More

    ಪಡೂರಲ್ಲಿ ಯಾತನೆಯ ಜೀವನ

    ಶ್ರೀಪತಿ ಹೆಗಡೆ ಹಕ್ಲಾಡಿ ಕೆಂಚನೂರು
    ವಂಡ್ಸೆ ಹೋಬಳಿ ಹಟ್ಟಿಯಂಗಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಂಚನೂರು ಪಡೂರು ಮೂಲನಿವಾಸಿ ಕುಟುಂಬಕ್ಕೆ ನೀರು ಬಿಟ್ಟರೆ ಉಳಿದ ಯಾವ ಸೌಲಭ್ಯಗಳೂ ಇಲ್ಲ. ಬಯಲು ಶೌಚಗೃಹ ಮುಕ್ತ ಎಂದು ಉಡುಪಿ ಜಿಲ್ಲೆ ಘೋಷಿಸಿಕೊಂಡರೂ ಇಲ್ಲಿನ ಮೂಲ ನಿವಾಸಿಗಳ ಕುಟುಂಬಕ್ಕೆ ಶೌಚಗೃಹವೇ ಇಲ್ಲ. ಪಡೂರು ಕಂಬಳಗದ್ದೆ ಮನೆಯಲ್ಲಿ ಮಂಜುನಾಥ, ಪತ್ನಿ ನಾಗರತ್ನಾ ಹಾಗೂ ಶಾಲೆಗೆ ಹೋಗುವ ಮೂವರು ಮಕ್ಕಳು ಸೇರಿ ಐವರು ವಾಸ ಮಾಡುತ್ತಿದ್ದಾರೆ. ನಾಗರತ್ನ ದೊಡ್ಡಮ್ಮನ ಮಗ ಗೋಪಾಲ, ಅವರ ಪತ್ನಿ ಕೂಡ ಹೆಚ್ಚಿನ ಸಮಯ ಇಲ್ಲೇ ಇರುತ್ತಾರೆ. ಸಣ್ಣ ಹಂಚಿನ ಮನೆಯಲ್ಲಿ ಏಳು ಮಂದಿ ವಾಸ್ತವ್ಯ ಮಾಡುತ್ತಿದ್ದು ಮನೆಗೆ ಬಾಗಿಲೇ ಇಲ್ಲ. ಕಾಲದ ಹೊಡೆತಕ್ಕೆ ಸಿಕ್ಕಿ ಮನೆ ಕುಸಿಯುವ ಹಂತದಲ್ಲಿದ್ದು, ಮಳೆಗಾಲದೊಳಗೆ ವಾಸ್ತವ್ಯ ಬದಲಾಯಿಸದಿದ್ದರೆ, ತಲೆ ಮೇಲೆ ಕುಸಿಯೋದು ನಿಶ್ಚಿತ.
    ಬೇಸಿಗೆಯಲ್ಲಿ ಮನೆ ಹೊರಗೆ ಒಂದೆರಡು ಸೀರೆ ಅಡ್ಡ ಕಟ್ಟಿದ ಸ್ನಾನದ ಮನೆ, ಶೌಚಕ್ಕೆ ಬಯಲು. ಕುಡಿಯುವ ನೀರು, ವಿದ್ಯುತ್, ಬಿಪಿಎಲ್ ಕಾರ್ಡ್ ಕುಟುಂಬದ ಬಂಡವಾಳ. ಮೂಲ ನಿವಾಸಿಗಳ ಬದುಕು ಉತ್ತಮ ಮಾಡಲು ಸರ್ಕಾರ ಯೋಜನೆ ಘೋಷಿಸುತ್ತಿದ್ದರೂ ಇನ್ನೂ ಕೆಲವರು ಕನಿಷ್ಠ ಜೀವನ ಸಾಗಿಸುತ್ತಿರುವುದು ವಿಷಾದನೀಯ. ಇವರು ಜೀವನ ನಿರ್ವಹಣೆಗೆ ನಂಬಿಕೊಂಡಿರುವುದು ಕೂಲಿ ಕೆಲಸ. ಮನೆ ಯಜಮಾನ ಮಂಜುನಾಥ ಹಟ್ಟಿಯಂಗಡಿ ಗ್ರಾಪಂನಲ್ಲಿ ವಾಟರ್ ಮೆನ್ ಕೆಲಸ ಮಾಡಿಕೊಂಡಿದ್ದಾರೆ. ಗಂಡ -ಹೆಂಡತಿ ದುಡಿದರೆ ಮನೆ ಖರ್ಚು ನಿಭಾಯಿಸಬಹುದು. ಇಲ್ಲದಿದ್ದರೆ ಕಾಲಿಗಿದ್ದರೆ ತಲೆಗಿಲ್ಲ, ತಲೆಗಿದ್ದರೆ ಕಾಲಿಗಿಲ್ಲದ ಸ್ಥಿತಿ. ಮಂಜುನಾಥಗೆ ಹಟ್ಟಿಯಂಗಡಿ ಗ್ರಾಪಂ ನಾಲ್ಕು ತಿಂಗಳಿಂದ ವೇತನ ನೀಡಿಲ್ಲ. ಸದ್ಯ ನಾಗರತ್ನಾ ಅವರ ಕೂಲಿ ಕೆಲಸವೇ ಜೀವನ ನಿರ್ವಹಣೆಗೆ ದಾರಿ. ಜತೆಗೆ ಶಾಲೆಗೆ ಹೋಗುವ ಮೂವರು ಮಕ್ಕಳ ಖರ್ಚೂ ನಿಭಾಯಿಸಬೇಕು. ಇವೆಲ್ಲದರ ನಡುವೆ ಇವರ ಒಕ್ಕಲೆಬ್ಬಿಸಲು ಕೆಲವರು ಕೊಡುತ್ತಿರುವ ಕಿರುಕುಳವನ್ನೂ ಸಹಿಸಿಕೊಳ್ಳಬೇಕು.

    ಎಲ್ಲ ಸಮಸ್ಯೆಗಳ ಮಧ್ಯೆ ಜೀವನ ನಿರ್ವಹಣೆ ಮಾಡುತ್ತಿದ್ದೇವೆ. ಮನೆಯಲ್ಲಿ ಗೆದ್ದಲು ಗೂಡು ಕಟ್ಟಿದ್ದು, ಹಾವು ಚೇಳುಗಳೊಟ್ಟಿಗೆ ಭಯದಲ್ಲೇ ಜೀವನ ಸಾಗಿಸುತ್ತಿದ್ದೇವೆ. ಪಡಿತರ ಚೀಟಿ, ವಿದ್ಯುತ್ ಇದೆ. ಶೌಚಕ್ಕೆ ಹಾಡಿಹಕ್ಲು ಹುಡುಕಿಕೊಂಡು ಹೋಗಬೇಕು. ಜಾಗದ ಹಕ್ಕುಪತ್ರವಿಲ್ಲದೆ ಮನೆ ಇನ್ನಿತರ ಸೌಲಭ್ಯ ವಂಚಿತರಾಗಿದ್ದೇವೆ. ಅಕ್ಕಪಕ್ಕದವರೂ ನಮ್ಮ ಒಕ್ಕಲೆಬ್ಬಿಸುವ ಪ್ರಯತ್ನ ಮಾಡುತ್ತಿದ್ದು, ಕಷ್ಟದ ಬದುಕಿನೊಟ್ಟಿಗೆ ವಿರೋಧವನ್ನೂ ಎದುರಿಸಿ ಜೀವನ ನಡೆಸುವುದು ಸಾಕಪ್ಪಾ ಸಾಕು ಎನ್ನಿಸಿಬಿಟ್ಟದೆ.
    -ನಾಗರತ್ನಾ, ಪಡೂರು ಮೂಲನಿವಾಸಿ ಮಹಿಳೆ

    ನಾಲ್ಕು ತಿಂಗಳಿಂದ ಸಂಬಳವಿಲ್ಲದೆ ಮನೆ ನಡೆಸುವುದು ಕಷ್ಟವಾಗಿದೆ. ನಾವು ಇರುವ ಜಾಗ ಒಟ್ಟು 32 ಸೆಂಟ್ಸ್ ಇದ್ದು, ಹಕ್ಕುಪತ್ರ ನೀಡಿದರೆ ನಮಗೆ ಸಿಗುವ ಸೌಲಭ್ಯದ ಜತೆ ಮನೆ ಕೂಡ ಪಡೆಯಲು ಸಾಧ್ಯ. ತಕ್ಷಣ ಗ್ರಾಪಂ ಬಾಕಿ ಸಂಬಳ ನೀಡಬೇಕು. ಜಿಲ್ಲಾಡಳಿತ ನಾವು ಕೂತ ಜಾಗದ ಹಕ್ಕು ನೀಡಿ, ನಮ್ಮನ್ನು ಬದುಕಲು ಬಿಡಬೇಕು.
    -ಮಂಜುನಾಥ, ವಾಟರ್ ಮೆನ್ ಹಟ್ಟಿಯಂಗಡಿ ಗ್ರಾಮ ಪಂಚಾಯಿತಿ

    ಮೂಲ ನಿವಾಸಿ ಕುಟುಂಬ ಕೂತ ಜಾಗ ಬೇರೆಯವರದ್ದಾಗಿದ್ದರೆ ಅದನ್ನು ವಿಕ್ರಯಿಸಿ, ಹಕ್ಕುಪತ್ರ ನೀಡಲು ಅವಕಾಶವಿಲ್ಲ. ಮೂಲನಿವಾಸಿ ಕೂತ ಸ್ಥಳ ಬಂಟ ಸಮುದಾಯಕ್ಕೆ ಸೇರಿದ್ದೆಂದು ಹೇಳಲಾಗುತ್ತಿದ್ದು, ಅವರು ಒಪ್ಪಿಗೆ ಕೊಟ್ಟರೆ ಹಕ್ಕುಪತ್ರ ಕೊಡಲು ಸಾಧ್ಯ. ಒಂದೊಮ್ಮೆ ಬೇರೆ ಕಡೆ ಅವರು ಹೋಗಲು ಒಪ್ಪಿದರೆ ನಿವೇಶನ ನೀಡಿ, ಮನೆ ಮಂಜೂರು ಮಾಡಬಹುದು. ಜಾಗದ ಮಾಲೀಕರ ಬಳಿ ಮಾತನಾಡಿ ಮನ ಒಲಿಸಿ, ಜಾಗ ಬಿಟ್ಟುಕೊಡಲು ಒಪ್ಪಿದರೆ ಅವರಿಗೆ ಎಲ್ಲ ಸೌಲಭ್ಯ ನೀಡಲು ಇಲಾಖೆ ಬದ್ಧವಾಗಿದೆ.
    -ವಿಶ್ವನಾಥ ಶೆಟ್ಟಿ, ಐಟಿಡಿಪಿ ಅಧಿಕಾರಿ, ಉಡುಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts