More

    ಪಾಕ್​ನ ಹಳೆಯ ಚಾಳಿ; ಸಂಬಂಧ ಸುಧಾರಿಸುವ ಅವಕಾಶ ಕಳೆದುಕೊಂಡಿತು…

    ‘ಬಿದ್ದರೂ ಮೀಸೆ ಮಣ್ಣಾಗಲಿಲ್ಲ’ ಎಂಬಂತಿದೆ ಪಾಕಿಸ್ತಾನದ ವರ್ತನೆ. ಚೀನಾದ ಕುಮ್ಮಕ್ಕಿನಿಂದ ನಿರಂತರವಾಗಿ ಭಾರತವಿರೋಧಿ ಚಟುವಟಿಕೆಗಳಲ್ಲಿ ವ್ಯಸ್ತವಾಗಿರುವ ಪಾಕಿಸ್ತಾನ ತನ್ನ ಒಳಿತನ್ನೂ ಗುರುತಿಸದಷ್ಟು ಕುಬ್ಜವಾಗಿ ಹೋಗಿದೆ. ಪಾಕಿಸ್ತಾನದ ಆಂತರಿಕ ಪರಿಸ್ಥಿತಿ ಹೇಗಿದೆ ಎಂಬುದು ರಹಸ್ಯವಾದ ಸಂಗತಿಯೇನಲ್ಲ. ಆರ್ಥಿಕವಾಗಿ ತುಂಬ ಬಳಲಿ ಹೋಗಿರುವ ಅದು, ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ (ಐಎಂಎಫ್) ಸೇರಿ ಹಲವು ರಾಷ್ಟ್ರಗಳೆದುರು ಸಾಲಕ್ಕಾಗಿ ಬೇಡಿಕೆ ಇಟ್ಟಿದೆ. ನಿರುದ್ಯೋಗ ಪ್ರಮಾಣ ಗಣನೀಯವಾಗಿ ಹೆಚ್ಚಿದೆ. ಕಾನೂನು ವ್ಯವಸ್ಥೆ ಹದಗೆಟ್ಟಿದೆ. ಅಲ್ಪಸಂಖ್ಯಾತರು ಪ್ರಾಣಭೀತಿಯಲ್ಲೇ ದಿನ ಕಳೆಯುವಂಥ ವಾತಾವರಣವಿದ್ದು, ಹಿಂದೂ ಮಂದಿರಗಳು, ಸಿಖ್ ಪೂಜಾಸ್ಥಳಗಳ ಮೇಲೆ ದಾಳಿ ಮುಂದುವರಿದಿವೆ. ಇನ್ನು, ಅಂತಾರಾಷ್ಟ್ರೀಯ ರಂಗದಲ್ಲೂ ಪಾಕ್ ಒಬ್ಬಂಟಿಯಾಗಿದೆ. ಮುಂಚೆ ಪ್ರಮುಖ ಇಸ್ಲಾಮಿಕ್ ರಾಷ್ಟ್ರಗಳು ಅದರ ಬೆನ್ನಿಗಿರುತ್ತಿದ್ದವು. ಜಾಗತಿಕ ರಾಜಕೀಯ ಸಮೀಕರಣ ಬದಲಾದ ಹಿನ್ನೆಲೆಯಲ್ಲಿ ಪರಿಸ್ಥಿತಿ ಮುಂಚಿನಂತಿಲ್ಲ. ಸೌದಿ ಅರೇಬಿಯಾ, ಯುಎಇ ಸೇರಿ ಹಲವು ರಾಷ್ಟ್ರಗಳು ಪಾಕ್​ಗೆ ಸಾಲ ಕೊಡುವುದನ್ನು ನಿಲ್ಲಿಸಿದ್ದರೆ, ಅಮೆರಿಕ ಸಹ ನೆರವಿನ ಪ್ರಮಾಣವನ್ನು ಕಡಿತಗೊಳಿಸಿದೆ. ತನ್ನ ದೇಶದ ಜನರು ಹಸಿವಿನಿಂದ ಬಳಲುತ್ತ, ಜೀವನಾವಶ್ಯಕ ಸೌಲಭ್ಯಗಳಿಗಾಗಿ ಪರಿತಪಿಸುತ್ತಿರುವಾಗ ಪಾಕ್​ನ ಗಮನ ಮಾತ್ರ ಅಣ್ವಸ್ತ್ರ, ಸೇನಾಶಕ್ತಿಯನ್ನು ಹೆಚ್ಚಿಸುವ ಕಡೆಗೇ ಇರುತ್ತದೆ. ಇಂಥ ಕ್ರಮಗಳಿಂದಲೇ ಪ್ರಧಾನಿ ಇಮ್ರಾನ್ ಖಾನ್ ಜನಾಕ್ರೋಶ ಎದುರಿಸುವಂತಾಗಿದ್ದು, ತೀವ್ರ ಸ್ವರೂಪದ ಪ್ರತಿಭಟನೆಗಳನ್ನೂ ಎದುರಿಸಿದ್ದಾರೆ.

    ಇಷ್ಟೆಲ್ಲ ಸಮಸ್ಯೆಗಳಿಗೆ ಸಿಲುಕಿ ಹೈರಾಣಾಗಿದ್ದರೂ, ತನ್ನ ಹಳೆಯ ದ್ವೇಷದ ಚಾಳಿಯನ್ನು ಆ ದೇಶ ಬಿಡುತ್ತಿಲ್ಲ. ಭಾರತದೊಂದಿಗೆ ವಾಣಿಜ್ಯ ಸಂಬಂಧ ಮರುಸ್ಥಾಪಿಸುವ ನೆಪದಲ್ಲಿ ಎರಡೂ ರಾಷ್ಟ್ರಗಳ ನಡುವೆ ದ್ವಿಪಕ್ಷೀಯ ಸಂಬಂಧ ಸುಧಾರಿಸುವ ಉತ್ತಮ ಅವಕಾಶವನ್ನು ಪಾಕಿಸ್ತಾನ ಕೈಚೆಲ್ಲಿದೆ. ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು 2019ರ ಆಗಸ್ಟ್​ನಲ್ಲಿ ಹಿಂಪಡೆದ ಬಳಿಕ ಭಾರತದೊಂದಿಗೆ ಪಾಕಿಸ್ತಾನ ವಾಣಿಜ್ಯ ಸಂಬಂಧವನ್ನು ಕಡಿದುಕೊಂಡಿತ್ತು. ವಾಸ್ತವದಲ್ಲಿ, ಇಂಥದ್ದೊಂದು ನಿರ್ಧಾರದಿಂದ ಪಾಕ್ ಹೆಚ್ಚು ನಷ್ಟ ಅನುಭವಿಸಿತು. ಏಕೆಂದರೆ, ಇಲ್ಲಿಂದ ರಫ್ತಾಗುವ ಹಣ್ಣು, ದಿನಸಿ ಸೇರಿ ಹಲವು ವಸ್ತುಗಳ ಮೇಲೆ ಪಾಕ್ ಅವಲಂಬಿತವಾಗಿತ್ತು, ಭಾರತ ಎಂದಿಗೂ ಪಾಕ್ ಮೇಲೆ ಅವಲಂಬಿತವಾಗಿಲ್ಲ. ಇತ್ತೀಚೆಗೆ ತನ್ನ ನಿಲುವಿನಲ್ಲಿ ಬದಲಾವಣೆ ಮಾಡಿಕೊಂಡಿದ್ದ ಪಾಕ್ ಭಾರತದಿಂದ ಸಕ್ಕರೆ ಮತ್ತು ಹತ್ತಿ ಆಮದು ಮಾಡಿಕೊಳ್ಳಲು ಮುಂದಾಗಿತ್ತು. ಇಮ್ರಾನ್ ಖಾನ್ ಸರ್ಕಾರದ ಈ ನಿರ್ಧಾರಕ್ಕೆ ರಾಜಕೀಯ ವಿರೋಧ ವ್ಯಕ್ತವಾಗುತ್ತಿದ್ದಂತೆ, ಅದು ಯೂಟರ್ನ್ ತೆಗೆದುಕೊಂಡಿದೆ. ‘ಕಾಶ್ಮೀರದ ವಿಶೇಷ ಸ್ಥಾನಮಾನ ಮರುಸ್ಥಾಪಿಸುವವರೆಗೆ ಆಮದು ನಿರ್ಧಾರ ತೆಗೆದುಕೊಳ್ಳುವುದಿಲ್ಲ’ ಎಂದು ಅಲ್ಲಿನ ವಿತ್ತ ಸಚಿವರು ಹೇಳಿದ್ದಾರೆ. ಹೀಗೆ ರಾಜಕೀಯ ಕಾರಣಗಳಿಗಾಗಿ ತನ್ನ ಹಿತವನ್ನೂ ಬಲಿಕೊಡುತ್ತಿರುವ ಆ ದೇಶ ಸಂಬಂಧ ಸುಧಾರಣೆಯ ಒಳ್ಳೆಯ ಅವಕಾಶವನ್ನು ಕಳೆದುಕೊಂಡಿರುವುದು ದುರದೃಷ್ಟಕರ. ಪಾಕ್ ಬದಲಾಗುವ ರಾಷ್ಟ್ರವಲ್ಲ ಎಂಬ ವಾಸ್ತವವನ್ನು ಅರಿತುಕೊಂಡು ಭಾರತ ಸಹ ಅದರ ಬಗ್ಗೆ ಮೃದುಧೋರಣೆ ತಳೆಯದೆ, ಕಠಿಣ ನೀತಿ ಮುಂದುವರಿಸುವುದೇ ಹೆಚ್ಚು ಸೂಕ್ತ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts