More

    ನಗರದ ಮಧ್ಯೆಯೊಂದು ಭತ್ತದ ಗದ್ದೆ!, ಸಿಟಿಯೊಳಗೆ ಇರುವ ಏಕೈಕ ಹೊಲ

    ಮಂಗಳೂರು: ನಗರದೊಳಗೆ ಕೃಷಿ ಚಟುವಟಿಕೆ ನೋಡುವುದೇ ಈಗ ಅಪರೂಪ. ದಶಕದ ಹಿಂದೆ ಕದ್ರಿ ಕಂಬಳವಾಗುತ್ತಿದ್ದಾಗ ಅಲ್ಲೊಂದು ಹುಲುಸಾದ ಗದ್ದೆ ಇರುತ್ತಿತ್ತು.

    ಈಗ ಅದಿಲ್ಲ. ಬಹುತೇಕ ಗದ್ದೆಗಳೆಲ್ಲ ಕರಗಿ ಹೋಗಿ ಅಲ್ಲೆಲ್ಲ ಬಹುಮಹಡಿ ಕಟ್ಟಡಗಳೆದ್ದಿವೆ. ಆದರೆ ಚಿಲಿಂಬಿ ಬಳಿಯಲ್ಲಿ ಮಾತ್ರ ಪುಟ್ಟ ಗದ್ದೆಯೊಂದು ಪ್ರತಿವರ್ಷವೂ ಹಸಿರಾಗಿ ನಳನಳಿಸುತ್ತದೆ. ಇದು ಚಿಲಿಂಬಿಯ ಫ್ರಾನ್ಸಿಸ್ ಸಾಲ್ದಾನ್ಹ ಅವರ ಗದ್ದೆ. ತಮ್ಮ ಸುಮಾರು 1.25 ಎಕರೆ ಗದ್ದೆಯಲ್ಲಿ ಪ್ರತಿ ಮಳೆಗಾಲದಲ್ಲೂ ಅವರು ಭತ್ತ ಬೆಳೆಯುತ್ತಾರೆ. ಮೊದಲ ಬೆಳೆಯಾಗಿ ಭತ್ತ, ಆ ಬಳಿಕ ತರಕಾರಿ ಬೆಳೆಸುತ್ತಾರೆ.
    ನನ್ನ ತಂದೆಯವರ ಕಾಲದಿಂದಲೂ ಗದ್ದೆ ಇದೆ. ಮೊದಲು ಮೂರು ಬೆಳೆ ತೆಗೆಯುತ್ತಿದ್ದೆವು. ಎರಡು ಭತ್ತ ಆ ಬಳಿಕ ಉದ್ದು ಆಗುತ್ತಿತ್ತು. ಆದರೆ ಭೂಮಸೂದೆಯಿಂದ ಭೂಮಿ ಎಲ್ಲ ಬೇರೆಯವರ ಪಾಲಾಗಿದೆ. ಇಷ್ಟೇ ಗದ್ದೆ ಉಳಿದುಕೊಂಡಿದೆ. ಈಗ ತೋಡುಗಳೂ ಗಲೀಜಾಗಿದ್ದು, ಕ್ಷೀಣಗೊಂಡಿದೆ. ನೀರಿನಾಶ್ರಯವೂ ಕಡಿಮೆ. ಹಾಗಾಗಿ ಮೊದಲ ಬೆಳೆ ಮಾತ್ರ ಭತ್ತ. ಆ ಬಳಿಕ ತರಕಾರಿ ಬೆಳೆಸುತ್ತೇವೆ ಎನ್ನುತ್ತಾರೆ ಫ್ರಾನ್ಸಿಸ್.

    ಫ್ರಾನ್ಸಿಸ್ ಅವರು 35 ವರ್ಷಗಳಿಂದ ಕೃಷಿಕ. ಇದೇನೂ ಲಾಭದಾಯಕವಲ್ಲ. ಆದರೆ ಪ್ರತಿ ವರ್ಷ ಕೃಷಿ ಮಾಡುವುದರಿಂದ ಗದ್ದೆ ಶುಚಿಯಾಗಿರುತ್ತದೆ. ಇಲ್ಲವಾದರೆ ಹುಲ್ಲು, ಕಳೆಗಿಡಗಳು ಬೆಳೆದು ಅಲ್ಲಿ ಜನರೂ ಕಸ ಎಸೆದು ಹಾಳು ಮಾಡುತ್ತಾರೆ. ಇನ್ನೊಂದು ವಿಚಾರ ಎಂದರೆ ಭತ್ತದಿಂದ ನಮಗೆ ಲಾಭವಿಲ್ಲದಿದ್ದರೂ ನಷ್ಟವೇನಿಲ್ಲ. ಗದ್ದೆ ಪಕ್ಕ ತೆಂಗಿನಮರಗಳೂ ಇವೆ. ಹೇಗೋ ನಡೆಯುತ್ತಿದೆ ಎನ್ನುತ್ತಾರೆ.
    ಹಿಂದೆ ಅವರೇ ಗದ್ದೆ ಉಳುವುದಕ್ಕೆ ಕೋಣಗಳನ್ನು ಸಾಕುತ್ತಿದ್ದರು. ಆದರೆ ಒಂದು ಬೆಳೆಗಾಗಿ ಕೋಣ ಸಾಕುವುದು ಪೂರೈಸುವುದಿಲ್ಲ. ಹಾಗಾಗಿ 10 ವರ್ಷಗಳಿಂದ ಕೋಣಗಳನ್ನು ಸಾಕುತ್ತಿಲ್ಲ. ಬದಲು ಬಜ್ಪೆ ಭಾಗದಿಂದ ಟಿಲ್ಲರ್ ತಂದು ಎರಡು ಬಾರಿ ಗದ್ದೆ ಉಳುಮೆ ಮಾಡಿ ನೇರವಾಗಿ ಬಿತ್ತನೆ ಮಾಡುತ್ತಾರೆ. ಈ ಬಾರಿ ಭದ್ರ ಭತ್ತವನ್ನು ಬಿತ್ತಿದ್ದಾರೆ. ಇದು ಕೊಯ್ಲಿಗೆ ಬರಲು 135 ದಿನ ಬೇಕಾಗುತ್ತದೆ. ಸಾಮಾನ್ಯವಾಗಿ ಜೂನ್ 2ನೇ ವಾರ ಬಿತ್ತನೆ ಮಾಡಿದರೆ ನವೆಂಬರ್‌ನಲ್ಲಿ ಕೊಯ್ಲಿಗೆ ಬರುತ್ತದೆ. ಆಗ ಮಳೆಯೂ ಇರುವುದಿಲ್ಲ.
    ಕೆಲಸಕ್ಕೆ ಜನ ಸಿಗುವುದಿಲ್ಲ, ಅದರಲ್ಲೂ ಊರಿನವರು ಇಲ್ಲವೇ ಇಲ್ಲ. ಘಟ್ಟ ಕಡೆಯವರು ಸಿಗುತ್ತಾರೆ. ಅವರನ್ನು ಕರೆದುಕೊಂಡು ಕೆಲಸ ಮಾಡಿಸುತ್ತೇನೆ ಎನ್ನುತ್ತಾರೆ ಫ್ರಾನ್ಸಿಸ್.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts