More

    ಪಂಕ್ಚರ್ ಅಂಗಡಿಯಿಂದ ಬದುಕು ಕಟ್ಟಿಕೊಂಡ ಮಹಿಳೆ

    ಪವನ ದೇಶಪಾಂಡೆ ಕೊಡೇಕಲ್: ಎತ್ತಿನ ಗಾಡಿ ಸರಿದಾರಿಗೆ ಹೋಗಬೇಕಾದರೆ ಜೋಡೆತ್ತುಗಳು ಹೇಗೆ ಹೊಂದಿಕೊಂಡಿರುತ್ತವೆಯೋ ಹಾಗೆಯೇ ನಮ್ಮ ಬದುಕಿನ ಬಂಡಿ ಕೂಡ ಸರಾಗವಾಗಿ ಸಾಗಬೇಕೆಂದರೆ ಗಂಡ-ಹೆಂಡತಿ ಪರಸ್ಪರ ಹೊಂದಾಣಿಕೆಯಿಂದ ಇದ್ದಾಗಲೇ ಜೀವನ ಸುಂದರವಾಗಿರಲು ಸಾಧ್ಯ ಎಂಬುದಕ್ಕೆ ಈ ಮಹಿಳೆಯೇ ನಿದರ್ಶನ.

    ಇದು ರಾಮರಾವ್ ನಗರ ತಾಂಡಾ (ಮಾರನಾಳ ಕ್ರಾಸ್)ದ ಅನಸೂಬಾಯಿ ರಾಠೋಡ್ ಎಂಬಾಕೆಯ ಸ್ವಾವಲಂಬಿ ಬದುಕಿನ ಕಥೆ. ಅನಸೂಬಾಯಿ ಪತಿ ನಡೆಸುವ ಪಂಕ್ಚರ್ ಅಂಗಡಿಯಲ್ಲಿ ಸರಿಸಮನಾಗಿ ಶ್ರಮವಹಿಸಿ ಕಾಯಕ ಮಾಡುವುದರೊಂದಿಗೆ ಇತರ ಮಹಿಳೆಯರಿಗೆ ಮಾದರಿಯಾಗಿದ್ದಾರೆ.

    ಕೇವಲ ಪುರುಷರೇ ಕಾರ್ಯನಿರ್ವಹಿಸುವ ಪಂಕ್ಚರ್ ಅಂಗಡಿಗಳಲ್ಲಿನ ಕರ‍್ಯವನ್ನು ಸವಾಲಾಗಿ ಸ್ವೀಕರಿಸಿರುವ ಅನಸೂಬಾಯಿ, ಗಂಡ ಇಲ್ಲದ ಸಮಯದಲ್ಲಿ ಬರುವ ವಾಹನಗಳಿಗೆ ಪಂಕ್ಚರ್ ತೆಗೆಯುವ ಮೂಲಕ ಪತಿಯ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡುತ್ತಿದ್ದಾಳೆ.

    ಸೈಕಲ್ ಮೋಟಾರ್‌ನಿಂದ ಹಿಡಿದು ಕಾರು, ಜೀಪ್ ಅಲ್ಲದೆ ದೊಡ್ಡ ದೊಡ್ಡ ಲಾರಿ ಬಂದರೂ ಸಲೀಸಲಾಗಿ ಪಂಕ್ಚರ್ ಜೋಡಿಸುವ ಅನಸೂಬಾಯಿಯ ಕಾರ್ಯಕ್ಷಮತೆ ಮೆಚ್ಚಲೇಬೇಕು. ಪತಿ ಬೇರೆ ಕೆಲಸಕ್ಕಾಗಿ ಹೊರಗಡೆ ಹೋದಾಗ ಪಂಕ್ಚರ್ ಹಾಕಿಸಿಕೊಳ್ಳಲು ಬರುವ ವಾಹನಗಳಿಗೆ ಹಾಗೆ ಯಾಕೆ ಕಳುಹಿಸಬೇಕು ಎಂದುಕೊಂಡು ಒಂದ್ಸಲ ಪ್ರಯತ್ನ ಮಾಡೋಣ ಎನ್ನುತ್ತ ಈ ಕಾಯಕಕ್ಕೆ ಮುಂದಾದಳು. ಮೊದ ಮೊದಲು ಸ್ವಲ್ಪ ಕಷ್ಟವಾದರೂ ಈಗ ಎಂಥ ವಾಹನ ಬಂದರೂ ಸಲೀಸಾಗಿ ಪಂಕ್ಚರ್ ಹಾಕುತ್ತಿರುವುದು ಪತಿ ಸಂಜಯಕುಮಾರಗೆ ಇನ್ನಿಲ್ಲದ ಹೆಮ್ಮೆ. ತಾನು ಊರಲ್ಲಿ ಇಲ್ಲದಿದ್ದರೂ ಪತ್ನಿ ಅಂಗಡಿ ನಡೆಸುತ್ತಾಳೆ ಎಂಬ ಧೈರ್ಯ ಅವರಲ್ಲಿದೆ. ಇದರೊಂದಿಗೆ ರಾಮರಾವ್ ನಗರ ತಾಂಡಾ ಜನರು ಹುಬ್ಬೇರಿಸುವಂತೆ ಮಾಡಿದ್ದಾರೆ.

    ಪತಿ, ಮೂವರು ಮಕ್ಕಳೊಂದಿಗೆ ಜೀವನ ಸಾಗಿಸುತ್ತಿರುವ ಅನಸೂಬಾಯಿ ಮನೆ ಕೆಲಸ ಮುಗಿಸಿಕೊಂಡು ಅಂಗಡಿಗೆ ಹಾಜರಾಗುತ್ತಾಳೆ. ಎನಿಲ್ಲವೆಂದರೂ ದಿನಕ್ಕೆ ೧೦-೧೫ ವಾಹನಗಳ ಪಂಕ್ಚರ್ ತೆಗೆಯುವ ಮೂಲಕ ೧೫೦೦-೨೦೦೦ ರೂ.ವರೆಗೆ ಸಂಪಾದನೆ ಮಾಡುತ್ತಿದ್ದಾಳೆ.

    ಒಟ್ಟಾರೆ, ಪಂಕ್ಚರ್ ತೆಗೆಯುವ ಕಾಯಕವನ್ನು ಸವಾಲಾಗಿ ಸ್ವೀಕರಿಸುವ ಮೂಲಕ ಪತಿಯೊಂದಿಗೆ ಸಮನಾಗಿ ಕೆಲಸ ಮಾಡುತ್ತ ಸಂಸಾರದ ಬಂಡಿ ಸಲೀಸಾಗಿ ನಡೆಸಿಕೊಂಡು ಬರುತ್ತಿರುವ ಅನಸೂಬಾಯಿ ಇತರ ಮಹಿಳೆಯರಿಗೆ ಸ್ಫೂರ್ತಿ, ಪ್ರೇರಣೆಯಾಗಿದ್ದಾಳೆ.

    ಸಾಲ ಮಾಡಿ ಅಂಗಡಿ ಹಾಕಿದ್ದೇವೆ. ಆದರೆ ಕೆಲಸದ ನಿಮಿತ್ತ ಪತಿ ಊರಲ್ಲಿ ಇಲ್ಲದಿದ್ದಾಗ ಅಂಗಡಿ ಬಂದ್ ಮಾಡಬೇಕಾದ ಅನಿವಾರ್ಯ ಇತ್ತು. ಹೀಗಾಗಿ ನನಗೆ ಸ್ವಲ್ಪ ಕಷ್ಟವಾದರೂ ಪರವಾಗಿಲ್ಲ ಎಂದುಕೊಂಡು ಪಂಕ್ಚರ್ ಜೋಡಿಸುವುದನ್ನು ಕಲಿತಿರುವೆ.
    | ಅನಸೂಬಾಯಿ ರಾಠೋಡ್ ಪಂಕ್ಚರ್ ಹಾಕುವ ಮಹಿಳೆ


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts