More

    ಬೇಸಾಯದ ನಂಟು ಬಿಡದ ಉದ್ಯಮಿ, ತೆಂಕ ಎರ್ಮಾಳಲ್ಲಿ 15 ಎಕರೆ ಭತ್ತ ಸಾಗುವಳಿ ಮಾನವ ಶ್ರಮದಲ್ಲೇ ನಾಟಿ

    ಪಡುಬಿದ್ರಿ: ಜಮೀನು ಮಾಲೀಕನಲ್ಲಿ ಕೃಷಿ ಪ್ರೇಮ, ಸ್ವಪ್ರಯತ್ನ ಇದ್ದಲ್ಲಿ ಕೃಷಿಭೂಮಿ ಎಂದೂ ಬರಿದಾಗದು ಎಂಬಂತೆ ಸುಮಾರು 15 ಎಕರೆ ಪ್ರದೇಶದಲ್ಲಿ ಭತ್ತ ನಾಟಿ ಮಾಡುವ ಮೂಲಕ ತೆಂಕ ಎರ್ಮಾಳು ಗ್ರಾಮದ ಅಂಬೋಡಿ ಹರೀಶ್ ಶೆಟ್ಟಿ ಕರಾವಳಿ ಕೃಷಿಕರಿಗೆ ಕೃಷಿ ಪ್ರೇಮ ಬೆಳೆಸುವಲ್ಲಿ ದಿಟ್ಟ ಹೆಜ್ಜೆಯಿರಿಸಿದ್ದಾರೆ.
    ಮುಂಬೈಯಲ್ಲಿ ಉದ್ಯಮಿಯಾಗಿದ್ದು, ಸಮಾಜಸೇವೆಯಲ್ಲಿ ತೊಡಗಿರುವ ಅವರು ಪ್ರತಿವರ್ಷ ತಾಯ್ನಡಿಗೆ ಆಗಮಿಸಿ ಕೃಷಿ ಚಟುವಟಿಕೆಯನ್ನು ನಿರಂತರವಾಗಿ ಮಾಡುತ್ತಿದ್ದಾರೆ. ಊರಲ್ಲಿ ಸಾವಿರಾರು ಎಕರೆ ಜಾಗ ಹಡಿಲು ಭೂಮಿಯಾಗಿ ಉಳಿದಿರುವುದು ಸಹಜ. ಇದಕ್ಕೆ ಹಲವಾರು ಕಾರಣಗಳಿವೆ. ಕೃಷಿಪ್ರೇಮ ಬೆಳೆಸಿ ಕರೊನಾದಂತಹ ಸಂಕಷ್ಟದ ಕಾಲಘಟ್ಟದಲ್ಲಿ ಪಾಳುಭೂಮಿಯಲ್ಲಿ ಕೃಷಿ ಉತ್ಪತ್ತಿ ಮಾಡಿ ಹಡಿಲು ಭೂಮಿಯನ್ನು ಫಲವತ್ತಾಗಿಸಬೇಕು. ಬೇಸಾಯಕ್ಕೆ ಸೂಕ್ತವಾದ ಭೂಮಿಯಲ್ಲಿ ಕಾಲಕಾಲಕ್ಕೆ ಅನುಗುಣವಾಗಿ ವಿವಿಧ ರೀತಿಯ ಕೃಷಿ ಕೈಗೊಂಡು ಫಸಲು ತೆಗೆಯಬಹುದು ಎನ್ನುತ್ತಾರೆ ಹರೀಶ್ ಶೆಟ್ಟಿ.

    ಕೋವಿಡ್ ಸಂಕಷ್ಟದ ನಡುವೆ ವಿಳಂಬವಾದರೂ, ಗದ್ದೆಗಳನ್ನು ಹದ ಮಾಡಿ ಭೂಮಿಗೆ ಪೂಜೆ ಸಲ್ಲಿಸಿ ಶನಿವಾರ ನಾಟಿ ಕಾರ್ಯಕ್ಕೆ ಚಾಲನೆ ನೀಡಿದರು. ಕೊಪ್ಪ ಮೂಲದ ಸುಮಾರು 60 ಜನ ಮಹಿಳಾ ಆಳುಗಳನ್ನು ಗುತ್ತಿಗೆ ಆಧಾರದಲ್ಲಿರಿಸಿ ನಾಟಿ ಮಾಡಿಸುತ್ತಿರುವ ಅವರು ಭತ್ತದ ಕೃಷಿಯಲ್ಲಿ ಖುಷಿ ಪಡುತ್ತಿದ್ದಾರೆ.
    ಕೃಷಿಯೋಗ್ಯ ಭೂಮಿಯನ್ನು ಎಂದೂ ಹಡಿಲು ಬೀಳದಂತೆ ನೋಡಿಕೊಳ್ಳುವ ಜವಾಬ್ದಾರಿ ಜಮೀನಿನ ಮಾಲೀಕನದ್ದಾಗಬೇಕು. ತಪ್ಪಿದರೆ ಸರ್ಕಾರಿ ಅಧಿಕಾರಿಗಳು ಈ ಬಗ್ಗೆ ಜಾಗೃತಿ ಮೂಡಿಸಬೇಕು. ಮಾಲೀಕರಿಗೆ ಬೇಸಾಯ ಅಸಾಧ್ಯವಾದರೆ ಕೃಷಿ ಪ್ರೇಮಿಗಳಿಗೆ ಗುತ್ತಿಗೆ ಆಧಾರದಲ್ಲಾದರೂ ಕೃಷಿಗೆ ಅನುಕೂಲಕರ ವಾತಾವರಣ ಸೃಷ್ಟಿಸಬೇಕು. ಶ್ರಮದಿಂದ ಬೆಳೆದ ಬೆಳೆ ಕೈಯಾರೆ ಸಂಗ್ರಹಿಸಿದಾಗ ಆಗುವ ಅನುಭವ, ನೆಮ್ಮದಿ ಊಹಿಸಲಸಾಧ್ಯ ಎನ್ನುವ ಹರೀಶ್, ಕೃಷಿ ಪೂರಕ ಬಹಳಷ್ಟು ಯೋಜನೆ, ಸೌಲಭ್ಯಗಳು, ಬಿತ್ತನೆಗೆ ಬೇಕಾದ ಬೀಜಗಳು ಮನೆಮನೆಗೆ ಹಂಚಿಕೆಯಾಗುತ್ತಿರುವ ಪ್ರಸ್ತುತ ಸಮಯದಲ್ಲಿ ಕೃಷಿಯಲ್ಲಿ ಅಧಿಕ ಆಸಕ್ತಿ ತೋರುವುದು ಉತ್ತಮ. ಇದರಿಂದಾಗಿ ನಿರುದ್ಯೋಗಿಗಳ ಬಾಳೂ ಬೆಳಗುವುದರಲ್ಲಿ ಸಂಶಯವಿಲ್ಲ.

    ಕೋವಿಡ್ ಪರಿಣಾಮದಿಂದ ಈ ಬಾರಿ ಗದ್ದೆಗಿಳಿಯಲು ತಡವಾದರೂ ಆಳುಗಳ ಉತ್ಸುಕತೆಯಿಂದ ಎಲ್ಲವೂ ಸಮಯೋಚಿತವಾಗಿ ಕೂಡಿಬರುತ್ತಿದೆ. ಸಮಯಕ್ಕೆ ಅನುಗುಣವಾಗಿ ಮಳೆಯೂ ನಮಗೆ ಸ್ಪಂದಿಸುವಂತಿದೆ. ಸ್ವತಃ ಕೊಯ್ಲು ಮಾಡಿ ಪಡೆದ ಅಕ್ಕಿಯ ಅನ್ನದ ರುಚಿ, ಮೌಲ್ಯ ವಿಶಿಷ್ಟವಾದುದು. ಬೆಳೆ ಕೈಯಾರೆ ಕೊಯ್ಲು ಬಹಳ ಪರಿಣಾಮಕಾರಿ ಮತ್ತು ಶ್ರಮದಾಯಕವಾಗಿರುತ್ತದೆ, ಬೆಲೆಯೂ ಉತ್ತಮವಾಗಿರುತ್ತದೆ. ಹಲವಾರು ಮಂದಿಗೆ ಕೆಲಸ ನೀಡಿ, ಸಮೃದ್ಧ ಫಸಲು ಪಡೆಯುವ ಶ್ರಮಿಕ ಬದುಕೇ ಖುಷಿ.
    ಹರೀಶ್ ಶೆಟ್ಟಿ, ಎರ್ಮಾಳು, ಕೃಷಿಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts