More

    ಗರಿಗಳ ಭಾನುವಾರ ಸರಳ ಆಚರಣೆ

    ಮಂಗಳೂರು: ಈಸ್ಟರ್ ಭಾನುವಾರಕ್ಕೆ ಹಿಂದಿನ ಗರಿಗಳ ಭಾನುವಾರವನ್ನು ದ.ಕ.ಜಿಲ್ಲಾದ್ಯಂತ ಕೋವಿಡ್ ಹಿನ್ನೆಲೆಯಲ್ಲಿ ಸರಳವಾಗಿ ಆಚರಿಸಲಾಯಿತು.
    ನಗರದ ರೋಸಾರಿಯೋ ಕ್ಯಾಥಡ್ರಲ್, ಮಿಲಾಗ್ರಿಸ್ ಚರ್ಚ್, ವೆಲೆನ್ಸಿಯಾ, ಬೆಂದೂರ್, ಜಪ್ಪು, ಉರ್ವ, ಕುಲಶೇಖರ ಸೇರಿದಂತೆ ಹಲವು ಚರ್ಚ್‌ಗಳಲ್ಲಿ ಬಲಿಪೂಜೆ ನಡೆಯಿತು. ಈಸ್ಟರ್ ಸಂಡೇಯೊಂದಿಗೆ ಪವಿತ್ರವಾರ ಕೊನೆಗೊಳ್ಳಲಿದ್ದು, ಶುಕ್ರವಾರ ಗುಡ್‌ಫ್ರೈಡೇ ಆಚರಣೆ ನಡೆಯಲಿದೆ.

    ಮಂಗಳೂರು ಬಿಷಪ್ ಡಾ.ಪೀಟರ್ ಪಾವ್ಲ್ ಸಾಲ್ಡಾನಾ ಅವರು ರೊಸಾರಿಯೊ ಕೆಥಡ್ರಲ್‌ನಲ್ಲಿ ಬಲಿಪೂಜೆ ನೆರವೇರಿಸಿದರು. ಕೆಥಡ್ರಲ್‌ನ ರೆಕ್ಟರ್ ಆಲ್ಫ್ರೆಡ್ ಜೆ.ಪಿಂಟೊ, ಸಹಾಯಕ ಗುರು ವಿನೋದ್ ಲೋಬಿ, ರೊಸಾರಿಯೊ ಪಿಯು ಕಾಲೇಜಿನ ಪ್ರಾಂಶುಪಾಲ ವಿಕ್ಟರ್ ಡಿ’ಸೋಜ ಉಪಸ್ಥಿತರಿದ್ದರು.
    ಕೆಥಡ್ರಲ್‌ನ ಮುಂಭಾಗ ತೆಂಗಿನ ಗರಿಗಳನ್ನು ಬಿಷಪ್ ಅವರು ಆಶೀರ್ವದಿಸಿ, ಗರಿಗಳನ್ನು ಹಿಡಿದು ಕೆಥಡ್ರಲ್‌ನ ಒಳಗೆ ಪ್ರವೇಶಿಸಿದರು. ಬಲಿ ಪೂಜೆಯ ವೇದಿಕೆಯಲ್ಲಿ ಬಿಷಪ್ ಮತ್ತು ಜತೆಗಿದ್ದ ಇಬ್ಬರು ಗುರುಗಳು ಕ್ರೈಸ್ತರ ಪವಿತ್ರ ಗ್ರಂಥ ಬೈಬಲ್ ವಾಚನವನ್ನು ನೆರವೇರಿಸಿದರು. ಬಳಿಕ ಗರಿಗಳನ್ನು ವಿತರಿಸಲಾಯಿತು.

    ಆಚರಣೆ ಹಿನ್ನೆಲೆ: ಯೇಸು ಕ್ರಿಸ್ತರು ಶುಕ್ರವಾರ ಶಿಲುಬೆಯಲ್ಲಿ ಮರಣವನ್ನಪ್ಪುವ ಮುಂಚಿನ ಭಾನುವಾರ ಜೆರುಸಲೆಮಿಗೆ ಪ್ರವೇಶಿಸುವಾಗ ಅಲ್ಲಿನ ಜನರು ಒಲಿವ್ ಮರದ ಗರಿಗಳನ್ನು ಹಿಡಿದು ಪ್ರೀತಿಯಿಂದ ಸ್ವಾಗತಿಸಿದ ಘಟನೆಯ ಸಂಕೇತವಾಗಿ ಗರಿಗಳ ಭಾನುವಾರವನ್ನು ಆಚರಿಸಲಾಗುತ್ತಿದೆ. ಕರಾವಳಿಯಲ್ಲಿ ತೆಂಗಿನ ಗರಿಗಳನ್ನು ಹಿಡಿದು ಪ್ರಾರ್ಥನೆ ನಡೆಸಲಾಗುತ್ತಿದೆ. ಗರಿಗಳ ಭಾನುವಾರದಿಂದ ಮೊದಲ್ಗೊಂಡು ಪವಿತ್ರ ಸಪ್ತಾಹ ಆರಂಭವಾಗುತ್ತದೆ. ಗುರುವಾರ ಯೇಸು ಕ್ರಿಸ್ತರ ಕೊನೆಯ ಭೋಜನದ ದಿನ, ಶುಭ ಶುಕ್ರವಾರ ಯೇಸು ಕ್ರಿಸ್ತರನ್ನು ಶಿಲುಬೆಗೇರಿಸಿದ ದಿನ, ಶನಿವಾರ ರಾತ್ರಿ ಈಸ್ಟರ್ ಹಬ್ಬದ ಜಾಗರಣೆ ಹಾಗೂ ಭಾನುವಾರ ಯೇಸು ಕ್ರಿಸ್ತರ ಪುನರುತ್ಥಾನದ ದಿನದ ಹಬ್ಬವನ್ನು ಆಚರಿಸಲಾಗುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts