More

    ಒಂದೇ ಕೆಲಸಕ್ಕೆ ಎರಡು ಬಿಲ್!

    ಕೊಪ್ಪ: ತಾಲೂಕಿನಲ್ಲಿ ಕೆಲ ಭಾಗಗಳಲ್ಲಿ ಗುತ್ತಿಗೆದಾರರು ಒಂದು ಕೆಲಸಕ್ಕೆ ಎರಡು ಕಡೆ ಬಿಲ್ ಮಾಡಿಸಿಕೊಂಡು ಅವ್ಯವಹಾರ ನಡೆಸಿದ್ದಾರೆ ಎಂದು ತಾಪಂ ಸದಸ್ಯ ಎನ್.ಕೆ ಉದಯ್ ಆರೋಪಿಸಿದರು.

    ಸೋಮವಾರ ನಡೆದ ತಾಪಂ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಗುಡ್ಡೆತೋಟ ಗ್ರಾಪಂ ವ್ಯಾಪ್ತಿಯಲ್ಲಿ ಹಲವು ಕಾಮಗಾರಿಗಳನ್ನು ನರೇಗಾ ಅಡಿ ಕೆಲಸ ಮಾಡಿಕೊಂಡು ಗುತ್ತಿಗೆದಾರರು ಹಣ ಪಡೆದಿದ್ದಾರೆ. ಅದೇ ಕೆಲಸವನ್ನು ಅತಿವೃಷ್ಟಿ ಕಾಮಗಾರಿ ಮಾಡಿ ಅನುದಾನ ಬಿಡುಗಡೆ ಮಾಡಿಕೊಂಡಿದ್ದಾರೆ ಎಂದು ಸಭೆ ಗಮನಕ್ಕೆ ತಂದರು.

    ಬೆತ್ತದಕೊಳಲು ರಸ್ತೆಯನ್ನು ಗ್ರಾಪಂನಿಂದ ನರೇಗಾದಲ್ಲಿ ಕೆಲಸ ಮಾಡಿ ಇದೇ ಕೆಲಸಕ್ಕೆ ಅತಿವೃಷ್ಟಿಯಲ್ಲಿ ಹಣ ಬಿಡುಗಡೆ ಮಾಡಲಾಗಿದೆ. ಹುಲ್ಲಿನಗದ್ದೆಯ ಸೇತುವೆ ಕೈಪಿಡಿಯ ಕಾಮಗಾರಿ ಮಾಡದೆ ಹಣ ಪಡೆದಿರುವ ಬಗ್ಗೆ ಅನುಮಾನವಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಅಕ್ರಮ ನಡೆಸಿದ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಬೇಕು ಎಂದು ಹೇಳಿದರು.

    ತಾಪಂ ಇಒ ನವೀನ್​ಕುಮಾರ್ ಮಾತನಾಡಿ, ಸರ್ಕಾರಕ್ಕೆ ಮೋಸ ಮಾಡಿ ಒಂದೇ ಕಾಮಗಾರಿಗೆ ಹಾಗೂ ಮಾಡದೇ ಇರುವ ಕೆಲಸಕ್ಕೆ ಹಣ ಬಿಡುಗಡೆಯಾಗಿರುವ ಬಗ್ಗೆ ಜಿಪಂ ಇಂಜಿನಿಯರಿಂಗ್ ವಿಭಾಗ ಪರಿಶೀಲಿಸಬೇಕು. ಅವರಿಗೆ ಹಣ ಬಿಡುಗಡೆಯಾಗಿದ್ದಾರೆ ನಿಮ್ಮಿಂದಲೂ ಸಹ ತಪ್ಪಾಗಿರುತ್ತದೆ ಎಂದರು.

    ಇದಕ್ಕೆ ಪ್ರತಿಕ್ರಿಯಿಸಿದ ಎಇಇ ಈಶ್ವರ್, ಶೀಘ್ರವೇ ಎಲ್ಲ ಕಾಮಗಾರಿಗಳನ್ನು ಪರಿಶೀಲಿಸಲಾಗುವುದು. ಗುತ್ತಿಗೆದಾರರು ಮೋಸ ಮಾಡಿದ್ದರೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts