More

    ಎಥೆನಾಲ್, ಸಕ್ಕರೆ ಘಟಕ ವಿಸ್ತರಣೆಗೆ ವಿರೋಧ

    ಕೆ.ಆರ್.ಪೇಟೆ: ತಾಲೂಕಿನ ಮಾಕವಳ್ಳಿ ಗ್ರಾಮದಲ್ಲಿ ಕೋರಮಂಡಲ ಸಕ್ಕರೆ ಕಾರ್ಖಾನೆಯ ಉದ್ದೇಶಿತ 150 ಕೆಎಲ್‌ಪಿಡಿ ಎಥೆನಾಲ್ ಹಾಗೂ ಸಕ್ಕರೆ ಘಟಕವನ್ನು 6 ಸಾವಿರ ಟಿಸಿಡಿಗೆ ವಿಸ್ತರಣೆ ಮಾಡುವ ಯೋಜನೆಗೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಯಿತು.

    ಜಿಲ್ಲಾಧಿಕಾರಿ ಕುಮಾರ್ ಅಧ್ಯಕ್ಷತೆಯಲ್ಲಿ ಬುಧವಾರ ಕಾರ್ಖಾನೆ ಆವರಣದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಸಾರ್ವಜನಿಕರು ಒಕ್ಕೊರಲಿನಿಂದ ವಿರೋಧ ವ್ಯಕ್ತಪಡಿಸಿದರು. ಅಲ್ಲದೆ ಕಾರ್ಖಾನೆ ಪರ ಘೋಷಣೆ ಇದ್ದ ಬ್ಯಾನರ್ ಹಿಡಿದು ವೇದಿಕೆಗೆ ತರುತ್ತಿದ್ದುದನ್ನು ಗಮನಿಸಿದ ಸ್ಥಳೀಯರು ಬ್ಯಾನರ್ ಕಿತ್ತು ಹರಿದಾಕಿ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ದಿಗ್ಬಂಧನ ಹಾಕಿದರು. ಈ ವೇಳೆ ಪೊಲೀಸರು ಸಿಬ್ಬಂದಿಯನ್ನು ವಶಕ್ಕೆ ಪಡೆದು ರಕ್ಷಣೆ ಕೊಟ್ಟರು. ಕಾರ್ಖಾನೆ ಆಡಳಿತ ಮಂಡಳಿ ಹೊರಗಿನ ಜನ ಕರೆಸಿ ಯೋಜನೆ ಪರ ಮಾತನಾಡಿಸಲು ಸಂಚು ರೂಪಿಸಿತ್ತಿದೆ ಎಂದು ಆರೋಪಿಸಿ ಗ್ರಾಮಸ್ಥರು ರಸ್ತೆಯಲ್ಲಿ ಡಿಸಿ ಅವರಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ಬಳಿಕ ಡಿಸಿ ರಸ್ತೆ ಬದಲಾಯಿಸಿ ಕಾರ್ಖಾನೆ ಮುಖ್ಯದ್ವಾರದಿಂದ ವೇದಿಕೆಗೆ ಬಂದರು.

    ಸಭೆ ಪ್ರಾರಂಭವಾಗುತ್ತಿದ್ದಂತೆ ಗ್ರಾಮಸ್ಥರು ವೇದಿಕೆ ಬಳಿ ನೂಕುನುಗ್ಗಲಿನಲ್ಲಿ ಜಮಾಯಿಸಿ ಡಿಸಿ ಅವರಿಗೆ ಪ್ರಶ್ನೆ ಮೇಲೆ ಪ್ರಶ್ನೆ ಕೇಳಿದರಲ್ಲದೆ ಉದ್ದೇಶಿತ ಯೋಜನೆಗಳಿಗೆ ಅನುಮತಿ ನೀಡಬಾರದೆಂದು ಒತ್ತಾಯಿಸಿದರು. ಈ ಸಂದರ್ಭ ಪೊಲೀಸರು ಗ್ರಾಮಸ್ಥರನ್ನು ನಿಯಂತ್ರಿಸಲು ಹರಸಹಾಸಪಟ್ಟರು.
    ಹೇಮಾವತಿ ನದಿ ಹತ್ತಿರದಲ್ಲಿದ್ದು, ಈಗಾಗಲೇ ನದಿ ಕಲುಷಿತಗೊಂಡಿದೆ. ಈ ಯೋಜನೆಯಿಂದ ಮತ್ತಷ್ಟು ಕಲುಷಿತಗೊಳ್ಳಲಿದೆ. ಲಕ್ಷಾಂತರ ಜನರು ನೀರು ಕುಡಿಯಲಿದ್ದಾರೆ. ಇದರಿಂದ ಜೀವಕ್ಕೆ ಹಾನಿ ಉಂಟಾಗಲಿದೆ. ಮಾಲಿನ್ಯ ನಿಯಂತ್ರಣ ಮಂಡಳಿ ಮಲಿನ ತಡೆಗಟ್ಟುವಲ್ಲಿ ವಿಫಲಗೊಂಡಿದ್ದು, ಸಭೆಯನ್ನು ರದ್ದು ಮಾಡಬೇಕು ಎಂದು ಸ್ಥಳೀಯರು ಪಟ್ಟು ಹಿಡಿದರು.

    ತಕ್ಷಣ ಮಧ್ಯ ಪ್ರವೇಶಿಸಿದ ಡಿಸಿ, ಎಲ್ಲರ ಅಭಿಪ್ರಾಯವನ್ನು ರೆಕಾರ್ಡ್ ಮಾಡಲಾಗುತ್ತದೆ. ನನಗೆ ಪ್ರಶ್ನಿಸುವ ಅಧಿಕಾರವಿಲ್ಲ. ನಿಮ್ಮ ಅಭಿಪ್ರಾಯಗಳನ್ನು ಸಂಗ್ರಹಿಸಿ ಕೇಂದ್ರ ಸಮಿತಿಗೆ ಕಳಿಸಲಾಗುತ್ತದೆ ಎಂದು ಹೇಳಿದರು. ಸಭೆಯಲ್ಲಿ ಉದ್ದೇಶಿತ ಯೋಜನೆ ಬೇಡ ಎಂಬ ಅಭಿಪ್ರಾಯ ವ್ಯಕ್ತವಾಯಿತು. ಅಂತಿಮವಾಗಿ ಯೋಜನೆ ಬೇಡ ಎಂಬ ಅಭಿಪ್ರಾಯ ವ್ಯಕ್ತವಾಗಿದ್ದು, ಅದನ್ನು ಸಮಿತಿಗೆ ಕಳುಹಿಸಿಕೊಡುವುದಾಗಿ ಡಿಸಿ ತಿಳಿಸಿ ಸಭೆ ಮುಕ್ತಾಯಗೊಳಿಸಿದರು.
    ನಾಗಮಂಗಲ ಡಿವೈಎಸ್‌ಪಿ ಡಾ.ಸುಮೀತ್, ಕೆ.ಆರ್.ಪೇಟೆ ಸರ್ಕಲ್ ಇನ್‌ಸ್ಪೆಕ್ಟರ್ ಸುಮಾರಾಣಿ, ಕಿಕ್ಕೇರಿ ಸರ್ಕಲ್ ಇನ್‌ಸ್ಪೆಕ್ಟರ್ ರೇವತಿ, ಕೆ.ಆರ್.ಪೇಟೆ ಗ್ರಾಮಾಂತರ ಠಾಣೆಯ ಇನ್‌ಸ್ಪೆಕ್ಟರ್ ಆನಂದೇಗೌಡ ಬಿಗಿ ಭದ್ರತೆ ಕೈಗೊಂಡಿದ್ದರು.

    ಎಡಿಸಿ ನಾಗರಾಜು, ಕಾರ್ಖಾನೆ ಉಪಾಧ್ಯಕ್ಷ ರವಿರೆಡ್ಡಿ, ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಳಹಳ್ಳಿ ವಿಶ್ವನಾಥ್, ತಹಸೀಲ್ದಾರ್ ಶಿವಮೂರ್ತಿ, ಇಒ ಸತೀಶ್, ಪಿಡಿಒ ಶೈಲಜಾ, ರೈತಮುಖಂಡರಾದ ಮುದ್ದುಕುಮಾರ್, ಮರುವನಹಳ್ಳಿ ಶಂಕರ್, ತಾಲೂಕು ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ, ಕರೋಟಿ ತಮ್ಮಯ್ಯ, ಮಾಕವಳ್ಳಿ ಮುಖಂಡರಾದ ಪ.ದೇವರಸೇಗೌಡ, ಉದ್ಯಮಿ ಜಗದೀಶ್, ಕುಂಟರಾಮೇಗೌಡ, ನಿವೃತ್ತ ಶಿಕ್ಷಕರಾದ ದೊಡ್ಡೇಗೌಡ, ಲಕ್ಕೇಗೌಡ, ಪೋಸ್ಟ್ ರಾಜೇಗೌಡ ಹಲವರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts