More

    ಸೊರಗಿದೆ ಪಡುಕುದ್ರು -ತಿಮ್ಮಣ್ಣಕುದ್ರು ಸಂಪರ್ಕ ತೂಗುಸೇತುವೆ

    ಉಡುಪಿ: ತೋನ್ಸೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಡುಕುದ್ರು -ತಿಮ್ಮಣ್ಣಕುದ್ರು ಸಂಪರ್ಕಿಸುವ ಪ್ರವಾಸಿಗರ ಆಕರ್ಷಣಾ ಕೇಂದ್ರಗಳಲ್ಲೊಂದಾದ ತೂಗುಸೇತುವೆ ನಿರ್ವಹಣೆ ಇಲ್ಲದೆ ಸೊರಗುತ್ತಿದೆ.

    ತೂಗುಸೇತುವೆಗಳ ಸರದಾರ ಸುಳ್ಯದ ಗಿರೀಶ್ ಭಾರದ್ವಾಜ್ ಮಾರ್ಗದರ್ಶನದಲ್ಲಿ 1991ರಲ್ಲಿ ಈ ತೂಗುಸೇತುವೆ ನಿರ್ಮಾಣವಾಗಿದೆ. ಸ್ವರ್ಣಾ ನದಿಗೆ ಆಡ್ಡಲಾಗಿ ಕಟ್ಟಿದ ತೂಗುಸೇತುವೆ ತಾಲೂಕಿನ ಆಕರ್ಷಣೀಯ ಸ್ಥಳದಲ್ಲಿ ಒಂದು. 280 ಅಡಿಗಳಷ್ಟು ಉದ್ದವಾಗಿರುವ ಈ ಸೇತುವೆಯಲ್ಲಿ 142 ಸಿಮೆಂಟ್ ಹಲಗೆ ಅಳವಡಿಸಲಾಗಿದೆ. ಆರಂಭದ ಕೆಲವು ವರ್ಷ ಸೇತುವೆ ಮೇಲೆ ಮರದ ಹಲಗೆ ನಿರ್ಮಿಸಲಾಗಿತ್ತು. ಆ ಬಳಿಕ ಸಿಮೆಂಟ್ ಹಲಗೆ ಅಳವಡಿಸಲಾಗಿದೆ. ಸದ್ಯ ಸರಿಯಾದ ನಿರ್ವಹಣೆ ಇಲ್ಲದೆ ಸೇತುವೆ ಮೇಲೆ ಅಳವಡಿಸಿರುವ ಕಾಂಕ್ರೀಟ್ ಹಲಗೆಗಳ ಮಧ್ಯೆ ಒಂದೆರಡು ಹಲಗೆಗಳು ಒಡೆದಿದ್ದು, ಈ ಭಾಗದಲ್ಲಿ ಎಚ್ಚರ ತಪ್ಪಿ ಕಾಲಿಟ್ಟರೆ ಅಪಾಯ. ಸೇತುವೆಯ ಎರಡೂ ಬದಿಯಲ್ಲಿ ಸುರಕ್ಷತೆಗಾಗಿ ಅಳವಡಿಸಿರುವ ಕಬ್ಬಿಣದ ತಡೆಗೋಡೆಯೂ ಕೆಲವೆಡೆ ತುಂಡಾಗಿದೆ.

    ಬೈಕ್ ಸವಾರಿ ಅಪಾಯಕಾರಿ: ಸೇತುವೆ ನೋಡಲೆಂದೇ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಈ ಸ್ಥಳದಲ್ಲಿ ಬೋಟಿಂಗ್ ಕೂಡ ಆರಂಭಿಸಲಾಗಿದೆ. ಕೆಮ್ಮಣ್ಣುವಿನಿಂದ ಸುಮಾರು 2 ಕಿ.ಮೀ. ದೂರ. ಇಲ್ಲಿನ ಪ್ರಕೃತಿ ರಮಣೀಯ ದೃಶ್ಯ ಸವಿಯಲು ವಾರಾಂತ್ಯದಲ್ಲಿ ಹೆಚ್ಚು ಜನರು ಬರುತ್ತಾರೆ. ಪ್ರವಾಸಿಗರು ಸೇತುವೆ ಮೇಲೆ ಶೂಟಿಂಗ್ ಮಾಡುವುದು, ಬೈಕ್ ಚಲಾಯಿಸುವುದು ನಡೆಯುತ್ತಿದೆ. ಬೈಕ್ ಸಂಚಾರಕ್ಕೆ ಸಂಬಂಧಿತ ಇಲಾಖೆ ಕಡಿವಾಣ ಹಾಕಬೇಕು ಎನ್ನುತ್ತಾರೆ ಸ್ಥಳೀಯ ನಿವಾಸಿ ಹರೀಶ್ ಶೆಟ್ಟಿ. ಬೆಂಗಳೂರು, ಮೈಸೂರಿನಿಂದ ಔಟ್‌ಡೋರ್ ವೆಡ್ಡಿಂಗ್ ಶೂಟಿಂಗ್, ಆಲ್ಬಂ ಸಾಂಗ್ ಚಿತ್ರೀಕರಣಕ್ಕೆ ಜನ ಬರುತ್ತಾರೆ. ಮೂರ‌್ನಾಲ್ಕು ಬೈಕ್‌ಗಳನ್ನು ಚಲಾಯಿಸುತ್ತಾರೆ. ಕೆಲವರು ಸೇತುವೆ ಮೇಲೆ ಕುಣಿದು ಕುಪ್ಪಳಿಸುವುದುಂಟು. ಇವೆಲ್ಲದಕ್ಕೆ ನಿಯಂತ್ರಣ ಹಾಕಿ ಸೇತುವೆ ಸಂರಕ್ಷಿಸಬೇಕು ಎಂಬುದು ಸಾರ್ವಜನಿಕರ ಆಗ್ರಹ.

    ಗ್ರೀಸಿಂಗ್ ಆಗದೆ ತುಕ್ಕು: ಸೇತುವೆಯನ್ನು ಹಿಡಿದಿಟ್ಟುಕೊಳ್ಳುವ ಪ್ರಮುಖ ವಯರ್ ರೋಪ್‌ಗಳಿಗೆ ಗ್ರೀಸಿಂಗ್ ಮಾಡದೆ ಹಲವು ವರ್ಷಗಳಾಗಿವೆ. ಇದರಿಂದ ನಟ್ -ಬೋಲ್ಟ್‌ಗಳು ಕೆಲವೆಡೆ ತುಕ್ಕು ಹಿಡಿದಿದೆ. ಕಳೆದ ವರ್ಷ ಈ ತೂಗುಸೇತುವೆಯ ಎರಡು -ಮೂರು ಹಲಗೆಗಳು ಒಡೆದಿತ್ತು. ಇದರ ದುರಸ್ತಿಗೆ ಇಲಾಖೆಯಿಂದ ಸ್ಪಂದನೆ ಸಿಗದಿದ್ದಾಗ ಸ್ಥಳೀಯ ವಾಟರ್ ಸ್ಪೋರ್ಟ್ಸ್‌ನ ಯುವಕರ ತಂಡ ದುರಸ್ತಿ ಮಾಡಿದ್ದಾರೆ ಎಂದು ಸ್ಥಳೀಯರು ಹೇಳುತ್ತಾರೆ.

    ಬಿರುಕು ಬಿಟ್ಟ ಸಿಮೆಂಟ್ ಹಲಗೆ, ಮುರಿದು ಹೋದ ಕಬ್ಬಿಣದ ರಾಡ್‌ಗಳನ್ನು ಪಂಚಾಯಿತಿ ವತಿಯಿಂದ ಸರಿಪಡಿಸಲಾಗುವುದು. ಮುಂದೆ ಸೇತುವೆ ಪ್ರವೇಶದ ಎರಡೂ ಕಡೆ ಮೆಟ್ಟಿಲುಗಳನ್ನು ಅಳವಡಿಸುವ ಮೂಲಕ ಬೈಕ್ ಸಂಚಾರ ನಿಷೇಧಿಸುವ ಮತ್ತು ತೂಗುಸೇತುವೆಯನ್ನು ಪ್ರಮುಖ ಪ್ರವಾಸೋದ್ಯಮ ಕೇಂದ್ರವಾಗಿ ರೂಪುಗೊಳಿಸಲು ಯೋಜನೆ ರೂಪಿಸಲಾಗುವುದು.
    -ದಿನಕರ್
    ಕಾರ್ಯದರ್ಶಿ, ತೋನ್ಸೆ ಗ್ರಾಮ ಪಂಚಾಯಿತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts