More

    15 ದಿನದಲ್ಲಿ ರೈಲ್ವೆ ಸ್ಟೇಷನ್ ರಸ್ತೆ ಸಂಚಾರಕ್ಕೆ ಮುಕ್ತ ; ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ಹೇಳಿಕೆ

    ತುಮಕೂರು: ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ನಗರದ ರೈಲ್ವೆ ನಿಲ್ದಾಣದಿಂದ ಎಸ್.ಎಸ್.ಪುರಂ ಸಂಪರ್ಕ ರಸ್ತೆ ಅಭಿವೃದ್ಧಿ ಕಾಮಗಾರಿ ಶೀಘ್ರದಲ್ಲಿ ಪೂರ್ಣಗೊಳ್ಳಲಿದ್ದು, 15 ದಿನಗಳಲ್ಲಿ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ಹೇಳಿದರು.

    ಸ್ಮಾರ್ಟ್‌ಸಿಟಿ ಯೋಜನೆಯಡಿ ಕೈಗೊಂಡಿರುವ ರೈಲ್ವೆ ಸ್ಟೇಷನ್ ರಸ್ತೆ ಡಾಂಬರೀಕರಣದ ಕಾಮಗಾರಿಯನ್ನು ಬುಧವಾರ ವೀಕ್ಷಿಸಿದ ಅವರು, ಗುಣಮಟ್ಟದ ಕಾಮಗಾರಿಗೆ ಒತ್ತು ಕೊಡಬೇಕು. ರಸ್ತೆ ಕೂಡ ಸ್ಮಾರ್ಟ್ ಆಗಿ ಇದ್ದರೆ ಜನರಿಗೆ ಗುಣಮಟ್ಟದ ಖಾತ್ರಿಯಾಗಲಿದೆ. ಈ ಬಗ್ಗೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಗಮನಹರಿಸುವಂತೆ ಸೂಚನೆ ನೀಡಿದರು.

    ಸ್ಮಾರ್ಟ್‌ಸಿಟಿ ಯೋಜನೆಯ ಅನುದಾನದಲ್ಲಿ ರಸ್ತೆ ಅಭಿವೃದ್ಧಿ ಪಡಿಸಲಾಗುತ್ತಿದ್ದು, ಈ ಭಾಗದ ಜನತೆಗೆ ಹಾಗೂ ತುಮಕೂರಿನ ಎಲ್ಲ ಜನರಿಗೂ ಇದು ಒಂದು ಪರ್ಯಾಯ ರಸ್ತೆಯಾಗಲಿದೆ. ರಸ್ತೆಗೆ ಅಂಟಿಕೊಂಡಿದ್ದ ಮನೆ, ಅಂಗಡಿಗಳ ಮಾಲೀಕರು ಸ್ವಯಂ ಪ್ರೇರಿತರಾಗಿ ಒಪ್ಪಿಕೊಂಡು ತೆರವು ಮಾಡಿದ್ದಾರೆ. ಸಿಎಸ್‌ಐ ಲೇಔಟ್ ಭಾಗದ ಜನರು ಹಾಗೂ ನಾಗರಿಕ ಸಮಿತಿಗಳ ಸಹಕಾರದಿಂದ ಈ ಭಾಗದಲ್ಲಿ ದ್ವಿಪಥ ರಸ್ತೆಯಾಗುತ್ತಿದೆ. ಜನ ಸಂಚಾರ ದಟ್ಟಣೆ ಒತ್ತಡ ಕಡಿಮೆಯಾಗಿ ಸುಗಮ ಸಂಚರಾಕ್ಕೆ ಅನುಕೂಲವಾಗಲಿದೆ ಎಂದರು.

    ರೈಲ್ವೆ ನಿಲ್ದಾಣದ ರಸ್ತೆ ಅಭಿವೃದ್ಧಿಯಿಂದ ಬಿ.ಎಚ್.ರಸ್ತೆಯಲ್ಲಿನ ಶೇ.40 ಸಂಚಾರ ಒತ್ತಡ ಕಡಿಮೆಯಾಗಲಿದೆ. ಬಸ್ ನಿಲ್ದಾಣಕ್ಕೆ ಹತ್ತಿರವಿರುವುದರಿಂದ ಸಾರ್ವಜನಿಕರಿಗೆ ಓಡಾಡಲೂ ಅನುಕೂಲವಾಗಲಿದೆ. ರೈಲ್ವೆ ನಿಲ್ದಾಣದ ಬಳಿ ಸುಸಜ್ಜಿತವಾದ ಆಟೋ ನಿಲ್ದಾಣ ಹಾಗೂ ಮುಂದಿನ ದಿನಗಳಲ್ಲಿ ಸಾರ್ವಜನಿಕರಿಗೆ ವ್ಯವಸ್ಥಿತವಾದ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗುವುದು ಎಂದು ಜ್ಯೋತಿಗಣೇಶ್ ತಿಳಿಸಿದರು. ಪಾಲಿಕೆ ಸದಸ್ಯೆ ವಿ.ಎಸ್.ಗಿರಿಜಾ, ಸ್ಮಾರ್ಟ್‌ಸಿಟಿ ಇಂಜಿನಿಯರ್‌ಗಳಾದ ಅಶೋಕ್, ರಶ್ಮಿ, ರವಿವರ್ಮಕುಮಾರ್, ಎಸ್‌ಡಿಎಲ್
    ಅಶೋಕ್, ಸ್ಥಳೀಯರಾದ ಧನಿಯಾಕುಮಾರ್, ನಾಗರಾಜಪ್ಪ, ರವೀಶ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts