More

    ದೊಡ್ಡಣ್ಣನ ದೊಡ್ಡಾಟದಲ್ಲಿ ಪಾಕಿಸ್ತಾನದ ಹಾಡುಪಾಡು

    ಆಗ ಪಾಕಿಸ್ತಾನದ ಹಿತಾಸಕ್ತಿಗೆ ಪ್ರಥಮ ಆದ್ಯತೆ ನೀಡಿ ನಂತರ ಭಾರತದ ಹಿತಾಸಕ್ತಿಯತ್ತ ಗಮನ ನೀಡಬೇಕು ಎನ್ನುವುದು ವಾಷಿಂಗ್​ಟನ್​ನ ನೀತಿಯಾಗಿದ್ದರೆ ಇಂದು ಭಾರತದ ಹಿತಾಸಕ್ತಿಗೆ ಪ್ರಥಮ ಆದ್ಯತೆ ನೀಡಬೇಕು, ನಂತರ ಪಾಕಿಸ್ತಾನದ ಹಿತಾಸಕ್ತಿಯತ್ತಲೂ ಗಮನ ನೀಡಬೇಕು ಎನ್ನುವುದು ಅಮೆರಿಕದ ಜೋ ಬೈಡೆನ್ ಸರ್ಕಾರಕ್ಕಾಗಿರುವ ಜ್ಞಾನೋದಯ.

    ದೊಡ್ಡಣ್ಣನ ದೊಡ್ಡಾಟದಲ್ಲಿ ಪಾಕಿಸ್ತಾನದ ಹಾಡುಪಾಡುಭಾರತೀಯ ಉಪಖಂಡವನ್ನು ಕೇಂದ್ರವಾಗಿಟ್ಟುಕೊಂಡು ಜಾಗತಿಕ ರಾಜಕಾರಣವನ್ನು ಅವಲೋಕಿಸಹೊರಟರೆ, ಇದು ನಿಜವೇ ಎಂದು ಕಣ್ಣುಜ್ಜಿಕೊಂಡು ನೋಡುವಂತಹ ಎರಡು ಅಭೂತಪೂರ್ವ ಬೆಳವಣಿಗೆಗಳು ನಮ್ಮ ಗಮನ ಸೆಳೆಯುತ್ತಿವೆ.

    ಒಂದು- ಅಮೆರಿಕ ತನ್ನ ಲಾಗಾಯ್ತಿನ ಪಾಕಿಸ್ತಾನ-ಪರ ನೀತಿಯನ್ನು ಮಾರ್ಪಡಿಸಿ ಭಾರತದ ಪರವಾಗಿ ತಿರುಗಿದೆ. ಆ ಪ್ರಕಾರ ಪಾಕಿಸ್ತಾನಕ್ಕೆ ಅನುಕೂಲವಾಗುವಂತೆ ಭಾರತ ವರ್ತಿಸಬೇಕೆಂಬ ವಾಷಿಂಗ್​ಟನ್​ನ ಇಂಗಿತವೂ ತಿರುವುಮುರುವಾಗಿ ಭಾರತಕ್ಕೆ ಅನುಕೂಲವಾಗುವಂತೆ ಪಾಕಿಸ್ತಾನ ವರ್ತಿಸಬೇಕೆಂದು ‘ದೊಡ್ಡಣ್ಣ’ ಇಸ್ಲಾಮಾಬಾದ್​ಗೆ ತಾಕೀತು ಮಾಡುತ್ತಿದ್ದಾನೆ ಮತ್ತು ತನ್ನ ಮಾತನ್ನು ಕೇಳುವಂತಹ ಸರ್ಕಾರವೇ ಇಸ್ಲಾಮಾಬಾದ್​ನಲ್ಲಿ ಇರುವಂತೆ ನೋಡಿಕೊಳ್ಳುತ್ತಲೂ ಇದ್ದಾನೆ.

    ಎರಡು- ಸದ್ಯಕ್ಕೆ ಪಾಕಿಸ್ತಾನದ ಚಿಂತನೆಗಳೂ ಅಮೆರಿಕದ ಇಂಗಿತಕ್ಕನುಗುಣವಾಗಿ ಭಾರತದ ಪರವಾಗಿ ತಿರುಗಿವೆ. ‘ಭಾರತದ ಜತೆ ಯುದ್ಧ ಮಾಡಿ ನಮಗೇನೂ ಪ್ರಯೋಜವವಾಗಿಲ್ಲ, ಇನ್ನು ಶಾಂತಿಯತ್ತ ಗಮನ ನೀಡುವುದು ನಮಗೇ ಒಳಿತು’ ಎಂದು ವರ್ಷದ ಹಿಂದೆ ಹೇಳಿದ ಶೆಹ್​ಬಾಜ್ ಶರೀಫ್ ಮತ್ತೆ ಪ್ರಧಾನಮಂತ್ರಿಯಾಗಿದ್ದಾರೆ, ದಶಕದ ಹಿಂದೆ ತಮ್ಮ ಮೊದಲ ಅಧ್ಯಕ್ಷಾವಧಿಯಲ್ಲಿ ಭಾರತದ ವಿರುದ್ಧ ಕುಕೃತ್ಯಗಳನ್ನೆಸಗುತ್ತಿದ್ದ ಭಯೋತ್ಪಾದಕರ ವಿರುದ್ಧ ಕಿಡಿ ಕಾರಿದ್ದ ಆಸಿಫ್ ಆಲಿ ಜರ್ದಾರಿ ಈಗ ಮತ್ತೆ ಅಧ್ಯಕ್ಷರಾಗಿದ್ದಾರೆ. ಇವೆರಡರತ್ತ ಇಣುಕುನೋಟ ಹರಿಸೋಣ.

    ದ್ವಿತೀಯ ಮಹಾಯುದ್ಧದ ದಿನಗಳಲ್ಲಿ ಅಮೆರಿಕ ಮತ್ತು ಸೋವಿಯೆತ್ ಯೂನಿಯನ್ ನಡುವೆ ಉಂಟಾಗಿದ್ದ ಅನುಕೂಲಸಿಂಧು ಮದುವೆ ಯುದ್ಧ ಮುಗಿಯುತ್ತಿದ್ದಂತೇ ಮುರಿದುಬಿದ್ದು ಶೀತಲಸಮರ ಆರಂಭಗೊಂಡಾಗ ಯೂರೋಪ್​ನಲ್ಲಿ ನಾರ್ತ್ ಅಟ್ಲಾಂಟಿಕ್ ಟ್ರೀಟಿ ಆರ್ಗನೈಜೇಷನ್ (ನ್ಯಾಟೋ) ಸೇನಾಕೂಟವನ್ನು ಕಟ್ಟಲು 1947ರ ಪ್ರಾರಂಭದಲ್ಲಿ ಪಶ್ಚಿಮ ಯೂರೋಪಿಯನ್ ರಾಷ್ಟ್ರಗಳ ಜತೆ ಮಾತುಕತೆ ಆರಂಭಿಸಿದ ಅಮೆರಿಕ ಅಂತಹದೇ ಸೇನಾಕೂಟದ ಅಗತ್ಯ ಮುಂದೆ ಏಷ್ಯಾದಲ್ಲೂ ಉದ್ಭವವಾಗಬಹುದೆಂದು ಲೆಕ್ಕಹಾಕಿ, ಆಗ ಅಂತಃಕಲಹದಲ್ಲಿ ಬೇಯುತ್ತಿದ್ದ ಚೀನಾದತ್ತ ಗಮನ ಹರಿಸಿತು. ಸೋವಿಯೆತ್ ಯೂನಿಯನ್ ಜತೆ ದೀರ್ಘ ಗಡಿ ಹೊಂದಿದ್ದ ಹಾಗೂ ‘ಎಲ್ಲದರಲ್ಲೂ’ ಬೃಹತ್ತಾಗಿದ್ದ ಚೀನಾ ತನಗೆ ಸೂಕ್ತ ಸಹಯೋಗಿಯಾಗಬಹುದೆಂದು ರ್ತಸಿದ ಅಮೆರಿಕ ಚೀನೀ ಅಂತರ್ಯುದ್ಧದಲ್ಲಿ ಕಮ್ಯೂನಿಸ್ಟರ ವಿರುದ್ಧ ಸೆಣಸುತ್ತಿದ್ದ ಕ್ಯೋಮಿಂನ್​ಟಾಂಗ್ ಸರ್ಕಾರದ ಪರವಹಿಸಿತು. ಆದರೆ ಸೋವಿಯೆತ್ ಬೆಂಬಲ ಪಡೆದ ಕಮ್ಯೂನಿಸ್ಟರು ಅಂತರ್ಯುದ್ಧದಲ್ಲಿ ಜಯ ಗಳಿಸಿ ಅಕ್ಟೋಬರ್ 1, 1947ರಂದು ಪೀಕಿಂಗ್​ನಲ್ಲಿ ಮಾವೋ ತ್ಸೆ ತುಂಗ್ ನಾಯಕತ್ವದ ಕಮ್ಯೂನಿಸ್ಟ್ ಸರ್ಕಾರ ಸ್ಥಾಪನೆಯಾದಾಗ ಮತ್ತು ಮುಂದಿನ ನಾಲ್ಕೇ ತಿಂಗಳಲ್ಲಿ ಚೀನಾ ಮತ್ತು ಸೋವಿಯೆತ್ ಯೂನಿಯನ್​ಗಳ ನಡುವೆಯೇ ಸೇನಾಸಹಕಾರ ಒಪ್ಪಂದ ಏರ್ಪಟ್ಟಾಗ ಅಮೆರಿಕದ ಲೆಕ್ಕಾಚಾರಗಳೆಲ್ಲವೂ ತಲೆಕೆಳಗಾದವು. ಆಗ ಅಮೆರಿಕ ಹೊರಳಿದ್ದು ಭಾರತದ ಕಡೆಗೆ.

    ಯೂರೋಪಿಯನ್ ವಸಾಹತುಶಾಹಿ ವ್ಯವಸ್ಥೆ ವೇಗವಾಗಿ ಕುಸಿಯುತ್ತಿದ್ದ ದಿನಗಳು ಅವು. ಸ್ವತಂತ್ರಗೊಳ್ಳತೊಡಗಿದ್ದ ಏಷ್ಯಾ ಮತ್ತು ಆಫ್ರಿಕಾದ ಬಡದೇಶಗಳ ಮುಂದಿದ್ದ ರಾಜಕೀಯ ಸ್ಥಿರತೆ ಹಾಗೂ ಆರ್ಥಿಕ ಅಭ್ಯುದಯದ ಮಾದರಿಗಳು ಆಗ ಎರಡು. ಒಂದು- ಸೋವಿಯೆತ್ ಯೂನಿಯನ್ ಮತ್ತು ಚೀನಾ ಪ್ರತಿಪಾದಿಸುತ್ತಿದ್ದ ಏಕಪಕ್ಷದ ಸರ್ವಾಧಿಕಾರ; ಉತ್ಪಾದನಾ ಸಾಧನಗಳೆಲ್ಲವೂ ಸರ್ಕಾರದ ಒಡೆತನದಲ್ಲೇ ಇರುವ, ಆರ್ಥಿಕ ಕ್ಷೇತ್ರದಲ್ಲಿ ಖಾಸಗಿ ಪಾತ್ರವೇ ಇಲ್ಲದ ಕಮ್ಯೂನಿಸ್ಟ್ ವ್ಯವಸ್ಥೆ. ಎರಡು- ಅಮೆರಿಕ ಮತ್ತದರ ಪಶ್ಚಿಮ ಯೂರೋಪಿಯನ್ ಸಹಯೋಗಿಗಳು ಪ್ರತಿಪಾದಿಸುತ್ತಿದ್ದ ಪ್ರಜಾಪ್ರಭುತ್ವವಾದಿ ರಾಜಕೀಯ ವ್ಯವಸ್ಥೆ ಮತ್ತು ಸರ್ಕಾರದ ಪಾತ್ರ ಸೀಮಿತವಾಗಿದ್ದು ಖಾಸಗಿ ಪಾತ್ರ ಪ್ರಧಾನವಾಗಿರುವ ಮುಕ್ತ ಬಂಡವಾಳಶಾಹಿ ವ್ಯವಸ್ಥೆ. ತಾನು ಪ್ರತಿಪಾದಿಸುತ್ತಿದ್ದ ಪ್ರಜಾಪ್ರಭುತ್ವ ಮತ್ತು ಮುಕ್ತ ಆರ್ಥಿಕ ವ್ಯವಸ್ಥೆಗಳೇ ರಾಜಕೀಯ ಸ್ಥಿರತೆ ಮತ್ತು ಆರ್ಥಿಕ ಪ್ರಗತಿಗೆ ಉತ್ತಮ ಮಾದರಿಗಳು ಎಂದು ಹೊಸ ಸ್ವತಂತ್ರ ರಾಷ್ಟ್ರಗಳ ಮುಂದೆ ಬಿಂಬಿಸಲು ಭಾರತವನ್ನು ಒಂದು ಮಾದರಿ ರಾಷ್ಟ್ರವನ್ನಾಗಿ ಆಯ್ದುಕೊಂಡು ಜಗತ್ತಿನ ಮುಂದೆ ನಿಲ್ಲಿಸುವುದು ಅಮೆರಿಕದ ಲೆಕ್ಕಾಚಾರವಾಗಿತ್ತು. ಆ ಮೂಲಕ ಹೊಸ ದೇಶಗಳು ಕಮ್ಯೂನಿಸ್ಟ್ ವ್ಯವಸ್ಥೆಯತ್ತ ಅಕರ್ಷಿತಗೊಳ್ಳದಂತೆ ಮತ್ತು ಅಂತಾರಾಷ್ಟ್ರೀಯ ರಾಜಕಾರಣದಲ್ಲಿ ಕಮ್ಯೂನಿಸ್ಟ್ ಪ್ರಭಾವ ವೃದ್ಧಿಯಾಗದಂತೆ ತಡೆಯಬಹುದು ಎನ್ನುವುದು ಅಧ್ಯಕ್ಷ ಹ್ಯಾರಿ ಟ್ರೂಮನ್ ಸರ್ಕಾರ ತರ್ಕವಾಗಿತ್ತು. ಅದರೆ ಭಾರತದ ಮೊದಲ ಪ್ರಧಾನಮಂತ್ರಿ ಮತ್ತು ವಿದೇಶಮಂತ್ರಿ ಜವಾಹರ್​ಲಾಲ್ ನೆಹರು ಅಲಿಪ್ತ ನೀತಿಯ ಮಾತಾಡುತ್ತಲೇ ಸೋವಿಯೆತ್ ಯೂನಿಯನ್ ಮತ್ತು ಚೀನಾ ಪರವಾದ ವಿರೋಧಾಭಾಸದ ನೀತಿಗಳನ್ನು ರೂಪಿಸಿಕೊಂಡು ಅಂತಾರಾಷ್ಟ್ರೀಯ ರಂಗದಲ್ಲಿ ಅಮೆರಿಕದ ಮುಖ್ಯ ಟೀಕಾಕಾರರಲ್ಲೊಬ್ಬರಾಗಿ ಬೆಳೆಯುವ ಸೂಚನೆ ನೀಡಿದಾಗ ನಿರಾಶರಾದ ಅಧ್ಯಕ್ಷ ಟ್ರೂಮನ್ ಮುಂದೆ ಉಳಿದದ್ದು ಎರಡು ಆಯ್ಕೆಗಳು. ಒಂದು- ಆಗಸ್ಟ್ 1945ರಿಂದಲೂ ತನ್ನ ಸೇನಾ ಆಡಳಿತದಲ್ಲಿದ್ದ ಜಪಾನ್​ಗೆ ಸ್ವಾತಂತ್ರ್ಯ ನೀಡಿ, ಆ ದೇಶವನ್ನು ಪ್ರಜಾಪ್ರಭುತ್ವ ಹಾಗೂ ಮುಕ್ತ ಆರ್ಥಿಕ ವ್ಯವಸ್ಥೆಯ ಮುಖವಾಗಿ ಜಗತ್ತಿನ ಮುಂದೆ ನಿಲ್ಲಿಸುವುದು. ಎರಡು- ಹುಟ್ಟುವುದಕ್ಕೂ ಮೊದಲಿನಿಂದಲೂ ತನ್ನ ಬಂಟನಾಗುವ ಆಸೆ ವ್ಯಕ್ತಪಡಿಸುತ್ತಿದ್ದ, ತಾನು ನಿರ್ಲಕ್ಷಿಸಿದ್ದ ಪಾಕಿಸ್ತಾವವನ್ನು ಹತ್ತಿರ ತೆಗೆದುಕೊಂಡು ಆ ದೇಶದಲ್ಲಿ ಸೇನಾ ನೆಲೆಗಳನ್ನು ಸ್ಥಾಪಿಸುವ ಅವಕಾಶವನ್ನು ಪಡೆದುಕೊಳ್ಳುವುದು. ಮುಂದಿನ ವರ್ಷಗಳಲ್ಲಿ ಆದದ್ದು ಅದೇ.

    ಜಪಾನ್​ನ ಸುರಕ್ಷಾ ಜವಾಬ್ದಾರಿಯನ್ನು ತನ್ನ ಹೆಗಲಿಗೆ ತೆಗೆದುಕೊಂಡ ಅಮೆರಿಕ ಆ ದೇಶ ಆರ್ಥಿಕ ಮಹಾಶಕ್ತಿಯಾಗಿಸಲು ಸಹಕರಿಸಿತು. ಇತ್ತ ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರಗಳನ್ನು ಪೂರೈಸಿ ಅದು ಸುರಕ್ಷೆಯ ವಿಷಯದಲ್ಲಿ ನೆಮ್ಮದಿಗೊಳ್ಳುವಂತೆಯೂ ಮಾಡಿತು. ಇದೆಲ್ಲದರ ಅರ್ಥವೇನೆಂದರೆ ನೆಹರುರ ಹಾನಿಕಾರಕ ನೀತಿಗಳಿಂದಾಗಿ ಭಾರತ ಕಳೆದುಕೊಂಡದ್ದೆಲ್ಲವೂ ಜಪಾನ್ ಮತ್ತು ಪಾಕಿಸ್ತಾನಗಳಿಗೆ ಸಿಕ್ಕಿಬಿಟ್ಟವು.

    ಇಷ್ಟಾಗಿಯೂ ಭಾರತವನ್ನು ಪೂರ್ಣವಾಗಿ ಕಡೆಗಣಿಸಲು ಅಮೆರಿಕ ಹೋಗಲಿಲ್ಲ. ಚೀನಾದ ಪರವಾದ ನೆಹರು ಸರ್ಕಾರದ ನೀತಿ ಮುಂದೆ ಭಾರತಕ್ಕೆ ಹಾನಿಕಾರಕವಾಗುವುದೆಂದು ಮತ್ತೆಮತ್ತೆ ಹೇಳಿದ್ದಲ್ಲದೆ, ಆಗ್ನೇಯ ಏಷ್ಯಾದಲ್ಲಿ ತಾನು ಸ್ಥಾಪಿಸಹೊರಟ ‘ಸೌತ್ ಈಸ್ಟ್ ಏಷ್ಯಾ ಟ್ರೀಟಿ ಆರ್ಗನೈಜೇಷನ್ (ಸಿಯಾಟೋ) ಸೇನಾಕೂಟ’ಕ್ಕೆ ಸೇರುವಂತೆ ಭಾರತವನ್ನು ಆಹ್ವಾನಿಸಿತು. ಆ ಮೂಲಕ ಚೀನೀ ದಾಳಿಯ ವಿರುದ್ಧ ಭಾರತದ ಗಡಿಯನ್ನು ರಕ್ಷಿಸುವ ಜವಾಬ್ದಾರಿ ಸಿಯಾಟೋ ಸೇನಾಕೂಟದ್ದಾಗಿರುತ್ತದೆ ಎಂದೂ ವಿದೇಶಾಂಗ ಕಾರ್ಯದರ್ಶಿ ಜಾನ್ ಫಾಸ್ಟರ್ ಡಲೆಸ್ ಖುದ್ದಾಗಿ ಭಾರತ ಸರ್ಕಾರಕ್ಕೆ ತಿಳಿಸಿದರು. ಆದರೆ ಈಗಲೂ ನೆಹರು ಸರ್ಕಾರದ ನೀತಿ ಋಣಾತ್ಮಕವಾಗಿಯೇ ಉಳಿಯಿತು. ಕೊನೆಗೆ ನೆಹರು ಪಾಠ ಕಲಿತದ್ದು 1962ರಲ್ಲಿ. ಆದರೆ ಆಗ ಕಾಲ ಮಿಂಚಿಹೋಗಿತ್ತು.

    ಅಕ್ಟೋಬರ್-ನವೆಂಬರ್ 1962ರ ಚೀನೀ ದಾಳಿಯ ವಿರುದ್ಧ ಭಾರತದ ಪರವಾಗಿ ಅದರ ಯಾವ ಅಲಿಪ್ತ ಮಿತ್ರದೇಶವೂ ಬರಲಿಲ್ಲ. ಇಂಡೋನೇಷ್ಯಾವಂತೂ ಬಹಿರಂಗವಾಗಿಯೇ ಚೀನಾದ ಪರ ನಿಂತಿತು. ಈಜಿಪ್ಟ್ ತೆರೆಯ ಮರೆಯಲ್ಲೇ ಚೀನಾದ ಪರ ನಿಂತರೆ ಉಳಿದ ಯುಗೋಸ್ಲಾವಿಯಾ, ಘಾನಾ ಮುಂತಾದ ಪ್ರಮುಖ ಅಲಿಪ್ತ ದೇಶಗಳು ಕೇವಲ ಕದನವಿರಾಮ ಮತ್ತು ವಿವಾದದ ಶಾಂತಿಯುತ ಪರಿಹಾರದ ಅಗತ್ಯವನ್ನಷ್ಟೇ ಹೇಳಿದವು. ಅದಕ್ಕೆ ವಿರುದ್ಧವಾಗಿ ಭಾರತಕ್ಕೆ ಸೇನಾ ನೆರವು ನೀಡಿದ್ದು ಅಮೆರಿಕ, ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್.

    ಕಬ್ಬಿಣ ಈಗ ಸರಿಯಾಗಿ ಕಾದಿದೆ ಎಂದರಿತ ಅಮೆರಿಕ ನೆಹರುರನ್ನು ಸೆಳೆಯಲು ಬ್ರಿಟನ್ ಜತೆಗೂಡಿ ಪ್ರಯತ್ನ ಮಾಡಿತು. ಜನವರಿ 1963ರಲ್ಲಿ ನವದೆಹಲಿಗೆ ಬಂದ ಆಂಗ್ಲೋ-ಅಮೆರಿಕನ್ ನಿಯೋಗ ಭಾರತವನ್ನು ಸಿಯಾಟೋಗೆ ಸೇರಿಸಿಕೊಂಡು ಗಡಿ ರಕ್ಷಣೆಯ ಜವಾಬ್ದಾರಿ ತೆಗೆದುಕೊಳ್ಳುವ ವಾಗ್ದಾನ ನೀಡುತ್ತಲೇ, ಪ್ರತಿಯಾಗಿ ಕಾಶ್ಮೀರ ಕುರಿತಂತೆ ಪಾಕಿಸ್ತಾನದ ಹಿತಾಸಕ್ತಿಗಳನ್ನು ಭಾರತ ಮಾನ್ಯಮಾಡಬೇಕೆಂದು ಹೇಳಿತು. ಈ ನಿಬಂಧನೆ ನೆಹರು ಅವರಿಗೆ ಸಹಜವಾಗಿಯೇ ಸಮ್ಮತವಾಗಲಿಲ್ಲ. ಚೀನಾ ವಿರುದ್ಧ ಭಾರತವನ್ನು ರಕ್ಷಿಸುವ ಹಾದಿಯಲ್ಲಿ ಇದುವರೆಗೆ ನಂಬಿಗಸ್ತ ಸಹಯೋಗಿಯಾಗಿಯೇ ಇದ್ದ ಪಾಕಿಸ್ತಾನವನ್ನು ಕಡೆಗಣಿಸಲು ಅಮೆರಿಕ ತಯಾರಿರಲಿಲ್ಲ.

    ಮುಂದಿನ ದಿನಗಳಲ್ಲೂ ಪಾಕಿಸ್ತಾನದ ಬಗ್ಗೆ ಅಮೆರಿಕದ ಇದೇ ನೀತಿ ಸಣ್ಣಪುಟ್ಟ ಏರುಪೇರುಗಳೊಂದಿಗೆ ಮುಂದುವರಿಯಿತು. 1971ರಲ್ಲಿ ಪಾಕಿಸ್ತಾನ ಹತ್ಯಾಕಾರಿ ಎಂದು ಗೊತ್ತಿದ್ದರೂ ಅದರ ಪರವಾಗಿ ನಿಂತು ಭಾರತದ ವಿರುದ್ಧ ಸೇನಾಕಾರ್ಯಾಚರಣೆಗೂ ರಿಚರ್ಡ್ ನಿಕ್ಸನ್ ಸರ್ಕಾರ ತಯಾರಾಗಿತ್ತು. ಇದು ಬದಲಾಗಿರುವುದು ಈಗ. ಶೀತಲಸಮರ ಕಾಲದಲ್ಲಿ ಅಮೆರಿಕ ವಿರೋಧಿಸಿದ್ದು ಸೋವಿಯೆತ್ ಯೂನಿಯನ್ ಮತ್ತದರ ಮಿತ್ರದೇಶಗಳನ್ನು. ಆದರೀಗ ಕಾಲ ಬದಲಾಗಿದೆ. ಸೋವಿಯೆತ್ ಯೂನಿಯನ್ ಮರೆಯಾಗಿ ಅದರ ಸ್ಥಾನದಲ್ಲಿ ಚೀನಾ ಪ್ರಮುಖ ವಿರೋಧಿಯಾಗಿ ಎದ್ದುನಿಂತಿದೆ. ಡೊನಾಲ್ಡ್ ಟ್ರಂಪ್ ಸರ್ಕಾರ ಗುರುತಿಸಿದ ಈ ಹೊಸ ವಾಸ್ತವವನ್ನು ಜೋ ಬೈಡೆನ್ ಸರ್ಕಾರ ತಡವಾಗಿಯಾದರೂ ಗುರುತಿಸಿದೆ. ಈ ಹೊಸ ಅರಿವಿನ ಪ್ರಕಾರ ಚೀನಾದ ಜತೆ ಅದರ ಮಿತ್ರದೇಶಗಳೂ ಅಮೆರಿಕದ ಶತ್ರುಗಳೇ. ಆದರೆ ಪಾಕಿಸ್ತಾನವನ್ನು ಪೂರ್ಣವಾಗಿ ಅತ್ತ ತಳ್ಳಿಬಿಡಲು ಅಮೆರಿಕದ ವಾಸ್ತವಪ್ರಜ್ಞೆ ಅವಕಾಶ ನೀಡುವುದಿಲ್ಲ.

    ಚೀನಾ ಜತೆ ಅತಿ ಘನಿಷ್ಟ ಸಂಬಂಧಗಳನ್ನು ಹೊಂದಿರುವ ಪಾಕಿಸ್ತಾನವನ್ನು ಪೂರ್ಣವಾಗಿ ಕೈಬಿಟ್ಟರೆ ಆ ದೇಶ ತನ್ನ ಭೌಗೋಳಿಕ ಸ್ಥಾನದಿಂದಲೇ ಚೀನಾಗೆ ಉಪಯುಕ್ತವಾಗಬಹುದು, ಅದರಿಂದಾಗಿ ಅಮೆರಿಕಕ್ಕೆ ಹಾನಿಯೇ ಆಗಬಹುದು. ಇದು ಇಂದಿನ ಜಗತ್ತಿನ ಭೂ-ರಾಜಕೀಯ ಹಾಗೂ ಭೂ-ಸಾಮರಿಕ ಸತ್ಯ. ಅದರ ಜತೆಗೇ ಚೀನಾವನ್ನು ನೇರವಾಗಿ ಎದುರಿಸುವ ಸಾಮರ್ಥ್ಯವಿರುವ ಭಾರತ ಟ್ರಂಪ್ ಸರ್ಕಾರ ರೂಪಿಸಿದ್ದ ಮತ್ತು ಬೈಡೆನ್ ಸರ್ಕಾರ ಪ್ರಾರಂಭದಲ್ಲಿ ನಿರ್ಲಕ್ಷಿಸಿದ್ದ ಇಂಡೋ-ಪೆಸಿಫಿಕ್ ನೀತಿಯಲ್ಲಿ ಪ್ರಮುಖ ಸಹಯೋಗಿ. ಇಂದು ಭಾರತ ಬೇಕೇಬೇಕು, ಆದರೆ ಪಾಕಿಸ್ತಾನವನ್ನು ಬಿಡಬಾರದು ಎನ್ನುವುದು ಅಮೆರಿಕದ ಇಕ್ಕಟ್ಟು. ಆದರೆ 1962-63ರಲ್ಲಿದ್ದ ಸ್ಥಿತಿ ಈಗ ತಿರುವುಮುರುವಾಗಿದೆ. ಆಗ ಪಾಕಿಸ್ತಾನದ ಹಿತಾಸಕ್ತಿಗೆ ಪ್ರಥಮ ಆದ್ಯತೆ ನೀಡಿ ನಂತರ ಭಾರತದ ಹಿತಾಸಕ್ತಿಯತ್ತ ಗಮನ ನೀಡಬೇಕು ಎನ್ನುವುದು ವಾಷಿಂಗ್​ಟನ್​ನ ನೀತಿಯಾಗಿದ್ದರೆ ಇಂದು ಭಾರತದ ಹಿತಾಸಕ್ತಿಗೆ ಪ್ರಥಮ ಆದ್ಯತೆ ನೀಡಬೇಕು, ನಂತರ ಪಾಕಿಸ್ತಾನದ ಹಿತಾಸಕ್ತಿಯತ್ತಲೂ ಗಮನ ನೀಡಬೇಕು ಎನ್ನುವುದು ಬೈಡೆನ್ ಸರ್ಕಾರಕ್ಕಾಗಿರುವ ಜ್ಞಾನೋದಯ.

    ಪಾಕಿಸ್ತಾನದ ತತ್​ಕ್ಷಣದ ಹಿತಾಸಕ್ತಿ ಏನು? ಅದು ಒಂದಷ್ಟು ಬಿಲಿಯನ್ ಡಾಲರ್​ಗಳು! ಆರ್ಥಿಕ ಮುಗ್ಗಟ್ಟಿನಿಂದ ತತ್ತರಿಸಿಹೋಗಿರುವ ಪಾಕಿಸ್ತಾನಕ್ಕೆ ಯಾರಿಂದಲೂ ಸಹಾಯ ದೊರೆಯುತ್ತಿಲ್ಲ, ಅದನ್ನು ಆ ಸ್ಥಿತಿಗೆ ದೂಡಿದ ಚೀನಾ ಸಹ ಕೈಎತ್ತಿಬಿಟ್ಟಿದೆ. ಹೀಗಾಗಿ ಪಾಕಿಸ್ತಾನಕ್ಕೆ ಉಳಿದಿರುವ ಏಕೈಕ ಡಾಲರ್ ಮೂಲ ‘ಇಂಟರ್​ನ್ಯಾಷನಲ್ ಮಾನಿಟರಿ ಫಂಡ್ (ಐಎಂಎಫ್)’. ಅಮೆರಿಕ ಅಸ್ತು ಎನ್ನದೇ ಐಎಂಎಫ್ ಕಾಸು ಬಿಚ್ಚುವುದಿಲ್ಲ. ಅಮೆರಿಕದ ವಿರೋಧಿಯಾಗಿದ್ದ ಇಮ್ರಾನ್ ಖಾನ್ ಸರ್ಕಾರ ಉರುಳಿದ ಮೇಲೆ ಅಮೆರಿಕ ಖುಷಿಗೊಂಡು ‘ಅಸ್ತು’ ಅಂದಾಗ ಪಾಕಿಸ್ತಾನಕ್ಕೆ ಐಎಂಎಫ್​ನಿಂದ ಇಪ್ಪತ್ತಮೂರನೆಯ ಸಹಾಯ ಸಿಕಿತು. ಇದೇ ಜನವರಿಯಲ್ಲಿ ಪಾಕಿಸ್ತಾನ ಐಎಂಎಫ್ ಮುಂದೆ ಇಪ್ಪತ್ತನಾಲ್ಕನೆಯ ಸಾಲಕ್ಕಾಗಿ ಹೋಗಿ ನಿಂತಿತು. ಅದು ಸಿಗಬೇಕಾದರೆ ಮತ್ತೆ ಶೆಹ್​ಬಾಜ್ ಶರೀಫ್ ಸರ್ಕಾರವೇ ಇಸ್ಲಾಮಾಬಾದ್​ನಲ್ಲಿ ಕಾಣಿಸಿಕೊಳ್ಳಬೇಕಾಗಿತ್ತು. ಇದನ್ನರಿತ ಸೇನಾ ದಂಡನಾಯಕ ಜನರಲ್ ಆಸಿಮ್ ಮುನೀರ್ ಇದೇ ಫೆಬ್ರವರಿ-ಮಾರ್ಚ್​ನಲ್ಲಿ ಎಲ್ಲ ಬಗೆಯ ‘ಆಟ’ಗಳನ್ನೂ ಆಡಿ ಶೆಹ್​ಬಾಜ್ ಶರೀಫ್​ರನ್ನು ಪ್ರಧಾನಿಯಾಗಿ ಕೂರಿಸಿದರು. ಈಗ ನೆರವು ಪಡೆಯುವ ಮೂರು ಪರೀಕ್ಷೆಗಳ ಪೈಕಿ ಎರಡರಲ್ಲಿ ಪಾಕಿಸ್ತಾನ ಪಾಸ್ ಆಗಿದೆ. ಮೂರನೆಯದರಲ್ಲಿ ಅದನ್ನು ಪಾಸ್ ಮಾಡಿಸಲಾಗುವುದು ಎನ್ನುವುದರಲ್ಲಿ ಅನುಮಾನವೇ ಇಲ್ಲ.

    ಶೆಹ್​ಬಾಜ್ ಶರೀಫ್ ಸರ್ಕಾರ ಅಮೆರಿಕದ ಇಂದಿನ ‘ಭಾರತ ಮೊದಲು’ ನೀತಿಗೂ ಸಹಕಾರಿ. ‘ಭಾರತದೊಂದಿಗೆ ಶಾಂತಿ ಬೇಕು’ ಎಂದು ವರ್ಷದ ಹಿಂದೆಯೇ ಅವರು ಹೇಳಿದ್ದಾರೆ. ಶರೀಫ್ ಸರ್ಕಾರ ಕಳೆದ ಶುಕ್ರವಾರ ಇನ್ನೊಂದು ಹೆಜ್ಜೆ ಮುಂದೆಹೋಗಿ, ಭಾರತದೊಂದಿಗೆ ಆಗಸ್ಟ್ 2019ರಿಂದ ಸ್ಥಗಿತಗೊಂಡಿರುವ ವ್ಯಾಪರ ಸಂಬಂಧಗಳನ್ನು ಮರುಸ್ಥಾಪಿಸಿಕೊಳ್ಳುವ ಹಾಗೂ ವೃದ್ಧಿಸುವ ಘೊಷಣೆ ಮಾಡಿದೆ. ಇದಕ್ಕೆ ಶೆಹ್​ಬಾಜ್​ರ ಅಣ್ಣ ನವಾಜ್ ಶರೀಫ್​ರ ಬೆಂಬಲ ಅಧಿಕವಾಗಿಯೇ ಇದೆ. ಅವರ ಮಗಳು ಮರಿಯಮ್ ನವಾಜ್ ಇಂದು ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿ. ತಾವು ಮೋದಿಯವರ ಆರ್ಥಿಕ ನೀತಿಗಳನ್ನು ಅನುಸರಿಸುವುದಾಗಿ ಮರಿಯಮ್ ಘೊಷಿಸಿಬಿಟ್ಟಿದ್ದಾರೆ! ಅಪ್ಪ ಹೇಳದೇ ಮಗಳು ಹೀಗೆ ಘೊಷಿಸಲು ಸಾಧ್ಯವಿಲ್ಲ. ಇದರರ್ಥ ಭಾರತದೊಂದಿಗೆ ಆರ್ಥಿಕವಾಗಿ ತಮ್ಮ-ಅಣ್ಣ-ಮಗಳು ಶರೀಫ್​ತ್ರಯರ ಪಾಕಿಸ್ತಾನ ಸಜ್ಜಾಗಿದೆ. ಅಮೆರಿಕ ಬಯಸಿದ್ದೂ ಹಾಲು ಅನ್ನ, ಶರೀಫ್​ತ್ರಯರು ಹೇಳಿದ್ದೂ ಹಾಲು ಅನ್ನ! ಇನ್ನು ಬೈಡೆನ್ ಸಾಹೇಬರು ಭಾರತವನ್ನು ಮುಂದೆ, ಪಾಕಿಸ್ತಾನವನ್ನು ಹಿಂದೆ ಇಟ್ಟುಕೊಂಡು ಚೀನಾದ ಮೇಲೆ ಎರಗಲು ತಯಾರಿ ಮಾಡಿಕೊಳ್ಳಬೇಕಷ್ಟೇ.

    ಈಗ ಮುಂದೆ ಇರುವುದೇ ಕ್ಲೈಮ್ಯಾಕ್ಸ್! ಕೊನೆಗೂ ನನಗೆ ಕಾಲ ಕೂಡಿ ಬಂತು ಎಂದು ಒಳಗೊಳಗೇ ಹಿಗ್ಗುತ್ತಲೇ, ಮುಂದೆ ನೇತಾಡುತ್ತಿರುವ ಕಾಶ್ಮೀರಿ ಆಪಲ್​ಗಾಗಿ ಆತುರದಲ್ಲಿ ಬಾಯಿ ತೆರೆಯಬಾರದೆನ್ನುವ ವಿವೇಕಿ ನೀತಿಯನ್ನನುಸರಿಸುತ್ತ, ಕಬ್ಬಿಣ ಇನ್ನಷ್ಟು ಕಾಯಲಿ ಎಂದು ಭಾರತದ ಎನ್​ಡಿಎ ಸರ್ಕಾರ ಲೆಕ್ಕಾಚಾರದ ಹೆಜ್ಜೆ ಇಡುತ್ತಿದೆ. ಇದು ನಾವು ವಿಶೇಷವಾಗಿ ಗಮನ ಹರಿಸಬೇಕಾದ ವಿಷಯ.

    (ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

    ರಾಜಕೀಯಕ್ಕೆ ಎಂಟ್ರಿ ಕೊಟ್ಟ ಖ್ಯಾತ ನಟಿ ಅನುಷ್ಕಾ ಶೆಟ್ಟಿ..! ಈ ಪಕ್ಷದಿಂದ ಎಂಎಲ್​ಎ ಎಲೆಕ್ಷನ್‌ಗೆ ಸ್ಪರ್ಧೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts