More

    ಮಹಾ ವರುಣಾರ್ಭಟ, ಜನರ ಪರದಾಟ

    ಬೆಳಗಾವಿ: ಮಹಾರಾಷ್ಟ್ರ ಹಾಗೂ ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಕೃಷ್ಣಾ, ಘಟಪ್ರಭಾ, ಮಲಪ್ರಭಾ, ದೂಧಗಂಗಾ, ವೇದಗಂಗಾ, ಮಾರ್ಕಂಡೇಯ, ಹಿರಣ್ಯಕೇಶಿ ನದಿಗಳು ಉಕ್ಕಿ ಹರಿಯುತ್ತಿವೆ. ಇದರಿಂದ ಚಿಕ್ಕೋಡಿ, ರಾಯಬಾಗ, ಗೋಕಾಕ, ಮೂಡಲಗಿ, ಅಥಣಿ, ನಿಪ್ಪಾಣಿ, ಸವದತ್ತಿ, ಬೆಳಗಾವಿ, ರಾಮದುರ್ಗ, ಖಾನಾಪುರ ವ್ಯಾಪ್ತಿಯ ನೂರಾರು ಗ್ರಾಮಗಳು ಸಂಕಷ್ಟಕ್ಕೆ ಸಿಲುಕಿವೆ. ಮಳೆ ತಂದಿಟ್ಟ ಸಮಸ್ಯೆಗೆ ಜನರು ನಲುಗಿದ್ದಾರೆ.

    ಹುಕ್ಕೇರಿ ತಾಲೂಕಿನ ಹಿಡಕಲ್ ಜಲಾಶಯದಿಂದ 32,894 ಕ್ಯೂಸೆಕ್, ಮಾರ್ಕಂಡೇಯ ಜಲಾಶಯದಿಂದ 10,801 ಕ್ಯೂಸೆಕ್, ಹಿರಣ್ಯಕೇಶಿ ನದಿಯಿಂದ 15,744 ಕ್ಯೂಸೆಕ್ ಹಾಗೂ ಬಳ್ಳಾರಿ ನಾಲಾದಿಂದ 13,364 ಕ್ಯೂಸೆಕ್ ನೀರು ಸೇರಿದಂತೆ ಘಟಪ್ರಭಾ ನದಿಗೆ ಸೋಮವಾರ 75,615 ಕ್ಯೂಸೆಕ್ ನೀರು ಹರಿದು ಬರುತ್ತಿದೆ.
    ಗೋಕಾಕ ತಾಲೂಕಿನ ಲೋಳಸೂರ, ಗೋಕಾಕ ಫಾಲ್ಸ್ ಸೇತುವೆಗಳು, ಮೂಡಲಗಿ ತಾಲೂಕಿನ ಢವಳೇಶ್ವರ, ಅವರಾದಿ, ಬಿಸನಕೊಪ್ಪ ಸೇತುವೆ ಮುಳುಗಡೆಯಾಗಿವೆ.

    ಅಲ್ಲದೆ ನದಿ ದಡದಲ್ಲಿರುವ ಮೆಳವಂಕಿ, ಉದಗಟ್ಟಿ, ತಳಕಟ್ಟನಾಳ, ಮುಸಗುಪ್ಪಿ, ತಿಗಡಿ, ಪುಲಗಡ್ಡಿ, ಸುಣಧೋಳಿ, ಬೈರನಟ್ಟಿ, ಹುಣಶ್ಯಾಳ, ಢವಳೇಶ್ವರ, ಅರಳಿಮಟ್ಟಿ, ಅವರಾದಿ, ಬಿಸನಕೊಪ್ಪ ಗ್ರಾಮಗಳು ಸುತ್ತಮುತ್ತಲಿನ ಪ್ರದೇಶಗಳೂ ಜಲಾವೃತಗೊಂಡಿವೆ ಎಂದು ಕಂದಾಯ ಇಲಾಖೆ ಮತ್ತು ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

    ನವಿಲುತೀರ್ಥ ಜಲಾಶಯದಿಂದ ಮಲಪ್ರಭಾ ನದಿಗೆ 26,864 ಕ್ಯೂಸೆಕ್ ನೀರು ಬಿಟ್ಟಿರುವುದರಿಂದ ಸವದತ್ತಿ ಮತ್ತು ರಾಮದುರ್ಗ ತಾಲೂಕಿನ ನದಿ ದಡದ ಗ್ರಾಮಗಳ ಸುತ್ತಮುತ್ತಲಿನ ಪ್ರದೇಶ ಜಲಾವೃತಗೊಂಡಿವೆ. ಗ್ರಾಮ ಸಂಪರ್ಕಿಸುವ ರಸ್ತೆಗಳು ಮುಳಗಡೆಯಾಗಿವೆ.

    ರಾಜ್ಯ ಹೆದ್ದಾರಿ ಕುಸಿತ: ಕಳೆದ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಬೆಳಗಾವಿ ತಾಲೂಕಿನ ಮಾರಿಹಾಳ ಹಳ್ಳ ತುಂಬಿ ಹರಿಯುತಿದೆ. ಇದರಿಂದಾಗಿ ಮಾರಿಹಾಳ- ಮೋದಗಾ ಗ್ರಾಮಗಳ ನಡುವಿನ ಸೇತುವೆ ಬಳಿ ಬೆಳಗಾವಿ-ಬಾಗಲಕೋಟೆ ರಾಜ್ಯ ಹೆದ್ದಾರಿ ಕುಸಿದು ಬಿದ್ದಿದೆ. ಇದೀಗ ಈ ಭಾಗದಲ್ಲಿ ಅರ್ಧ ರಸ್ತೆಯನ್ನೇ ಸಂಪೂರ್ಣ ಬಂದ್ ಮಾಡಲಾಗಿದೆ.

    ಅಂತ್ಯಕ್ರಿಯೆಗೆ ತೆರಳಲು ಹರಸಾಹಸ: ಸತತ ಮಳೆಯಿಂದಾಗಿ ಬಳ್ಳಾರಿ ನಾಲಾ ಉಕ್ಕಿ ಹರಿಯುತ್ತಿದ್ದು, ಬೆಳಗಾವಿಯ ಸಾಯಿ ನಗರದ ನೇಕಾರ ಕಾಲನಿಗೆ ನೀರು ನುಗ್ಗಿದೆ. ರಸ್ತೆಗಳೆಲ್ಲ ಕೆರೆ ಸ್ವರೂಪ ಪಡೆದುಕೊಂಡಿದ್ದು, ವಾಹನ ಸಂಚಾರ ಸ್ಥಗಿತಗೊಂಡಿತ್ತು. ಜಲಾವೃತ ರಸ್ತೆಯಲ್ಲಿಯೇ ಮನೆಯಿಂದ ಮೃತದೇಹ ಹೊರತಂದ ಓರ್ವ ಕುಟುಂಬಸ್ಥರು, ಹೆಗಲ ಮೇಲೆ ಶವ ಹೊತ್ತು ರುದ್ರಭೂಮಿಗೆ ತರಳಲು ಹರಸಾಹಸಪಟ್ಟರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts