More

    ತೆರಿಗೆ ಪಾವತಿಸಲು ಪರದಾಟ

    ರಾಜೇಂದ್ರ ಶಿಂಗನಮನೆ ಶಿರಸಿ
    ಆನ್​ಲೈನ್ ಮೂಲಕ ತೆರಿಗೆ ಪಾವತಿಸಲು ನಗರಸಭೆ ವ್ಯಾಪ್ತಿಯ ನಿವಾಸಿಗಳಿಗೆ ವ್ಯವಸ್ಥೆ ಮಾಡಲಾಗಿದೆ. ತಾಂತ್ರಿಕ ಕಾರಣದಿಂದ ಆನ್​ಲೈನ್ ಸೇವೆ ಸಮರ್ಪಕವಾಗಿ ಲಭ್ಯವಾಗುತ್ತಿಲ್ಲ. ಇದರಿಂದ ತೆರಿಗೆ ಪಾವತಿದಾರರಿಗೆ ತೊಂದರೆಯಾಗುತ್ತಿದೆ.
    ಕೋವಿಡ್ ಕಾರಣ ಹಾಗೂ ಆಡಳಿತ ಸರಳೀಕರಿಸುವ ಉದ್ದೇಶದಿಂದ ಇಲ್ಲಿನ ನಗರಸಭೆಯಲ್ಲಿ 2021-22ನೇ ಸಾಲಿನ ತೆರಿಗೆ ಭರಣ ಮಾಡಲು ಆನ್​ಲೈನ್ ವ್ಯವಸ್ಥೆ ಜಾರಿಗೊಳಿಸಿದೆ. ಆದರೆ, ತೆರಿಗೆದಾರರು ತಂತ್ರಾಂಶ ಬಳಕೆಗೆ ಮುಂದಾದರೆ ಅದು ತೆರೆದುಕೊಳ್ಳುತ್ತಲೇ ಇಲ್ಲ. ಹೀಗಾಗಿ ನಗರಸಭೆಗೆ ನಿತ್ಯ ಅಲೆಯುವ ಸ್ಥಿತಿ ಎದುರಾಗಿದೆ.
    ಅವ್ಯವಸ್ಥೆ: ನಗರಸಭೆ ವ್ಯಾಪ್ತಿಯಲ್ಲಿ 16 ಸಾವಿರಕ್ಕೂ ಅಧಿಕ ಕಟ್ಟಡ, 10 ಸಾವಿರಕ್ಕೂ ಹೆಚ್ಚಿನ ನೀರಿನ ಸಂಪರ್ಕ ಹೊಂದಿದೆ. ಇದರಲ್ಲಿ ಶೇ.40ರಷ್ಟು ಆಸ್ತಿದಾರರು ಹಿರಿಯ ನಾಗರಿಕರಾಗಿದ್ದಾರೆ. ಏ.30ರೊಳಗೆ ತೆರಿಗೆ ಭರಣ ಮಾಡಿದ್ದಲ್ಲಿ ಶೇ.5ರಷ್ಟು ರಿಯಾಯಿತಿ ನೀಡಲಾಗುತ್ತದೆ. ಅಲ್ಲದೆ, ವಾಣಿಜ್ಯ, ವಸತಿ ಕಟ್ಟಡಗಳಿಗೆ ದಂಡರಹಿತವಾಗಿ ಆಸ್ತಿ ತೆರಿಗೆ ತುಂಬಲು ಮೇ, ಜೂನ್ ತಿಂಗಳ ವರೆಗೆ ಅವಕಾಶ ನೀಡಲಾಗಿದೆ. ಶೇ. 5ರ ರಿಯಾಯಿತಿ ಪಡೆಯಲು ಬಹುತೇಕ ಆಸ್ತಿದಾರರು ತೆರಿಗೆ ತುಂಬಲು ಉತ್ಸಾಹ ತೋರುತ್ತಿದ್ದರೂ, ನಗರಾಡಳಿತದಿಂದ ಸಮರ್ಪಕ ವ್ಯವಸ್ಥೆಯಿಲ್ಲದೆ ಬೇಸರಗೊಂಡಿದ್ದಾರೆ.
    ಹಿರಿಯರಿಗೆ ತೊಂದರೆ: ಆನ್​ಲೈನ್ ವ್ಯವಸ್ಥೆ ಕೈಕೊಡುತ್ತಿರುವ ಕಾರಣಕ್ಕೆ ಬಹುತೇಕ ಆಸ್ತಿ ಮಾಲೀಕರು ನಗರಸಭೆಗೆ ಆಗಮಿಸುತ್ತಿದ್ದಾರೆ. ಆದರೆ, ನಗರಸಭೆಯಲ್ಲಿ ತೆರಿಗೆ/ ಶುಲ್ಕ ಸಂಗ್ರಹಕ್ಕೆ ನಗದು ಸ್ವೀಕೃತಿ ವಿಭಾಗ ಇಲ್ಲ. ಇದರಿಂದ ಹೆಚ್ಚು ಕಿರಿಕಿರಿ ಅನುಭವಿಸುತ್ತಿರುವವರು ಹಿರಿಯ ನಾಗರಿಕರು. ಸದ್ಯ ಬಿಸಿಲಿನ ತಾಪ, ಕರೊನಾ ಸೋಂಕಿನ ಭೀತಿ ನಡುವೆ ಹಿರಿಯರು ತೆರಿಗೆ ಪಾವತಿಗೆ ಅಲೆದಾಡುತ್ತಿದ್ದಾರೆ. ಜತೆಗೆ ಬ್ಯಾಂಕ್​ಗಳಲ್ಲಿ ತಾಸುಗಟ್ಟಲೆ ಸರದಿ ಸಾಲಿನಲ್ಲಿ ನಿಂತು ಕೆಲಸ ಮಾಡಿಸಿಕೊಳ್ಳಬೇಕು. ಕೆಲವೊಮ್ಮೆ ಅರ್ಧ ದಿನವೇ ಕಳೆದು ಹೋಗುತ್ತಿದೆ. ಇತ್ತೀಚೆಗೆ ನೀರಿನ ಶುಲ್ಕವನ್ನೂ ಬ್ಯಾಂಕ್​ಗೆ ಪಾವತಿಸಬೇಕು. ಇದಕ್ಕೂ ಮುನ್ನ ನಗರಸಭೆಗೆ ಆಗಮಿಸಿ ಅಲ್ಲಿಂದ ಚಲನ್ ಪಡೆಯಬೇಕು. ಪಾವತಿಸಿದ ನಂತರ ಚಲನ್ ಅನ್ನು ನಗರಸಭೆಗೆ ತಲುಪಿಸಬೇಕು. ಈ ನಿಯಮಗಳಿಂದಾಗಿ ಕಚೇರಿಯಿಂದ ಕಚೇರಿಗೆ ಅಲೆದು ಹಿರಿ ಜೀವಗಳು ಸುಸ್ತಾಗುತ್ತಿವೆ.


    ತೆರಿಗೆ ತುಂಬಲು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಆನ್​ಲೈನ್​ನಲ್ಲಿ ತೆರಿಗೆ/ಶುಲ್ಕ ಪಾವತಿಗೆ ಸಮಸ್ಯೆಯಾಗಿದೆ. ಕರೊನಾ ನಡುವೆ ತಾಸುಗಟ್ಟಲೆ ಕಾಯಲು ಭಯವಾಗುತ್ತದೆ. ಹೀಗಾಗಿ, ಆನ್​ಲೈನ್ ವ್ಯವಸ್ಥೆ ಸುಧಾರಿಸುವ ಜತೆಗೆ ನಗರಸಭೆ ಆವರಣದಲ್ಲೇ ನಗದು ಸ್ವೀಕೃತಿ ವಿಭಾಗ ತೆರೆದು ಅನುಕೂಲ ಮಾಡಿಕೊಡಬೇಕು. ಕೋಟ್ಯಂತರ ರೂಪಾಯಿ ತೆರಿಗೆ, ನೀರಿನ ಶುಲ್ಕ ಇತ್ಯಾದಿ ಹರಿದು ಬರುವಾಗ ಪ್ರತ್ಯೇಕ ಕೌಂಟರ್ ತೆರೆಯುವುದು ಸಂಸ್ಥೆಗೆ ಹೊರೆಯಾಗದು.
    | ಸುಧಾಕರ ಹೆಗಡೆ ಹಿರಿಯ ನಾಗರಿಕ


    ಆನ್​ಲೈನ್ ವ್ಯವಸ್ಥೆ ದಿನದಲ್ಲಿ ಕೆಲವೊಮ್ಮೆ ಮಾತ್ರ ಕೈಕೊಡುತ್ತಿದೆ. ಆದರೆ, ಈವರೆಗೆ 35 ಲಕ್ಷ ರೂಪಾಯಿ ತೆರಿಗೆ ಪಾವತಿಯಾಗಿದೆ. ಈ ವ್ಯವಸ್ಥೆಯಲ್ಲಿ ಹೆಚ್ಚಿನ ಸಮಸ್ಯೆಯಿಲ್ಲ. ನಾಗರಿಕರು ಹೊಂದಾಣಿಕೆ ಮಾಡಿಕೊಂಡು ತೆರಿಗೆ ತುಂಬಬೇಕು.
    | ರಮೇಶ ನಾಯಕ ಪೌರಾಯುಕ್ತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts