More

    ಜಲಾಗಾರ ನಿರ್ಮಾಣಕ್ಕೆ ವಿರೋಧ

    ಬ್ಯಾಡಗಿ: ಲಂಬಾಣಿ ಸಮಾಜದವರಿಗೆ ನೀಡಿದ ಭೂಮಿಯಲ್ಲಿ ಅನಧಿಕೃತವಾಗಿ ನೀರಿನ ಟ್ಯಾಂಕ್ ನಿರ್ಮಿಸುತ್ತಿರುವುದನ್ನು ಖಂಡಿಸಿ ತಾಲೂಕಿನ ಶಿಡೇನೂರು ಸೇವಾಲಾಲ್ ನಗರದ ಗ್ರಾಮಸ್ಥರು ಸೋಮವಾರ ಪ್ರತಿಭಟನೆ ನಡೆಸಿದರು.

    ಸಮಾಜದ ಹಿರಿಯ ಮುಖಂಡ ತಿರಕಪ್ಪ ನಾಯಕ ಮಾತನಾಡಿ, ಗ್ರಾಮದ ಸರ್ವೇ ನಂ. 144 ಹಾಗೂ 145ರ ಸರ್ಕಾರಿ ಜಮೀನಿನಲ್ಲಿ ಸುಮಾರು 40-50 ವರ್ಷದಿಂದ ಉಳುಮೆ ಮಾಡುತ್ತಿದ್ದೇವೆ. ಆಗ ಫಾರ್ಮ್ 50 ಹಾಗೂ 53ರಲ್ಲಿ ಅರ್ಜಿ ಸಲ್ಲಿಸಿದ್ದೆವು. 2008ರಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಅಕ್ರಮ-ಸಕ್ರಮ ಸಭೆಯಲ್ಲಿ ಆಗಿನ ತಹಸೀಲ್ದಾರರು ಲಂಬಾಣಿ ಜನಾಂಗದ ಜಮೀನು ಇಲ್ಲದ 29 ಜನರಿಗೆ ತಲಾ 1 ಎಕರೆ 15 ಗುಂಟೆ ಜಮೀನು ಮಂಜೂರು ಮಾಡಿದ್ದರು. ಬಳಿಕ ಎರಡು ವರ್ಷಗಳಿಂದ ನಾವು ಉಳುಮೆ ಮಾಡುತ್ತಿರುವ ಜಮೀನು ನಮ್ಮ ಹೆಸರಿನಲ್ಲಿದ್ದರೂ, ಬೀಳು ಬಿಡುವಂತಾಗಿದೆ. ಸರ್ವೇ ಇಲಾಖೆ ಅಧಿಕಾರಿಗಳಿಗೆ ಈ ಹಿಂದೆ ನಮ್ಮ ಹೆಸರಿನಲ್ಲಿರುವ ಜಮೀನಿನ ಪಹಣಿ ಪತ್ರದಂತೆ ನಕಾಶೆ ಮಾಡಿ, ಹದ್ದುಬಸ್ತ್ ಮಾಡುವಂತೆ ಅರ್ಜಿ ಸಲ್ಲಿಸಿದರೂ ನಮಗೆ ನ್ಯಾಯ ಸಿಕ್ಕಿಲ್ಲ. ಈ ಸರ್ವೇ ನಂಬರ್‌ನಲ್ಲಿ ಜಮೀನಿಗೆ ದಾರಿ, ಸ್ಮಶಾನ ಭೂಮಿ ಗುರ್ತಿಸಿ ಕೂಡಲೇ ನಮಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.

    ಭೂಸಾಗುವಳಿ ಮಾಡಿದ ನಮ್ಮ ಬಳಿ ಎಲ್ಲ ದಾಖಲೆಗಳಿವೆ. ನಮಗೆ ನೀಡಿರುವ ಜಮೀನಿನಲ್ಲಿ ಮನೆಮನೆ ಗಂಗೆ ಯೋಜನೆಯ ನೀರಿನ ಟ್ಯಾಂಕ್ ನಿರ್ಮಾಣ ಹಾಗೂ ಬೇರೆ ಬೇರೆ ಕೆಲಸಕ್ಕೆ ಬಳಸಲು ಯತ್ನಿಸುತ್ತಿರುವುದು ಸರಿಯಲ್ಲ. ಲಂಬಾಣಿ ಸಮಾಜದರಿಗೆ ನೀಡಿದ ಜಮೀನು ಬಿಟ್ಟು ಇನ್ನುಳಿದ ಸರ್ಕಾರಿ ಜಮೀನಿನಲ್ಲಿ ಜಲಾಗಾರ ನಿರ್ಮಾಣ ಮಾಡಬಹುದು. ದಬ್ಬಾಳಿಕೆಯಿಂದ ನಮ್ಮ ಜಮೀನಿನಲ್ಲಿ ಜಲಾಗಾರ ನಿರ್ಮಾಣಕ್ಕೆ ಮುಂದಾದಲ್ಲಿ 29 ಸಾಗುವಳಿದಾರರು ತಹಸೀಲ್ದಾರ್ ಕಾರ್ಯಾಲಯ ಎದುರು ಧರಣಿ ಕುಳಿತುಕೊಳ್ಳುತ್ತೇವೆ ಎಂದು ಎಚ್ಚರಿಸಿದರು.

    ಸುದ್ದಿ ತಿಳಿದು ಪಿಎಸ್‌ಐ ಮಂಜುನಾಥ ಕುಪ್ಪೇಲೂರು ಆಗಮಿಸಿ, ಯಾವುದೇ ದುಡುಕಿನ ನಿರ್ಧಾರಕ್ಕೆ ಯತ್ನಿಸಬಾರದು. ಸರ್ಕಾರ ನಿಮಗೆ ಮಂಜೂರು ಮಾಡಿದ ಜಮೀನಿನಲ್ಲಿ ಯಾವುದೇ ಚಟುವಟಿಕೆ ನಡೆಸಲು ಆಗುವುದಿಲ್ಲ. ಈ ಕುರಿತು ಈ ಹಿಂದೆ ತಾವು ತಹಸೀಲ್ದಾರ್ ಗಮನಕ್ಕೂ ತಂದಿರುವುದು ತಮಗೂ ತಿಳಿದಿದೆ. ಸಮಸ್ಯೆ ಕುರಿತು ಲಿಖಿತವಾಗಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿ, ಹಿರಿಯರೊಂದಿಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳೋಣ. ಶೀಘ್ರದಲ್ಲೇ ಕಂದಾಯ ಇಲಾಖೆ, ತಾಪಂ ಇಒ ಹಾಗೂ ಸ್ಥಳೀಯ ಶಾಸಕರ ನೇತೃತ್ವದಲ್ಲಿ ಸಭೆ ನಡೆಸಿ, ಸಮಸ್ಯೆ ಇತ್ಯರ್ಥ ಮಾಡೋಣ ಎಂದು ಪಿಎಸ್‌ಐ ಮಂಜುನಾಥ ಕುಪ್ಪೇಲೂರು ಭರವಸೆ ನೀಡಿದರು.

    ಬಳಿಕ ಗ್ರಾಮಸ್ಥರು ನಮ್ಮ ಸಮಸ್ಯೆಗೆ ಕಾಯಂ ಪರಿಹಾರ ಕೊಡುವಂತೆ ಮನವಿ ಮಾಡಿ, ಪ್ರತಿಭಟನೆ ಹಿಂಪಡೆಯಲಾಯಿತು. ಸಾಗುವಳಿದಾರರಾದ ಕುಮಾರ ಲಂಬಾಣಿ, ಮೂಕಪ್ಪ ನಾಗಪ್ಪ ತಡಸದ, ಶಂಕ್ರಪ್ಪ ರಾಮಚಂದ್ರಪ್ಪ ಪೂಜಾರ, ರಾಮಪ್ಪ ಕೊಲ್ಲಾಪುರ, ಪಾಂಡಪ್ಪ ಕಬ್ಬೂರು, ರಮೇಶ ಸುತ್ತಕೋಟಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts