More

    ವಾಹನ ಕಾಯ್ದೆ ವಿಧೇಯಕಕ್ಕೆ ವಿರೋಧ: ಹೋರಾಟ ನಡೆಸಲು ಲಾರಿ, ಟ್ರಕ್, ಆಟೋ ಚಾಲಕರ ನಿರ್ಧಾರ

    ಮೈಸೂರು: ಕೇಂದ್ರ ಸರ್ಕಾರ ಇತ್ತೀಚೆಗೆ ಪ್ರಸ್ತಾಪಿಸಿರುವ ವಾಹನ ಕಾಯ್ದೆ ವಿಧೇಯಕಕ್ಕೆ ವಿರೋಧ ವ್ಯಕ್ತಪಡಿಸಿರುವ ಲಾರಿ, ಟ್ರಕ್, ಆಟೋ ಸೇರಿದಂತೆ ಇನ್ನಿತರ ಚಾಲಕರು, ಮಾಲೀಕರು ಹೋರಾಟ ನಡೆಸಲು ನಿರ್ಧರಿಸಿದರು.
    ಮೈಸೂರು ಜಿಲ್ಲಾ ಲಾರಿ ಮಾಲೀಕರ ಒಕ್ಕೂಟದಿಂದ ನಗರದ ಖಾಸಗಿ ಬಸ್ ನಿಲ್ದಾಣದ ಬಳಿ ಮಂಗಳವಾರ ಆಯೋಜಿಸಿದ್ದ ಸಭೆಯಲ್ಲಿ ಚಾಲಕರಿಗೆ ವಿರುದ್ಧವಾಗಿರುವ ವಿಧೇಯಕವನ್ನು ಕೈ ಬಿಡಬೇಕು ಎಂದು ಆಗ್ರಹಿಸಲಾಯಿತು.
    ಸಭೆಯ ಅಧ್ಯಕ್ಷತೆ ವಹಿಸಿದ್ದ ಮೈಸೂರು ಜಿಲ್ಲಾ ಲಾರಿ ಮಾಲೀಕರ ಒಕ್ಕೂಟ ಅಧ್ಯಕ್ಷ ಬಿ.ಕೋದಂಡರಾಮು ಮಾತನಾಡಿ, ಹಿಟ್ ಆ್ಯಂಡ್ ರನ್ ಪ್ರಕರಣಕ್ಕೆ ಸಂಬಂಧಿಸಿದ ಕೇಂದ್ರ ಸರ್ಕಾರ ನೂತನ ಕಾನೂನು ರೂಪಿಸಲು ಮುಂದಾಗಿದೆ. ಇದರ ಪ್ರಕಾರ ಅಪಘಾತ ಮಾಡಿದ ಚಾಲಕನಿಗೆ 10 ಲಕ್ಷ ರೂ. ದಂಡ ಹಾಗೂ 7 ವರ್ಷ ಕಠಿಣ ಸಜೆ ವಿಧಿಸಲು ನಿರ್ಣಯ ಮಂಡಿಸಲಾಗಿದೆ. ಒಂದು ವೇಳೆ ಇದು ಕಾನೂನು ಅದರೆ ಚಾಲಕರು ಸಿಗದೆ ಇಡೀ ಸಾರಿಗೆ ಉದ್ಯಮವೇ ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ ಎಂದು ಹೇಳಿದರು.
    ಬ್ರಿಟಿಷ್ ಕಾಲದ ಇಂಡಿಯನ್ ಪೀನಲ್ ಕೋಡ್ (ಐಪಿಸಿ)ಅನ್ನು ಕೇಂದ್ರ ಸರ್ಕಾರ ರದ್ದುಪಡಿಸಿದೆ. ನೂತನ ಕಾಯ್ದೆಯ ಪ್ರಕಾರ ಹಿಟ್ ಆ್ಯಂಡ್ ರನ್ ಕೇಸ್‌ನಲ್ಲಿ ಆರೋಪಿ ಅಪಘಾತ ಬಗ್ಗೆ ಮಾಹಿತಿ ನೀಡದೇ ಘಟನಾ ಸ್ಥಳದಿಂದ ಪರಾರಿ ಅಗುವಂತಿಲ್ಲ. ಯಾವುದೇ ಸ್ಥಳದಲ್ಲಿ ಅಪಘಾತ ಆದಾಗ ಆ ಸ್ಥಳ ಯಾವ ಠಾಣೆ ವ್ಯಾಪ್ತಿಗೆ ಬರುತ್ತದೆ ಎನ್ನುವ ಮಾಹಿತಿ ಇರುವುದಿಲ್ಲ. ಅಲ್ಲದೆ ಅಪಘಾತ ಅದ ಸಂದರ್ಭದಲ್ಲಿ ಸ್ಥಳದಲ್ಲಿ ಬಿಗುವಿನ ವಾತಾವರಣ ಇರುವುದು ಸಾಮಾನ್ಯ. ಅಂತಹ ವೇಳೆ ಚಾಲಕ ಜನರ ಕೈಗೆ ಸಿಕ್ಕರೆ ಆತನ ಗತಿ ಏನಾಗುತ್ತದೆ ಎನ್ನುವ ಅರಿವು ಇರುವುದಿಲ್ಲ. ಆದ್ದರಿಂದ ಇದೊಂದು ಚಾಲಕ ವಿರೋಧಿ ಕಾನೂನು ಅಗಲಿದೆ ಎಂದರು.
    ಯಾರು ಬೇಕೆಂದು ಅಪಘಾತ ಮಾಡುವುದಿಲ್ಲ. ಆಕಸ್ಮಿಕವಾಗಿ ಘಟಿಸುವ ಅಪಘಾತಕ್ಕೆ ಈಗಾಗಲೇ ಹಲವು ಕಾನೂನು ಇದ್ದು, ಅದರ ಅಡಿಯಲ್ಲಿಯೇ ಇಷ್ಟು ವರ್ಷಗಳ ವಿಚಾರಣೆ, ತಪ್ಪು ಮಾಡಿದ್ದರೆ ನ್ಯಾಯಾಲಯ, ಪೊಲೀಸರಿಂದ ಶಿಕ್ಷೆ, ದಂಡ ವಿಧಿಸಿಕೊಂಡು ಬರಲಾಗುತ್ತಿದೆ. ಆದರೆ ಈಗ ಹೊಸದಾಗಿ ಕಾನೂನು ಬಂದರೆ ಲಾರಿ, ಟ್ರಕ್, ಬಸ್, ಕಾರು, ಆಟೋ ಸೇರಿದಂತೆ ಯಾವ ವಾಹನಗಳಿಗೂ ಚಾಲಕರೇ ಸಿಗದಂತಾಗುತ್ತದೆ. ಜತೆಗೆ ಇದು ಸ್ವಂತ ವಾಹನ ಇಟ್ಟುಕೊಂಡವರಿಗೂ ಅನ್ವಯ ಆಗುತ್ತದೆ. ಆದ್ದರಿಂದ ಜನರಿಗೆ ತೊಂದರೆ ಆಗುವ ಈ ವಿಧೇಯಕವನ್ನು ಸರ್ಕಾರ ವಾಪಸ್ ಪಡೆಯಬೇಕು ಎಂದು ಹೇಳಿದರು.
    ಈಗಾಗಲೇ ದೇಶದ ವಿವಿಧ ಭಾಗದಲ್ಲಿ ಪ್ರತಿಭಟನೆಗಳು ಆರಂಭಗೊಂಡಿವೆ. ಮುಂದೆ ಇದು ವಿವಿಧ ರಾಜ್ಯ, ಕರ್ನಾಟಕವನ್ನು ಆವರಿಸಲಿವೆ. ಕೆಲವು ಕಡೆ ಪೆಟ್ರೋಲ್, ಡೀಸೆಲ್ ಸೇರಿದಂತೆ ವಿವಿಧ ತೈಲಕಂಪನಿಗಳ ಚಾಲಕರು ಮುಷ್ಕರ ಆರಂಭಿಸಿದ್ದು, ತೈಲಕ್ಕಾಗಿ ಜನರು ಮುಗಿಬಿದ್ದಿದ್ದಾರೆ. ಇದು ಹೀಗೆಯೇ ಮುಂದುವರಿದರೆ ತೊಂದರೆ ಆಗಲಿದೆ. ಮೈಸೂರು ಜಿಲ್ಲೆಯಲ್ಲಿಯೂ ಶೀಘ್ರದಲ್ಲೇ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
    ನೈರುತ್ಯ ರೈಲ್ವೆ ಲಾರಿ ಮಾಲೀಕರ ಸಂಘದ ಕಾರ್ಯದರ್ಶಿ ಅಬ್ದುಲ್ ಖಾದರ್ ಶಾಹಿದ್, ಆರ್‌ಎಂಸಿ ಲಾರಿ ಮಾಲೀಕರ ಸಂಘದ ಅಜಘರ್, ದಾದುಬೈ, ಅಕ್ರಂ, ಹುಣಸೂರು ಲಾರಿ ಮಾಲೀಕರ ಸಂಘದ ರಫಿ, ಕರುನಾಡ ಲಾರಿ ಚಾಲಕರ ಸಂಘದ ರಾಜೇಂದ್ರ, ಮೈಸೂರು ಫೌಂಟೇನ್ ವೃತ್ತ ಲಾರಿ ಮಾಲೀಕರ ಸಂಘದ ಇಮ್ರಾನ್ ಖಾನ್, ಸಂಯುಕ್ತ ಕರ್ನಾಟಕ ಆಟೋ ಚಾಲಕರು, ಮಾಲೀಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಂ.ವಿ.ಶ್ರೀನಿವಾಸಮಿತ್ರ, ಶ್ರೀಧರ್, ಜೋಸೆಫ್, ವಿಶ್ವನಾಥ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts