More

    ರಾಹುಲ್ ಗಾಂಧಿಗೆ ಪ್ರವೇಶ ನಿರಾಕರಿಸಿದ್ದಕ್ಕೆ ಆಕ್ರೋಶ

    ಚಿಕ್ಕಮಗಳೂರು: ಸಂಸದ ರಾಹುಲ್ ಗಾಂಧಿ ಭಾರತ್ ಜೋಡೊ ನ್ಯಾಯ ಯಾತ್ರೆ ಸಂದರ್ಭ ಅಸ್ಸಾಂ ರಾಜ್ಯದ ನಾಗಾಂವ್ ಜಿಲ್ಲೆಯ ವೈಷ್ಣವ ವಿರಕ್ತ ಸ್ಥಳ ಪ್ರವೇಶಕ್ಕೆ ವಿರೋಧ ವ್ಯಕ್ತಪಡಿಸಿದ ಸರ್ಕಾರದ ಧೋರಣೆ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ನಗರದ ಹನುಮಂತಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

    ದೇಶದಲ್ಲಿ ರಾಮಲಲ್ಲಾ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ಕೇಂದ್ರ ಸರ್ಕಾರ ಆಯೋಜಿಸಿದೆ. ಇದನ್ನು ಬೆಂಬಲಿಸಿ ರಾಜ್ಯ ಸರ್ಕಾರ ರಾಜ್ಯದ 840 ಮುಜರಾಯಿ ದೇವಾಲಯಗಳಲ್ಲಿ ಪೂಜೆ ಸಲ್ಲಿಸಿದೆ. ಇಂಥ ಸಂದರ್ಭದಲ್ಲಿ ಅಡ್ಡಿಪಡಿಸಲಾಗಿದೆ. ಯಾವುದೇ ಒಬ್ಬ ವ್ಯಕ್ತಿ ಯಾವ ದೇವಸ್ಥಾನಕ್ಕಾಗಲಿ, ಯಾತ್ರೆ ಮಾಡುವುದಕ್ಕಾಗಲಿ ಮುಂದಾದಾಗ ತಡೆಯಬಾರದೆಂಬ ನಿಯಮವಿದ್ದರೂ ಅಲ್ಲಿನ ಸರ್ಕಾರ ಯಾತ್ರೆ ತಡೆದಿದೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಅಸಮಾಧಾನ ವ್ಯಕ್ತಪಡಿಸಿದರು.
    ರಾಹುಲ್ ಗಾಂಧಿ ಸರಳ ಸಜ್ಜನಿಕೆಯ ವ್ಯಕ್ತಿ. ಸಾಮಾನ್ಯ ಪ್ರಜೆಗಳ ಬಳಿ ತೆರಳಿ ಅವರ ಸಮಸ್ಯೆ ಆಲಿಸುತ್ತಿದ್ದಾರೆ. ಇಂತಹ ಮಾತೃ ಹೃದಯಿ ವ್ಯಕ್ತಿಯ ಮೇಲೆ ದಾಳಿ ನಡೆಸಲು ಮುಂದಾಗಿರುವುದು ಬಿಜೆಪಿ ಸಂಸ್ಕೃತಿಯನ್ನು ತೋರುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
    ಕೆಪಿಸಿಸಿ ಮಹಿಳಾ ಘಟಕದ ಉಪಾಧ್ಯಕ್ಷೆ ರೇಖಾ ಹುಲಿಯಪ್ಪ ಗೌಡ ಮಾತನಾಡಿ, ರಾಹುಲ್ ಗಾಂಧಿ ಜನಪರ ಹೋರಾಟ ಮತ್ತು ಜನರ ಸಮಸ್ಯೆಗಳನ್ನು ಕೇಂದ್ರ ಸರ್ಕಾರದ ಗಮನ ಸೆಳೆಯಲು ಯಾತ್ರೆ ನಡೆಸುತ್ತಿದ್ದಾರೆ. ಇದರಿಂದಾಗಿ ಹಿಂದುಳಿದ, ದಲಿತ, ಅಲ್ಪಸಂಖ್ಯಾತರು ಒಗ್ಗೂಡುತ್ತಿರುವುದನ್ನು ಸಹಿಸಲಾಗದೆ ಕೇಂದ್ರ ಸರ್ಕಾರ ಹಿಂದುತ್ವವನ್ನು ಗುತ್ತಿಗೆ ಪಡೆದುಕೊಂಡಂತೆ ವರ್ತಿಸಿದೆ ಎಂದು ದೂರಿದರು.
    ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷ ಡಾ. ಡಿ.ಎಲ್.ವಿಜಯಕುಮಾರ್ ಮಾತನಾಡಿ, ನ್ಯಾಯ ಯಾತ್ರೆ ಮೂಲಕ ಜನಸಾಮಾನ್ಯರ ಸಮಸ್ಯೆಗಳನ್ನು ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಲು ರಾಹುಲ್ ಗಾಂಧಿ ಮುಂದಾಗಿದ್ದಾರೆ. ಇದನ್ನು ಸಹಿಸದ ಬಿಜೆಪಿ ಇಂತಹ ಹೀನ ಕೃತ್ಯಕ್ಕೆ ಇಳಿದಿದೆ ಎಂದು ಟೀಕಿಸಿದರು.
    ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಚ್.ಪಿ.ಮಂಜೇಗೌಡ, ಮಹಡಿಮನೆ ಸತೀಶ್, ಬಿ.ಎಚ್.ಹರೀಶ್, ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಸೌಂದರ್ಯ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಂ.ಸಿ.ಶಿವಾನಂದಸ್ವಾಮಿ, ನಗರಾಧ್ಯಕ್ಷ ತನೂಜ್‌ಕುಮಾರ್, ಮಾಜಿ ಸಿಡಿಎ ಅಧ್ಯಕ್ಷ ಸೈಯದ್ ಹನೀಫ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts