More

  ಮೊಬೈಲ್​ಗೆ ಸಂದೇಶ, ಖಾತೆಗಿಲ್ಲ ಹಣ ಜಮೆ

  ನರೇಗಲ್/ಗದಗ: ರೈತರ ಮೊಬೈಲ್​ಗಳಿಗೆ 2-3 ದಿನಗಳಿಂದ ‘ವಿಕೆ-ಭೂಮಿ’ ಎಂಬ ಹೆಸರಿನಿಂದ 2019ನೇ ಸಾಲಿನ ಹಿಂಗಾರು ಬೆಳೆ ಹಾನಿ ಪರಿಹಾರ ಹಣವನ್ನು ನಿಮ್ಮ ಖಾತೆಗೆ ಜಮೆ ಮಾಡಲಾಗಿದೆ ಎಂಬ ಸಂದೇಶ (ಎಸ್​ಎಂಎಸ್) ಬಂದಿವೆ. ಆದರೆ, ರೈತರು ಬ್ಯಾಂಕ್​ಗೆ ಹೋಗಿ ಪರಿಶೀಲಿಸಿದರೆ ಖಾತೆಯಲ್ಲಿ ಹಣ ಜಮೆಯಾಗಿಲ್ಲ. ಹೀಗಾಗಿ ರೈತರು ಗೊಂದಲಕ್ಕೀಡಾಗಿದ್ದಾರೆ.

  ‘ಎರಡು ದಿನಗಳಿಂದ ರೈತರ ಮೊಬೈಲ್​ಗೆ ಬರುತ್ತಿರುವ ಸಂದೇಶದಲ್ಲಿ ರೈತರ ಹೆಸರು, ಖಾತೆ ಸಂಖ್ಯೆ, ಬ್ಯಾಂಕ್ ಹೆಸರು, ಪರಿಹಾರದ ಮೊತ್ತ ಹಾಗೂ ಕಂದಾಯ ಇಲಾಖೆ (ವಿಪತ್ತು ನಿರ್ವಹಣೆ) ಕರ್ನಾಟಕ ಸರ್ಕಾರ ಜಮೆ ಮಾಡಿದೆ. ಹೆಚ್ಚಿನ ಮಾಹಿತಿಯನ್ನು ವೆಬ್​ಸೈಟ್​ನಿಂದ ಪಡೆಯಬಹುದು’ ಎಂಬ ಮಾಹಿತಿ ಇದೆ.

  ಬೆಳೆ ಹಾನಿ ಬರಲು ಹೇಗೆ ಸಾಧ್ಯ?: 2019ನೇ ಸಾಲಿನ ಹಿಂಗಾರು ಹಂಗಾಮಿನ ಬೆಳೆ ಹಾನಿ ಹಣ ಬರಲು ಹೇಗೆ ಸಾಧ್ಯ? 2019ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ಹಾನಿಯೇ ಬಂದಿಲ್ಲ, ಬಹುಶಃ 2018ನೇ ಸಾಲಿನ ಹಿಂಗಾರಿನದ್ದು ಇರಬೇಕು. ಕಣ್ತಪ್ಪಿನಿಂದ 2019 ಎಂದು ಆಗಿರಬೇಕು ಎಂದು ಕೃಷಿ ಇಲಾಖೆ ಮತ್ತು ಜಿಲ್ಲಾಧಿಕಾರಿ ಕಚೇರಿಯ ಸಿಬ್ಬಂದಿ ಹೇಳುತ್ತಿದ್ದಾರೆ.

  ಎಸ್​ಎಂಎಸ್ ನೋಡಿದ ರೈತರು ಬ್ಯಾಂಕ್​ಗಳಿಗೆ ತೆರಳಿ ಖಾತೆಯಲ್ಲಿ ಹಣ ಜಮೆಯಾದ ಬಗ್ಗೆ ಪರಿಶೀಲಿಸಿದರೆ ಬ್ಯಾಂಕ್ ಅಧಿಕಾರಿಗಳು ಹಣ ಖಾತೆಗೆ ಜಮೆಯಾಗಿಲ್ಲ ಎನ್ನುತ್ತಿದ್ದಾರೆ. ಎಸ್​ಎಂಎಸ್ ಬಂದಿದೆ ಎಂದು ತೋರಿಸಿದರೂ ಅದು ನಮಗೆ ಸಂಬಂಧಿಸಿದ್ದಲ್ಲ ಎನ್ನುತ್ತಾರೆ. ಸ್ಥಳೀಯ ಕಂದಾಯ ಇಲಾಖೆ ಅಧಿಕಾರಿಗಳನ್ನು ವಿಚಾರಿಸಿದರೆ ಅವರು ಕೂಡ ನಮಗೂ ಗೊತ್ತಿಲ್ಲ ಎನ್ನುತ್ತಿದ್ದಾರೆ ಎಂದು ನಾಗರಾಳ ಗ್ರಾಮದ ರೈತರಾದ ಶರಣಪ್ಪ ಜಕ್ಕಲಿ, ಸಿದ್ದಪ್ಪ ಮಾದರ ಆರೋಪಿಸುತ್ತಾರೆ.

  2019ನೇ ಸಾಲಿನ ಹಿಂಗಾರಿನ ಬೆಳೆ ಹಾನಿ ಕುರಿತು ರೈತರ ಮೊಬೈಲ್​ಗೆ ಮೆಸೇಜ್ ಬಂದಿರುವುದು ಗಮನಕ್ಕೆ ಬಂದಿಲ್ಲ. ಈ ಕುರಿತು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು.
  | ಎಂ.ಜಿ. ಹಿರೇಮಠ, ಜಿಲ್ಲಾಧಿಕಾರಿ, ಗದಗ

  2019ನೇ ಸಾಲಿನ ಹಿಂಗಾರು ಹಂಗಾಮಿನ ಬೆಳೆ ಹಾನಿ ಕುರಿತು ರೈತರ ಮೊಬೈಲ್​ಗೆ ಮೆಸೇಜ್ ಬಂದಿರುವ ಕುರಿತು ಮಾಹಿತಿ ಇಲ್ಲ. ಸಂದೇಶ ಬಂದಿರುವ ರೈತರ ಹೆಸರು, ಐಡಿ ನಂಬರ್ ಕಳಿಸಿದರೆ ಈ ಬಗ್ಗೆ ಪರಿಶೀಲಿಸಿ ಮಾಹಿತಿ ನೀಡಲಾಗುವುದು. ರೈತರು ಕಚೇರಿಗೆ ಬಂದು ಮಾಹಿತಿ ನೀಡಬೇಕು.
  | ಜೆ.ಬಿ. ಜಕ್ಕನಗೌಡರ, ತಹಸೀಲ್ದಾರ್, ರೋಣ

  ನೂರಾರು ರೈತರಿಗೆ ಸಂದೇಶ: ನರೇಗಲ್ ಹೋಬಳಿಯ ಕುರಡಗಿ, ಗುಜಮಾಗಡಿ, ಯರೇಬೇಲೇರಿ, ನಾಗರಾಳ, ಡ.ಸ. ಹಡಗಲಿ, ಅಬ್ಬಿಗೇರಿ, ನೀರಲಗಿ ಸೇರಿ ಅನೇಕ ಗ್ರಾಮಗಳಲ್ಲಿ ನೂರಾರು ರೈತರಿಗೆ ಇಂತಹ ಸಂದೇಶಗಳು ಬಂದಿವೆ. ಆದರೆ, ಬ್ಯಾಂಕ್ ಖಾತೆಗೆ ಯಾವುದೇ ಹಣ ಜಮೆಯಾಗಿಲ್ಲ. ಇದರ ಬಗ್ಗೆ ಯಾರನ್ನು ವಿಚಾರಿಸಿದರೂ ಸಮರ್ಪಕ ಉತ್ತರ ಸಿಗುತ್ತಿಲ್ಲ. ಕೆಲಸ ಬಿಟ್ಟು ಬ್ಯಾಂಕ್​ಗೆ ಹೋಗಿ ಬರುವುದಾಗಿದೆ ಎನ್ನುತ್ತಾರೆ ಕುರಡಗಿ ಗ್ರಾಮದ ರೈತ ವೀರಪ್ಪ ಶಿವಪ್ಪ ರಾಮಣ್ಣವರ, ಫಾತೀಮಾಬಿ ರಾಜೇಸಾಬ್ ನದಾಫ್.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts