More

    ಮನಸ್ಸುಗಳ ಅರಳಿಸುವ ‘ಪಯಣ’

    ಶಶಿ ಈಶ್ವರಮಂಗಲ
    ಪುತ್ತೂರು ತಾಲೂಕಿನ ಪುರ್ಪುಂಜದಲ್ಲಿ ಮಾಣಿ- ಮೈಸೂರು ಹೆದ್ದಾರಿ ಪಕ್ಕದಲ್ಲಿರುವ ‘ಸೌಗಂಧಿಕಾ’ ಕಲಾವಿದರ ಪಾಲಿನ ಒಂದು ಕಲಾಕ್ಷೇತ್ರ. ಕಲಾಸಕ್ತರನ್ನು ಸೆಳೆಯುವ ಚಟುವಟಿಕೆಗಳು ಅಲ್ಲಿ ಸದಾ ನಡೆಯುತ್ತಿರುತ್ತವೆ. ಪ್ರಸ್ತುತ ಅಲ್ಲಿ ಚಿತ್ರಕಲಾ ಪ್ರದರ್ಶನ ‘ಪಯಣ’ ನಡೆಯುತ್ತಿದ್ದು, ಅಪರೂಪದ ಹಾಗೂ ಅತ್ಯಾಕರ್ಷಕ ಕಲಾಕೃತಿಗಳು ಕಲಾಸಕ್ತರ ಮನಸೆಳೆಯುತ್ತಿವೆ.

    ಔಷಧೀಯ ಗಿಡಬಳ್ಳಿಗಳನ್ನೊಳಗೊಂಡ ಚಂದ್ರ ಸೌಗಂಧಿಕಾ ಎಂಬುವರ ಮನೆ ಹಚ್ಚ ಹಸುರಿನ ಪೃಕೃತಿಯ ನಡುವೆ ಇದೆ. ಕೇವಲ ಮನೆಯಾಗಿರದೆ ಕಲಾವಿದರ ಪಾಲಿನ ಕಲಾತಾಣವಾಗಿ ಗುರುತಿಸಿಕೊಂಡಿದೆ.
    ದೇಶದ ನಾನಾ ಕಡೆಯ ಕೆಸರಾಂತ ಕಲಾವಿದರ ಕಲಾಕೃತಿಗಳನ್ನು ಆಯ್ಕೆ ಮಾಡಿಕೊಂಡು ಸೌಗಂಧಿಕಾ ಮನೆಯ ಆರ್ಟ್ ಗ್ಯಾಲರಿಯಲ್ಲಿ ಚಿತ್ರಕಲಾ ಪ್ರದರ್ಶನದ ವ್ಯವಸ್ಥೆ ಮಾಡಲಾಗಿದೆ.

    ಇಂದು ಪ್ರದರ್ಶನ ಸಮಾರೋಪ
    ಡಿಸೆಂಬರ್ 25ರಿಂದ ಈ ಚಿತ್ರಕಲಾ ಪ್ರದರ್ಶನ ಆರಂಭಗೊಂಡಿದ್ದು, ಡಿ.31ರ ತನಕ ನಡೆಯಲಿದೆ. ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆ ತನಕ ಚಿತ್ರ ಪ್ರದರ್ಶನ ವೀಕ್ಷಿಸಲು ಅವಕಾಶ ಮಾಡಿಕೊಡಲಾಗಿದ್ದು, ಸ್ವತಃ ಕಾರ್ಯಕ್ರಮದ ರುವಾರಿ ಚಂದ್ರ ಸೌಗಂಧಿಕಾ ಅವರೇ ಇಲ್ಲಿನ ಚಿತ್ರಕಲಾ ಪ್ರದರ್ಶನದ ಬಗ್ಗೆ ಆಸಕ್ತರಿಗೆ ಮಾಹಿತಿ ನೀಡುವ ಕೆಲಸ ಮಾಡುತ್ತಿದ್ದಾರೆ. ಪ್ರದರ್ಶನ ಮತ್ತು ಮಾಹಿತಿಯ ಈ ಉಚಿತ ಸೇವೆಗಳು ಅವರ ಚಿತ್ರಕಲಾ ಆಸಕ್ತಿಗೊಂದು ಸಾಕ್ಷಿಯಾಗಿದೆ. ದೀಪಾವಳಿಯ ಸಂದರ್ಭದಲ್ಲೂ ಚಿತ್ರ ಪ್ರದರ್ಶನ ನಡೆದಿತ್ತು. ಈಗ ವರ್ಷದ ಕೊನೆಯ ಕಾರ್ಯಕ್ರಮವಾಗಿ ಚಿತ್ರಕಲಾ ಪ್ರದರ್ಶನ ಮೂಡಿಬಂದಿದೆ.

    15 ಮಂದಿ ಕಲಾವಿದರ, 18 ಕಲಾಕೃತಿಗಳು
    ‘ಪಯಣ’ ಚಿತ್ರಕಲಾ ಪ್ರದರ್ಶನದಲ್ಲಿ ಸ್ಥಳೀಯ ಮತ್ತು ವಿವಿಧ ರಾಜ್ಯಗಳ 15 ಮಂದಿ ಕಲಾವಿದರ ಒಟ್ಟು 18 ಕಲಾಕೃತಿಗಳನ್ನು ಅನಾವರಣಗೊಳಿಸಲಾಗಿದೆ. ಪಾಟ್ನಾದ ಅದಿತಿರಾಮನ್, ಕೊಲ್ಕತ್ತಾದ ಸುಸ್ಮಿತಾ ಚೌಧರಿ, ಮುಂಬೈಯ ದೇವದಾಸ್ ಎಚ್.ಅಗಸೆ, ರಿಹಝ್ ಸಮಧಾನ್ ಮತ್ತು ರುಮಿ ಸಮಧಾನ್, ಕೇರಳದ ಸುಜಿತ್ ಎಸ್.ಎನ್, ಸಬಿನ್ ದಾಸ್ ಮತ್ತು ಸುಜೀತ್ ಒನ್‌ಚೆರಿ, ಬೆಂಗಳೂರಿನ ಗಿರಿಧರ್ ಖಾಸ್ನಿಸ್, ಪ್ರದೀಪ್‌ಕುಮಾರ್ ಡಿ.ಎಂ ಮತ್ತು ವಾಮನ ಪೈ, ಮಂಗಳೂರಿನ ಮಹೇಶ್ ಬಾಳಿಗ, ಪುತ್ತೂರಿನ ಓಬಯ್ಯ, ಸುಳ್ಯದ ಮೋಹನ್ ಸೋನಾ, ಕಡಬದ ಭುವನೇಶ್ ಗೌಡ ಅವರ ಕಲಾಕೃತಿಗಳು ಪ್ರದರ್ಶನಗೊಳ್ಳುತ್ತಿವೆ.

    ಅನುಭವ ಬಿಂಬಿಸುವ ಪ್ರದರ್ಶನ
    ಹೆಸರಾಂತ ಕಲಾವಿದರುಗಳು ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸೂಕ್ಷ್ಮವಾಗಿ ಗಮನಿಸಿ, ಪಡೆದ ಅನುಭವಗಳನ್ನು ಬಿಂಬಿಸಿರುವ ತೈಲವರ್ಣ, ಜಲವರ್ಣ, ಕಾಷ್ಠಶಿಲ್ಪ, ಎಂಬ್ರಾಯಿಡರಿ ಕಲಾಕೃತಿಗಳು ಕಲಾ ಮನಸ್ಸುಗಳನ್ನು ಆಕರ್ಷಿಸುತ್ತಿವೆ. ಈ ಕಲಾಕೃತಿಗಳು ಒಂದಕ್ಕಿಂತ ಒಂದು ವಿಶಿಷ್ಟವಾಗಿದ್ದು, ಮತ್ತೆ ಮತ್ತೆ ನೋಡಬೇಕೆಂಬ ಬಯಕೆಯನ್ನು ಸೃಷ್ಟಿಸುತ್ತಿವೆ.

     

    ನಗರಗಳಲ್ಲಿರುವ ಕಲಾ ಗ್ಯಾಲರಿಗಳಿಗೆ ಗ್ರಾಮೀಣ ಪ್ರದೇಶದ ಮಂದಿ ಹೋಗಿ ಇಂತಹ ಅಪರೂಪದ ಕಲಾಕೃತಿಗಳನ್ನು ವೀಕ್ಷಿಸುವುದು ಕಷ್ಟ ಎಂಬ ಕಾರಣಕ್ಕಾಗಿ ಗ್ರಾಮೀಣ ಪ್ರದೇಶವಾದ ಇಲ್ಲಿ ಪ್ರದರ್ಶನ ವ್ಯವಸ್ಥೆ ಮಾಡಿದ್ದೇವೆ. ಪ್ರಸ್ತುತ ಮುಂಬೈಯಲ್ಲಿ ನೆಲೆಸಿರುವ ಪುತ್ತೂರಿನ ಕಲಾವಿದ ಓಬಯ್ಯ ಅವರು ಈ ಹೆಸರಾಂತ ಕಲಾವಿದರುಗಳ ಕಲಾಕೃತಿಗಳನ್ನು ಸಂಗ್ರಹಿಸಿ ಪ್ರದರ್ಶನ ವ್ಯವಸ್ಥೆಗೆ ಸಹಕರಿಸಿದ್ದಾರೆ.
    ಚಂದ್ರ ಸೌಗಂಧಿಕಾ, ಆಯೋಜಕಿ

     

    ಕಲಾ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವ ಪುಟ್ಟಪುಟ್ಟ ಮಕ್ಕಳಿಗೆ ಇಲ್ಲಿ ಪ್ರೋತ್ಸಾಹದ ಅನುಭವ ಸಿಗುತ್ತಿದೆ. ತನ್ನ ಪುತ್ರಿ ಅಧಿತಿಯ ಚಿತ್ರಕಲಾ ಪಯಣ ಕೂಡ ಇಲ್ಲಿಂದಲೇ ಆರಂಭಗೊಂಡಿತ್ತು. ಚಂದ್ರ ಸೌಗಂಧಿಕಾ ಅವರ ಈ ಕಲಾಸಕ್ತಿಯ ಕಾರ್ಯ ಕಲಾ ಕ್ಷೇತ್ರಕ್ಕೆ ಕಾಲಿಡಲು ಬಹಳಷ್ಟು ಮಂದಿಗೆ ಪ್ರೇರಣೆಯಾಗಿದೆ.
    ಸುಧಾಕರ್, ಅಧಿಕಾರಿ

    ಕಲೆ ಎನ್ನುವುದು ಬರೀ ಪಟ್ಟಣಕ್ಕೆ ಸೀಮಿತವಾಗಿರಬಾರದು, ಗ್ರಾಮೀಣ ಮತ್ತು ಪಟ್ಟಣ ಪ್ರದೇಶದ ಎಲ್ಲ ಆಸಕ್ತರಿಗೆ ತಲುಪುವಂತಾಗಬೇಕು. ಹಾಗಾದರೆ ಮಾತ್ರ ಕಲೆಗೆ ಬೆಲೆ ಮತ್ತು ಕಲಾವಿದನಿಗೆ ಮನ್ನಣೆ ನೀಡಿದಂತಾಗುತ್ತದೆ. ಗ್ರಾಮೀಣ ಪ್ರದೇಶದಲ್ಲಿ ಆಯೋಜಿಸಿರುವ ಪ್ರದರ್ಶನ ಶ್ಲಾಘನೀಯ.
    ನೇಮಿರಾಜ್ ಶೆಟ್ಟಿ, ಮಿಂಡ್‌ಕ್ರಾಷ್ಟ್ ಬಳ್ಳಾಲ್‌ಬಾಗ್.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts