More

    ಅವೈಜ್ಞಾನಿಕ ತೆರಿಗೆ ವಸೂಲಿಗೆ ವಿರೋಧ, ದೊಡ್ಡಬಳ್ಳಾಪುರ ನಗರಸಭೆ ಮುಂದೆ ಪ್ರತಿಭಟನೆ ಸರ್ಕಾರದ ವಿರುದ್ಧ ಪ್ರತಿಭಟನಾಕಾರರ ಆಕ್ರೋಶ

    ದೊಡ್ಡಬಳ್ಳಾಪುರ: ಕರೊನಾದಿಂದ ಕಂಗೆಟ್ಟಿರುವ ಜನಸಾಮಾನ್ಯರಿಗೆ ರಾಜ್ಯ ಸರ್ಕಾರ ಅವೈಜ್ಞಾನಿಕವಾಗಿ ದುಬಾರಿ ತೆರಿಗೆ ಹೇರುವ ಮೂಲಕ ಬಡವರ ಬದುಕಿನ ಜತೆ ಚಲ್ಲಾಟವಾಡುತ್ತಿದೆ ಎಂದು ಕನ್ನಡ ಪಕ್ಷದ ತಾಲೂಕು ಅಧ್ಯಕ್ಷ ಸಂಜೀವ್ ನಾಯಕ್ ಹೇಳಿದರು.

    ನಗರಸಭೆ ಮುಂದೆ ಬುಧವಾರ ಸರ್ಕಾರದ ಅವೈಜ್ಞಾನಿಕ ತೆರಿಗೆ ನೀತಿ ಖಂಡಿಸಿ ಹಾಗೂ ಅಕ್ರಮ ಸಕ್ರಮ ಜಾರಿಗೊಳಿಸಲು ಒತ್ತಾಯಿಸಿ ಕನ್ನಡ ಪಕ್ಷ ಹಾಗೂ ಇತರೆ ಸಂಘಟನೆಗಳಿಂದ ಬುಧವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು.

    ಮೂರು ತಿಂಗಳಿನಿಂದ ಕರೊನಾ ಲಾಕ್‌ಡೌನ್‌ನಿಂದಾಗಿ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಬಡ ಮಧ್ಯಮ ವರ್ಗದ ಗೋಳು ಹೇಳತೀರದ್ದಾಗಿದೆ. ಸಣ್ಣ ಪುಟ್ಟ ವ್ಯಾಪಾಸ್ಥರು, ನೇಯ್ಗೆ ಉದ್ಯಮ ನೆಲಕಚ್ಚಿದೆ. ಇದನ್ನೇ ನಂಬಿದ್ದ ಸಾವಿರಾರೂ ಕುಟುಂಬ ಬೀದಿಗೆ ಬಿದ್ದಿವೆ ಎಂದರು.

    ನಗರಸಭೆ ಸದಸ್ಯರ ಅವಧಿ ಮುಗಿದು 15 ತಿಂಗಳಾದರೂ ಚುನಾವಣೆಯಾಗದ ಕಾರಣ ಅಭಿವೃದ್ಧಿ ಕುಂಠಿತಗೊಂಡಿದೆ. ಇಂತಹ ಸಮಯದಲ್ಲಿ ಸಂಕಷ್ಟಕ್ಕೀಡಾದವರ ನೆರವಿಗೆ ಬರಬೇಕಾದ ಸರ್ಕಾರ ಸದ್ದಿಲ್ಲದೆ ಸ್ಥಳೀಯ ಸಂಸ್ಥೆಗಳ ಮೂಲಕ ಅವೈಜ್ಞಾನಿಕವಾಗಿ ಮನೆ ಕಂದಾಯ, ನೀರಿನ ತೆರಿಗೆಯನ್ನು ಶೇ.18 ಹೆಚ್ಚಿಸಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಈ ಕೂಡಲೇ ಹೆಚ್ಚು ಮಾಡಿರುವ ತೆರಿಗೆ ರದ್ದುಪಡಿಸಬೇಕು. ಇಲ್ಲವಾದಲ್ಲಿ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.

    ಪ್ರಧಾನ ಕಾರ್ಯದರ್ಶಿ ಡಿ.ಪಿ. ಆಂಜನೇಯ ಮಾತನಾಡಿ, ನಗರಸಭೆ ಮನೆಗಳಿಗೆ ಒಂದಕ್ಕೆ ಎರಡು ಪಟ್ಟು ಕಂದಾಯ ವಸೂಲಿ ಮಾಡುತ್ತಿರುವ ಸರ್ಕಾರ ಅಕ್ರಮ ಸಕ್ರಮ ಜಾರಿಗೊಳಿಸುವ ಕಡೆ ಗಮನ ಹರಿಸದಿರುವುದು ದುರಂತವಾಗಿದೆ. ಖಾತೆ ಬದಲಾವಣೆ, ಮನೆ ಕಟ್ಟಲು ಪರವಾನಗಿ ಪತ್ರಕ್ಕಾಗಿ ಅರ್ಜಿ ಸಲ್ಲಿಸಿದರೆ ಹಲವು ನಿಯಮ ಹೇರುವ ಮೂಲಕ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದರು.

    ಪೌರಾಯುಕ್ತ ರಮೇಶ್.ಎಸ್.ಸುಣಗಾರ್ ಮನವಿ ಸ್ವೀಕರಿಸಿದರು. ತಾಲೂಕು ಡಾ.ರಾಜ್‌ಕುಮಾರ್ ಸಂಘ, ತಾಲೂಕು ಶಿವರಾಜ್ ಕುಮಾರ್ ಸಮಿತಿ, ಕರವೇ ಪ್ರವಿಣ್ ಶೆಟ್ಟಿಬಣ, ಕರ್ನಾಟಕ ರಾಜ್ಯ ರೈತಸಂಘ, ವಿಜಯ ಕರ್ನಾಟಕ ರಕ್ಷಣಾ ವೇದಿಕೆ, ಸಿಪಿಐಎಂ ಸಂಘಟನೆ, ನಗರಸಭಾ ಮಾಜಿ ಸದಸ್ಯರು ಹಾಗೂ ಕನ್ನಡಪಕ್ಷದ ಸದಸ್ಯರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts