More

    ಜ್ಞಾನದೇಗುಲಗಳ ಬಾಗಿಲು ಓಪನ್

    ಗದಗ: ರಾಜ್ಯ ಸರ್ಕಾರ 2021ರ ಜನವರಿ 1ರಿಂದ ಸರ್ಕಾರಿ ಶಾಲೆಗಳ ಆರಂಭಕ್ಕೆ ಅನುಮತಿ ನೀಡಿದ್ದು, ಗದಗ ಬೆಟಗೇರಿ ಸೇರಿ ಜಿಲ್ಲೆಯಲ್ಲಿ ಬಹುತೇಕ ಶಾಲೆಗಳು ಬಾಗಿಲು ತೆರೆಯಲಿವೆ.

    ಕರೊನಾ ಸೋಂಕಿನ ಭಯದಿಂದ 10 ತಿಂಗಳಿಂದ ಬಂದ್ ಆಗಿದ್ದ ಶಾಲೆಗಳು ಪುನರಾರಂಭವಾಗಲಿವೆ. ಹೀಗಾಗಿ, ಶಾಲೆ ಕೊಠಡಿಗಳನ್ನು ಸ್ವಚ್ಛಗೊಳಿಸಿ ಸ್ಯಾನಿಟೈಸರ್ ಸಿಂಡಿಸಲಾಯಿತು. ಶಿಕ್ಷಕರಿಗೂ ಕರೊನಾ ತಪಾಸಣೆ ಕಡ್ಡಾಯಗೊಳಿಸಿದ್ದು, ಬಹುತೇಕರು ತಪಾಸಣೆಗೆ ಒಳಗಾಗಿದ್ದಾರೆ. ಶುಕ್ರವಾರ ಬೆಳಗ್ಗೆ ಅವರ ವೈದ್ಯಕೀಯ ವರದಿ ಬರಲಿವೆ. 6ರಿಂದ 9ನೇ ತರಗತಿ ಮಕ್ಕಳಿಗೆ ವಿದ್ಯಾಗಮ ಯೋಜನೆ ಮೂಲಕ ಶಿಕ್ಷಣ ನೀಡಲಾಗುತ್ತಿದೆ. 10ನೇ ವರ್ಗದ ಮಕ್ಕಳಿಗೆ ಶಾಲೆಗಳಲ್ಲಿ ತರಗತಿ ನಡೆಯಲಿವೆ. ಜಿಲ್ಲೆಯಲ್ಲಿ ಸರ್ಕಾರಿ, ಖಾಸಗಿ ಸೇರಿ 1232 ಶಾಲೆಗಳಿವೆ. 10ನೇ ತರಗತಿಯಲ್ಲಿ 16248 ವಿದ್ಯಾರ್ಥಿಗಳಿದ್ದು, 7609 ಶಿಕ್ಷಕರಿದ್ದಾರೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

    ಮುಂಜಾಗ್ರತೆ ಕ್ರಮ ಕೈಗೊಳ್ಳಿ:

    ಕೋವಿಡ್ ನಿಯಂತ್ರಣಕ್ಕಾಗಿ ಮುಂಜಾಗ್ರತೆ ಕ್ರಮಗಳೊಂದಿಗೆ ಶಾಲೆ ತರಗತಿಗಳನ್ನು ಆರಂಭಿಸುವಂತೆ ಜಿಪಂ ಅಧ್ಯಕ್ಷ ಈರಪ್ಪ ನಾಡಗೌಡ್ರ ಅಧಿಕಾರಿಗಳಿಗೆ ಸೂಚಿಸಿದರು.

    ಜಿಲ್ಲಾಡಳಿತ ಭವನದಲ್ಲಿ ಗುರುವಾರ ಆಯೋಜಿಸಿದ್ದ ಶಿಕ್ಷಣ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

    ಶಾಲೆಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. ವಿದ್ಯಾರ್ಥಿಗಳಿಗೆ ಶಾಲೆ ಪ್ರವೇಶ ದ್ವಾರದಲ್ಲೇ ತಪಾಸಣೆ ಮಾಡಿ, ಅವರ ಆರೋಗ್ಯದ ಮೇಲೆ ನಿಗಾ ವಹಿಸಬೇಕು ಎಂದರು.

    ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಬಸವಲಿಂಗಪ್ಪ, ಜಿಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಹನುಮಂತಪ್ಪ ಪೂಜಾರ, ಜಿಪಂ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷೆ ಶಕುಂತಲಾ ಚವ್ಹಾಣ ಇತರರಿದ್ದರು.

    ಸುರಕ್ಷಿತ ಕ್ರಮ ಪಾಲಿಸಿ

    ಶಿರಹಟ್ಟಿ: ಕೋವಿಡ್ ನಿಯಂತ್ರಣಕ್ಕಾಗಿ ಶಾಲೆಗಳಲ್ಲಿ ಸುರಕ್ಷತಾ ಕ್ರಮಗಳನ್ನು ಶಿಕ್ಷಕರು ಕಡ್ಡಾಯವಾಗಿ ಪಾಲಿಸಬೇಕು ಎಂದು ತಹಸೀಲ್ದಾರ್ ಯಲ್ಲಪ್ಪ ಗೋಣೆಣ್ಣವರ ಸೂಚಿಸಿದರು.

    ತಹಸೀಲ್ದಾರ್ ಕಚೇರಿ ಸಭಾಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ ತಾಲೂಕು ಮೇಲುಸ್ತುವಾರಿ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ತಾಲೂಕಿನ 161 ಪ್ರೌಢಶಾಲೆ, 750 ಪ್ರಾಥಮಿಕ ಶಾಲೆ, 180 ಅನುದಾನಿತ, 191 ಅನುದಾನರಹಿತ ಶಾಲೆಗಳ ಶಿಕ್ಷಕರು ಕರೊನಾ ಪರೀಕ್ಷೆಗೆ ಒಳಪಡಬೇಕು. ವರದಿ ಪಾಸಿಟಿವ್ ಬಂದರೆ ಅವರನ್ನು ಹೋಂ ಕ್ವಾರಂಟೈನ್ ಮಾಡಲಾಗುವುದು ಎಂದರು.

    ಬಿಇಒ ಆರ್.ಎಸ್. ಬುರಡಿ, ತಾಪಂ ಪ್ರಭಾರಿ ಇಒ ಜಿನಗಾ, ತಾಲೂಕು ಅಕ್ಷರ ದಾಸೋಹ ಅಧಿಕಾರಿ ಎಸ್.ಎನ್. ನದಾಫ್, ಕ್ಷೇತ್ರ ಸಮನ್ವಯಾಧಿಕಾರಿ ವೈ.ಎಚ್. ನದಾಫ್, ತಾಲೂಕು ಆರೋಗ್ಯಾಧಿಕಾರಿ ಡಾ. ಸುಭಾಸ ದೈಗೊಂಡ, ತಾಲೂಕು ಸಮಾಜ ಕಲ್ಯಾಣಾಧಿಕಾರಿ ಎಸ್.ಬಿ. ಹರ್ತಿ, ಇನ್ನುಳಿದ ಇಲಾಖೆಗಳ ಕಚೇರಿ ಸಹಾಯಕರು ಇದ್ದರು.

    ಅಗತ್ಯ ಸಿದ್ಧತೆ

    ಲಕ್ಷ್ಮೇಶ್ವರ: ಶಾಲೆ-ಕಾಲೇಜ್ ಪುನರಾರಂಭಕ್ಕೆ ತಾಲೂಕಾಡಳಿತ ಕೋವಿಡ್ ಮಾರ್ಗಸೂಚಿಗಳನ್ವಯ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ತಹಸೀಲ್ದಾರ್ ಭ್ರಮರಾಂಬ ಗುಬ್ಬಿಶೆಟ್ಟಿ ಹೇಳಿದರು. ತಹಸೀಲ್ದಾರ್ ಕಚೇರಿಯಲ್ಲಿ ವಿದ್ಯಾಗಮ-2, ತರಗತಿ ಪ್ರಾರಂಭಿಸುವ ಬಗ್ಗೆ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್. ಬುರಡಿ, ಉಪ ತಹಸೀಲ್ದಾರ್ ಎಂ.ಜಿ. ದಾಸಪ್ಪನವರ, ಮುಖ್ಯಾಧಿಕಾರಿ ಶಂಕರ ಹುಲ್ಲಮ್ಮನವರ, ಇಒ ಆರ್.ವೈ. ಗುರಿಕಾರ, ಕ್ಷೇತ್ರ ಸಮನ್ವಯಾಧಿಕಾರಿ ವೈ.ಎಚ್. ನದಾಫ್, ಸಿಆರ್​ಪಿ ಸತೀಶ ಬೋಮಲೆ, ನಾಗರಾಜ ಶಿಗ್ಲಿ, ಎಸ್.ಎಫ್. ಮಠದ, , ಬಿ.ಎಸ್. ಹರ್ಲಾಪುರ, ಎಸ್.ಬಿ. ಹರ್ತಿ, ಶಾಲೆ ಮುಖ್ಯ ಶಿಕ್ಷಕರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts