More

    ಹೋಟೆಲ್​ಗಳಲ್ಲಿ ಪಾರ್ಸ್​ಲ್ಗೆ ಮಾತ್ರ ಅವಕಾಶ

    ಹಾವೇರಿ: ಜಿಲ್ಲೆಯಾದ್ಯಂತ ಕರೊನಾ ವೈರಸ್ ನಿಯಂತ್ರಣಕ್ಕೆ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಇಂದಿನಿಂದ ಏ. 1ರವರೆಗೆ ಜಿಲ್ಲೆಯ ಎಲ್ಲ ಹೋಟೆಲ್ ಹಾಗೂ ಬಾರ್​ಗಳನ್ನು ಬಂದ್ ಮಾಡಬೇಕು. ಸಾರ್ವಜನಿಕರು ಹೋಟೆಲ್​ಗಳಲ್ಲಿ ಕುಳಿತು ತಿಂಡಿ ತಿನ್ನುವಂತಿಲ್ಲ. ಕೇವಲ ಒಂದು ಕೌಂಟರ್ ತೆರೆದು ಊಟ ಹಾಗೂ ತಿಂಡಿಯನ್ನು ಪಾರ್ಸಲ್ ತೆಗೆದುಕೊಂಡು ಹೋಗಬೇಕು. ಈ ನಿಟ್ಟಿನಲ್ಲಿ ಸೂಕ್ತ ವ್ಯವಸ್ಥೆ ಕೈಗೊಳ್ಳುವಂತೆ ಹೋಟೆಲ್ ಹಾಗೂ ರೆಸ್ಟೋರೆಂಟ್ ಮಾಲೀಕರಿಗೆ ಜಿಲ್ಲಾಧಿಕಾರಿ ಕೃಷ್ಣ ಬಾಜಪೈ ಸೂಚಿಸಿದರು.

    ಜಿಲ್ಲಾಧಿಕಾರಿ ಕಚೇರಿ ಸಭಾಭವನದಲ್ಲಿ ಶನಿವಾರ ಆಯೋಜಿಸಿದ್ದ ಹೋಟೆಲ್ ಮಾಲೀಕರ ಹಾಗೂ ಐಎಂಎ ಸದಸ್ಯರು ಹಾಗೂ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

    ಎಲ್ಲ ಬಾರ್​ಗಳನ್ನು ಮುಚ್ಚಲು ಸರ್ಕಾರ ಪರಿಷ್ಕೃತ ಆದೇಶ ಹೊರಡಿಸಿದೆ. ವೈನ್​ಶಾಪ್​ಗಳಲ್ಲಿ ಮದ್ಯ ಖರೀದಿ ಮಾಡಿ ಮನೆಗೆ ತೆಗೆದುಕೊಂಡು ಹೋಗಬಹುದು. ಸಣ್ಣ ಅಂಗಡಿಗಳು, ಉಪಾಹಾರ ದರ್ಶಿನಿಗಳಲ್ಲಿ ಗುಂಪಾಗಿ ಆಹಾರ ಸೇವಿಸಲು ಅವಕಾಶವಿಲ್ಲ. ಒಬ್ಬರಿಂದ ಒಬ್ಬರಿಗೆ ಕನಿಷ್ಠ ಆರು ಅಡಿಗಳ ಅಂತರ ಕಾಯ್ದುಕೊಳ್ಳಬೇಕು ಎಂದರು.

    ಮಾಸ್ಕ್ ಹಾಗೂ ಹ್ಯಾಂಡ್​ವಾಶ್, ಸ್ಯಾನಿಟೈಸರ್ ಕೃತಕ ಅಭಾವ ಸೃಷ್ಟಿಸಿದರೆ ಹಾಗೂ ಹೆಚ್ಚುವರಿ ದರದಲ್ಲಿ ಮಾರಾಟ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಬೇರೆ ಜಿಲ್ಲೆಯಿಂದ ಮಾಸ್ಕ್ ಮತ್ತು ಹ್ಯಾಂಡ್​ವಾಶ್ ಸ್ಯಾನಿಟೈಸರ್ ದಾಸ್ತಾನು ಮಾಡಿಕೊಳ್ಳಲು ಔಷಧ ಮಾರಾಟಗಾರರಿಗೆ ಸೂಚಿಸಿದರು.

    ಎಲ್ಲ ಖಾಸಗಿ ಆಸ್ಪತ್ರೆಗಳಲ್ಲಿ ಹೊರರೋಗಿಗಳ ಥರ್ಮಲ್ ಸ್ಕ್ಯಾನಿಂಗ್ ವ್ಯವಸ್ಥೆ ಕೈಗೊಳ್ಳಬೇಕು. ಸುರಕ್ಷತಾ ಸಾಧನಗಳನ್ನು ಬಳಸಬೇಕು. ಐಎಂಎ ವೈದ್ಯರು ಕರೊನಾ ವೈರಸ್ ತಡೆ ಹಾಗೂ ಸಾಮಾಜಿಕ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು. ಜಾಗೃತಿಗೆ ವಿಡಿಯೋ ಮಾಹಿತಿಗಳನ್ನು ರವಾನಿಸಿ ಜನರಿಗೆ ಅರಿವು ಮೂಡಿಸಬೇಕು. ಸ್ವಯಂ ಪ್ರೇರಣೆಯಿಂದ ವೈದ್ಯಕೀಯ, ವೆಂಟಿಲೇಟರ್ ಸೇವೆ ಹಾಗೂ ಅಗತ್ಯಬಿದ್ದರೆ ಖಾಸಗಿ ಆಸ್ಪತ್ರೆಗಳಲ್ಲಿ ಐಸೋಲೇಷನ್ ವಾರ್ಡ್​ಗಳ ಬಳಕೆಗೆ ಅವಕಾಶ ಕಲ್ಪಿಸುವಂತೆ ತಿಳಿಸಿದರು.

    ಬಯೋಮೆಟ್ರಿಕ್ ವ್ಯವಸ್ಥೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಬೇಕು. ಬ್ಯಾಂಕ್​ಗಳಲ್ಲಿ, ಎಟಿಎಂಗಳಲ್ಲಿ ಗ್ರಾಹಕರು ಕೈತೊಳೆಯುವ ವ್ಯವಸ್ಥೆ ಮಾಡಬೇಕು. ಜಾತ್ರೆ, ಧಾರ್ವಿುಕ ಕಾರ್ಯಕ್ರಮಗಳಲ್ಲಿ ಹೆಚ್ಚು ಜನ ಸೇರದಂತೆ ಕಠಿಣ ಕ್ರಮಕೈಗೊಳ್ಳಬೇಕು. ಎಪಿಎಂಸಿ ವಹಿವಾಟುಗಳನ್ನು ಏ. 1ರವರೆಗೆ ಬಂದ್ ಮಾಡಬೇಕು ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೈ ತಿಳಿಸಿದರು.

    ವೈದ್ಯಕೀಯ ಮಾರ್ಗಸೂಚಿಯಂತೆ ಮಾಸ್ಕ್​ಗಳನ್ನು ಸ್ಥಳೀಯವಾಗಿಯೇ ಸಿದ್ದಪಡಿಸಲು ವ್ಯವಸ್ಥೆ ಮಾಡುವ ಕುರಿತು ಸಭೆಯಲ್ಲಿ ರ್ಚಚಿಸಲಾಯಿತು. ಕರೊನಾ ತಡೆಗೆ ಸಮನ್ವಯ ಹಾಗೂ ನೋಡಲ್ ಅಧಿಕಾರಿಗಳನ್ನು ನಿಯೋಜಿಸಲು ತೀರ್ವನಿಸಲಾಯಿತು.

    ಸಭೆಯಲ್ಲಿ ಎಸ್​ಪಿ ಕೆ.ಜಿ. ದೇವರಾಜ್, ಜಿಪಂ ಸಿಇಒ ರಮೇಶ ದೇಸಾಯಿ, ಅಪರ ಜಿಲ್ಲಾಧಿಕಾರಿ ಎಂ. ಯೋಗೇಶ್ವರ, ಎಎಸ್​ಪಿ ಮಲ್ಲಿಕಾರ್ಜುನ ಬಾಲದಂಡಿ, ಉಪವಿಭಾಗಾಧಿಕಾರಿ ಡಾ. ದಿಲೀಪ ಶಶಿ, ಅರಣ್ಯ ಸಂರಕ್ಷಣಾಧಿಕಾರಿ ಕ್ರಾಂತಿಕುಮಾರ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ನಾಗರಾಜ ನಾಯಕ ಸೇರಿ ವಿವಿಧ ಅಧಿಕಾರಿಗಳು, ಐಎಂಎ ಪ್ರತಿನಿಧಿಗಳು, ಹೋಟೆಲ್ ಮಾಲೀಕರ ಸಂಘದ ಪದಾಧಿಕಾರಿಗಳು, ಔಷಧ ಮಾರಾಟಗಾರರ ಸಂಘದ ಪದಾಧಿಕಾರಿಗಳು ಇದ್ದರು.

    ಜಿಲ್ಲಾಸ್ಪತ್ರೆ ಸೇರಿದಂತೆ ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ ವೆಂಟಿಲೇಟರ್​ಗಳ ಕಾರ್ಯನಿರ್ವಹಣೆ ಸುಸ್ಥಿತಿಯಲ್ಲಿಟ್ಟುಕೊಳ್ಳಬೇಕು. ಖಾಸಗಿ ಆಸ್ಪತ್ರೆಗಳಲ್ಲಿರುವ ವೆಂಟಿಲೇಟರ್​ಗಳನ್ನು ಗುರುತಿಸಿಕೊಂಡಿರಬೇಕು. ಹೆಚ್ಚುವರಿ ವೆಂಟಿಲೇಟರ್​ಗಳ ಖರೀದಿಗೆ ಕ್ರಮವಹಿಸಬೇಕು. ಅರವಳಿಕೆ ತಜ್ಞರ ಕೊರತೆಯಿದ್ದರೆ ಹುಬ್ಬಳ್ಳಿ ಕಿಮ್್ಸ ಆಸ್ಪತ್ರೆ ಅಥವಾ ದಾವಣಗೆರೆಯಿಂದ ನಿಯೋಜನೆ ಮೇಲೆ ನೇಮಕ ಮಾಡಲು ಆರೋಗ್ಯ ಇಲಾಖೆ ಕ್ರಮ ವಹಿಸಬೇಕು.

    | ಕೃಷ್ಣ ಬಾಜಪೈ, ಜಿಲ್ಲಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts