. ನಮ್ಮ ಶಾಲೆಯಿಂದ ಒಬ್ಬ ವಿದ್ಯಾರ್ಥಿ ಸಹ ಆಯ್ಕೆಯಾಗಿದ್ದರಿಂದ ನಾನು ಹೋಗಿದ್ದೆ. ಪ್ರತಿ ವಿದ್ಯಾರ್ಥಿಗೆ ಪೆನ್​ಡ್ರೖೆವ್, ನೋಟ್ ಪ್ಯಾಡ್, ಪೆನ್ ಅನ್ನು ನೀಡಿದ್ದಾರೆ. 2 -3 ಸಾವಿರ ಜನರು ಈ ಕಾರ್ಯಕ್ರಮದಲ್ಲಿ ಸೇರಿದ್ದಾರೆ. ವಸತಿ, ಊಟಕ್ಕೂ ಯಾವುದೇ ತೊಂದರೆ ಇಲ್ಲ. ಎಲ್ಲವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ ಎಂದು ನೆಲಮಂಗಲದ ಬೈರನಾಯಕನ ಹಳ್ಳಿಯ ಸರ್ಕಾರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ಸಿದ್ದರಾಜು ವಿಜಯವಾಣಿಗೆ ಮಾಹಿತಿ ನೀಡಿದರು.

    ಅವಕಾಶ ಸಿಗದಿದ್ದಕ್ಕೆ ಬೇಸರ

    ಚಿಕ್ಕಮಗಳೂರು: ಕರ್ನಾಟಕದಿಂದ ಒಟ್ಟು 42 ವಿದ್ಯಾರ್ಥಿಗಳು ಪರೀಕ್ಷಾ ಪೆ ಚರ್ಚಾದಲ್ಲಿ ಭಾಗಿಯಾಗಿದ್ದು, ಯಾವ ವಿದ್ಯಾರ್ಥಿಗೂ ಪ್ರಧಾನಿ ಜತೆ ಸಂವಾದ ನಡೆಸಲು ಅವಕಾಶ ಸಿಗದಿರುವುದು ಬೇಸರ ತಂದಿದೆ ಎಂದು ಚಿಕ್ಕಮಗಳೂರು ಜಿಲ್ಲೆಯನ್ನು ಪ್ರತಿನಿಧಿಸಿದ್ದ, ಸಿಗೋಡು ಜವಹರಲಾಲ್ ನೆಹರು ನವೋದಯ ವಿವಿಯ 9ನೇ ತರಗತಿ ವಿದ್ಯಾರ್ಥಿನಿ ಅಮೂಲ್ಯ ಹೇಳಿದ್ದಾಳೆ. ಹೆಸರು ಬರೆದು ಚೀಟಿ ಹಾಕಿ ಎಂಟು ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿದರು. ಇದರಲ್ಲಿ ಮೂವರು ಅನುಪಯುಕ್ತ ಪ್ರಶ್ನೆ ಕೇಳಿದರು. ಪ್ರಶ್ನೆಗಳ ಮೌಲ್ಯದ ಆಧಾರದ ಮೇಲೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿದ್ದರೆ ಕಾರ್ಯಕ್ರಮ ಮತ್ತಷ್ಟು ಮೌಲ್ಯಭರಿತವಾಗುತ್ತಿತ್ತು ಎಂದಿದ್ದಾಳೆ. ಆದರೂ ಪ್ರಧಾನಿ ಅವರು ವಿದ್ಯಾರ್ಥಿಗಳ ಪ್ರಶ್ನೆಗೆ ಉತ್ತರಿಸುವ ಶೈಲಿ ತುಂಬಾ ಇಷ್ಟವಾಯಿತು ಎಂದಿದ್ದಾಳೆ.

    | ದೇವರಾಜ್ ಎಲ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts