More

    ತುಮಕೂರು ರಸ್ತೆ ಫ್ಲೈಓವರ್ ತಲೆಬಿಸಿ; ವಾಹನದಟ್ಟಣೆ ಕಿರಿಕಿರಿ

    ಪ್ರಶಾಂತ ರಿಪ್ಪನ್​ಪೇಟೆ, ಬೆಂಗಳೂರು: ರಾಜಧಾನಿ ಬೆಂಗಳೂರಿನ ಹೆಬ್ಬಾಗಿಲಿನಂತಿರುವ ತುಮಕೂರು ರಸ್ತೆಯ ಮೇಲ್ಸೇತುವೆ ಕಳೆದ ಹಲವು ತಿಂಗಳಿಂದ ಸಾರ್ವಜನಿಕರ ಉಪಯೋಗಕ್ಕೆ ಪೂರ್ಣಪ್ರಮಾಣದಲ್ಲಿ ಬಳಕೆಯಾಗುತ್ತಿಲ್ಲ. ಬೆಂಗಳೂರಿಗೆ ಆಗಮಿಸುವ ಮತ್ತು ಬೆಂಗಳೂರಿನಿಂದ ಹೊರ ಹೋಗುವ ಹೆಚ್ಚಿನ ವಾಹನಗಳು ಸಂಚರಿಸುವ ರಸ್ತೆ ಇದು. ನಗರದ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ನಿರ್ಮಾಣವಾದ ಈ ಫ್ಲೈಓವರ್ ಕೆಲವೇ ವರ್ಷಗಳಲ್ಲಿ ದುರಸ್ಥಿಗೆ ಬಂದಿದ್ದು ಮಾತ್ರ ಸೋಜಿಗದ ಸಂಗತಿ.

    ಕಳೆದ ಕೆಲವು ತಿಂಗಳುಗಳಿಂದ ತುಮಕೂರು ರಸ್ತೆ ಫ್ಲೈಓವರ್ ಮುಕ್ತ ಬಳಕೆಯಲ್ಲಿಲ್ಲ. ಮೊದಲಿಗೆ ಭಾರೀ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿತ್ತು. ನಂತರ ಕೆಲವು ದಿನಗಳ ಮಟ್ಟಿಗೆ ಎಲ್ಲ ವಾಹನಗಳ ಸಂಚಾರಕ್ಕೂ ನಿರ್ಬಂಧ ವಿಧಿಸಿ ದುರಸ್ಥಿ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿತ್ತು. ಸದ್ಯ ದುರಸ್ಥಿಕಾರ್ಯ ಮುಕ್ತಾಯವಾಗಿದೆಯಾದರೂ ಭಾರೀ ವಾಹನಗಳ ಪ್ರವೇಶಕ್ಕೆ ನಿರ್ಬಂಧ ಮುಂದುವರೆಸಲಾಗಿದೆ.

    ಸಂಚಾರ ಪೊಲೀಸರು ಹೇಳುವ ಪ್ರಕಾರ, ದುರಸ್ಥಿ ಕಾರ್ಯ ಮುಗಿದಿದ್ದು, ಕೆಲ ದಿನಗಳ ಮಟ್ಟಿಗೆ ಪರೀಕ್ಷಾರ್ಥ ಸಂಚಾರಕ್ಕೆ ತಜ್ಞರು ಒಪ್ಪಿಗೆ ನೀಡಿದ್ದಾರೆ. ಆದ್ದರಿಂದ ಲಘು ವಾಹನಗಳಾದ ಕಾರು, ಬೈಕುಗಳಿಗೆ ಮಾತ್ರ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಈ ಪರೀಕ್ಷಾರ್ಥ ಸಂಚಾರವನ್ನು ಆಧರಿಸಿ ಮೇಲ್ಸೇತುವೆಯ ದುರಸ್ಥಿ ಕಾರ್ಯದ ಗುಣಮಟ್ಟವನ್ನು ಖಾತರಿಪಡಿಸಿಕೊಂಡ ನಂತರ ಹೆದ್ದಾರಿ ಪ್ರಾಧಿಕಾರದ ಅನುಮತಿ ದೊರೆತ ನಂತರ ಹಂತ ಹಂತವಾಗಿ ಭಾರಿ ವಾಹನಗಳ ಸಂಚಾರಕ್ಕೆ ಅವಕಾಶ ದೊರೆಯಲಿದೆ.

    ಹಲವು ತಿಂಗಳುಗಳಿಂದ ಸಂಚಾರ ಪೊಲೀಸರು, ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ಸಂಚಾರಿ ತಜ್ಞರು ಹಲವು ಸುತ್ತಿನ ಟ್ರಯಲ್ ಅಂಡ್ ಎರರ್ ಸೂತ್ರಗಳನ್ನು ರೂಪಿಸುತ್ತಲೇ ಇದ್ದಾರೆ. ಆದರೆ ಬೆಂಗಳೂರಿನ ಸಂಚಾರ ದಟ್ಟಣೆಯನ್ನು ತಗ್ಗಿಸಬೇಕಾಗಿದ್ದ ಮಹತ್ವಾಕಾಂಕ್ಷಿಯ ಶ್ರೀಶಿವಕುಮಾರ ಮಹಾಸ್ವಾಮೀಜಿ ಹೆಸರಿನಲ್ಲಿರುವ ತುಮಕೂರು ರಸ್ತೆಯ ಮೇಲ್ಸೇತುವೆ ಮಾತ್ರ ನಿರೀಕ್ಷಿತ ಪ್ರಯೋಜನಕ್ಕೆ ಬರುತ್ತಿಲ್ಲ.

    ತೆವಳುತ್ತ ಸಾಗುವ ಭಾರಿ ವಾಹನಗಳು: ಗೊರಗುಂಟೆ ಪಾಳ್ಯದ ಸಿಗ್ನಲ್ ನಂತರ ಪೀಣ್ಯದಿಂದ ಆರಂಭವಾಗಿ ನಾಗಸಂದ್ರ ನಂತರದ ಟೋಲ್‌ಗೇಟ್ ವರೆಗಿನ 4.2 ಕಿ.ಮೀ. ದೂರದ ಬೆಂಗಳೂರಿನ 2ನೇ ಅತಿಉದ್ದದ ಮೇಲ್ಸೇತುವೆಯು ಸಂಚಾರದ ಸದ್ಭಳಕೆ ಇಲ್ಲದೆ ನಗರದ ಟ್ರಾಫಿಕ್ ಸಮಸ್ಯೆಯನ್ನು ಹೆಚ್ಚಿಸಿದೆ. ಇದರಿಂದ ಪೀಕ್ ಸಮಯದಲ್ಲಿ ಕಿಲೋಮೀಟರ್‌ಗಟ್ಟಲೆ ಟ್ರಾಫಿಕ್ ಜಾಮ್ ಆಗುತ್ತಿದೆ. ಅದರಲ್ಲೂ ವಿಶೇಷವಾಗಿ ಈ ಮಾರ್ಗದಲ್ಲಿ ಭಾರೀ ವಾಹನಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಪ್ರತಿ ಸಿಗ್ನಲ್‌ನಲ್ಲೂ 10 ಚಕ್ರ, 16 ಚಕ್ರದ ಬೃಹತ್ ವಾಹನಗಳು ತೆವಳುತ್ತಾ ಮುಂದೆ ಸಾಗುತ್ತಿವೆ. ಬೃಹತ್ ವಾಹನಗಳು ಇಡೀ ರಸ್ತೆಯನ್ನು ಆವರಿಸಿಕೊಂಡು ಮುಂದೆ ಸಾಗುತ್ತಿರುವ ಸಂದರ್ಭದಲ್ಲಿ ಓವರ್ ಟೇಕ್ ಮಾಡಲು ಸಾಧ್ಯವಾಗದೆ ಬಸ್ಸು ಮತ್ತಿತರ ವಾಹನಗಳು ಅನಿವಾರ್ಯವಾಗಿ ಆ ವಾಹನದ ಹಿಂದೆ ನಿಧಾನವಾಗಿಯೇ ಸಾಗಬೇಕಾಗಿದೆ.

    ಈ ನಡುವೆ ಮೇಲ್ಸೇತುವೆ ಕೆಳಗಿನ ಬಹುತೇಕ ಸ್ಥಳ ಕೈಗಾರಿಕಾ ಪ್ರದೇಶವಾಗಿರುವುದರಿಂದ ಗೂಡ್ಸ್ ಲಾರಿಗಳ ಸಂಚಾರ ಹೆಚ್ಚಾಗಿರುವುದು ಸಂಚಾರ ದಟ್ಟಣೆಗೆ ಮತ್ತೊಂದು ಪ್ರಮುಖ ಕಾರಣ. ಈ ಮಾರ್ಗದಲ್ಲಿ ಬರುವ ದಾಸರಹಳ್ಳಿ, ಪೀಣ್ಯ, 8ನೇ ಮೈಲಿ, ಜಾಲಹಳ್ಳಿ ಕ್ರಾಸ್ ಹಾಗೂ ಗೊರಗುಂಟೆ ಪಾಳ್ಯದಿಂದ ಸುಮ್ಮನಹಳ್ಳಿ ಕಡೆಗೆ ಸಾಗುವ ರಿಂಗ್‌ರಸ್ತೆ ಹೀಗೆ ಐದಾರು ಪ್ರಮುಖ ಸಿಗ್ನಲ್‌ಗಳು ಈ ಮಾರ್ಗದಲ್ಲಿ ಬರುವುದರಿಂದ ನಿಧಾನಗತಿ ಸಂಚಾರ ಅನಿವಾರ್ಯವಾಗಿದೆ.

    ಆಂಬುಲೆನ್ಸ್‌ಗಳ ಪರದಾಟ : ಭಾರಿ ವಾಹನಗಳ ನಗರ ವ್ಯಾಪ್ತಿ ಪ್ರವೇಶಕ್ಕೆ ಸಮಯ ನಿಗದಿಪಡಿಸಲಾಗಿದ್ದು, ಪೀಕ್ ವೇಳೆಯಲ್ಲಿ ಬೃಹತ್ ವಾಹನಗಳಿಗೆ ಸಂಚಾರ ನಿರ್ಬಂಧಿಸಲಾಗಿದೆ. ರಾತ್ರಿ 9 ರಿಂದ ಬೆಳಗ್ಗೆ 7 ರವರೆಗೆ ಮತ್ತು ಬೆಳಗ್ಗೆ 11 ರಿಂದ ಸಂಜೆ 5 ರವರೆಗೆ ಮಾತ್ರ ಲಾರಿಗಳ ಸಂಚಾರಕ್ಕೆ ಅವಕಾಶವಿದೆ. ಆದರೆ ಸದ್ಯ ಭಾರಿ ವಾಹನಗಳು ಮತ್ತು ನಿಧಾನಗತಿ ವಾಹನಗಳು ಮೇಲ್ಸೇತುವೆ ಬದಲಾಗಿ ಕೆಳಗೆ ಸಂಚರಿಸುತ್ತಿರುವುದರಿಂದ ಈ ಮಾರ್ಗದಲ್ಲಿ ಬರುವ ಆಂಬುಲೆನ್ಸ್‌ಗಳು ಮತ್ತು ತುರ್ತು ಅಗ್ನಿಶಾಮಕ ವಾಹನಗಳು ನಿಗದಿತ ಸಮಯಕ್ಕೆ ಗುರಿ ತಲುಪುವುದಕ್ಕಾಗದೆ ಪರದಾಡುವ ಪರಿಸ್ಥಿತಿ ಉಂಟಾಗಿದೆ. ಮತ್ತೊಂದೆಡೆ ದಾಸರಹಳ್ಳಿ ಸಿಗ್ನಲ್ ಸಮೀಪ ಹೆದ್ದಾರಿ ಪಕ್ಕದಲ್ಲೇ ಕಸದ ರಾಶಿ ಬಿದ್ದಿದ್ದು, ಬಿಬಿಎಂಪಿ ಕಸದ ಲಾರಿ ಕೂಡಾ ಅಲ್ಲೇ ನಿಂತಿರುವುದರಿಂದ ಗಬ್ಬು ವಾಸನೆ ಬರುತ್ತಿದೆ.

    “ಫ್ಲೈಓವರ್ ಮೇಲೆ ದೊಡ್ಡ ವಾಹನಗಳನ್ನು ಬಿಡುತ್ತಿಲ್ಲ. ಇದರಿಂದ ಫ್ಲೈಓವರ್ ಕೆಳಗೆ ಟ್ರಾಫಿಕ್ ಜಾಮ್ ಆಗುತ್ತಿದೆ. ಟ್ರಾಫಿಕ್ ಸಮಸ್ಯೆಯಿಂದ ಪ್ರಯಾಣಿಕರು ಆಟೋ ಬದಲಿಗೆ ಮೆಟ್ರೋ ರೈಲಿಗೆ ಹೋಗುತ್ತಿದ್ದಾರೆ. ಫ್ಲೈಓವರ್ ಮೇಲೆ ಸಂಚಾರ ಪುನರಾರಂಭಿಸಿದರೆ ಆಟೋಗಳಿಗೆ ಪ್ರಯಾಣಿಕರ ಬೇಡಿಕೆ ಹೆಚ್ಚಾಗಲಿದೆ.” -ಮಣಿ,ಆಟೋ ಚಾಲಕ, ಫೀಣ್ಯ

    “ದೊಡ್ಡ ವಾಹನಗಳೆಲ್ಲವೂ ಮೇಲ್ಸೇತುವೆ ಕೆಳಗೆ ಹೋಗುತ್ತಿರುವುದರಿಂದ ಈ ಪ್ರದೇಶದಲ್ಲಿ ಬಹಳ ಧೂಳಿನ ಸಮಸ್ಯೆಯಾಗುತ್ತಿದೆ. ರಸ್ತೆಬದಿ ಕುಳಿತು ವ್ಯಾಪಾರ ಮಾಡುವವರಿಗೆ ಇದರಿಂದ ಬಹಳ ತೊಂದರೆಯಾಗುತ್ತಿದೆ. ದಿನಪೂರ್ತಿ ಇದೇ ರೀತಿ ಧೂಳಿನಲ್ಲಿ ಕುಳಿತುಕೊಳ್ಳುವುದರಿಂದ ಆರೋಗ್ಯಕ್ಕೆ ಹಾನಿಯಾಗುತ್ತದೆ. ಕೂಡಲೇ ಸಮಸ್ಯೆಯನ್ನು ಪರಿಹರಿಸಬೇಕು” -ಶಿವಣ್ಣ, ಬೀದಿಬದಿ ವ್ಯಾಪಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts