More

    ಕಸ ವಿಲೇವಾರಿ ಘಟಕಕ್ಕೆವಿರೋಧ: ಸ್ವಚ್ಛ ಭಾರತ್ ಮಿಷನ್ ಯೋಜನೆಗೆ ಹಿನ್ನಡೆ

    ಗಂಗಾಧರ್ ಬೈರಾಪಟ್ಟಣ

    ರಾಮನಗರ ಗ್ರಾಮೀಣ ಪ್ರದೇಶಗಳಲ್ಲಿ ಕಸ ಸಂಗ್ರಹಿಸಿ ವಿಲೇವಾರಿ ಮಾಡುವ ಸ್ವಚ್ಛ ಭಾರತ್ ಮಿಷನ್ ಪ್ಲಸ್ ಯೋಜನೆಗೆ ಸ್ಥಳೀಯರಿಂದಲೇ ವಿರೋಧ ವ್ಯಕ್ತವಾಗುತ್ತಿದೆ.

    ನಗರ ಹಾಗೂ ಪಟ್ಟಣಗಳಿಗೆ ಸೀಮಿತವಾಗಿ ಕಸ ಸಂಗ್ರಹ ಹಾಗೂ ವಿಲೇವಾರಿಯನ್ನು ಗ್ರಾಮೀಣ ಪ್ರದೇಶಗಳಿಗೂ ವಿಸ್ತರಿಸುವ ಯೋಜನೆಗೆ ಆರಂಭದಲ್ಲೇ ತೊಡಕು ಎದುರಾಗಿದೆ. ಪ್ರತಿ ಗ್ರಾಪಂಗೆ ಕಸ ಸಂಗ್ರಹಿಸಲು ವಾಹನ ನೀಡಿ ಪ್ರತಿ ಮನೆ ಬಾಗಿಲಿಗೆ ತೆರಳಿ ಒಣ ಕಸ ಸಂಗ್ರಹಿಸಿ ವಿಲೇವಾರಿ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿತ್ತು. ಕಸ ವಿಲೇವಾರಿ ಮಾಡಲು ಶೆಡ್ ನಿರ್ವಣಕ್ಕೂ ಅವಕಾಶ ಕಲ್ಪಿಸಲಾಗಿತ್ತು. ಆದರೆ ಶೆಡ್ ನಿರ್ವಣಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸುತ್ತಿರುವುದರಿಂದ ಸಮಸ್ಯೆ ಎದುರಾಗಿದೆ.

    ಸಂಗ್ರಹವಾದ ಒಣ ಕಸವನ್ನು ವಿಲೇವಾರಿ ಮಾಡಲು ಗ್ರಾಪಂ ವ್ಯಾಪ್ತಿಯಲ್ಲಿರುವ ಸರ್ಕಾರಿ ಗೋಮಾಳ ಹಾಗೂ ಪಂಚಾಯಿತಿ ಜಾಗಗಳಲ್ಲಿ ಶೆಡ್​ಗಳ ನಿರ್ಮಾಣ ಮಾಡಲಾಗುತ್ತಿದೆ. ಕೆಲವು ಕಡೆಗಳಲ್ಲಿ ಜಾಗ ಹುಡುಕಾಟ ನಡೆಯುತ್ತಿದೆ. ಪಂಚಾಯಿತಿ ಅಧಿಕಾರಿಗಳು ಶೆಡ್ ನಿರ್ವಣಕ್ಕೆ ಮುಂದಾದ ವೇಳೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

    ಕಸ ಸಂಗ್ರಹ ಹೀಗೆ ನಡೆಯುತ್ತದೆ

    ಕಸ ಸಂಗ್ರಹಕ್ಕೆ ನೀಡಲಾಗಿರುವ ವಾಹನದಲ್ಲಿ ಸಿಬ್ಬಂದಿ ಪ್ರತಿ ಮನೆಗೆ ತೆರಳಿ ಒಣ ಕಸ ಸಂಗ್ರಹಿಸುತ್ತಾರೆ. ಓರ್ವ ಚಾಲಕ ಹಾಗೂ ಸಿಬ್ಬಂದಿ ಇರುತ್ತಾರೆ. ಸಂಗ್ರಹಿಸಿದ ಕಸವನ್ನು ಶೆಡ್​ಗಳಲ್ಲಿ ಸಂಗ್ರಹಿಸಿ ಪ್ಲಾಸ್ಟಿಕ್, ಕಬ್ಬಿಣ, ಸೇರಿ ಇತರ ವಸ್ತುಗಳನ್ನು ಬೇರ್ಪಡಿಸಲಾಗುತ್ತದೆ. ಕಬ್ಬಿಣ ಹಾಗೂ ಪ್ಲಾಸ್ಟಿಕ್ ಅನ್ನು ಮಾರಾಟ ಮಾಡಲಾಗುತ್ತದೆ.

    ಒಣ ಕಸ ವಿಲೇವಾರಿಯಿಂದ ಸಮಸ್ಯೆ ಇಲ್ಲ

    ಒಣ ಕಸ ವಿಲೇವಾರಿಗಾಗಿ ಶೆಡ್ ನಿರ್ವಣಕ್ಕೆ ವಿರೋಧ ವ್ಯಕ್ತವಾಗುತ್ತಿದ್ದಂತೆ ಎಚ್ಚೆತ್ತುಕೊಂಡು ಜಿಲ್ಲಾ ಪಂಚಾಯಿತಿ ಸಿಇಒ ಇಕ್ರಂ ಗ್ರಾಮಸ್ಥರ ಅನುಮಾನ ಪರಿಹರಿಸಲು ಮುಂದಾಗಿದ್ದಾರೆ. ಪ್ಲಾಸ್ಟಿಕ್, ಕಬ್ಬಿಣ ಸೇರಿ ಒಣ ಕಸವನ್ನು ಮಾತ್ರ ಸಂಗ್ರಹಿಸಲಾಗುತ್ತದೆ. ಇದನ್ನು ಮಾರಾಟ ಮಾಡಲಾಗುತ್ತದೆ. ಇದರಿಂದ ಪರಿಸರದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಗ್ರಾಮಸ್ಥರಿಗೆ ಅಭಯ ನೀಡಿದ್ದಾರೆ.

    ವೀಕ್ಷಣೆಗೆ ಅವಕಾಶ

    ಕಸ ವಿಲೇವಾರಿ ಘಟಕಗಳ ನಿರ್ವಣದಿಂದ ಪರಿಸರದ ಮೇಲೆ ದುಷ್ಪರಿಣಾಮ ಬೀರುವುದಿಲ್ಲ ಎನ್ನುವುದನ್ನು ಖಾತ್ರಿ ಪಡಿಸಲು ಜಿಪಂ ಮುಂದಾಗಿದೆ. ಇದಕ್ಕಾಗಿ ಈಗಾಗಲೇ ಬೇರೆ ಜಿಲ್ಲೆಗಳಲ್ಲಿ ನಿರ್ವಣಗೊಂಡು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿರುವ ಘಟಕಗಳ ವೀಕ್ಷಣೆಗೆ ಗ್ರಾಮಸ್ಥರಿಗೆ ಅವಕಾಶ ಮಾಡಿಕೊಡಲು ಮುಂದಾಗಿದೆ. ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಉಜಿರೆಯಲ್ಲಿ ಉತ್ತಮ ಕಸ ವಿಲೇವಾರಿ ಘಟಕ ನಿರ್ವಹಿಸುತ್ತಿದೆ. ವಿರೋಧ ಮಾಡುವವರು ಈ ಘಟಕ ವೀಕ್ಷಣೆ ಮಾಡಬಹುದು ಎಂದು ಜಿಪಂ ಅಧಿಕಾರಿಗಳು ಮನವಿ ಮಾಡಿದ್ದಾರೆ.

    ಗ್ರಾಪಂಗೂ ಆರ್ಥಿಕ ಮೂಲ

    ಮನೆಗಳಿಂದ ಕಸ ಸಂಗ್ರಹಿಸುವುದರಿಂದ ಗ್ರಾಮಗಳಲ್ಲಿ ಸ್ವಚ್ಛತೆ ಕಾಪಾಡುವ ಜತೆಗೆ ಒಣ ಕಸದಲ್ಲಿರುವ ಪ್ಲಾಸ್ಟಿಕ್ ಕಬ್ಬಿಣ ಸೇರಿ ಇತರ ವಸ್ತುಗಳ ಮಾರಾಟದಿಂದ ಪಂಚಾಯಿತಿಗೆ ಆದಾಯವೂ ಬರುತ್ತದೆ. ಹಸಿ ಕಸವನ್ನು ಗೊಬ್ಬರವಾಗಿ ಬಳಕೆ ಮಾಡಿಕೊಳ್ಳುವ ಕೆಲಸ ನಿರಂತರವಾಗಿ ನಡೆಯುತ್ತಿದ್ದು, ಗ್ರಾಮಸ್ಥರು ಒಣಕಸ ಬಿಸಾಡುತ್ತಿರುವುದರಿಂದ ಸಂಗ್ರಹಕ್ಕೆ ಮುಂದಾಗಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಸ್ವಚ್ಛ ಭಾರತ್ ಮಿಷನ್ ಪ್ಲಸ್ ಯೋಜನೆ ಗ್ರಾಮೀಣ ಪ್ರದೇಶಗಳ ಕಸ ನಿರ್ವಹಣೆ ಸಮಸ್ಯೆಗೆ ಪರಿಹಾರ ನೀಡುತ್ತದೆ. ಹೀಗಾಗಿ ಕಸ ವಿಲೇವಾರಿಗೆ ಶೆಡ್ ನಿರ್ವಿುಸುವಾಗ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಬಾರದು.

    | ಇಕ್ರಂ, ಜಿಪಂ, ಸಿಇಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts