More

    ಮರೆಯಾಗದ ‘ಕಾಪು’ ಸಂಪ್ರದಾಯ

    ನಿಶಾಂತ್ ಶೆಟ್ಟಿ ಕಿಲೆಂಜೂರು
    ಆಧುನಿಕತೆಯ ಭರಾಟೆಯಲ್ಲಿ ತುಳು ಸಂಸ್ಕೃತಿ ನಾಶವಾಗುತ್ತಿದೆ. ಆದರೆ ಬಜ್ಪೆ ಸಮೀಪದ ಕಾರಣಿಕ ವ್ಯಕ್ತಿತ್ವದ ದುಗ್ಗಣ ಬೈದರ ಮನೆತನದ ಭೂಮಿ, ಪೆರಾರ ಕಬೆತ್ತಿಗುತ್ತಿನಲ್ಲಿ ಕಾಪು ಇಡುವ ಕೃಷಿ ಬದುಕಿನ ವಿಶೇಷ ಸಾಂಪ್ರದಾಯಿಕ ಈಗಲೂ ಜೀವಂತವಾಗಿದೆ.
    ಕಾಪು ಎಂದರೆ ತುಳುವಿನಲ್ಲಿ ಕಾಯುವುದು ಎಂದರ್ಥ. ತಾವು ಬೆಳೆದ ಬೆಳೆಗೆ ಯಾವ ರೀತಿಯ ದುಷ್ಟ ಶಕ್ತಿಗಳಿಂದ ತೊಂದರೆ ಬರದಂತೆ ಕಾಯಲು ಕಾಪು ಇಡಲಾಗುತ್ತದೆ.

    ಕಂಬಳ ಗದ್ದೆಯಲ್ಲಿ ಮಹಿಳೆಯರು ಪಾಡ್ದನ ಹಾಡುತ್ತಾ ನಾಟಿ ಕಾರ್ಯದಲ್ಲಿ ಮುಂದುವರಿಯುತ್ತಿದ್ದಂತೆ ಇತ್ತ ಗದ್ದೆಗೆ ಇಡಲು ಕಾಪು ತಯಾರಿ ಮಾಡಲಾಗುತ್ತದೆ. ಬಿದಿರಿನಲ್ಲಿ ಕಟ್ಟಿದ ರಥವನ್ನು ಹೋಲುವ ಪುಟ್ಟ ಅಟ್ಟೆಗೆ ಮಾವಿನ ಎಲೆ, ಕಾವೇರಿ ಮರದ ಎಲೆ, ತೆಂಗಿನ ಗರಿ, ದಾಸವಾಳ, ರಥ ಪುಷ್ಟ ಹೀಗೆ ನಾನಾ ಬಗೆಯ ಹೂ, ಎಲೆ ಚಿಗುರು, ಗೊಂಚಲುಗಳಿಂದ ಸಿಂಗರಿಸಿ ಕಂಬಳ ಗದ್ದೆಯ ಮಂಜೊಟ್ಟಿಯಲ್ಲಿ ಇರಿಸಲಾಗುತ್ತದೆ.
    ನಾಟಿ ಮುಗಿವ ಹೊತ್ತಿಗೆ ತಲೆಗೆ ಮುಂಡಾಸು ಕಟ್ಟಿ ಮನೆ ಯಜಮಾನ ಕಾಪುವನ್ನು ಹೊತ್ತು ಗದ್ದೆಯ ನಡುಮಧ್ಯೆ ಪ್ರಾಣಿ, ಪಕ್ಷಿ, ಜಂತುಗಳು, ದುಷ್ಟ ಶಕ್ತಿಗಳಿಂದ ಹೊಲದ ಬೆಳೆಯನ್ನು ರಕ್ಷಿಸಲೆಂದು ದೈವಶಕ್ತಿಗಳನ್ನು ನೆನೆದು ಸಂಕಲ್ಪ ಮಾಡಿ ಕಾವಲು ಶಕ್ತಿಯ ಸಂಕೇತವಾಗಿ ಕಾಪು ನೆಡುತ್ತಾರೆ.

    ಸಂಪ್ರದಾಯ ಪಾಲನೆ: ಪ್ರಸ್ತುತ ಗದ್ದೆ ಉಳುಮೆಗೆ ಯಂತ್ರವನ್ನು ಉಪಯೋಗಿಸಿದರೂ ಮತ್ತೆಲ್ಲ ಸಂಪ್ರದಾಯವನ್ನು ಚಾಚೂ ತಪ್ಪದೇ ಪಾಲಿಸಲಾಗುತ್ತಿದೆ, ಇತ್ತಚೆಗೆ ನಡೆದ ನಾಟಿ ಕಾರ್ಯದಲ್ಲಿ ಹಿರಿಯರಾದ ಭವಾನಿ ಪೆರಾರ ನೇತೃತ್ವದಲ್ಲಿ ಹಲವು ಕೃಷಿಗೀತೆ, ಪಾಡ್ದನ ಹಾಡಲಾಯಿತು. ನಾಟಿಯ ಕೆಲಸ ದಡ(ಮಂಜೊಟ್ಟಿ) ಸೇರುವ ಹೊತ್ತಿಗೆ ದಡದಲ್ಲಿ ನಿಂತು ದೇವರು, ದೈವಶಕ್ತಿಗಳನ್ನು ನೆನೆದು ಗದ್ದೆಗೆ ಅಕ್ಷತೆ ಹಾಕಿ ಎಲ್ಲರೂ ಮೂರುಬಾರಿ ಗೋವಿಂದಾ ಎಂದು ಹೇಳಿ ಏಕಕಾಲಕ್ಕೆ ಕೂ… ಎಂದು ಹೇಳಿ ವಿರಮಿಸುತ್ತಾರೆ. ಬಳಿಕ ಎಲ್ಲರೂ ಸಹಭೋಜನ ಮಾಡುವುದು ವಾಡಿಕೆ.

    ನಮ್ಮ ಹಿರಿಯರು ಹಾಕಿಕೊಟ್ಟ ಮಾದರಿಯಂತೆ ನಡೆಯುತ್ತಿದ್ದೇವೆ. ಹಿರಿಯರ ಕಾಲದಿಂದಲೂ ಅನೇಕ ಸಂಸ್ಕೃತಿ ಸಂಪ್ರದಾಯವೂ ನಿರಂತರ ಮುಂದುವರಿಯುತ್ತಿದೆ, ಏಣೆಲು ಕೃಷಿಗೆ ಕಾಪು ಇಡುವುದು ಪರಂಪರೆಯಿಂದ ನಡೆದು ಬಂದ ಕ್ರಮ. ಕಂಬಳ ಗದ್ದೆಯಲ್ಲಿ ಸಣ್ಣಕ್ಕಿಯ ಬೆಳೆ ಬೆಳೆದು ಪೆರಾರ ಬಲವಾಂಡಿ ಕ್ಷೇತ್ರಕ್ಕೆ ಬುಳೆಕಾಣಿಕೆ ನೀಡುವ ಕಟ್ಟಳೆ ನಡೆದು ಬಂದಿದೆ. ಅದರಂತೆ ಸುಗ್ಗಿಯ ಕೃಷಿಗೆ ಕಂಬಳಗದ್ದೆಯಲ್ಲಿ ಬಾರೆಪಾಡು ಕಂಬಳ ಸಂಪ್ರದಾಯವನ್ನೂ ನಡೆಸುತ್ತೇವೆ.
    ಮೋಹನ ಪೂಜಾರಿ, ಕಬೆತ್ತಿಗುತ್ತು ಮನೆತನದ ಈಗಿನ ಯಜಮಾನ

    ಭತ್ತ ಬೇಸಾಯಕ್ಕೆ ನಡುಮನೆ ಕುಟುಂಬ ಮಾದರಿ
    ಆಧುನಿಕ ಯುಗದಲ್ಲಿ ಹಳ್ಳಿ ಜೀವನ ತೆರೆಮರೆಗೆ ಸರಿಯುತ್ತಿದೆ. ಕೃಷಿ ಭೂಮಿಗಳಲ್ಲಿ ಹೆಜ್ಜೆಗೊಂದರಂತೆ ಮನೆಗಳು ತಲೆ ಎತ್ತಿದೆ. ಆದರೆ ಕಿನ್ನಿಗೋಳಿ ಸಮೀಪದ ಬಳ್ಕುಂಜೆ ಗ್ರಾಮ ಪಂಚಾಯಿತಿಯ ಕೊಲ್ಲೂರು ನಡುಮನೆ ನಾಯ್ಕ ಕುಟುಂಬದ 60 ಮಂದಿ ಹಲವು ವರ್ಷಗಳಿಂದ ಭತ್ತ ಕೃಷಿಯಲ್ಲಿ ತೊಡಗಿಸಿಕೊಂಡು ಮಾದರಿಯಾಗಿದ್ದಾರೆ.
    ತಮ್ಮ ಹಿರಿಯರ ಸುಮಾರು 5 ಎಕರೆ ಜಾಗದಲ್ಲಿ ತೆಂಗು ಕಂಗು, ಭತ್ತ ಕೃಷಿ ಕೈಗೊಂಡಿರುವ ಕುಟುಂಬದ ಸದಸ್ಯರು ಸುತ್ತಮುತ್ತ ಬೇರೆ ಬೇರೆ ಮನೆಗಳನ್ನು ಕಟ್ಟಿದ್ದಾರೆ. ಆದರೆ ಭತ್ತ ಬೇಸಾಯ ಸೇರಿದಂತೆ ಕೃಷಿ ಚಟುವಟಿಕೆಗಳು ಪ್ರಾರಂಭವಾಗಿ ಮುಗಿಯುವ ತನಕ ಎಲ್ಲ ಚಟುವಟಿಕೆಗಳನ್ನು ಒಟ್ಟಿಗೆ ಸೇರಿ ಮಾಡುತ್ತಾರೆ.

    ಕೃಷಿ ಕಾರ್ಯವಲ್ಲದೆ ಚೌತಿ, ಅಷ್ಟಮಿ ಮತ್ತಿತರ ಕಾರ್ಯಕ್ರಮಗಳನ್ನು ಕುಟುಂಬ ಸುಮಾರು 60 ಜನರೊಂದಿಗೆ ಆಚರಿಸುತ್ತಿರುವುದು ಅವಿಭಕ್ತ ಕುಟುಂಬವನ್ನು ನೆನಪಿಸುವಂತಿದೆ. ಕುಟುಂಬದಲ್ಲಿ ಶಿಕ್ಷಕರು, ಮಿಲಿಟರಿಯಿಂದ ಸ್ವಯಂನಿವೃತ್ತಿ ಪಡೆದವರು ಪಂಚಾಯಿತಿ ಸದಸ್ಯರು ಹೀಗೆ ಎಲ್ಲ ಕ್ಷೇತ್ರದಲ್ಲಿ ದುಡಿಯುವವರು ಇದ್ದು ಯಾವುದೇ ಬೇಧ ಭಾವ ಇಲ್ಲದೆ ತೊಡಗಿಸಿಕೊಂಡಿದ್ದಾರೆ. ಕುಟುಂಬದ ಸದಸ್ಯ ರಾಮ ನಾಯ್ಕ ಕೃಷಿ ಪ್ರಶಸ್ತಿ ಪಡೆದಿದ್ದಾರೆ. ಎಲ್ಲ ಕಾರ್ಯಕ್ರಮಗಳು ಕುಟುಂಬದ ಹಿರಿಯ ಸದಸ್ಯರಾದ ದೊಂಬ ನಾಯ್ಕ ಮುಂದಾಳತ್ವದಲ್ಲಿ ನಡೆಯುತ್ತದೆ.

    ಹಿರಿಯರ ಕಾಲದಿಂದಲೂ ಕೃಷಿಯನ್ನೇ ನಂಬಿಕೊಂಡು ಬಂದಿದ್ದೇವೆ. ಹಿರಿಯರಿಂದ ಬಂದ ಜಮೀನಿನಲ್ಲಿ ಅಲ್ಲಲ್ಲಿ ಮನೆ ಕಟ್ಟಿದರೂ, ಎಲ್ಲ ಕಾರ್ಯಕ್ರಮಗಳನ್ನು ಒಂದೇ ಮನೆಯಲ್ಲಿ ಒಟ್ಟಿಗೆ ಸೇರಿ ಆಚರಿಸುತ್ತೇವೆ. ಇಂತಹ ಸಂಪ್ರದಾಯ ಹಲವು ವರ್ಷದಿಂದ ನಡೆಯುತಿದ್ದು, ಇನ್ನೂ ಮುಂದುವರಿಯಲಿದೆ.
    ದೊಂಬ ನಾಯ್ಕ, ಕುಟುಂಬದ ಯಜಮಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts