More

    ಸುಗ್ರೀವಾಜ್ಞೆ ವಾಪಸ್, ಸರ್ಕಾರದಲ್ಲೇ ದ್ವಂದ್ವ

    ಬೆಂಗಳೂರು: ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ (ತಿದ್ದುಪಡಿ)ವಿಧೇಯಕ- 2024 ಸಂಬಂಧ ರಾಜ್ಯ ಸರ್ಕಾರ ತಂದಿದ್ದ ಸುಗ್ರೀವಾಜ್ಞೆಯನ್ನು ರಾಜ್ಯಪಾಲರು ಪಾವಸ್ ಕಳಿಸಿ ಶಾಸನ ಸಭೆಯ ಮೂಲಕವೇ ಒಪ್ಪಿಗೆ ಪಡೆದುಕೊಳ್ಳುವಂತೆ ಸೂಚಿಸಿದ ಬೆಳವಣಿಗೆ ಸರ್ಕಾರದ ಮಟ್ಟದಲ್ಲಿ ಸಾಕಷ್ಟು ಚರ್ಚೆಗೊಳಗಾಗಿದೆ.

    ಇದು ಸರ್ಕಾರಕ್ಕಾದ ಹಿನ್ನಡೆಯಲ್ಲ, ರಾಜ್ಯಪಾಲರು ಸುಗ್ರೀವಾಜ್ಞೆಯನ್ನು ತಿರಸ್ಕರಿಸಿಲ್ಲ ಎಂದು ವಾದ ಒಂದುಕಡೆಯಾದರೆ, ಕನ್ನಡ ನಾಮಫಲಕ ಸುಗ್ರೀವಾಜ್ಞೆ ವಾಪಸು ಆದೇಶವನ್ನು ರಾಜ್ಯಪಾಲರು ಪುನರ್ ಪರಿಶೀಲಿಸಬೇಕು ಎಂಬ ಅಭಿಪ್ರಾಯವೂ ಹೊರಹೊಮ್ಮಿದೆ. ಈ ನಡುವೆ ರಾಜಭವನ ಕೂಡ ಸ್ಪಷ್ಟನೆ ನೀಡಿದ್ದು, ರಾಜ್ಯಪಾಲರು ಸುಗ್ರೀವಾಜ್ಞೆ ತಿರಿಸ್ಕರಿಸಿ, ಫೆ.12ರಿಂದ ವಿಧಾನ ಮಂಡಲ ಅಧಿವೇಶನ ನಡೆಯುವ ಕಾರಣ ಅಲ್ಲಿಯೇ ಕಾಯ್ದೆ ರೂಪಿಸಲು ಅವಕಾಶವಿದೆ ಎಂದು ವಾಪಸ್ ಕಳಿಸಲಾಗಿದೆ ಎಂದು ವಿವರಿಸಿದೆ.

    ಡಿಕೆಶಿ ಹೇಳಿದ್ದೇನು?: ಕನ್ನಡ ಭಾಷೆಯು ಭಾವಾನಾತ್ಮಕ ವಿಚಾರ. ಕರ್ನಾಟಕದಲ್ಲಿ ಇದ್ದೀರಿ, ನಮ್ಮ ರಾಜ್ಯಪಾಲರಾಗಿದ್ದೀರಿ. ಸರ್ಕಾರದ ಇಂತಹ ನೀತಿಯಲ್ಲಿ ತಪ್ಪು ಕಂಡು ಹಿಡಿಯಬಾರದು. ನಾಗರಿಕರು, ಇತರೇ ಪಕ್ಷದವರು ಈ ವಿಚಾರದಲ್ಲಿ ತಪ್ಪುಗಳಿವೆ ಎಂದು ಅವರ ಗಮನಕ್ಕೆ ತಂದಿದ್ದಾರೆಯೇ? ಯಾರೂ ಆಕ್ಷೇಪ ಸಲ್ಲಿಸಿಲ್ಲ. ಆದ ಕಾರಣ ಮತ್ತೊಮ್ಮೆ ಆದೇಶ ಪರಿಶೀಲಿಸುವಂತೆ ಸರ್ಕಾರದ ಪರವಾಗಿ ರಾಜ್ಯಪಾಲರಲ್ಲಿ ಮನವಿ ಮಾಡುತ್ತೇನೆ ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ರಾಜ್ಯಪಾಲರು ವಿಧಾನಸಭೆ ಅಧಿವೇಶನ ನಡೆಯುವ ತನಕ ಕಾಯಬಾರದಿತ್ತು. ಈಗಲೇ ಸಹಿ ಮಾಡಬಹುದಿತ್ತು ಎಂದು ಹೇಳಿದರು. ನಾಮಫಲಗಳಲ್ಲಿ ಶೇ.60 ಕನ್ನಡ ಇರಬೇಕು ಎನ್ನುವ ವಿಧೇಯಕವನ್ನು ವಿಧಾನಸಭೆ ಅಧಿವೇಶನಲ್ಲಿ ಮಂಡಿಸಿ ಜಾರಿಗೆ ತರುತ್ತೇವೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಹೇಳಿದರು.

    ಸಿಎಂ ಸ್ಪಷ್ಟನೆ: ಕನ್ನಡ ಬಳಕೆ ಕಡ್ಡಾಯದ ಬಗ್ಗೆ ಸುಗ್ರೀವಾಜ್ಞೆಗೆ ಅಂಕಿತ ಹಾಕಲು ಮಾನ್ಯ ರಾಜ್ಯಪಾಲರಿಗೆ ಕಳಿಸಲಾಗಿತ್ತು. ಆದರೆ ಸುಗ್ರೀವಾಜ್ಞೆಗೆ ರಾಜ್ಯಪಾಲರು ಅಂಕಿತ ಹಾಕುವ ಮುಂಚೆಯೇ ಅಧಿವೇಶನ ಪ್ರಾರಂಭವಾದ ಕಾರಣ ವಾಪಸು ಕಳಿಸಿದ್ದಾರೆ. ವಿಧಾನ ಮಂಡಲ ಅಧಿವೇಶನದಲ್ಲಿ ಮಸೂದೆಯನ್ನು ಮಂಡಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದರು.

    ಸಚಿವರು ಹೇಳಿದ್ದೇನು?: ಫೆಬ್ರವರಿಯಲ್ಲಿ ನಡೆಯುವ ಅಧಿವೇಶನದ ದಿನಾಂಕ ನಿಗದಿ ಮುನ್ನವೇ ಜ.5ರಂದೇ ರಾಜ್ಯಪಾಲರಿಗೆ ಸುಗ್ರೀವಾಜ್ಞೆ ಕಳುಹಿಸಿದ್ದೆವು. ಆದರೆ ರಾಜ್ಯಪಾಲರ ಅನಾರೋಗ್ಯ ಹಾಗೂ ಅವರು ಊರಲ್ಲಿ ಇಲ್ಲದ ಕಾರಣ ಸಹಿ ಹಾಕುವುದು ಅವರಿಂದ ತಡ ಆಗಿದೆ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ.

    ನಾಲ್ಕು ವಿಧೇಯಕ ವಾಪಸ್: ತಾಂತ್ರಿಕ ಕಾರಣಕ್ಕಾಗಿ ನಾಲ್ಕು ವಿಧೇಯಕಗಳಿಗೆ ಅಂಕಿತ ಹಾಕದೇ ರಾಜ್ಯಪಾಲರು ಸರ್ಕಾರಕ್ಕೆ ವಾಪಸ್ ಕಳುಹಿಸಿದ್ದಾರೆ. ನ್ಯಾಯವಾದಿಗಳ ಮೇಲಿನ ಹಿಂಸಾಚಾರ ನಿಷೇಧ ವಿಧೇಯಕ, ಕರ್ನಾಟಕ ಸಿವಿಲ್ ನ್ಯಾಯಲಯಗಳ (ತಿದ್ದುಪಡಿ) ವಿಧೇಯಕ, ಕರ್ನಾಟಕ ಹೈಕೋರ್ಟ್ (ತಿದ್ದುಪಡಿ) ವಿಧೇಯಕ ಹಾಗೂ ಕರ್ನಾಟಕ ಸಾರ್ವಜನಿಕ ಸಂಗ್ರಹಣೆ ಪಾರದರ್ಶಕತೆ (ಎರಡನೇ ತಿದ್ದುಪಡಿ) ವಿಧೇಯಕಗಳು ರಾಜಭವನದಿಂದ ಮಾಹಿತಿ ಕೋರಿ ಸರ್ಕಾರಕ್ಕೆ ಬಂದಿವೆ. ಯಾವುದೇ ವಿಧೇಯಕ ವಿಧಾನಮಂಡಲದ ಉಭಯ ಸದನಗಳಲ್ಲಿ ಮಂಡಿಸುವ ಮುನ್ನ ಸಚಿವ ಸಂಪುಟದ ಒಪ್ಪಿಗೆ ಪಡೆಯಬೇಕು. ತುರ್ತು ಸಂದರ್ಭದಲ್ಲಿ ಮಾತ್ರ ಸಂಪುಟದ ಘಟನೋತ್ತರ ಅನುಮೋದನೆಗೆ ಅವಕಾಶ ಬಿಜಿನೆಸ್ ರೂಲ್ಸ್ ಪ್ರಕಾರ ಅವಕಾಶ ಇದೆ. ನಾಲ್ಕು ವಿಧೇಯಕಗಳಿಗೆ ವಿಧಾನಮಂಡಲದಲ್ಲಿ ಒಪ್ಪಿಗೆ ಹಾಗೂ ಸಂಫುಟದ ಘಟನೋತ್ತರ ಅನುಮೋದನೆ ಪಡೆಯಲಾಗಿದೆ. ಆದರೆ ರಾಜಭವನಕ್ಕೆ ಕಳುಹಿಸುವಾಗ ಘಟನೋತ್ತರ ಅನುಮೋದನೆಗೆ ಕಾರಣಗಳೇನು? ಎಂಬುದನ್ನು ವಿವರಿಸಿಲ್ಲ. ಆ ಮಾಹಿತಿಯೊಂದಿಗೆ ಮತ್ತೆ ಕಡತ ಮಂಡಿಸುವಂತೆ ರಾಜಭವನ ಸರ್ಕಾರಕ್ಕೆ ನಿರ್ದೇಶಕ ನೀಡುವುದರೊಂದಿಗೆ ನಾಲ್ಕು ವಿಧೇಯಕಗಳು ವಾಪಸ್ ಬಂದಿವೆ. ಸರ್ಕಾರ ಸೂಕ್ತ ಉತ್ತರದೊಂದಿಗೆ ಮತ್ತೆ ಕಡತ ಮಂಡಿಸಲಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts