More

    ಕಿನ್ನಿಗೋಳಿ ಪಪಂನಿಂದ ಸಾವಯವ ಗೊಬ್ಬರ ತಯಾರಿ

    ನಿಶಾಂತ್ ಶೆಟ್ಟಿ ಕಿಲೆಂಜೂರು
    ಕಿನ್ನಿಗೋಳಿ ಪಟ್ಟಣ ಪಂಚಾಯಿತಿ ತ್ಯಾಜ್ಯದಿಂದ ಸಾವಯವ ಗೊಬ್ಬರ ತಯಾರಿಸಿದ್ದು, ‘ಕಿನ್ನಿಗೋಳಿ ಗೋಲ್ಡ್’ ಹೆಸರಿನಲ್ಲಿ ಬಿಡುಗಡೆಗೊಳಿಸಲು ಅಣಿಯಾಗಿದೆ.
    ಕೆಲವರ್ಷಗಳ ಹಿಂದೆ ಕಿನ್ನಿಗೋಳಿ ಮತ್ತು ಮೆನ್ನಬೆಟ್ಟು ಪಂಚಾಯಿತಿ ಕಿನ್ನಿಗೋಳಿ ಸ್ಮಶಾನದ ಬಳಿ ಘನ ತ್ಯಾಜ್ಯ ನಿರ್ವಹಣಾ ಘಟಕ ಆರಂಭಿಸಿದ್ದು, ಕಿನ್ನಿಗೋಳಿ ಮತ್ತು ಮೆನ್ನಬೆಟ್ಟು ಪಂಚಾಯಿತಿ ವ್ಯಾಪ್ತಿಯ ಕಸವನ್ನು ಸಂಗ್ರಹಿಸಿ ಘಟಕಕ್ಕೆ ರವಾನಿಸಲಾಗುತ್ತಿತ್ತು. ನಂತರ ಒಣ ಮತ್ತು ಹಸಿ ಕಸ ಬೇರ್ಪಡಿಸಿ ಹಸಿ ಕಸದಿಂದ ಸಾವಯವ ಗೊಬ್ಬರ ತಯಾರಿಸಲಾಗುತ್ತಿತ್ತು. ಈ ಗೊಬ್ಬರವನ್ನು ಸ್ಥಳೀಯ ರೈತರು ಖರೀದಿಸುತ್ತಿದ್ದರು. ಇದೀಗ ಕಿನ್ನಿಗೋಳಿ, ಕಟೀಲು ಮತ್ತು ಮೆನ್ನಬೆಟ್ಟು ಪಂಚಾಯಿತಿಗಳು ಸೇರಿ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿದ್ದು, ಪಟ್ಟಣ ಪಂಚಾಯಿತಿ ಮೂಲಕ ಸಾವಯವ ಗೊಬ್ಬರಕ್ಕೆ ಹೊಸ ರೂಪು ನೀಡಲಾಗಿದೆ. ಮುಂದಿನ ವಾರದಿಂದ ‘ಕಿನ್ನಿಗೋಳಿ ಗೋಲ್ಡ್’ ಹೆಸರಿನಿಂದ ಬಿಡುಗಡೆಯಾಗಲಿದೆ.

    5, 10 ಕೆ.ಜಿ ಚೀಲದಲ್ಲಿ ಮಾರಾಟ: ಕಿನ್ನಿಗೋಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಕಸವನ್ನು ಸಂಗ್ರಹಿಸಲಾಗುತ್ತಿದ್ದು, ಎರಡು ವಾಹನಗಳಲ್ಲಿ ದಿನಕ್ಕೆ 4 ಲೋಡ್ ಕಸ ಸಂಗ್ರಹವಾಗುತ್ತದೆ. ಇದನ್ನು ತ್ಯಾಜ್ಯ ಘಟಕಕ್ಕೆ ತಂದು ಅಲ್ಲಿ ಹಸಿ ಕಸ ಮತ್ತು ಒಣ ಕಸವಾಗಿ ವಿಂಗಡಿಸಲಾಗುತ್ತದೆ. ಪ್ಲಾಸ್ಟಿಕ್, ಗಾಜು ಮತ್ತಿತರ ವಸ್ತುಗಳನ್ನು ಬೇರ್ಪಡಿಸಲಾಗುತ್ತದೆ. ಹಸಿ ಕಸಗಳನ್ನು ಘಟಕದಲ್ಲಿ ಸಾವಯವ ಗೊಬ್ಬರವನ್ನಾಗಿ ಮಾಡಲಾಗುತ್ತದೆ. ಈ ಗೊಬ್ಬರವನ್ನು ಅಗತ್ಯವಿದ್ದವರಿಗೆ ಮಾರಾಟ ಮಾಡಲಾಗುತ್ತದೆ. ಇದೀಗ 5, 10 ಕೆ.ಜಿ. ಬ್ಯಾಗ್‌ಗಳನ್ನು ತಯಾರಿಸಲಾಗುತ್ತಿದ್ದು, ನಂತರ ದಿನಗಳಲ್ಲಿ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಗಾತ್ರ ನಿರ್ಧರಿಸಲಾಗುತ್ತದೆ. ಕಸ ಗೊಬ್ಬರವಾಗಿ ಪರಿವರ್ತನೆಯಾಗಲು ಸುಮಾರು ಮೂರು ತಿಂಗಳು ಬೇಕಾಗುತ್ತಿದ್ದು, ತಿಂಗಳಿಗೆ ಸುಮಾರು 700 ಕೆ.ಜಿ ಗೊಬ್ಬರ ತಯಾರಾಗುತ್ತದೆ.

    ಕಾರ್ಮಿಕರ ಸುರಕ್ಷೆಗೆ ಆದ್ಯತೆ: ಘಟಕದಲ್ಲಿ ಕಸ ಸಂಗ್ರಹಣೆ ಮೇಲ್ವಿಚಾರಕರು ಸೇರಿ ಒಟ್ಟು 16 ಮಂದಿ ಪೌರ ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದಾರೆ. ಎಲ್ಲ ಸಿಬ್ಬಂದಿ ಸ್ವಚ್ಛತೆಗೆ ಗಮನ ಹರಿಸಲಾಗಿದ್ದು, ಅವರಿಗೆ ಬೇಕಾದ ಮಾಸ್ಕ್, ಗ್ಲೌಸ್, ಶೂ ಮತ್ತಿತರ ಅಗತ್ಯ ವಸ್ತುಗಳನ್ನು ನೀಡಲಾಗಿದೆ. ಮುಂದೆ ಸ್ವಚ್ಛ ಭಾರತ್ ಮಿಷನ್ ವತಿಯಿಂದ ಇದಕ್ಕೆ ಬೇಕಾದ ಅಗತ್ಯ ವಸ್ತುಗಳು ದೊರೆಯಲಿದೆ.

    ತಿಂಗಳಿಗೆ ಸುಮಾರು ಏಳು ಕಿಂಟ್ಟಾಲ್‌ನಷ್ಟು ಗೊಬ್ಬರ ಉತ್ಪತ್ತಿಯಾಗುತ್ತಿದೆ. ಗೊಬ್ಬರ ಅತ್ಯುತ್ತಮವಾಗಿದ್ದು ಕೈತೋಟ, ಗದ್ದೆ ತೋಟಗಳಿಗೆ ಉಪಯೋಗಿಸಬಹುದಾಗಿದೆ. ಮುಂದಿನ ವಾರ ಶಾಸಕ ಉಮಾನಾಥ ಕೋಟ್ಯಾನ್ ಬಿಡುಗಡೆ ಮಾಡಲಿದ್ದಾರೆ.
    ಸಾಯೀಶ್ ಚೌಟ, ಕಿನ್ನಿಗೋಳಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts