More

    ಮ.ಬೆಟ್ಟದಲ್ಲಿ ಅಗ್ನಿಶಾಮಕ ಠಾಣೆ ತೆರೆಯಿರಿ



    ಎಸ್.ಲಿಂಗರಾಜು ಮಂಗಲ ಹನೂರು
    ತಾಲೂಕು ಕೇಂದ್ರದಿಂದ ಹೆಚ್ಚು ಅಂತರ ಹೊಂದಿರುವ ಪ್ರಸಿದ್ಧ ಯಾತ್ರಾ ಸ್ಥಳ ಮಲೆಮಹದೇಶ್ವರ ಬೆಟ್ಟ ಹಾಗೂ ಪ್ರವಾಸಿ ತಾಣ ಹೊಗೇನಕಲ್ ಫಾಲ್ಸ್‌ಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಹಾಗೂ ಪ್ರವಾಸಿಗರು ಭೇಟಿ ನೀಡುತ್ತಾರೆ. ಹಾಗಾಗಿ ಮ.ಬೆಟ್ಟದಲ್ಲಿ ಅಗ್ನಿಶಾಮಕ ಠಾಣೆ ತೆರೆಯುವಂತೆ ಜನರಿಂದ ಒತ್ತಾಯ ಕೇಳಿಬಂದಿದೆ.


    ಜಿಲ್ಲೆಯಲ್ಲಿಯೇ ಹೆಚ್ಚು ವಿಸ್ತೀರ್ಣ ಹೊಂದಿರುವ ಹನೂರು ತಾಲೂಕಿನಲ್ಲಿ ಗಿರಿಜನರ ಪೋಡು ಹಾಗೂ ಕಾಡಂಚಿನ ಗ್ರಾಮಗಳು ಸೇರಿದಂತೆ ಸುಮಾರು 350ಕ್ಕೂ ಹೆಚ್ಚು ಗ್ರಾಮಗಳಿವೆ. ಈ ಹಿಂದೆ ಈ ಭಾಗದಲ್ಲಿ ಬೆಂಕಿ ಅವಘಡ ನಿಯಂತ್ರಿಸಲು, ಬಾವಿಗೆ ಬಿದ್ದ ಜಾನುವಾರು ರಕ್ಷಿಸಲು, ಕಾವೇರಿ ನದಿಯಲ್ಲಿ ಈಜಲು ಹೋಗಿ ಸಿಲುಕಿದವರನ್ನು ರಕ್ಷಿಸಲು, ಇನ್ನಿತರ ಪ್ರಾಣಾಪಾಯದ ಘಟನೆಗಳು ಜರುಗಿದರೆ ಕೊಳ್ಳೇಗಾಲದಿಂದ ಅಗ್ನಿಶಾಮಕ ಸಿಬ್ಬಂದಿ ಆಗಮಿಸಬೇಕಿತ್ತು. ಇದರಿಂದ ತುರ್ತು ಸೇವೆಗಳು ತಾಲೂಕಿನ ಜನರಿಗೆ ನಿಗದಿತ ಸಮಯದಲ್ಲಿ ಸಿಗದೆ ತುಂಬಾ ತೊಂದರೆಯಾಗಿತ್ತು.


    ಈ ದಿಸೆಯಲ್ಲಿ 2010ರಲ್ಲಿ ಹನೂರಿನಲ್ಲಿ (ಆರ್‌ಎಸ್ ದೊಡ್ಡಿ- ಹುಲುಸುಗುಡ್ಡೆ ಮಾರ್ಗಮಧ್ಯೆ) ಅಗ್ನಿಶಾಮಕ ಠಾಣೆ ತೆರೆದು ಸೇವೆ ಆರಂಭಿಸಲಾಯಿತು. ಈ ಸೇವೆಯು ಹನೂರು ಆಸುಪಾಸಿನ ಗ್ರಾಮಗಳಿಗೆ ನಿಗದಿತ ವೇಳೆಗೆ ಸಿಗುತ್ತಿದೆ. ಆದರೆ ಹೆಚ್ಚು ಅಂತರ ಹೊಂದಿರುವ ಮಲೆಮಹದೇಶ್ವರ ಬೆಟ್ಟ, ಪೊನ್ನಾಚಿ, ಗೋಪಿನಾಥಂ, ಹೊಗೇನೆಕಲ್ ಫಾಲ್ಸ್ ಹಾಗೂ ಈ ಭಾಗದ ಇನ್ನಿತರ ಗ್ರಾಮಗಳಿಗೆ ಈ ಸೇವೆಯೂ ಸಮರ್ಪಕವಾಗಿ ಸಿಗುತ್ತಿಲ್ಲ. ಇದರಿಂದ ಹಲವು ಅವಘಡಗಳು ಸಂಭವಿಸಿದ್ದು, ಶುಕ್ರವಾರ ಮ.ಬೆಟ್ಟದಲ್ಲಿ ಲಾಡು ತಯಾರಿಕೆ ಘಟಕದಲ್ಲಿ ಅನಿಲ ಸಿಲಿಂಡರ್ ಸೋರಿಕೆಯಿಂದ ಬೆಂಕಿ ಅವಘಡ ಸಂಭವಿಸಿರುವುದೇ ಇದಕ್ಕೆ ಸಾಕ್ಷಿಯಾಗಿದೆ.

    ತುರ್ತು ಸೇವೆ ಬೇಕಿದೆ:
    ಮ.ಬೆಟ್ಟಕ್ಕೆ ದೀಪಾವಳಿ, ಮಹಾ ಶಿವರಾತ್ರಿ, ಯುಗಾದಿ ಸೇರಿದಂತೆ ವಿವಿಧ ಜಾತ್ರಾ ವೇಳೆ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಾರೆ. ಈ ವೇಳೆ ಮುಂಜಾಗ್ರತಾ ಕ್ರಮವಾಗಿ ಹನೂರಿನಿಂದ ಅಗ್ನಿಶಾಮಕ ಸಿಬ್ಬಂದಿ ಮ.ಬೆಟ್ಟದಲ್ಲೇ ಬೀಡು ಬಿಟ್ಟಿರುತ್ತಾರೆ. ಆದರೆ ಈ ಸಂದರ್ಭದಲ್ಲಿ ಅಗ್ನಿ ಅವಘಡಗಳು ಸಂಭವಿಸಿದರೆ 60 ಕಿಮೀ ಅಂತರ ಹೊಂದಿರುವ ಹನೂರಿನಿಂದ ಸಿಬ್ಬಂದಿ ಆಗಮಿಸಬೇಕಾದರೆ ಹೆಚ್ಚು ಸಮಯ ಹಿಡಿಯುತ್ತದೆ.


    ಇದರಿಂದ ಹೆಚ್ಚಿನ ಅನಾಹುತ ಸಂಭವಿಸುವ ಸಾಧ್ಯತೆ ಹೆಚ್ಚಾಗಿದೆ. ಇನ್ನು ತಾಲೂಕು ಕೇಂದ್ರದಿಂದ ಸುಮಾರು 100 ಕಿಮೀ ದೂರವಿರುವ ಹೊಗೇನೆಕಲ್ ಫಾಲ್ಸ್‌ಗೆ ಮ.ಬೆಟ್ಟಕ್ಕೆ ಆಗಮಿಸುವ ಭಕ್ತರು ಹಾಗೂ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ. ಆದರೆ ಅಗ್ನಿಶಾಮಕ ಠಾಣೆ ಸಮೀಪದಲ್ಲಿ ಇಲ್ಲ. ಪರಿಣಾಮ ಈಗಾಗಲೇ ಕಾವೇರಿ ನದಿಯಲ್ಲಿ ಈಜಲು ಹೋಗಿ ಹಲವರು ಮೃತಪಟ್ಟಿರುವ ಘಟನೆಗಳು ನಡೆದಿದೆ. ಹಾಗಾಗಿ ಜೀವ ರಕ್ಷಣೆಗೆ ತುರ್ತು ಸೇವೆ ಸಿಗುತ್ತಿಲ್ಲ. ಆದ್ದರಿಂದ ಮ.ಬೆಟ್ಟದಲ್ಲಿ ಅಗ್ನಿಶಾಮಕ ಠಾಣೆಯನ್ನು ತೆರೆದರೆ ತುಂಬಾ ಅನುಕೂಲವಾಗಲಿದ್ದು, ಈ ಬಗ್ಗೆ ಜನರಿಂದ ಒತ್ತಾಯ ಕೇಳಿ ಬಂದಿದೆ.
    ಅಗ್ನಿಶಾಮಕ ಠಾಣೆಗೆ ಒತ್ತಾಯ:


    ಮ.ಬೆಟ್ಟದ ಭಾಗಕ್ಕೆ ಅಗ್ನಿಶಾಮಕ ಹಾಗೂ ತುರ್ತು ಸೇವೆಗಳು ಸಮರ್ಪಕವಾಗಿ ದೊರಕದಿರುವುದು ವಾಸ್ತವದ ಸಂಗತಿ. ಈ ದಿಸೆಯಲ್ಲಿ ಲಕ್ಷಾಂತರು ಭಕ್ತರು ಭೇಟಿ ನೀಡುವ ಮ.ಬೆಟ್ಟದಲ್ಲಿ ಅಗ್ನಿಶಾಮಕ ಠಾಣೆಯನ್ನು ತೆರೆಯುವ ಸಂಬಂಧ ಕಳೆದ 6 ತಿಂಗಳ ಹಿಂದೆ ಮ.ಬೆಟ್ಟಕ್ಕೆ ಆಗಮಿಸಿದ್ದ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ನಡೆದ ಪ್ರಾಧಿಕಾರದ ಸಭೆಯಲ್ಲಿ ಈ ಬಗ್ಗೆ ನಿರ್ಣಯ ಮಂಡಿಸಲಾಗಿತ್ತು. ಆದರೆ ಇದುವರೆಗೂ ಯಾವುದೇ ಕ್ರಮವಾಗಿಲ್ಲ. ಇದರಿಂದ ಬೆಂಕಿ ಅವಘಡ ಸಂಭವಿಸಿದರೆ 60 ಕಿಮೀ ಅಂತರದಲ್ಲಿರುವ ಹನೂರಿನಿಂದ ಅಗ್ನಿಶಾಮಕ ಸಿಬ್ಬಂದಿ ಆಗಮಿಸಬೇಕಿದೆ. ಇದರಿಂದ ತುಂಬಾ ತೊಂದರೆಯಾಗಿದೆ. ಆದ್ದರಿಂದ ಮ.ಬೆಟ್ಟದಲ್ಲಿ ಅಗ್ನಿಶಾಮಕ ಠಾಣೆ ತೆರೆಯುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

    ಬೆಂಕಿ ಅವಘಡದಿಂದ ಲಕ್ಷಾಂತರ ರೂ. ನಷ್ಟ:
    ಮ.ಬೆಟ್ಟದ ಲಾಡು ತಯಾರಿಕೆ ಘಟಕದಲ್ಲಿ ಶುಕ್ರವಾರ ನಡೆದ ಬೆಂಕಿ ಅವಘಡದಿಂದ 36,220 ರೂ. ಮೌಲ್ಯದ ಲಾಡು, 28 ಟಿನ್ ಅಡುಗೆ ಎಣ್ಣೆ, 450 ಕೆ.ಜಿ ಸಕ್ಕರೆ, 96 ಕೆ.ಜಿ ಕಡ್ಲೆಹಿಟ್ಟು, 40 ಕೆ.ಜಿ ನಂದಿನಿ ತುಪ್ಪ, 30 ಕೆ.ಜಿ.ದ್ರಾಕ್ಷಿ, 20 ಕೆ.ಜಿ ಗೋಡಂಬಿ ಹಾಗೂ ಗ್ಯಾಸ್ ಪೈಪ್‌ಲೈನ್ ಹಾಗೂ ಅನೇಕ ಪರಿಕರಗಳ ಹಾನಿಯಿಂದ ಲಕ್ಷಾಂತರ ರೂ. ನಷ್ಟವಾಗಿದೆ. ಹಾಗಾಗಿ ಮ.ಬೆಟ್ಟದಲ್ಲಿ ಅಗ್ನಿಶಾಮಕ ಠಾಣೆ ಇದ್ದರೆ ಇಷ್ಟೊಂದು ಪ್ರಮಾಣದಲ್ಲಿ ಹಾನಿಯಾಗುತ್ತಿರಲಿಲ್ಲ ಎಂಬುದು ಸ್ಥಳೀಯರು ಅಭಿಪ್ರಾಯಟ್ಟಿದ್ದಾರೆ.

    ನೌಕರರು ಜವಾಬ್ದಾರರಲ್ಲವೇ?
    ಲಾಡು ತಯಾರಿಕೆ ಘಟಕದಲ್ಲಿ ಶುಕ್ರವಾರ 20 ನೌಕರರು ಕರ್ತವ್ಯದಲ್ಲಿದ್ದರು. ಹಾಗಾಗಿ ಇಲ್ಲಿ ನಡೆಯುವ ಪ್ರತಿ ಕಾರ್ಯದಲ್ಲೂ ಎಲ್ಲರ ಜವಾಬ್ದಾರಿ ಇರುತ್ತದೆ. ಆದರೆ ಬೆಂಕಿ ಅವಘಡದಿಂದ ಘಟಕದ ಮೇಲುಸ್ತುವಾರಿ ವಹಿಸಿದ್ದ ಪ್ರಾಧಿಕಾರದ ದ್ವಿತೀಯ ದರ್ಜೆ ಸಹಾಯಕ ಪಿ.ಮಹದೇವಸ್ವಾಮಿ ಅವರನ್ನು ಮಾತ್ರ ಕಾರ್ಯದರ್ಶಿ ಸರಸ್ವತಿ ಅವರು ಸೇವೆಯಿಂದ ಅಮಾನತುಪಡಿಸಿದ್ದಾರೆ. ಹಾಗಾಗಿ ಬೆಂಕಿ ಅವಘಡಕ್ಕೆ ಇತರ ನೌಕರರು ಜವಾಬ್ದಾರಿಯಲ್ಲವೇ ಎಂಬ ಪ್ರಶ್ನೆ ಸಾರ್ವಜನಿಕರಿಂದ ಕೇಳಿ ಬಂದಿದೆ.

    ಕೋಟ್
    ಧಾರ್ಮಿಕ ಪ್ರಸಿದ್ಧ ಯಾತ್ರಾ ಸ್ಥಳವಾದ ಮ.ಬೆಟ್ಟಕ್ಕೆ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಾರೆ. ಈ ಕಾರಣಕ್ಕಾಗಿಯೇ ಮುಂಜಾಗ್ರತಾ ಕ್ರಮವಾಗಿ ಕಳೆದ ಬಾರಿಯ ಪ್ರಾಧಿಕಾರದ ಸಭೆಯಲ್ಲಿ ಮ.ಬೆಟ್ಟದಲ್ಲಿ ಅಗ್ನಿಶಾಮಕ ಠಾಣೆ ತೆರೆಯುವಂತೆ ನಿರ್ಣಯವಾಗಿತ್ತು. ಆದರೆ ಸರ್ಕಾರ ಈ ಬಗ್ಗೆ ಗಮನಹರಿಸಿಲ್ಲ. ಪರಿಣಾಮ ಅವಘಡಗಳು ಸಂಭವಿಸಿದರೆ ಅಗ್ನಿಶಾಮಕ ಸಿಬ್ಬಂದಿ ಹನೂರಿನಿಂದ ಆಗಮಿಸುವಷ್ಟರೊಳಗೆ ಹೆಚ್ಚಿನ ಅನಾಹುತ ಸಂಭವಿಸಲಿದೆ. ಆದ್ದರಿಂದ ಮ.ಬೆಟ್ಟದಲ್ಲಿ ಅಗ್ನಿಶಾಮಕ ಠಾಣೆ ಸ್ಥಾಪನೆಯಾಗಬೇಕು.
    ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಪೀಠಾಧಿಪತಿ ಸಾಲೂರು ಬೃಹನ್ಮಠ ಮ.ಬೆಟ್ಟ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts