More

    ಮನೆಯಲ್ಲೇ 60ಕ್ಕೂ ಹೆಚ್ಚು ತಳಿಗಳ ಗಡ್ಡೆ, ಗೆಣಸು ಬ್ಯಾಂಕ್!

    ಭರತ್‌ರಾಜ್ ಸೊರಕೆ ಮಂಗಳೂರು
    ಸಾಮಾನ್ಯವಾಗಿ ಕೃಷಿಕರ ತೋಟದಲ್ಲಿ ಎಷ್ಟು ಬಗೆಯ ಗಡ್ಡೆ, ಗೆಣಸಿವೆ ಎಂದು ಕೇಳಿದರೆ ಉತ್ತರ ಬೆರಳೆಣಿಕೆ ಮೀರಲಿಕ್ಕಿಲ್ಲ. ಆದರೆ ಪುತ್ತೂರು ಮುಡಿಪುನಡ್ಕದ ಸಾವಯವ ಕೃಷಿಕ ಹರಿಕೃಷ್ಣ ಕಾಮತ್ 60ಕ್ಕೂ ಹೆಚ್ಚು ಬಗೆಯ ಗಡ್ಡೆ, ಗೆಣಸು ಸಂಗ್ರಹಿಸಿ ಬೆಳೆಯುತ್ತಿದ್ದಾರೆ.

    ತರಕಾರಿ ಮತ್ತು ಗಡ್ಡೆಗಳ ಬೆಳೆ ಇರುವುದು ಬಹುತೇಕ ಚಟ್ಟಿಗಳಲ್ಲಿ. ಕುಂಡಗಳಲ್ಲಿ ಬೆಳೆಯುವುದರಿಂದ ಕಡಿಮೆ ಜಾಗ ಸಾಕು, ನಿರ್ವಹಣೆ ಸುಲಭ, ನೀರು ಕೂಡ ಹೆಚ್ಚು ಬೇಡ. ಬೀಜ ಕಾಪಾಡಲು, ತಳಿ ಗುರುತಿಸಲು ಅನುಕೂಲ ಎನ್ನುವುದು ಕಾಮತರ ಅನುಭವ. ಮಳೆಗಾಲದಲ್ಲಿ ಮನೆ ಮುಂದೆ ಈ ಚಟ್ಟಿಗಳನ್ನು ಸಾಲಾಗಿ ಜೋಡಿಸಿ ತರಕಾರಿ ಗಿಡಗಳಿಂದಲೂ ಮನೆಯ ಸೌಂದರ್ಯ ಹೆಚ್ಚಿಸಬಹುದು ಎಂಬುದನ್ನು ಅವರು ತೋರಿಸಿಕೊಟ್ಟಿದ್ದಾರೆ.

    14 ಬಗೆಯ ಸಾಮಾನ್ಯ ಕೆಸು, 3 ಬಗೆಯ ಬಳ್ಳಿ ಕೆಸು, 4 ವಿಧದ ಅರಶಿಣ, 5 ವಿಧದ ಶುಂಠಿ, 2 ಬಗೆಯ ಮರ ಗೆಣಸು, 11 ಬಗೆಯ ಸಿಹಿ ಗೆಣಸು, 4 ಬಗೆಯ ಅರಾರೂಟ್, ಬಟಾಟೆ ಮತ್ತು ಚಿರಿಕೆ ನಾಲ್ಕು ವಿಧ, ಸುವರ್ಣ ಗೆಡ್ಡೆ 2 ವಿಧ, ಮುಂಡಿ ಗೆಡ್ಡೆ 2 ವಿಧ, 10 ವಿಧದ ತುಪ್ಪ ಗೆಣಸು ಹಾಗೂ ರೆಕ್ಕೆ ಅವರೆ ಗೆಡ್ಡೆ, ಸಾಂಬ್ರಾಣಿ ಗೆಡ್ಡೆ, ಶತಾವರಿ, ಬಜೆ ಹರಿಕೃಷ್ಣ ಕಾಮತರ ಸಂಗ್ರಹದಲ್ಲಿರುವ ಅಮೂಲ್ಯ ಕೃಷಿ ಸಂಪತ್ತು. ಪತ್ರೊಡೆಗೆ ಬಹುಬೇಡಿಕೆ ಇರುವ ಮರ ಕೆಸುವನ್ನು ಹಳೇ ಮರದ ಚೆಕ್ಕೆಗಳ ಮೇಲೆ ಬೆಳೆಸಿ ಮಾರುಕಟ್ಟೆ ಮಾಡಿದ್ದು ಮತ್ತೊಂದು ಸಾಧನೆ.

    ಇವರು ಪೇಟೆಯ ಹೂ, ಹಣ್ಣು, ತರಕಾರಿಗಳಿಂದ ದೂರ. ವರ್ಷಕ್ಕೆ ಸುಮಾರು 100 ಬಗೆಯ ತರಕಾರಿ, ಸೊಪ್ಪುಗಳನ್ನು ಬೆಳೆಯುತ್ತಾರೆ. ಸ್ವಂತ ಹಿತ್ತಿಲಲ್ಲೇ ಬೆಳೆದ ವಿಷಮುಕ್ತ ಆಹಾರ ದೇಹಕ್ಕೆ ಸೇರಬೇಕು, ನಮ್ಮ ಬೇಲಿಯಲ್ಲೇ ಬೆಳೆದ ಪುಷ್ಪ ದೇವರ ಮುಡಿಗೇರಬೇಕು ಎನ್ನುವುದು ಈ ಕೃಷಿಕನ ಶಿಸ್ತು. ಖಾಸಗಿ ಉದ್ಯೋಗದಲ್ಲಿದ್ದ ಹರಿಕೃಷ್ಣ ಕಾಮತ್, 2014ರಿಂದ ಕೃಷಿಯಲ್ಲಿ ಸಂಪೂರ್ಣ ತೊಡಗಿಕೊಂಡಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಒಂದೆಡೆ ಭಾಷಣದಲ್ಲಿ ‘ಯಾವುದೇ ಕೆಲಸ ಮಾಡುವುದಿದ್ದರೂ ಅದು ದೇಶದ ಅಭಿವೃದ್ಧಿಗೆ ಪೂರಕವಾಗಿರಲಿ’ ಎಂದು ಹೇಳಿದ್ದು ಸಾವಯವ ಕೃಷಿಯಲ್ಲಿ ತೊಡಗಿಕೊಳ್ಳಲು ಪ್ರೇರಣೆ.

    ಕೃಷಿ ಅನುಭವ ಕೊರತೆ ನೀಗಿಸಲು ಸಾವಯವ ಕೃಷಿ ಸಾಧಕ ಡಾ.ನಾರಾಯಣ ರೆಡ್ಡಿ ಬಳಿ ಪಾಠ ಕಲಿತಿದ್ದಾರೆ. ಅಲ್ಲಿ ಕಲಿತ ಅನುಭವವನ್ನು ಸ್ವಂತ ಜಮೀನಿನಲ್ಲಿ ಪ್ರಯೋಗ ಮಾಡುತ್ತಿದ್ದಾರೆ. ಗೊಬ್ಬರಕ್ಕಾಗಿ ಆಡು, ದನ, ಪಕ್ಷಿಗಳನ್ನು ಸಾಕುತ್ತಾರೆ. ಆಲಂಕಾರಿಕಾ ಮೀನುಗಳ ಸಂಗ್ರಹಿವಿದೆ. ವೈವಿಧ್ಯಮಯ ತರಕಾರಿ ಚಪ್ಪರ, ಅಪೂರ್ವ ಹಣ್ಣಿನ ಗಿಡಗಳ ಸಂಗ್ರಹ, ಪಪ್ಪಾಯ, ಬಾಳೆ, ತೆಂಗು, ಗೇರು, ಕಂಗು, ರಬ್ಬರ್ ಮೊದಲಾದ ಮಿಶ್ರ ಬೆಳೆಗಳಿಂದ ಹರಿಕೃಷ್ಣ ಕಾಮತರ ಸಾವಯವ ತೋಟ ಸಮೃದ್ಧ. 

    ಸ್ವಂತ ಮಾರುಕಟ್ಟೆ ಸೃಷ್ಟಿ: ಹರಿಕೃಷ್ಣ ಕಾಮತರ ಬೆಳೆಗಳಿಗೆ ಮಧ್ಯವರ್ತಿಗಳಿಲ್ಲ. ನೇರವಾಗಿ ಗ್ರಾಹಕರಿಗೆ ಒದಗಿಸುತ್ತಾರೆ. ಪ್ರತಿ ಭಾನುವಾರ ಮಂಗಳೂರಿನಲ್ಲಿ ನಡೆಯುವ ಸಾವಯವ ಕೃಷಿಕ ಗ್ರಾಹಕ ಬಳಗದ ವಾರದ ಸಂತೆಯಲ್ಲಿ ಸ್ವಂತ ಗ್ರಾಹಕ ಬಳಗವನ್ನು ಷ್ಟಿಸಿಕೊಂಡಿದ್ದಾರೆ. ಬೆಳೆಗಳ ಮೌಲ್ಯವರ್ಧನೆ, ತೋಟದಲ್ಲಿ ಸ್ವಂತ ಪರಿಶ್ರಮ, ಮಡದಿ, ಮಕ್ಕಳ ಸಹಕಾರ, ಸರಳ-ಸ್ವಾವಲಂಬಿ ಜೀವನ ಇವರ ಸಾಧನೆಗೆ ಕಾರಣ.

    ಸಾವಯವ ಎಂದರೆ ಮಾರುಕಟ್ಟೆಯಿಂದ ಗೊಬ್ಬರ ತಂದು ಜಮೀನಿಗೆ ಸುರಿಯುವುದಲ್ಲ. ಸ್ವತಃ ಗೋವುಗಳನ್ನು ಸಾಕಿ ಆ ಗೊಬ್ಬರವನ್ನು ಕೃಷಿ ಭೂಮಿಗೆ ಹಾಕಿ ರಾಸಾಯನಿಕಮುಕ್ತವಾಗಿ ಬೆಳೆ ಮಾಡಬೇಕು. ಋತುಮಾನಕ್ಕೆ ಅನುಗುಣವಾಗಿ ಆಯಾ ಪರಿಸರಕ್ಕೆ ಹೊಂದುವ ಬೆಳೆ ಬೆಳೆದರೆ ಫಸಲು ನಿರೀಕ್ಷಿಸಬಹುದು.
    -ಹರಿಕೃಷ್ಣ ಕಾಮತ್ ಮುಡಿಪುನಡ್ಕ, ಸಾವಯವ ಕೃಷಿಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts