ಬೆಳಗಾವಿ: ಸಾವಯವ ಕೃಷಿಗೆ ಪ್ರೋತ್ಸಾಹಿಸುವ ಮತ್ತು ಉತ್ಪನ್ನಗಳಿಗೆ ವಿಶೇಷ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವ ಯೋಜನೆ ರೂಪಿಸಲಾಗುವುದು ಎಂದು ಉಪಮುಖ್ಯಮಂತ್ರಿ ಹಾಗೂ ಕೃಷಿ ಸಚಿವ ಲಕ್ಷ್ಮಣ ಸವದಿ ಭರವಸೆ ನೀಡಿದ್ದಾರೆ.
ಬೆಳಗಾವಿ ನಗರದ ಚನ್ನಮ್ಮ ವೃತ್ತದಲ್ಲಿ ಶುಕ್ರವಾರ ಕೃಷಿ ಇಲಾಖೆ ಆಯೋಜಿಸಿದ್ದ ಸಾವಯವ- ಸಿರಿಧಾನ್ಯ ನಡಿಗೆ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಸಾವಯವ ಉತ್ಪನ್ನಗಳ ಬಳಕೆ ಅವಶ್ಯಕವಾಗಿದೆ. ದಿನದಿಂದ ದಿನಕ್ಕೆ ಬೇಡಿಕೆ ಪ್ರಮಾಣ ಹೆಚ್ಚಾಗುತ್ತಿದೆ. ಆದರೆ, ನಿರೀಕ್ಷಿತ ಪ್ರಮಾಣದಲ್ಲಿ ಉತ್ಪಾದನೆ ಆಗುತ್ತಿಲ್ಲ ಎಂದರು. ದೇಶದಲ್ಲಿ ಸಾವಯವ ಕೃಷಿಗೆ ಉತ್ತೇಜನ ನೀಡುವ ಉದ್ದೇಶದಿಂದಲೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನೇಕ ಯೋಜನೆ ಅನುಷ್ಠಾನಕ್ಕೆ ತಂದಿವೆ. ಜತೆಗೆ ವಾರ್ಷಿಕ ಬಜೆಟ್‌ನಲ್ಲಿ ವಿಶೇಷ ಅನುದಾನ ಮೀಸಲಿಡುತ್ತಿದೆ. ಮುಂಬರುವ ದಿನಗಳಲ್ಲಿ ಸಾವಯವ ಕೃಷಿಗೆ ಮತ್ತು ಉತ್ಪನ್ನಗಳಿಗೆ ವಿಶೇಷ ಆದ್ಯತೆ ನೀಡುವ ಯೋಜನೆ ಸಿದ್ಧಪಡಿಸಲಾಗುವುದು ಎಂದರು. ನಗರದಲ್ಲಿ ಜ. 25 ಮತ್ತು 26ರಂದು ಎರಡು ದಿನ ಸಾವಯವ-ಸಿರಿಧಾನ್ಯ ಮೇಳ ಆಯೋಜಿಸಲಾಗಿದೆ. ಸಾರ್ವಜನಿಕರು, ರೈತರು, ವ್ಯಾಪಾರಸ್ಥರು ಮೇಳದಲ್ಲಿ ಭಾಗವಹಿಸಿ ಸದುಪಯೋಗ ಮಾಡಿಕೊಳ್ಳಬೇಕು ಎಂದು ಸಚಿವ ಸವದಿ ಹೇಳಿದರು.
ಆರೋಗ್ಯ ವೃದ್ಧಿ: ಜಿಪಂ ಸಿಇಒ ಡಾ. ಕೆ.ವಿ. ರಾಜೇಂದ್ರ ಮಾತನಾಡಿ, ಸಿರಿಧಾನ್ಯಗಳನ್ನು ಹೆಚ್ಚೆಚ್ಚು ಬಳಸಿದರೆ ರೋಗಗಳಿಂದ ಮುಕ್ತರಾಗಬಹುದು. ರೈತರು ಸಾವಯವ ಕೃಷಿಗೆ ಹೆಚ್ಚಿನ ಅದ್ಯತೆ ನೀಡಬೇಕು. ಸಾವಯವ ಕೃಷಿಗಾಗಿ ಸರ್ಕಾರ ನೀಡುತ್ತಿರುವ ಸೌಲಭ್ಯ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು. ಕೃಷಿ ಇಲಾಖೆ ಹಿರಿಯ ಅಧಿಕಾರಿ ಡಾ. ವಿ.ಜೆ. ಪಾಟೀಲ, ಜಂಟಿ ನಿರ್ದೇಶಕ ಜಿಲಾನಿ ಮೊಖಾಶಿ, ಉಪ ನಿರ್ದೇಶಕ ಎಚ್.ಡಿ. ಕೋಳೆಕರ, ತೋಟಗಾರಿಕೆ ಉಪ ನಿರ್ದೇಶಕ ರವೀಂದ್ರ ಹಕಾಟಿ, ವಿದ್ಯಾರ್ಥಿಗಳು, ರೈತರು ಇದ್ದರು.
ದೇಹದ ದಣಿವಿಗೆ ಸಿರಿಧಾನ್ಯದ ಅಡುಗೆ: ನಗರದ ಚನ್ನಮ್ಮ ವೃತ್ತದಿಂದ ಆರಂಭಗೊಂಡ ಸಾವಯವ-ಸಿರಿಧಾನ್ಯ ನಡಿಗೆಯು ನಗರದ ಪ್ರಮುಖ ರಸ್ತೆಗಳ ಮೂಲಕ ಎಸ್.ಜಿ.ಬಾಳೇಕುಂದ್ರಿ ಇಂಜಿನಿಯರಿಂಗ್ ಕಾಲೇಜು ಮೈದಾನದ ವರೆಗೆ ಜರುಗಿತು. ನಡಿಗೆಯಲ್ಲಿ ಭಾಗವಹಿಸಿದ್ದ ವಿವಿಧ ಶಾಲಾ ಮಕ್ಕಳು, ‘ದೇಹದ ದಣಿವಿಗೆ ಸಿರಿಧಾನ್ಯದ ಅಡುಗೆ, ಸಿರಿಧಾನ್ಯ ಹಳೆಯ ಊಟ ಹೊಸ ನೋಟ’ ಎಂಬ ಘೋಷಣೆಗಳ ಮೂಲಕ ಗಮನ ಸೆಳೆದರು.